ಸಮೂಹ ಮಾಧ್ಯಮ

ನಾನು ಚಿಕ್ಕೋನಿರ್ತ ನಮ್ಮಪ್ಪ ದಿನಾ ರಾತ್ರಿ ೯ ಗಂಟೆ ಇಂದ ೯:೩೦ ತನ್ಕ `ಮುಕ್ತ' ಸೀರಿಯಲ್ ತೋರ್ಸೋರು. ಟಿ.ವಿ.ಯಿಂದ ಸ್ವಲ್ಪ ದೂರಾನೇ ಇದ್ದ ನಮ್ಮಪ್ಪ ನಮ್ನೆಲ್ಲಾ ಕೂರ್ಸಿ ಈ ಸೀರಿಯಲ್ ಯಾಕೆ ತೋರಿಸ್ತಾ ಇದಾರೆ ಅಂತ ಆಗ ಅಷ್ಟೇನು ಗೊತ್ತಾಗ್ತಾ ಇರ್ಲಿಲ್ಲ. ಕೊನೆಗೆ, ರಂಗಭೂಮಿ ಕಡೆಗೆ ನನ್ನೊಲವು ಹರಿಯೋಕೆ ಶುರುವಾದಾಗ ನಾವು ನೋಡೋ ವಿಚಾರಗಳು, ತಲ್ಲೀನತೆ ತೋರಿಸೋ ವಿಷಯಗಳು ನಮ್ಮ ಜೀವನ ಶೈಲಿಯ ಮೇಲೆ ಅದೆಷ್ಟು ಪ್ರಭಾವ ಬೀರತ್ತೆ ಅಂತ ಗೊತ್ತಾಯ್ತು. ಬೆಳಿತಾ ಬಂದಂಗೆ, ನಮ್ಮ ಸಮೂಹ ಮಾಧ್ಯಮದಲ್ಲಿ ಆಗ್ತಾ ಬಂದ ಬದಲಾವಣೆಗಳನ್ನ ನೋಡ್ತಾ, ನಮ್ಮ ಸಮಾಜ ಕೆಟ್ಟು ಹೋಗ್ತಾ ಇರೋಕೆ ಇದೂ ಕೂಡಾ ಒಂದು ಕಾರಣ ಇರ್ಬೋದಾ ಅಂತ ಅನ್ಸಕ್ಕೆ ಶುರು ಆಯ್ತು. ಸೂಕ್ಷ್ಮವಾಗಿ ನೋಡಿದ್ರೆ, ಈ ಒಂದು ಚಿಕ್ಕ ಪೆಟ್ಟಿಗೆಗೆ ಅಷ್ಟೆಲ್ಲಾ ತಾಕತ್ತಿದೆಯಾ ಅಂತ ಅನ್ಸತ್ತೆ!

                ಈಗ ಕೂಲಂಕುಶವಾಗಿ ನೋಡ್ತಾ ಹೋಗಣ. ಇತ್ತೀಚೆಗೆ ಬರ್ತಾ ಇರೋ ಧಾರಾವಾಹಿಗಳು ಅದೆಷ್ಟರ ಮಟ್ಟಿಗೆ ನಮ್ಮ ಮನೆ ಹೆಣ್ಣುಮಕ್ಕಳನ್ನ ಹಿಡಿದಿಟ್ಟಿದೆ ಅಂದ್ರೆ ಆಫ಼ೀಸಿನಿಂದ ಸುಸ್ತಾಗಿ ಬಂದ ಗಂಡ/ಮಗ ಒಂದು ಲೋಟ ನೀರು ಕೇಳಿದ್ರೂ ಎದ್ದು ಹೋಗಿ ತಂದು ಕೊಡೋಕೂ ಅಲ್ಲಿ ಅಡ್ವರ್ಟೈಸ್ಮೆಂಟ್ ಬರ್ಬೇಕು! ಮನೆಯೋರ ಯೋಗ ಕ್ಷೇಮಕ್ಕಿಂತಾ ಸನ್ನಿಧಿಗೆ ಅವ್ಳ ಗಂಡ ಕಿಸ್ ಕೊಡ್ತಾನಾ ಅನ್ನೋದೇ ಜಾಸ್ತಿ ಮುಖ್ಯ ಆಗೋಗಿದೆ. ಈ ಇಡೀ ಲೇಖನ ಓದಿ ಮುಗ್ಸೋದ್ರೊಳ್ಗೆ ಎಲ್ಲಾ ಹೆಣ್ಣುಮಕ್ಳೂ ಸೇರಿ ನನ್ನನ್ನೇ ಮುಗ್ಸಿದ್ರೂ ಆಶ್ಚರ್ಯ ಇಲ್ಲ! ನಾರೀಮಣಿಯರೇ, ಸೀರಿಯಲ್ ನೋಡಿ-ನೋಡಿ ಸೀರಿಯಸ್ ಆಗ್ಬೇಡಿ, ಸ್ವಲ್ಪ ತಡ್ಕೊಳಿ! ನೀವು ಮನೋರಂಜನೆಗೋಸ್ಕರ ಇದನ್ನೆಲ್ಲಾ ನೋಡ್ತಿದೀರಿ; ನಮ್ಗೂ ಗೊತ್ತು. ಆದ್ರೆ ನೀವು ನೋಡೋ ಈ ಚಿಕ್ಕ ವಿಚಾರಗಳೇ ನಿಮ್ಮ ಮನಸ್ಸಿನ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರ್ತಾ ಇದೆ ಅನ್ನೋದನ್ನೂ ತಿಳ್ಕೊಂಡಿರೋದು ಉತ್ತಮ. ವಾರ ಪೂರ್ತಿ ಯಾರೂ ಜೊತೆ ಇರಲ್ಲ, ಒಬ್ರಿಗೇ ಬೇಜಾರಾಗತ್ತೇ ಅಂತಾ ಇದ್ನೆಲ್ಲಾ ನೋಡ್ತೀರಿ. ಆದ್ರೆ, ಮನೆಯೋರೆಲ್ಲಾ ಮನೇಲೇ ಇದ್ದಾಗ್ಲೂ ಮನೆಯೋರನ್ನ ಮನಸ್ಸಿಂದ ಆಚೆ ಇಟ್ಟು ಆ ಮೂರ್ಖರ ಪೆಟ್ಟಿಗೆ ಒಳಗೆ ನಿಮ್ಮನ್ನ ನೀವೇ ಬಂಧಿಸಿಕೊಳ್ಳೋದು ಎಷ್ಟು ಸಮಂಜಸ?

                ಇದೆಲ್ಲಾ ನಿಮ್ಮ ವಿಚಾರಧಾರೆಗೆ ಎಷ್ಟರ ಮಟ್ಟಿಗೆ ಘಾಸಿ ಮಾಡತ್ತೆ ಗೊತ್ತಾ? ನಮ್ಗೆ ಚಿಕ್ಕೋರಿದ್ದಾಗಿಂದ್ಲೂ ಪ್ರತಿಯೊಂದಕ್ಕೂ ಉದಾಹರಣೆ ಕೊಟ್ಟು ಕಲ್ಸಿ ಅಭ್ಯಾಸ ಆಗಿದೆ. ಅದ್ಕೇ ಒಂದು ಉದಾಹರಣೆ ಕೊಟ್ಟು ಇದನ್ನ ಅರ್ಥ ಮಾಡ್ಸೋಕೆ ಪ್ರಯತ್ನ ಮಾಡ್ತೀನಿ. ಇತ್ತೀಚೆಗೆ ಬಾಹುಬಲಿ ಸಿನಿಮಾ ನೋಡ್ದೆ(ಈಗ ನಮ್ಮ ಅಪ್ಪಟ ಭಾಷಾಭಿಮಾನಿಗಳೆಲ್ಲಾ ಕಣ್ಣು ಕೆಂಪಗೆ ಮಾಡಿಕೊಳ್ಳೋ ಸಮಯ!). ಅದರಲ್ಲಿ ಒಂದು ಸಂದರ್ಭದಲ್ಲಿ ಚಿತ್ರದ ನಟ ಒಂದು ಮಾತು ಹೇಳ್ತಾನೆ, "ತಪ್ಪು ಮಾಡ್ಬಿಟ್ಟೆ ದೇವಸೇನಾ, ಅನ್ಯ ಹೆಣ್ಣುಮಕ್ಕಳ ಮೇಲೆ ಕೈ ಇಡೋರ ಕೈ ಬೆರಳು ಕತ್ತರಿಸ್ಬಾರ್ದು. ಕತ್ತರಿಸಬೇಕಾಗಿರೋದು ಅವರ ತಲೆ...." ಅಂತ. ಈ ಒಂದು ಸನ್ನಿವೇಶಕ್ಕೆ ಜನರೆಲ್ಲಾ ಹುಚ್ಚೆದ್ದು ಕೇಕೆ ಹೊಡೆದು, ಶಿಳ್ಳೆ ಹಾಕಿ ಅದನ್ನ ಅಲ್ಲೇ ಮರೆತು ಬಿಟ್ರೂ ಮನಸ್ಸಿನ ಒಂದು ಮೂಲೆಯಲ್ಲಿ ಪರ ಸ್ರೀಯನ್ನ ಗೌರವದಿಂದ ನೋಡ್ಬೇಕು ಅನ್ನೋ ಒಂದು ಸಂದೇಶವನ್ನ ನಮ್ಮ ಮನಸ್ಸು ಛಾಪಿಸಿಕೊಳ್ಳತ್ತೆ. ಆ ಮಾತುಗಳು ಆ ಸಿನಿಮಾದಲ್ಲಿ ಮುಕ್ತವಾಗಿ ಎಲ್ಲೂ ಹೇಳದೇ ಇರಬಹುದು. ಆದ್ರೆ, ಅದನ್ನ ಅರ್ಥೈಸಿಕೊಂಡು ನಮ್ಮ ಮೆದುಳಿನಲ್ಲಿ ಉಳಿಸಿಕೊಳ್ಳೋದು ನಮ್ಮ ಮನಸ್ಸಿನ ಕೆಲಸ. ಅದನ್ನ ನಾವು ಹೇಳದೇ ಇದ್ರೂ ಅದರ ಕೆಲಸ ಅದು ಮಾಡತ್ತೆ. ಹಾಗೇ ಈಗ ಬರ್ತಾ ಇರೋ ಸೀರಿಯಲ್ಲುಗಳಲ್ಲಿ ಮನಸ್ಸಿಗೆ ಮುದ ನೀಡೋ ವಿಚಾರಗಳು ತುಂಬಾ ಕಡಿಮೆ. ಮೊದಲೆಲ್ಲಾ ಬರ್ತಿದ್ದ ಸಿನೆಮಾ, ಸೀರಿಯಲ್ಲುಗಳಲ್ಲಿ ಒಂದು ಧ್ಯೇಯ ಇರ್ತಾ ಇತ್ತು, "ಸತ್ಯ ಮೇವ ಜಯತೇ, ಒಳ್ಳೆ ಮಾರ್ಗದಲ್ಲಿ ಇರೋರು ಯಾವಾಗ್ಲೂ ನೆಮ್ಮದೀಲಿ ಇರ್ತಾರೆ" ಅನ್ನೋ ರೀತಿ. ಹಿಂದೆ ಅದೆಷ್ಟೋ ನಟರು ಅನೇಕ ಪಾತ್ರಗಳಲ್ಲಿ ಸಿಗರೇಟು ಸೇದುವ, ಮಧ್ಯಪಾನ ಮಡುವ ಸನ್ನಿವೇಶಗಳಿಂದ ದೂರ ಉಳಿತಾ ಇದ್ರು. ತಮ್ಮ ಆ ಒಂದು ಸನ್ನಿವೇಶವನ್ನೇ ತಮ್ಮ ಅಭಿಮಾನಿಗಳು ದುಶ್ಚಟವಾಗಿ ಬೆಳೆಸಿಕೊಂಡರೆ ಅನ್ನೋ ಒಂದು ಸಮಾಜ ಮುಖಿ ಜವಾಬ್ದಾರಿ ಅವರಲ್ಲಿತ್ತು. ಆದ್ರೆ, ಈಗ ಬರ್ತಾ ಇರೋ ಎಲ್ಲದ್ರಲ್ಲೂ ಒಳ್ಳೆಯೋರನ್ನ ಎಲ್ಲಾ ಕಡೆಯಿಂದ ಹಾಕಿ ತುಳಿಯೋದು, ಬೇಡದ ಶೋಕಿ ಮಾಡೋದನ್ನೇ ತೋರಿಸ್ತಾ ಇದಾರೆ! ಇದನ್ನೇ ನೋಡ್ತಾ ಇದ್ರೆ, ಕೊನೆಗೊಂದು ದಿನ ಒಳ್ಳೆಯೋರಾಗಿ ಇರೋದೆ ತಪ್ಪು ಅನ್ನೋ ಭಾವನೆ ನಮ್ಮ ಮನ್ಸಲ್ಲಿ ಬಂದ್ರೂ ಆಶ್ಚರ್ಯ ಇಲ್ಲ! ಎಲ್ಲೀ ತನ್ಕ ಈ ಸೀರಿಯಲ್ಲುಗಳು ಆವರಿಸಿಕೊಂಡಿದೆ ಅಂದ್ರೆ ಮನೇಲಿರೋ ಮಕ್ಕಳು ಗಲಾಟೆ ಮಾಡ್ತಾ ಎಲ್ಲಿ ನಮ್ಗೆ ಟಿ.ವಿ. ನೋಡಕ್ಕೆ ತೊಂದ್ರೆ ಆಗತ್ತೆ ಅಂತ ಆ ಪುಟ್ಟ ಮಕ್ಕಳನ್ನೂ ಕೂರಿಸ್ಕೊಂಡು ಸೀರಿಯಲ್ ಹುಚ್ಚು ಹಿಡ್ಸಿದ್ದಾಗಿದೆ! ಆ ಮುಗ್ಧ ಮನಸ್ಸುಗಳು ಅದ್ರಲ್ಲೆಲ್ಲಾ ಬರೋ ಅನಿಷ್ಠಗಳನ್ನ ನೋಡಿ ಇನ್ನೇನೆಲ್ಲಾ ಕಲೀತಾವೋ! ಮನಃಶಾತ್ರಜ್ನರು ಹೇಳೋ ಪ್ರಕಾರ, ನಾವು ಸತತವಾಗಿ ಬರೀ ನಕಾರಾತ್ಮಕ ವಿಚಾರಗಳನ್ನ ನೋಡ್ತಾ ಇದ್ರೆ ಕೊನೆಗೊಂದು ದಿನ ನಮ್ಮ ಮನಸ್ಸು ಪ್ರತಿಯೊಂದರಲ್ಲೂ ಬರೀ ನಕಾರಾತ್ಮಕ ವಿಚಾರಗಳನ್ನ ಕಾಣೋದಿಕ್ಕೆ ಶುರು ಮಾಡತ್ತೆ. ಇದು ನಿಮಗೆ ಮಾತ್ರ ಅಲ್ಲ, ನಿಮ್ಮ ಮೇಲೆ ಅವಲಂಬಿತವಾಗಿರೋ ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರತ್ತೆ!

