ರಾಧೆ!!..

      ಹೆಸರೊಂದೇ ಸಾಕು,ನನ್ನ ಈ rough and tough ಹೃದಯದಲ್ಲಿ ಒಲವು ಉಧ್ಭವವಾಗಲು. ತೀರಾ ಮೊನ್ನೆ ಊರಿನಲ್ಲಿ,ಸೊಂಟದ ಮೇಲೊಂದು ಮಗುವನ್ನಿಟ್ಟುಕೊಂಡು,ನಿರ್ಭಾವುಕವಾಗಿ ನನ್ನೆದುರು ನಿಲ್ಲುವವರೆಗೂ,ಅಂಥದ್ದೊಂದು ಸಂಧರ್ಭ ಎಂದಾದರೂ ಬರಬಹುದೆಂಬ ನಿರೀಕ್ಷೆ ಇತ್ತಷ್ಟೇ. ನೀ ನಿಜವಾಗಲೂ ನಿಂತಾಗ,ನನಗೆ ಆಶ್ಚರ್ಯ ಆಘಾತವಾಗಬಹುದು ಎಂದುಕೊಂಡೆದ್ದೆ. ಆದರೆ ನನಗೆ ಆಶ್ಚರ್ಯವಾಗಲಿಲ್ಲ ಅದೇ ಆಶ್ಚರ್ಯ!! ಯಾವತ್ತೂ ನಿನ್ನೆದುರು ಮಾತನ್ನಾಡಲೂ ಹೆದರುವವನು ನಾನು,ಅಂದು ಚೊಕ್ಕವಾಗಿಯೇ ಮಾತು ಮುಗಿಸಿದ್ದೆ. ಪ್ರೀತಿ ಕಡಿಮೆಯಾಗಿದೆಂರ್ಥವಲ್ಲ,ಚಿಗುರು ಪ್ರೀತಿಗೀಗ ಪ್ರೌಢಿಮೆ ಬಂದಿದೆ.
       
      ಮೊದಲ್ಲೆಲ್ಲಾ ನೀ ಬರುವ ದಾರಿಯಲ್ಲಿ ಕಾದು ಕೂರುವುದೇ,ನನ್ನ ಪಾಲಿಗೆ ಒಲವಿನ ಅತ್ಯಂತ ದೊಡ್ಡ ಕೆಲಸ. ಒಲವೆಂದರೆ ನೀ ನನ್ನ ಬಳಿ ಹಾದುಹೋಗುವಾಗ,ನಡಿಗೆಗೆ ತಕ್ಕಂತೆ ಕುಣಿಯುವ ಆ ನಿನ್ನ ಜಡೆಯಂಚನ್ನೇ ದಿಟ್ಟಿಸುವ್ವುದು. ತೀರಾ ಹೆಚ್ಚೆಂದರೆ,ಆ ಬೀದಿಯಂಚಿನ ಹೂವಿನಂಗಡಿಯಲ್ಲಿ ನೀ ಕೊಳ್ಳುವ ಹೂವಿನ ಮಾಲೆಯನ್ನು,ನೀ ಬರುವುದಕ್ಕೂ ಮೊದಲೇ, ಒಮ್ಮೆ ಮುದ್ದಿಸಿ "ಇದೇ ಮಾಲೆಯನ್ನು.ಆ ಉದ್ದಲಂಗದ ಹುಡುಗಿಗೆ ಕೊಡು" ಎಂದು ತಾಕೀತು ಮಾಡುವುದು,ನನ್ನ ಪಾಲಿಗೆ ಒಲವಾಗಿತ್ತು ಆಗ.

      ನೆನಪಿದೆಯಾ ಒಲವೇ.ಒಂದು ದಿನ ಸಂಜೆ ಅದೇ ಬೀದಿಯಲ್ಲಿ ನೀ ಅಂಜುತ್ತಾ,ನಾಚುತ್ತಾ ಒಬ್ಬಳೇ ಬರುವಾಗ, ಅದೆಲ್ಲಿತ್ತೋ ಧೈರ್ಯ ನಿನ್ನ ಬರಸೆಳೆದಿದ್ದೆ. ನೀನಿನ್ನೂ ಗೊಂದಲದಲ್ಲಿರುವಾಗಲೇ ನಾಲ್ಕಕ್ಷರ ವದರಿ, "ನಾನೆಂದರೆ ಇಷ್ಟಾನಾ?" ಎಂಬ ತೀರಾ ಸರಳ ಪ್ರಶ್ನೆಯಿಟ್ಟಿದ್ದೆ ನಿನ್ನೆದುರು..
ಮೊದಲ ಬಾರಿ ನಿವೇದಿಸಿದ ಹುಮ್ಮಸ್ಸಿನಲ್ಲಿ,ನೀ ನಿರಾಕರಿಸಿದ್ದು ನನಗೆ ಕೇಳಿಸಿಯೇ ಇರಲಿಲ್ಲ.    
   
     ಬಳುಕುವ ಜಡೆ ಬಿಟ್ಟರೆ,ಜನರಿಗೆ ನಾ ನಿನ್ನ ಮೆಚ್ಚಲು ಕಾರಣಗಳೇ ಸಿಗುತ್ತಿರಲಿಲ್ಲ. "ಪ್ರೀತಿ ಕುರುಡು" ಎಂಬ ದೊಡ್ಡ ತತ್ವಗಳು ಆಗಿನ್ನೂ ನನಗೆ ತಿಳಿದಿರಲಿಲ್ಲವಾದರೂ,ನಿನ್ನ ಹಿಂದೆ ಮೋಹಿತನಾಗಿ ತಿರುಗುವುದಕ್ಕೆ,ಕಾರಣಗಳೇ ಅಸಲಿಗೆ ಇರಲಿಲ್ಲ.
ರಾಧೆಯೆಂಬ ಹೆಸರೇ ಸಾಕು,ನಿಂತಲ್ಲೇ ದುಂಬಿಯಾಗುತ್ತೇನೆ ಈಗಲೂ,ಚಡಪಡಿಸುತ್ತೇನೆ.
ಮೊದಲ ಮಳೆಯ ಘಮಕ್ಕೆ ಹೋಲಿಸುತ್ತಾರೆ ಕವಿಗಳು ಮೊದಲ ಪ್ರ‍ೀತಿಯನ್ನು. ಈಗಲೂ ಚಂದದ ಹುಡುಗಿಯೊಬ್ಬಳು ಗೋಚರಿಸಿದರೆ,ಎದೆ ನಿನ್ನ ಘಮದಲ್ಲಿ ಹೂವಾಗುತ್ತದೆ.
               ಮೊದಲ್ಲೆಲ್ಲಾ ಚಡಪಡಿಸುತ್ತಿದ್ದೆ,ನೀ ನಿರಾಕರಿಸಿದ್ದಕ್ಕೆ. ತೀರಾ ಇತ್ತೀಚೆಗೆ,ಅದರಿಂದ ನನಗಿಂತ ಜಾಸ್ತಿ ನೀನೇ ಬೆಲೆ ತೆತ್ತಿರುವೆ ಎನಿಸಿತು. ಮಗುವನ್ನು ಹೊತ್ತು ಬಳಲಿ ನಿಂತ ನಿನ್ನ ಮುಖ ಮತ್ತಷ್ಟು ಕಳವಳ ತಂದಿತು.


ಆದರೂ,ರಾಧೆ, ನೀ  ಈಗಲೂ ನಿನ್ನೀ ಮೋಹನನ ಪ್ರೀತಿ ಪ್ರಣತಿಯನ್ನು ಹುಚ್ಚೆಬ್ಬಿಸಿ ಕುಣಿಸುವವಳು....
                                                                                                                                                -ನಿನ್ನ ಪ್ರೀತಿಯ ಮೋಹನನ್ನಲ್ಲದ ಮೋಹನ!!



