ರಾಧೆ!!..
ಹೆಸರೊಂದೇ ಸಾಕು,ನನ್ನ ಈ rough and tough ಹೃದಯದಲ್ಲಿ ಒಲವು ಉಧ್ಭವವಾಗಲು. ತೀರಾ ಮೊನ್ನೆ ಊರಿನಲ್ಲಿ,ಸೊಂಟದ ಮೇಲೊಂದು ಮಗುವನ್ನಿಟ್ಟುಕೊಂಡು,ನಿರ್ಭಾವುಕವಾಗಿ ನನ್ನೆದುರು ನಿಲ್ಲುವವರೆಗೂ,ಅಂಥದ್ದೊಂದು ಸಂಧರ್ಭ ಎಂದಾದರೂ ಬರಬಹುದೆಂಬ ನಿರೀಕ್ಷೆ ಇತ್ತಷ್ಟೇ. ನೀ ನಿಜವಾಗಲೂ ನಿಂತಾಗ,ನನಗೆ ಆಶ್ಚರ್ಯ ಆಘಾತವಾಗಬಹುದು ಎಂದುಕೊಂಡೆದ್ದೆ. ಆದರೆ ನನಗೆ ಆಶ್ಚರ್ಯವಾಗಲಿಲ್ಲ ಅದೇ ಆಶ್ಚರ್ಯ!! ಯಾವತ್ತೂ ನಿನ್ನೆದುರು ಮಾತನ್ನಾಡಲೂ ಹೆದರುವವನು ನಾನು,ಅಂದು ಚೊಕ್ಕವಾಗಿಯೇ ಮಾತು ಮುಗಿಸಿದ್ದೆ. ಪ್ರೀತಿ ಕಡಿಮೆಯಾಗಿದೆಂರ್ಥವಲ್ಲ,ಚಿಗುರು ಪ್ರೀತಿಗೀಗ ಪ್ರೌಢಿಮೆ ಬಂದಿದೆ.
ಮೊದಲ್ಲೆಲ್ಲಾ ನೀ ಬರುವ ದಾರಿಯಲ್ಲಿ ಕಾದು ಕೂರುವುದೇ,ನನ್ನ ಪಾಲಿಗೆ ಒಲವಿನ ಅತ್ಯಂತ ದೊಡ್ಡ ಕೆಲಸ. ಒಲವೆಂದರೆ ನೀ ನನ್ನ ಬಳಿ ಹಾದುಹೋಗುವಾಗ,ನಡಿಗೆಗೆ ತಕ್ಕಂತೆ ಕುಣಿಯುವ ಆ ನಿನ್ನ ಜಡೆಯಂಚನ್ನೇ ದಿಟ್ಟಿಸುವ್ವುದು. ತೀರಾ ಹೆಚ್ಚೆಂದರೆ,ಆ ಬೀದಿಯಂಚಿನ ಹೂವಿನಂಗಡಿಯಲ್ಲಿ ನೀ ಕೊಳ್ಳುವ ಹೂವಿನ ಮಾಲೆಯನ್ನು,ನೀ ಬರುವುದಕ್ಕೂ ಮೊದಲೇ, ಒಮ್ಮೆ ಮುದ್ದಿಸಿ "ಇದೇ ಮಾಲೆಯನ್ನು.ಆ ಉದ್ದಲಂಗದ ಹುಡುಗಿಗೆ ಕೊಡು" ಎಂದು ತಾಕೀತು ಮಾಡುವುದು,ನನ್ನ ಪಾಲಿಗೆ ಒಲವಾಗಿತ್ತು ಆಗ.
