ಅವಳಷ್ಟೇ ವಿಶೇಷವಾಗಿರುವ ನನ್ನಾಕೆಗೆ..............!!!
ಸೂರಿಂದ ಬೀಳುತ್ತಿರುವ ನೀರಿನ ಹನಿಯನ್ನು ತನ್ಮಯತೆಯಿಂದ ಲೆಕ್ಕಿಸುತ್ತಿರುವ ಚೆಲುವೇ
ನಿನ್ನ ಕೆನ್ನೆಗೊಂದು ಮುತ್ತು,
ಕೈಗೊಂದು ಪತ್ರ..
ನೀರಿನ ಹನಿಯನ್ನು ದಿಟ್ಟಿಸುವಷ್ಟೇ ನಿರ್ಲಕ್ಷತೆಯಿಂದ
ಓದಿದರೂ ಆದೀತು...
ಮನೆಯಲ್ಲಿ ಕಾಯುವ ಹೆಂಡತಿಗೆ
ಸಂಜೆ ಒಂದು ಹೊತ್ತಿನ ಊಟದ ಜೊತೆಗೆ
ಒಂದು ಮೊಳ ಮಲ್ಲಿಗೆ ಕೊಡಲೆಂದು,
ತೀರಾ ಭಾರವೆನಿಸಿದರೂ
ಎರಡು ಮೂಟೆ ಜಾಸ್ತಿ ಹೊರುವ
ಯುವಕನ ಎದೆಯಲ್ಲಿ ಮಿನುಗುವ
ನವಜಾತ ಪ್ರೀತಿಯಂತೆ ನನ್ನೊಲವು,ಒಲವಿನೊಡತಿಯೇ....
ಎಲ್ಲರೆದುರು ಹೇಳಲಾಗದೇ,
ಕೊಡ ಹಿಡಿದು ನೀರಿಗೆ ಹೊರಟಾಗಲೋ,
ಕುಡುಗೋಲು ಹಿಡಿದು ತೋಟಕ್ಕೆ ಹೊರಟಾಗಲೋ,
ಮಗುವನ್ನಾಡಿಸುತ್ತಾ ಕತ್ತಲಕೋಣೆಯಲ್ಲಿ ಒಬ್ಬಳೇ ಇರುವಾಗಲೋ ಹೆಂಡತಿಯ
ಹಿಂಬಾಲಿಸುವ ಅವಿಭಕ್ತ ಕುಟುಂಬದ ಹುಡುಗನ
ತೊದಲು ಪ್ರೀತಿಯಂತೆ,
ಅವನ ತೋಳಿನಲ್ಲಿ ಲಜ್ಜೆಯಿಂದ ಬಂದು ಸೇರುವ
ನಲ್ಲೆಯ ಲಜ್ಜೆಯಂತೆಯೆ ನಾಜೂಕು ನನ್ನ ಪ್ರೇಮ.....
ಸಂಜೆಯಿಂದ ತೀರಾ ರಾತ್ರಿಯವರೆಗೂ
ಬಯಲಿನಲ್ಲಿ ವಿಹರಿಸುವ ಜೋಡಿಗಳಿಗೆ
ಪಾನಿಪೂರಿ ಮಾರಿ
ಬಂದ ನಾಲ್ಕು ಕಾಸು ಲಾಭದಲ್ಲಿ,
ಪಾನಿಪೂರಿಯೆಂದರೆ
ಅಸಡ್ಡೆ ತೋರುವ ಹೆಂಡತಿಗೆ
ಅಯ್ಯಂಗಾರ್ ಬೇಕರಿಯ "ಹನಿಕೇಕ್" ಕೊಟ್ಟು
ಅವಳ
ಜೇನಿನಂತ ತುಟಿಯ ಮೇಲೆ ಸಣ್ಣ ವ್ಯಾಮೋಹದಿಂದ
ನೋಡುವ ಅದ್ಯಾರೋ ಹುಡುಗನ
ಸಹಜ ಪ್ರೀತಿಯಂತೆ ನಂದೂ.....
ಮತ್ತೆ ಬರಲಾರೆನೆಂದು ತಿಳಿದೂ ಹೊರಡುವ
ಮುಂಚೆ ಬಿಗಿದಪ್ಪುವ ಗರ್ಭಿಣಿ
ಪತ್ನಿಯ ಕಂಗಳಿಗೊಮ್ಮೆ ಚುಂಬಿಸಿ
ಕಣ್ಣ ಹನಿಯೊಂದನ್ನು ಮರೆ ಮಾಚಿ ’ಬರುವೆ’ನೆಂದು
ಮತ್ತೆಂದೂ ಬಾರದ ಲೋಕಕ್ಕೆ ತೆರಳುವ ಯೋಧನ
ಒಲವಿನಂತೆ ನನ್ನದು ಅಸಹಜವಲ್ಲ....
ನಿನ್ನ ಕೈ ನನ್ನ ಕೈಗಳೋಳಗಿದ್ದರೆ ಜಗವನ್ನೇ ಗೆಲ್ಲುವೆ
ಎನ್ನುವ ಹುಚ್ಚು ಹುಡುಗನ ಪ್ರೀತಿ ,
ತೀರಾ ಬಿಟ್ಟಿರಲಾಗದಾಗ ಬಿಗಿದಪ್ಪಿ
ಪಶ್ಚಾತ್ತಾಪದ್ದೊಂದು ಕಣ್ಣೀರು ಸುರಿಸಿ
ಜಗಳ ಕೊನೆಯಾಗಿಸುವ ಮುಗ್ಧ ಪ್ರೀತಿ ನಂದು,
ಮಳೆಗೆ ಧುಮ್ಮಿಕ್ಕುವ ಚರಂಡಿಯಲ್ಲಿ ಕಾಗದದ
ದೋಣಿ ತೇಲಿ ಬಿಟ್ಟು ಅದು ಪಕ್ಕದ ಮನೆಯ ಗಿಡ್ಡ ಲಂಗದ ಹುಡುಗಿಯ
ನೀರಿನಲ್ಲಾಡುವ ಬೆರಳುಗಳಿಗೆ ತಾಗಲಿ
ಎಂದು ಕಾಣದ ದೇವರ ಬಳಿ ಬೇಡುವ ಒಂಭತ್ತರ
ಹರೆಯದ ಹುಡುಗನ ಒಲವಿನಂತೆ ನನ್ನದೂ ತಾಜಾ,ಮುಗ್ಧ,ಅಸಹಜ..............!!!
-ನಿನ್ನವನಾಗ ಬಯಸುವವ......