ಸುಮ್ಮನೆ ದಿಟ್ಟಿಸಿ
ಕಣ್ಣಿನಲ್ಲೇ ಮುದ್ದಿಸಿ,
ಎದೆಯಲ್ಲೀಗ ಹುಚ್ಚು ವ್ಯಾಮೋಹ..

ನಿನಗೇ ಗೊತ್ತಿಲದೇ
ದೂರದಲ್ಲೊಂದು ದೇಗುಲದಲ್ಲಿ,
ಖಾಲಿ ಕೈ ಭಗೀರನಿಂದ
ನಿನ್ನೆಡೆಗೆ ನಿತ್ಯ ಆರಾಧನೆ..
ಆ ದೇಗುಲ ನನ್ನೀ ಹೃದಯ,
ಸದಾ ನಿನ್ನ ಹೆಸರು ಭಜಿಸುವ ನಾನು
ಜೋಳಿಗೆ ತುಂಬಾ ಕನಸು ಹೊತ್ತಿರುವ  ಭಗೀರ...


ಗಾಜಿನೊಳಗಿಟ್ಟ ಹೂವನ್ನು
ದಿಟ್ಟಿಸಿ,ಆಸೆಯಿಂದ ಸುತ್ತಿ
ಒಂದು ಕ್ಷಣಕ್ಕಾದರೂ
ಸಿಕ್ಕೇ ಸಿಕ್ಕೀತೆಂಬ
ನಂಬಿಕೆಯಿಂದ ಹಾರಾಡುವ
ದುಂಬಿಯಂತೆ ನಾನು..
ಒಳಗಡೆಯಿದ್ದು
ಅವ್ಯಾಹತ ಮುಗುಳ್ನಗೆ ಬೀರುತ್ತಾ
ಸಮ್ಮತಿಯೋ,ಅಸಮ್ಮತಿಯೋ

ತಿಳಿಸದೇ ಬದುಕುವ ಹೂವು ನೀನು...




ಪ್ರೀತಿಯ ನಿನಗೆ,
                ಮುಂಜಾನೆ ಸೂರ್ಯ ಮೂಡುವ ಮುಂಚೆ, ಚಿಲಿಪಿಲಿಗುಟ್ಟುವ ಹೆಸರಿಲ್ಲದ ಹಕ್ಕಿಯ ಮುದ್ದಿನ ಕರೆಗೆ ಓಗೊಟ್ಟು, ಕನಸಿನ ಯಾವುದೋ ಜಾವದಲ್ಲಿ ನಗುತ್ತಾ ಮಲಗಿರುವ ಗಂಡನೆಡೆಗೊಂದು ನಿರ್ಭಾವುಕ ನೋಟವಿಟ್ಟು, ರ‍ಾತ್ರಿಯೇ ಹಾಕಿದ್ದ ಒಲೆ ಉರಿಗೆ ಕಾದ ನೀರಿನಲ್ಲಿ, ಹದವಾದ ಸ್ನಾನ ಮಾಡಿ, ರಾತ್ರಿ ತೆಗೆದಿರಿಸಿದ್ದ ಹಾಲಿಗೆ ಚೂರೇ ಚೂರು ಡಿಕಾಕ್ಷನ್ ಬೆರೆಸಿ,ಮಲಗಿರುವ ಅತ್ತೆಯನ್ನು ಮೆತ್ತಗೆ ತಟ್ಟಿ ಎಬ್ಬಿಸಿ ಕೊಟ್ಟಾಗ ಆಕೆ "ಈ ಚಳಿಯಲ್ಲಿ ಯಾಕಮ್ಮಾ ಇಷ್ಟು  ಬೇಗ ಎದ್ದೆ?" ಎಂದು ಗದರುವ ದನಿಯಲ್ಲಿ ಕೇಳುವಾಗ, ಆಕೆಯ ಧ್ವನಿಯೊಳಗಿನ ಮಮತೆ ತಲ್ಲಣಗಳನ್ನು ಹುಟ್ಟುಹಾಕಲು ಶುರುಮಾಡುತ್ತದೆ ಗೆಳೆಯಾ...
               