                "ನೋಡಿದ್ಯೇನೇ!? ನಾನು ಅಷ್ಟು ಬಡ್ಕೋತಾ ಇದ್ದೆ, ಆ ಮನೆಹಾಳು ಸೀರಿಯಲ್ಲುಗಳನ್ನ ನೋಡ್ಬೇಡಾ ಅಂತ! ಕೇಳಿದ್ಯಾ ನನ್ ಮಾತೂ?" ಅಂತ ಹೆಣ್ಣುಮಕ್ಕಳನ್ನ ಬೈಯ್ಯೋಕೆ ರೆಡಿಯಾಗಿರೋ ಗಂಡು ಸಂತಾನವೇ, ಒಂದು ನಿಮಿಶ ತಡ್ಕೊಳಿ! ನಿಮ್ಮ ಬಗ್ಗೇನೂ ಹೇಳೋಕಿದೆ. ಕಿತ್ತಾಡಿ, ಹೋರಾಡಿ ರಿಮೋಟು ಗಿಟ್ಟಿಸಿಕೊಂಡು ನೀವು ಹಾಕಿ ನೋಡೋ ನ್ಯೂಸ್ ಚಾನೆಲ್ಲುಗಳಲ್ಲೇನು ಮಹಾನ್ ಬೋಧನೆ ಆಗ್ತಾ ಇಲ್ಲ! ನಾವು ಚಿಕ್ಕೋರಿರ್ತಾ ಒಂದೇ ಒಂದು ನ್ಯೂಸ್ ಚಾನೆಲ್ ಇತ್ತು. ಅದು ಬಿಟ್ರೆ ಕೆಲವೊಂದು ಚಾನೆಲ್ಲುಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಒಂದು ಗಂಟೆಗಳ ಕಾಲ ಪ್ರಪಂಚದ ಎಲ್ಲಾ ವಿಚಾರಗಳನ್ನ ತಿಳಿಸ್ತಾ ಇದ್ರು. ಅದರಲ್ಲೂ ಬಹಳಷ್ಟು ವಿಚಾರಗಳು ಬೆಳಿಗ್ಗಿನಿಂದ ರಾತ್ರಿಗೆ ಪುನರಾವರ್ತನೆಯಾಗ್ತಾ ಇತ್ತು. ಹೀಗೆ ಮೂರು ಗಂಟೆಗಳಲ್ಲೇ ಮುಗಿದು ಹೋಗ್ತಾ ಇದ್ದ ನ್ಯೂಸ್ ದಿನ ಪೂರ್ತಿ ಹಾಕಿ ತೋರಿಸುವಂತದ್ದು ಏನಪ್ಪಾ ಇದೆ? ಸಾಲದ್ದಕ್ಕೆ ಒಂದೆರಡೇ ಈ ನ್ಯೂಸ್ ಚಾನೆಲ್ಲುಗಳು! ನ್ಯೂಸ್ ಚಾನೆಲ್ಲುಗಳು ಬರೋಕೂ ಮೊದಲೂ ಬ್ರೆಕಿಂಗ್ ನ್ಯೂಸ್ ಸಿಗ್ತಾ ಇತ್ತು. ಹಾಗಾಗಿ ಆ ಕಾರಣ ಹೇಳಿದರೆ ಅದರಲ್ಲಿ ಹುರುಳಿಲ್ಲ. ಹೀಗೇ ವಿಷಯಗಳಿಲ್ಲದೇ ಸುಮ್ಮನಿರಲಾರದ ಕೆಲವು ಮಹಾ ಪ್ರಚಂಡರು, ಬೇಡ್ದೇ ಇರೋ ಕರ್ಮ-ಖಾಂಡಗಳನ್ನೆಲ್ಲಾ ತೋರಿಸ್ತಾ ಸಮೂಹ ಮಾಧ್ಯಮಗಳನ್ನ ಇನ್ನಷ್ಟು ಕುಲಗೆಡಿಸ್ತಾ ಇದ್ದಾವೆ!

