ನಮಸ್ಕಾರ ಗೆಳೆಯರೇ...!
ಸ್ವಲ್ಪ ದಿನಗಳ ನಂತರ, ಸಣ್ಣದೊಂದು ಕವನದೊಂದಿಗೆ...



ನೆಲದ ಮೇಲೆ ನೀರಿಲ್ಲದಿದ್ದಾಗ
ಆಕಾಶದ ಮೋಡವ ನೋಡಿ,
ನೀರಿನ ಕನಸಿನಲ್ಲೇ ದಾಹ
ತೀರಿಸಿಕೊಳ್ಳುವವನು ನಾನು.
ನೀ ನಿರಾಕರಿಸಿದಾಗ
ನಿನ್ನ ಇಲ್ಲಗಳಲ್ಲೇ
ನನ್ನ ಖುಷಿಯ ಉತ್ತರಗಳನ್ನು
ಕಂಡುಕೊಳ್ಳುವೆ...

ತೀರಾ ಸಂಜೆಯಲ್ಲಿ
ತೊರೆದು ಹೋಗುವಾಗ,
ಒಂಚೂರು ಜಾಸ್ತಿ ಇದ್ದು ಹೋಗೆಂದು
ಗೋಗರೆಯುವ ಹೊರತಾಗಿ,
ನನ್ನ ಪ್ರೀತಿಯಲ್ಲಿ ಮೋಹಕ್ಕೆ ಜಾಗವಿಲ್ಲ.

ಎಲ್ಲರೂ ಆಕಾಶದೆತ್ತರದ ನಕ್ಷತ್ರಗಳನ್ನು
ಎದೆಯಲ್ಲಿಟ್ಟುಕೊಳ್ಳುತ್ತಿರುವಾಗ,
ಬರೀ ನೆಲದ ಮೇಲೆ ನಿಂತ
ನೀರಿನ ಪ್ರತಿಬಿಂಬವ
ಮನದ ತುಂಬಾ ಚಿತ್ರಿಸಿಕೊಂಡವನು ನಾನು...!


ಮತ್ತೆ ಮತ್ತೆ ನಿನ್ನೇ ನೋಡಿ,
ಅದ್ಯಾವುದೋ ಕಾರಣಕ್ಕೆ ನೀ ನಕ್ಕಾಗ,
ನಾನೇ ಏನೋ ಕಲ್ಪಿಸಿಕೊಂಡು
ಮುಗುಳ್ನಕ್ಕು, ಮತ್ತೆ ನಿನ್ನೇ ದಿಟ್ಟಿಸಿ
ಜಗವ ಪೂರ್ತಿ ಗೆದ್ದವನಂತೆ
ಸಂಭ್ರಮಿಸಿದವನು ನಾನು...!

-ಶ್ರೀನಿಧಿ ವಿ ನಾ.