               ಕತ್ತಲಲ್ಲಿ ಕಾಣುವುದಿಲ್ಲ ಎಂದರಿತೂ,ಆಕೆಗೆ ಬರೀ ಮುಗುಳ್ನಗೆಯೊಂದನ್ನು ನೀಡಿ ಮತ್ತೆ ಅಡುಗೆ ಮನೆಯ ಕಿಟಕಿಯ ಸರಳುಗಳಿಗೆ ಮುಖವೊಡ್ಡಿದರೆ ಶುರು ನಿನ್ನ ನೆನಪು!!
ಅಲ್ಲಿಯವರೆಗೆ ಅಸಲಿಗೆ ನಾನೆಂಬ ಜೀವಕ್ಕೆ ನಿನ್ನ ನೆನಪೇ ಇಲ್ಲವೇನೋ ಎಂಬಂತೆ ಇದ್ದ ನಾನು,ಅತ್ತೆಯ ಮಮತೆಯ ನುಡಿ ಕೇಳಿದ ಕೂಡಲೇ, ಬಲವಂತದಿಂದ ಮುಚ್ಚಿದ್ದ ನನ್ನದೆಯ ಪ್ರೀತಿಯ ನೆನಪಿನ ಕೋಣೆಯ ಬಾಗಿಲು ತೆಗೆದುಕೊಳ್ಳುತ್ತದೆ. ಜೊತೆಗೇ ಶುರುವಾಗುತ್ತದೆ,ನನ್ನೆದೆಯೊಳಗಿನ ಪಶ್ಚಾತ್ತಾಪ.!!
         
              ಗೊತ್ತೇ ಗೆಳೆಯಾ ನಿನಗೆ, ತಣ್ಣನೆ ಶಾಪದಂತೆ ಸುರಿವ ಮಳೆಯ ರಾತ್ರಿಯ ಯಾವುದೋ ಜಾವದಲ್ಲಿ, ತಾಕಿದರೆ ಎಲ್ಲಿ ನನ್ನ ದೇಹಕ್ಕೂ,ಮನಸಿಗೂ ನೋವಾದೀತೋ ಎಂಬ ಎಚ್ಚರದೊಂದಿಗೆ ನನ್ನ ದೇಹವನ್ನು ಪ್ರವೇಶಿಸಿ,ಸದ್ದಿಲ್ಲದೇ ಒಂದಾಗಿ, ಒಂದು ಘಳಿಗೆ ಪೂರ್ತಿ ನನ್ನೊಳಗೆ ಮಿಂದು ದೂರಾಗುವ ಪತಿಯು,ಕೊನೆಯದಾಗಿ ಎಂಬಂತೆ ಸುಖದಲ್ಲೊಂದು ನಿಟ್ಟುಸಿರು ಹೊರಹಾಕಿದಾಗ ನಾ ಮೌನದಲ್ಲಿ ಕಣ್ಣೀರಾಗುತ್ತೇನೆ....