ನೆನಪಿದೆಯಾ ಒಲವೇ.ಒಂದು ದಿನ ಸಂಜೆ ಅದೇ ಬೀದಿಯಲ್ಲಿ ನೀ ಅಂಜುತ್ತಾ,ನಾಚುತ್ತಾ ಒಬ್ಬಳೇ ಬರುವಾಗ, ಅದೆಲ್ಲಿತ್ತೋ ಧೈರ್ಯ ನಿನ್ನ ಬರಸೆಳೆದಿದ್ದೆ. ನೀನಿನ್ನೂ ಗೊಂದಲದಲ್ಲಿರುವಾಗಲೇ ನಾಲ್ಕಕ್ಷರ ವದರಿ, "ನಾನೆಂದರೆ ಇಷ್ಟಾನಾ?" ಎಂಬ ತೀರಾ ಸರಳ ಪ್ರಶ್ನೆಯಿಟ್ಟಿದ್ದೆ ನಿನ್ನೆದುರು..
ಮೊದಲ ಬಾರಿ ನಿವೇದಿಸಿದ ಹುಮ್ಮಸ್ಸಿನಲ್ಲಿ,ನೀ ನಿರಾಕರಿಸಿದ್ದು ನನಗೆ ಕೇಳಿಸಿಯೇ ಇರಲಿಲ್ಲ.
ಬಳುಕುವ ಜಡೆ ಬಿಟ್ಟರೆ,ಜನರಿಗೆ ನಾ ನಿನ್ನ ಮೆಚ್ಚಲು ಕಾರಣಗಳೇ ಸಿಗುತ್ತಿರಲಿಲ್ಲ. "ಪ್ರೀತಿ ಕುರುಡು" ಎಂಬ ದೊಡ್ಡ ತತ್ವಗಳು ಆಗಿನ್ನೂ ನನಗೆ ತಿಳಿದಿರಲಿಲ್ಲವಾದರೂ,ನಿನ್ನ ಹಿಂದೆ ಮೋಹಿತನಾಗಿ ತಿರುಗುವುದಕ್ಕೆ,ಕಾರಣಗಳೇ ಅಸಲಿಗೆ ಇರಲಿಲ್ಲ.
ರಾಧೆಯೆಂಬ ಹೆಸರೇ ಸಾಕು,ನಿಂತಲ್ಲೇ ದುಂಬಿಯಾಗುತ್ತೇನೆ ಈಗಲೂ,ಚಡಪಡಿಸುತ್ತೇನೆ.
ಮೊದಲ ಮಳೆಯ ಘಮಕ್ಕೆ ಹೋಲಿಸುತ್ತಾರೆ ಕವಿಗಳು ಮೊದಲ ಪ್ರೀತಿಯನ್ನು. ಈಗಲೂ ಚಂದದ ಹುಡುಗಿಯೊಬ್ಬಳು ಗೋಚರಿಸಿದರೆ,ಎದೆ ನಿನ್ನ ಘಮದಲ್ಲಿ ಹೂವಾಗುತ್ತದೆ.
ಮೊದಲ್ಲೆಲ್ಲಾ ಚಡಪಡಿಸುತ್ತಿದ್ದೆ,ನೀ ನಿರಾಕರಿಸಿದ್ದಕ್ಕೆ. ತೀರಾ ಇತ್ತೀಚೆಗೆ,ಅದರಿಂದ ನನಗಿಂತ ಜಾಸ್ತಿ ನೀನೇ ಬೆಲೆ ತೆತ್ತಿರುವೆ ಎನಿಸಿತು. ಮಗುವನ್ನು ಹೊತ್ತು ಬಳಲಿ ನಿಂತ ನಿನ್ನ ಮುಖ ಮತ್ತಷ್ಟು ಕಳವಳ ತಂದಿತು.
ಆದರೂ,ರಾಧೆ, ನೀ ಈಗಲೂ ನಿನ್ನೀ ಮೋಹನನ ಪ್ರೀತಿ ಪ್ರಣತಿಯನ್ನು ಹುಚ್ಚೆಬ್ಬಿಸಿ ಕುಣಿಸುವವಳು....
-ನಿನ್ನ ಪ್ರೀತಿಯ ಮೋಹನನ್ನಲ್ಲದ ಮೋಹನ!!
Subscribe to:
Post Comments (Atom)
No comments:
Post a Comment