ಅನರ್ಥಶಾಸ್ತ್ರ

ಶ್ರಮಜೀವಿಯೊಬ್ಬ ಕೆಲಸ ಮಾಡಿದ
ಕೈಲಾಗದವನು ಕೈತುರಿಸಿಕೊಂಡ
ಇಬ್ಬರ ಅಂಗೈಗಳೂ ರೋಮಮುಕ್ತವಾದವು;
ನನ್ನದೊಂದು ಲಾಗಾಯ್ತಿನ ಒನ್ ಸೈಡೆಡ್ಡು ಲವ್ ಸ್ಟೋರಿಗೆ
ನನ್ನ ನಾಲಾಯಕ್ಕುತನದ ಬಗ್ಗೆ ಎಡೆಬಿಡದ ಆಕ್ರೋಶ;
ಪ್ರಾಣಿದಯೆಯ ಬಗ್ಗೆ ಮಾತನಾಡುವ ನನಗೆ
ಕಿವಿಯ ಬಳಿ ಗುಯ್ಯೆಂದ ಸೊಳ್ಳೆಯ ಹೊಡೆಯಲೋ ಬೇಡವೋ ಎಂಬ ತುಮುಲ;
ಆತ್ಮಾವಲೋಕನ ಮಾಡಿ ಮಾಡಿ ನಿದ್ರೆ ಬಂದಾಗ
ತಲೆಬುಡವಿಲ್ಲದ ಕನಸುಗಳ ಏಕದಿನ ಸರಣಿ;
ಭೂಸ್ಪರ್ಶಕೆ ಹಾತೊರೆಯುತ್ತಿದ್ದ ಆಗಷ್ಟೇ ನಡೆಯಲು ಕಲಿತ ಕಂದಮ್ಮನ ಅಂಗಾಲು
ಶೂ ಸಾಕ್ಸೆಂಬ ಜೈಲಿನೊಳಗೆ ಬಂಧಿಯಾಯಿತು;
ಪುಡಾರಿಯೊಬ್ಬ ಪಂಚೆ ಸರಿಮಾಡಿಕೊಂಡ, ಜನರು ಜೈಯೆಂದರು;
ನಟಿಯೊಬ್ಬಳು ತೇಗಿದಳು, ಟಿ.ವಿ.ಯಲ್ಲಿ ನೇರಪ್ರಸಾರ ಮಾಡಿದರು;
ಮಳೆಬರದೇ ರೈತರು ಹತಾಶರಾದರು,
'ಹೋರಾಟಗಾರರು' ಟವಲ್ಲು ಬದಿಗಿಟ್ಟು ಹಸಿರು ಶಾಲು ಹೊದ್ದರು;
ಸಿನಿಮಾದಲ್ಲಿ ಸೈನಿಕನ ಪಾತ್ರ ಮಾಡಿದ ನಟನೊಬ್ಬ ಪ್ರಶಸ್ತಿ ಪಡೆದು ಮುಗುಳ್ನಕ್ಕ,
ಲಡಾಕಿನ ಮೈಕೊರೆಯುವ ಚಳಿಯಲ್ಲಿ ಸೈನಿಕನೊಬ್ಬ ರೈಫಲ್ಲು ಹಿಡಿದು ಅವಡುಗಚ್ಚಿದ;
ತಲೆಕೆಟ್ಟವನೊಬ್ಬ ಶಿಕ್ಷಣ ವ್ಯವಸ್ಥೆ ಸರಿಯಿಲ್ಲವೆಂದ,
ಅವನನ್ನು ಫೇಲು ಮಾಡಿದರು;
ಮಾಲಿನಲ್ಲಿ ಸಾವಿರ ಕೊಟ್ಟು 'ಜಾಕಿ' ಶರ್ಟು ಖರೀದಿಸಿದವ
ಇಸ್ತ್ರಿಯವನ ಜೊತೆ ಹತ್ತು ರೂಪಾಯಿಗೆ ಚೌಕಾಶಿ ಮಾಡಿದ;
ಪಬ್ಬಿನಲ್ಲಿ ಡೀಸೆಂಟಾಗಿ 'ಡಿಜೆ ನೈಟು' ಪಾರ್ಟಿ ಮಾಡುತ್ತಿದ್ದ ಸೊಫಿಸ್ಟಿಕೇಟೆಡ್ಡು ಜನ,