             ಯಾಕೆಂದರೆ  ಆ ಕತ್ತಲೆಯ ರಾತ್ರಿಯಲ್ಲಿ ಇನ್ನಿಲ್ಲದಷ್ಟು ಪ್ರೀತಿ ಹೊತ್ತು ಆತ ಬಂದರೆ,ನನ್ನೊಳಗೆ ಅಸ್ಪಷ್ಟವಾಗಿ ಹಂದಾಡಿ,ನನ್ನೊಳಗೆ ಜೀಕಿ ಒಂದಾಗುವ ಚಿತ್ರ ನಿನ್ನದು!!
ದೇಹದೊಳಗೆ ಆತ ಬಂದಾಗಲೆಲ್ಲಾ,ನನ್ನೆದೆಯ ನೆನಪಿನ ಜೋಲಿ ನಿನ್ನ ಬರಮಾಡಿಕೊಳ್ಳುತ್ತದೆ. ಅಷ್ಟೆಲ್ಲಾ ಪ್ರೀತಿಸುವ ಆತನಿಗೆ ನಾ ಬೇಕೆಂದರೂ, ನಾ ಮಾಡುವ ಮೋಸ ತಡೆಯದಾದಾಗ,ನಿನ್ನ  ಪ್ರೀತಿಸಿದ್ದೇ ತಪ್ಪಾಯಿತೇನೋ ಎಂಬಂತೆ ಮನ ಯೋಚಿಸುತ್ತದೆ. ಮರುಕ್ಷಣವೇ  ಪವಿತ್ರ ನಿನ್ನಯ ಪ್ರೀತಿಯನ್ನು ಅವಮಾನಿಸಿದೆನೊ ಎಂದು ಪಶ್ಚಾತ್ತಾಪ ಪಡುವ ಮನ,ಮಗ್ಗುಲು  ಬದಲಾಯಿಸಿದರೆ ಒರಗುವ ಪತಿಯ ದೇಹದ ಸಾಮಿಪ್ಯ ಕೇಳುವ ಪ್ರಶ್ನೆಗಳೊಳಗೆ ಗೊಂದಲದ ಗೂಡಾಗುತ್ತೆ.


            ಏನಿತ್ತು ಗೆಳೆಯಾ ನನ್ನೋಳಗೆ, ಹೊರಗಿನಿಂದ ನೋಡಿದರೆ ಎಂಥಾ ಸುಂದರಿಯನ್ನೂ ನಾಚಿಸುವ ರೂಪವೊಂದನ್ನು ಬಿಟ್ಟರೆ,ಮನವೆಲ್ಲಾ ನಿನ್ನ ಪ್ರೀತಿಯಲ್ಲಿ ಗೊಚ್ಚೆಯಾಗಿ ನನ್ನಲ್ಲೂ ಅಸಹ್ಯ ಮೂಡಿಸುತಿತ್ತು. ಆದರೆ ನೀ ಬಿಟ್ಟು ಹೋದ ಅದೇ ಬದುಕಿನ ತಿರುವಿನಲ್ಲಿ ದೊರೆತ ನನ್ನವರು ಆತ್ಮದಷ್ಟು ಸನಿಹ ನಿಂತು, ನನ್ನ ಮನಸಿನ ಗೊಂದಲ ಗೊಚ್ಚೆಗಳನ್ನು ಅರಿತೂ,ತನ್ನ ಕಲ್ಲಿನಂತಹ ಕೈಯ್ಯೊಂದನ್ನು ನನ್ನ ಬೆನ್ನಿನ ಮೇಲಿಟ್ಟಿದ್ದರು..ಅದೊಂದೇ ಸ್ಪರ್ಶದಲ್ಲಿ ನನಗೆಷ್ಟೋ ಸಾಂತ್ವನ ದೊರಕಿತ್ತು.

