ಶ್ರಮಜೀವಿಯೊಬ್ಬ ಕೆಲಸ ಮಾಡಿದ ಕೈಲಾಗದವನು ಕೈತುರಿಸಿಕೊಂಡ ಇಬ್ಬರ ಅಂಗೈಗಳೂ ರೋಮಮುಕ್ತವಾದವು; ನನ್ನದೊಂದು ಲಾಗಾಯ್ತಿನ ಒನ್ ಸೈಡೆಡ್ಡು ಲವ್ ಸ್ಟೋರಿಗೆ ನನ್ನ ನಾಲಾಯಕ್ಕುತನದ ಬಗ್ಗೆ ಎಡೆಬಿಡದ ಆಕ್ರೋಶ; ಪ್ರಾಣಿದಯೆಯ ಬಗ್ಗೆ ಮಾತನಾಡುವ ನನಗೆ ಕಿವಿಯ ಬಳಿ ಗುಯ್ಯೆಂದ ಸೊಳ್ಳೆಯ ಹೊಡೆಯಲೋ ಬೇಡವೋ ಎಂಬ ತುಮುಲ; ಆತ್ಮಾವಲೋಕನ ಮಾಡಿ ಮಾಡಿ ನಿದ್ರೆ ಬಂದಾಗ ತಲೆಬುಡವಿಲ್ಲದ ಕನಸುಗಳ ಏಕದಿನ ಸರಣಿ; ಭೂಸ್ಪರ್ಶಕೆ ಹಾತೊರೆಯುತ್ತಿದ್ದ ಆಗಷ್ಟೇ ನಡೆಯಲು ಕಲಿತ ಕಂದಮ್ಮನ ಅಂಗಾಲು ಶೂ ಸಾಕ್ಸೆಂಬ ಜೈಲಿನೊಳಗೆ ಬಂಧಿಯಾಯಿತು; ಪುಡಾರಿಯೊಬ್ಬ ಪಂಚೆ ಸರಿಮಾಡಿಕೊಂಡ, ಜನರು ಜೈಯೆಂದರು; ನಟಿಯೊಬ್ಬಳು ತೇಗಿದಳು, ಟಿ.ವಿ.ಯಲ್ಲಿ ನೇರಪ್ರಸಾರ ಮಾಡಿದರು; ಮಳೆಬರದೇ ರೈತರು ಹತಾಶರಾದರು, 'ಹೋರಾಟಗಾರರು' ಟವಲ್ಲು ಬದಿಗಿಟ್ಟು ಹಸಿರು ಶಾಲು ಹೊದ್ದರು; ಸಿನಿಮಾದಲ್ಲಿ ಸೈನಿಕನ ಪಾತ್ರ ಮಾಡಿದ ನಟನೊಬ್ಬ ಪ್ರಶಸ್ತಿ ಪಡೆದು ಮುಗುಳ್ನಕ್ಕ, ಲಡಾಕಿನ ಮೈಕೊರೆಯುವ ಚಳಿಯಲ್ಲಿ ಸೈನಿಕನೊಬ್ಬ ರೈಫಲ್ಲು ಹಿಡಿದು ಅವಡುಗಚ್ಚಿದ; ತಲೆಕೆಟ್ಟವನೊಬ್ಬ ಶಿಕ್ಷಣ ವ್ಯವಸ್ಥೆ ಸರಿಯಿಲ್ಲವೆಂದ, ಅವನನ್ನು ಫೇಲು ಮಾಡಿದರು; ಮಾಲಿನಲ್ಲಿ ಸಾವಿರ ಕೊಟ್ಟು 'ಜಾಕಿ' ಶರ್ಟು ಖರೀದಿಸಿದವ ಇಸ್ತ್ರಿಯವನ ಜೊತೆ ಹತ್ತು ರೂಪಾಯಿಗೆ ಚೌಕಾಶಿ ಮಾಡಿದ; ಪಬ್ಬಿನಲ್ಲಿ ಡೀಸೆಂಟಾಗಿ 'ಡಿಜೆ ನೈಟು' ಪಾರ್ಟಿ ಮಾಡುತ್ತಿದ್ದ ಸೊಫಿಸ್ಟಿಕೇಟೆಡ್ಡು ಜನ, ಗಣಪತಿ ಬಿಡುವಾಗ ಎಣ್ಣೆ ಹೊಡೆದು ಕುಣಿಯುವವರ ನೋಡಿ 'ಡರ್ಟಿ ಪೀಪಲ್ಲು'ಗಳೆಂದುಕೊಂಡರು; ಚಳಿಗಾಲದಿ ಬಿರುಕುಬಿಟ್ಟ ಕಾಲಿಗೆ ವ್ಯಾಸಲೀನು ಹಚ್ಚುವಂತೆ ವಾಯುಭಾರ ಕುಸಿದು ಮಳೆಯೊಂದು ಬಂದು ಕೊರಕಲುಗಳ ತುಂಬಿತು; ಗುಟ್ಕಾ ರಸದ ಸತತ ಪ್ರೋಕ್ಷಣೆಯಿಂದ ಕೆಂಪಾಗಿದ್ದ 'ಈಶಾನ್ಯ ಕರ್ನಾಟಕ ಸಾರಿಗೆ' ಬಸ್ಸೊಂದು ಮುಗುಳ್ನಕ್ಕಿತು; ಬೇಸಿಗೆಯಲಿ ನದಿನೀರಿಂಗಿದಾಗ ತೆಪ್ಪಗಿದ್ದ ಗುಂಡಿಯೊಂದು ಮಳೆಬಿದ್ದಾಗ ಸುಳಿಯಾಗಿ ನರಬಲಿ ಪಡೆದು ಹೂಂಕರಿಸಿತು; ಇಷ್ಟೆಲ್ಲದರ ಮಧ್ಯೆ ನವೆಂಬರ್ ಬಂತೆಂದು ಕನ್ನಡದ ಕವಿಯೊಬ್ಬ ಖುಷಿಪಟ್ಟ, ಪಿತೃಪಕ್ಷ ಬಂದಾಗ ಕಾಗೆಗಳು ಹಿಗ್ಗುವಂತೆ; 'ಹೋರಾಟಗಾರರು' ಹಸಿರು ಶಾಲು ಬದಿಗಿಟ್ಟು ಕೆಂಪು-ಹಳದಿ ಹೊದ್ದರು; ಕಂಬಳಿ ಹುಳವೊಂದು ಚಿಟ್ಟೆಯಾಯಿತು, ರೇಷ್ಮೆಯ ನೂಲೊಂದು ಬಟ್ಟೆಯಾಯಿತು, ಅಡಿಕೆಯ ಹಾಳೆಯೊಂದು ತಟ್ಟೆಯಾಯಿತು, ಮಾವಿನೆಲೆಯೊಂದು ಚಿಗಳಿ ಕೊಟ್ಟೆಯಾಯಿತು; ತಿಕ್ಕಲು ಪ್ರಾಸವನ್ನೋದಿ ತಲೆಬುರುಡೆ ಒಟ್ಟೆಯಾಯಿತು; ಹಿಟ್ಲರನೆಂಬ ಸಂಪಾದಕನೊಬ್ಬ ಭುಸುಗುಡುತ್ತಾ ಅನರ್ಥದ ಮುದ್ದೆಯೆಂದು ಕವನವೊಂದನು ಕಸದಬುಟ್ಟಿಯೆಂಬ ಗ್ಯಾಸ್ ಛೇಂಬರಿನಲ್ಲಿ ಹತ್ಯೆ ಮಾಡಿದ; ಶಶಿಯು ಸೂರ್ಯನೆಡೆಗೆ ಕುಡಿನೋಟ ಬೀರಿದಳು, ಹೆಣ್ಣುಮಕ್ಕಳನ್ನು ಹ್ಯಾಂಡಲ್ ಮಾಡಿ ಗೊತ್ತಿಲ್ಲದ ಸೂರ್ಯ ನಾಚಿ ಅವಿತುಕೊಂಡ; ನಕ್ಷತ್ರಗಳು ಪಕಪಕನೇ ಮಿಂಚಿ ನಕ್ಕವು; 'ಹೋರಾಟಗಾರರು' ಶಾಲುಗಳನ್ನು ಒಳಗಿಟ್ಟು ಬೆಡ್ ಶೀಟು ಹೊದ್ದರು; ರಾತ್ರಿಯ ಬಸ್ ಗಳ ಚಾಲಕರಿಗೆ 'ದಿನ' ಶುರುವಾಯಿತು;
- ಸಂಪತ್ ಸಿರಿಮನೆ
Superbbb
ReplyDeleteSuperbbb
ReplyDeleteThank you so much :-)
Deleteಬಹಳ ಚನ್ನಾಗ್ಿದೆ.
ReplyDeleteಧನ್ಯವಾದಗಳು :-)
Deletesoooooperrr kano....!!!!
ReplyDeleteThank you so much :-)
Delete