ಗಣಪತಿ ಬಿಡುವಾಗ ಎಣ್ಣೆ ಹೊಡೆದು ಕುಣಿಯುವವರ ನೋಡಿ 'ಡರ್ಟಿ ಪೀಪಲ್ಲು'ಗಳೆಂದುಕೊಂಡರು;
ಚಳಿಗಾಲದಿ ಬಿರುಕುಬಿಟ್ಟ ಕಾಲಿಗೆ ವ್ಯಾಸಲೀನು ಹಚ್ಚುವಂತೆ
ವಾಯುಭಾರ ಕುಸಿದು ಮಳೆಯೊಂದು ಬಂದು ಕೊರಕಲುಗಳ ತುಂಬಿತು;
ಗುಟ್ಕಾ ರಸದ ಸತತ ಪ್ರೋಕ್ಷಣೆಯಿಂದ ಕೆಂಪಾಗಿದ್ದ
'ಈಶಾನ್ಯ ಕರ್ನಾಟಕ ಸಾರಿಗೆ' ಬಸ್ಸೊಂದು ಮುಗುಳ್ನಕ್ಕಿತು;
ಬೇಸಿಗೆಯಲಿ ನದಿನೀರಿಂಗಿದಾಗ ತೆಪ್ಪಗಿದ್ದ ಗುಂಡಿಯೊಂದು
ಮಳೆಬಿದ್ದಾಗ ಸುಳಿಯಾಗಿ ನರಬಲಿ ಪಡೆದು ಹೂಂಕರಿಸಿತು;
ಇಷ್ಟೆಲ್ಲದರ ಮಧ್ಯೆ ನವೆಂಬರ್ ಬಂತೆಂದು ಕನ್ನಡದ ಕವಿಯೊಬ್ಬ ಖುಷಿಪಟ್ಟ,
ಪಿತೃಪಕ್ಷ ಬಂದಾಗ ಕಾಗೆಗಳು ಹಿಗ್ಗುವಂತೆ; 
'ಹೋರಾಟಗಾರರು' ಹಸಿರು ಶಾಲು ಬದಿಗಿಟ್ಟು ಕೆಂಪು-ಹಳದಿ ಹೊದ್ದರು;
ಕಂಬಳಿ ಹುಳವೊಂದು ಚಿಟ್ಟೆಯಾಯಿತು,
ರೇಷ್ಮೆಯ ನೂಲೊಂದು ಬಟ್ಟೆಯಾಯಿತು,
ಅಡಿಕೆಯ ಹಾಳೆಯೊಂದು ತಟ್ಟೆಯಾಯಿತು,
ಮಾವಿನೆಲೆಯೊಂದು ಚಿಗಳಿ ಕೊಟ್ಟೆಯಾಯಿತು;
ತಿಕ್ಕಲು ಪ್ರಾಸವನ್ನೋದಿ ತಲೆಬುರುಡೆ ಒಟ್ಟೆಯಾಯಿತು;
ಹಿಟ್ಲರನೆಂಬ ಸಂಪಾದಕನೊಬ್ಬ ಭುಸುಗುಡುತ್ತಾ ಅನರ್ಥದ ಮುದ್ದೆಯೆಂದು
ಕವನವೊಂದನು ಕಸದಬುಟ್ಟಿಯೆಂಬ ಗ್ಯಾಸ್ ಛೇಂಬರಿನಲ್ಲಿ ಹತ್ಯೆ ಮಾಡಿದ;
ಶಶಿಯು ಸೂರ್ಯನೆಡೆಗೆ ಕುಡಿನೋಟ ಬೀರಿದಳು,
ಹೆಣ್ಣುಮಕ್ಕಳನ್ನು ಹ್ಯಾಂಡಲ್ ಮಾಡಿ ಗೊತ್ತಿಲ್ಲದ ಸೂರ್ಯ ನಾಚಿ ಅವಿತುಕೊಂಡ;
ನಕ್ಷತ್ರಗಳು ಪಕಪಕನೇ ಮಿಂಚಿ ನಕ್ಕವು;
'ಹೋರಾಟಗಾರರು' ಶಾಲುಗಳನ್ನು ಒಳಗಿಟ್ಟು ಬೆಡ್ ಶೀಟು ಹೊದ್ದರು;
ರಾತ್ರಿಯ ಬಸ್ ಗಳ ಚಾಲಕರಿಗೆ 'ದಿನ' ಶುರುವಾಯಿತು;

- ಸಂಪತ್ ಸಿರಿಮನೆ