         
           ಅವತ್ತಿನ ಸಂಜೆ ಆಕಾಶಕ್ಕೇ ತೂತು ಬಿದ್ದಂತೆ ಸುರಿದ ಮಳೆಗೆ ನಾ ಪೂರ್ತಿಯಾಗಿ ಒದ್ದೆ,ಮನವೆಲ್ಲಾ ನನ್ನವರ ಪ್ರ‍ೀತಿಯಲ್ಲಿ ತೋಯ್ದು ಒದ್ದೆ. ಒದ್ದೆಯಾಗಿದ್ದ ಬೆನ್ನನ್ನು ಬಾಚಿ ತಬ್ಬಿ ತನ್ನೆಡೆಗೆ ಸೆಳೆದುಕೊಂಡು ಆ ಉದ್ದಕೋಲಿನ ಛತ್ರಿಯಡಿಯಲ್ಲಿ ತೋಳು ತಬ್ಬಿ ಮನೆಗೆ ಕರೆದೊಯ್ದಿದ್ದರು. ಹಾವಿನಂತೆ ಬೆಚ್ಚಗೆ ನನ್ನ ತೋಳಿನ ಮೇಲೆ ಮಲಗಿದ್ದ ಆತನ ಕೈಯ ಸ್ಪರ್ಶದಲ್ಲಿ ವಾಂಛೆಗೆ ಮೀರಿದ,ಬೆಚ್ಚನೆಯ ಭಾವವಿತ್ತು. ತೋಯುತಿದ್ದ ನನಗೆ ಕೊಡೆ ಹಿಡಿದು.ಅವರ ಮನದಲ್ಲೊಂದು ಅಳಿಸಲಾಗದ ಸ್ಥಾನ ನೀಡಿದ್ದರು.


         ಬೀದಿಯ ಕೊನೆಯಲ್ಲಿದ್ದ ಅವರ ಮನೆಯ ಬಾಗಿಲು ತಟ್ಟಿದಾಗ ತೆರೆದಿದ್ದು ಆತನ ತಾಯಿ. ಪ್ರಶ್ನೆಯೊಂದೂ ಮೂಡಲೇ ಇಲ್ಲವೇನೋ ಎಂಬಂತೆ ನನ್ನನ್ನೂ,ಮಗನ್ನನ್ನೂ ಬರಮಾಡಿಕೊಂಡಳಾಕೆ. ಅಂದಿನಿಂದ ಇಲ್ಲಿಯವರೆಗೂ,ಯಾವುದೋ ಜನ್ಮದ ತಾಯಿಯಂತೆ ನನ್ನನ್ನು ತನ್ನ ಮಡಿಲಿನಲ್ಲಿ ಮಗುವಾಗಿಸುತ್ತಿದ್ದಾಳೆ. ಎಂದೂ ಪ್ರಶ್ನಿಸದ ಜೀವ ಅದು. ತೀರಾ ಸಂಜೆಯಲ್ಲಿ ಹಠಮಾಡುತ್ತಾ ಸಿಕ್ಕುಗಟ್ಟುವ ಕೂದಲಿನ ಜೊತೆ ನಿನ್ನ ನೆನಪನ್ನೂ ಹರವಿಕೊಂಡುಕುಳಿತರೆ, ಸದ್ದಿಲ್ಲದೇ ಬಂದು ತನ್ನ ಸ್ಪರ್ಶ ಮಾತ್ರದಿಂದ ಸಂತೈಸುವ ಆಕೆ ನನ್ನ ಅಮ್ಮ ಅಲ್ಲ ಎಂದು ಹೇಗೆ ಹೇಳಲಿ.

            ಎಲ್ಲ ಸರಿಯಾಯಿತೆಂಬುದರ ದ್ಯೋತಕವೆಂಬಂತೆ ಮಗು ಹುಟ್ಟಿದ್ದ,ಸರಿಯಾಗಿ ಮೂರನೇ ವಸಂತದ ಆರಂಭದಲ್ಲಿ. ಆಗಲೇ ನಾ ಬೆಚ್ಚಿಬೀಳಲು ಶುರುವಾಗಿದ್ದು. ಆ ಮಗುವಿನ ಮೂಗಿನ ಕೆಳಗೆ ಸರಿಯಾಗಿ,ಇಷ್ಟಗಲದ ಮಚ್ಚೆ ಇತ್ತು,ನಿನ್ನ ಮೀಸೆ ಮುಚ್ಚಿದ ತುಟಿಯ ಮೇಲಿರುವ ಮಚ್ಚೆಯನ್ನು ಹೋಲುವಂತೆ..!!
            ತೋರುಬೆರಳಿನಂಚಿನಲ್ಲೂ ಮುಟ್ಟದ ನೀನು ಕಾರಣವಲ್ಲದಿದ್ದರೂ,ನನ್ನವರು ನನ್ನೊಳಗೆ ಭೋರ್ಗರೆವಾಗೆಲ್ಲಾ ನೆನಪಾಗುವ ನಿನ್ನ ಅಂಶವೊಂದು, ಮಗುವಿನಲ್ಲಿ ಮಿಳಿತವಾಗಿದೆಯೆನಿಸತೊಡಗಿತು..  