                "ಅಯ್ಯೋ! ನಾವೇನು ಮಾಡನಾ? ಅವ್ರು ತೋರ್ಸಿದ್ದು ನಾವು ನಾಡ್ತೀವಿ" ಅನ್ನೋ ಮಹಾನುಭಾವರೇ, ಈ ಮಾಧ್ಯಮ ವರ್ಗ ನಡಿತಾ ಇರೋದು ಟಿ.ಆರ್.ಪಿ. ಮೇಲೆ. ನೀವೆಲ್ಲಾ ಮುಗಿಬಿದ್ದು ನೋಡಿದಷ್ಟೂ ಆ ಟಿ.ಆರ್.ಪಿ. ಜಾಸ್ತಿ ಆಗ್ತಾ ಹೋಗತ್ತೆ. ಹಾಗೇ ಯಾರೂ ನೋಡದೇ, ಟಿ.ಆರ್.ಪಿ.ಯೇ ಇಲ್ಲದ ಕಾರ್ಯಕ್ರಮಗಳನ್ನ ಮತ್ತೂ ಹಾಕಿ ತೋರಿಸೋ ತೆವಲು ಯಾವ ಮಹಾನುಭಾವನಿಗೂ ಇಲ್ಲ. ಹೀಗೇ, ಒಂದಲ್ಲಾ ಒಂದು ರೀತಿಯಲ್ಲಿ ಈ ಎಲ್ಲಾ ಮನೆಹಾಳು ಸಂಸ್ಕೃತಿಯನ್ನ ನಾವೇ ಬೆಳೆಸ್ತಾ ಇದ್ದೀವಿ. ಅವ್ರು ತೋರಿಸಿದ್ದೆಲ್ಲಾ ನೀವು ನೋಡ್ಬೇಕು ಅಂತೇನೂ ಕಾನೂನಿಲ್ಲ! ಯಾರೂ ನೋಡದೇ ಇಂತಹ ಅರ್ಥವಿಲ್ಲದ ಕಾರ್ಯಕ್ರಮಗಳಿಗೆ ಟಿ.ಆರ್.ಪಿ. ಬಿದ್ದು ಹೋದಾಗ ವಿಧಿಯಿಲ್ಲದೆ ಅದನ್ನ ನಿಲ್ಲಿಸ್ತಾರೆ.

                ಏನೂ ನೋಡ್ಬೇಡಿ ಅಂತ ನಾನು ಹೇಳ್ತಿಲ್ಲ. ಆದ್ರೆ, ನಿಮ್ಮ ನೋಡುವಿಕೆಗೆ ಸ್ವಲ್ಪ ಕಡಿವಾಣ ಇರ್ಲಿ ಅಂತ ಅಷ್ಟೇ. ಹೀಗೇ, ಬರೀ ನಿಮ್ಮ ಟಿ.ವಿ. ರಿಮೋಟು ಮಾತ್ರ ನಿಮ್ಮ ಕೈಯಲ್ಲಿ ಇಲ್ಲ. ನೀವು ಯಾವುದನ್ನು ನೋಡಬೇಕೆಂದು ನಿಮ್ಮ ಮನಸ್ಸನ್ನು ಸೆಟ್ ಮಾಡುವ ರಿಮೋಟು ಕೂಡಾ ನಿಮ್ಮ ಕೈಯಲ್ಲೇ ಇದೆ. ಇವೆಲ್ಲಾ ಚಿಕ್ಕ-ಚಿಕ್ಕ ವಿಚಾರ ಅಂತ ನೀವು ತಲೆ ಕೆಡಿಸಿಕೊಳ್ಳದೇ ಇರ್ಬೋದು. ಆದ್ರೆ, ಈ ಚಿಕ್ಕ ವಿಚಾರಗಳೇ ಮುಂದೆ ನಿಮ್ಮರಿವಿಗೆ ನಿಲುಕದೇ ಹೆಮ್ಮರವಾಗಿ ಕಾಡತ್ತೆ. ಆದ್ರಿಂದ, ಇನ್ನಾದ್ರೂ ಇದನ್ನೆಲ್ಲಾ ಅರ್ಥ ಮಾಡ್ಕೊಂಡು ಕಲ್ತ್ಕೊಳೋದು ಅಥವಾ ಈ ವಿಚಾರ ಧಾರೆಯ ಬಗ್ಗೆ ಒಂದಿಷ್ಟು ಹೀಯಾಳಿಸಿ ಕಮೆಂಟು ಮಾಡಿ ಮತ್ತದೇ ಮನೆಹಾಳು ಪ್ರಪಂಚಕ್ಕೆ ಮರಳುವುದು ಎರಡೂ ನಿಮ್ಮ ಕೈಯಲ್ಲೇ ಇದೆ.

ಸುಧೀಕ್ಷ್ ಸದಾಶಿವ್