            ನಾನು ಹೆಣ್ಣು. ಎಲ್ಲವನ್ನೂ ಅವಡುಗಚ್ಚಿ ಸಹಿಸುವುದು ನನಗೆ ಅಭ್ಯಾಸವಾದರೂ,ಕೆಲವೊಮ್ಮೆ ನೀನು ಮಗುವಿನ ರೂಪದಲ್ಲಿ,ಮೌನವಾಗಿ ನನ್ನನ್ನು ಪ್ರಶ್ನಿಸುತ್ತಿರುವೆಯೋ ಎಂದನಿಸುತ್ತೆ. "ತೀರಾ possessive ಆಗಿ ನೀ ಕೊಟ್ಟ ಕಾಟವನ್ನೆಲ್ಲಾ ಸಹಿಸಿದ್ದೆ,ಆದರೆ ಅವತ್ತೊಂದಿನ ಸಂಜೆಯ ನನ್ನ ಕ್ರೋಧವನ್ನು ಕ್ಷಮಿಸಲಾರದೆ ಹೋದೆಯಾ" ಎನ್ನುವಂತೆ ನೀ ನನ್ನ ಮಗುವಿನ ಮೂಲಕ ಕೇಳಿದಂತಾಗುತ್ತೆ.


           ಇಷ್ಟಕ್ಕೂ ನಿನ್ನ ಅತಿಯಾಗಿ ಹಚ್ಚಿಕೊಂಡಿದ್ದೇ ನನ್ನ ತಪ್ಪಾ? ಅದೊಂದು ದಿನ ಸಂಜೆ ನೀ ಧಿಕ್ಕರಿಸಿದಾಗ,ದಿಕ್ಕು ತೋಚದೇ ನಿಂತವಳಿಗೆ ಆಸರೆಯಾದ ನನ್ನವರ ಪ್ರ‍ೀತಿ ಒಪ್ಪಿಕೊಂಡಿದ್ದು ತಪ್ಪಾ? ಇಷ್ಟಕ್ಕೂ ನೀ ಆ ಸಂಜೆಯ ಬಗ್ಗೆ ಎಂದಾದರೂ ಪಶ್ಚಾತ್ತಾಪ ಪಟ್ಟಿರುವೆಯಾ?ಮತ್ತೆಂದು ಬರದ ನಿನಗಾಗಿ,ಮನೆಯವರ ಕಣ್ತಪ್ಪಿಸಿ ಬಂದು ನಾ ಕಾದಂತೆ,ನನಗೋಸ್ಕರ ನೀ ಎಂದಾದರೂ ಕಾದಿರುವೆಯಾ?? ನಿಟ್ಟುಸಿರು ಮಾತ್ರ ನನಗೆ ಸಿಗುವ ಉತ್ತರ.
           
           ಮಗು ಏಳುವ ಸಮಯವಾಯಿತು, ಮತ್ತೆ ಸಿಗುತ್ತೇನೆ ಗೆಳೆಯಾ,ಅಲ್ಲಿಯವರೆಗೆ ನನ್ನ ಹೃದಯದಲ್ಲಿರು....
                                                                                                                              ಇಂತಿ ನಿನ್ನ ಪ್ರ‍ೀತಿಯ ಶ್ರ‍ೀಮತಿ. ಹುಡುಗಿ...!