೧.
ಚಡ್ಡಿಯೆಂದರೆ,ಕಂಡವರು ಕೊಡುವ ಚಾಕ್ಲೇಟನ್ನು ತುರುಕಲು, ಜೋಬು ಎಂಬ ಸ್ಥಳವಿರುವ,ಸೊಂಟದ ಸುತ್ತ ತನ್ನಷ್ಟಕ್ಕೆ ತಾನಿರುವ ವಸ್ತು ಎನ್ನುತ್ತಿದ್ದ ಕಾಲವದು..
ಬೀಳುತ್ತಾ, ಬೀಳುವುದನ್ನು ಯಾರಾದರೂ ನೋಡಿದರೆ ರಚ್ಚೆ ಹಿಡಿದು ಅತ್ತು ರಂಪ ಮಾಡುತ್ತಾ, ಯಾರಾದರೂ ನೋಡಿಲ್ಲವೆಂದರೆ ತನ್ನಷ್ಟಕ್ಕೇ ತಾನೇ, ಬಿದ್ದಿದ್ದಕ್ಕಿಂತ ವೇಗವಾಗಿ ಎದ್ದು ಓಡುತ್ತಿದ್ದ ಕಾಲವದು..
ಹರಿವ ನೀರಿಗೊಂದು ಕಟ್ಟೆ ಹಾಕಿ,ನಿಲ್ಲುವ ನೀರಿನಲ್ಲಿ ಶಾಲೆಯಲ್ಲಿ "ಪ್ರಗತಿ ಪತ್ರ" ವೆಂದು ಕೊಡುತ್ತಿದ್ದ ಕಾಗದದ ಹಾಳೆಯನ್ನು ದೋಣಿಯಾಗಿಸಿ ಹರಿಬಿಟ್ಟು,ನೀರಿನ ರಭಸಕ್ಕೆ ಬಳುಕುವ ದೋಣಿಯನ್ನು ನೋಡಿ ನಾವೇ ತೇಲುತ್ತಿರುವಷ್ಟು ಕುಷಿ ಪಟ್ಟ ಕಾಲವದು..
ಕಂಡ ಕಂಡವರನ್ನೆಲ್ಲಾ ಕೆಣಕಿ,ಸ್ವಲ್ಪ ದಿನಗಳ ನಂತರ ಗೆಳೆತನವನ್ನೋ,ಸಣ್ಣ ಮಟ್ಟಿಗಿನ ಕದನಕ್ಕೋ ನಾಂದಿ ಹಾಡುತ್ತಿದ್ದ ಕಾಲವದು..

ಈಗ ಬಟ್ಟೆಯೆಂದರೆ ಪ್ರತಿಷ್ಟೆಯ ಸಂಕೇತ, ಬೀಳಲು ಬಿದ್ದು ಏಳುವ ಸಂಭವವೇ ಇಲ್ಲ,ಯಾಕೆಂದರೆ ಕೂತಲ್ಲಿಂದ ಏಳುವುದೇ ಇಲ್ಲ ನಾವು, ಪ್ರಗತಿ ಪತ್ರವೆಂದ್ರೆ ಮನೆಯಲ್ಲಿ ಕಟ್ಟು ಹಾಕಿಸಿ ನೇತು ಹಾಕಿಕೊಳ್ಳುತ್ತೇವೆ,ಕಂಡ ಕಂಡವರೆಲ್ಲಾ ಹಾಗಿರಲಿ ಸುತ್ತಮುತ್ತದವರ ಹತ್ತಿರ ಮಾತಡಲೂ ಸಹ ನಮ್ಮ ಬಿಂಕ ಬಿಡುವುದಿಲ್ಲ..

ಮೊನ್ನೆ ಅದ್ಯಾಕೋ ಕುಳಿತು ಯೋಚಿಸಿದಾಗ ಅನ್ನಿಸಿತು...

"ಛೇ ಮಗುವಾಗೇ ಇರ್ಬೇಕಿತ್ತು ಕಣ್ರೀ...! ಯಾಕೋ ಸುಮ್ಮನೇ ಬೇಜಾರಾದಾಗ ರಂಪ ಮಾಡಿ ಅಳುವುದಕ್ಕಾದರೂ....!"


                                                      
 ನನ್ನ ವ್ಯಾಮೋಹ
ಹುಚ್ಚು...
ಎರಡೂ ತೋಳಲ್ಲಿ
ಬಾಚಿ ತಬ್ಬಿದಷ್ಟೂ,
ಮತ್ತಷ್ಟು ಮಿಕ್ಕುವ
ನೀನು ಆಕಾಶ...
ನನ್ನ ವ್ಯಾಮೋಹಕ್ಕೆ ಕೊನೆ ಇಲ್ಲ,
ನಿನ್ನ ಪ್ರೀತಿಗೆ ಅಸ್ತಿತ್ವ
ಇಲ್ಲದಿದ್ದರೂ,ಆಕಾಶ ಕಂಡರೆ ನೀ
ನೆನಪಾಗುವುದು ಸುಳ್ಳಲ್ಲ...!


                                                   
ನನ್ನದೇನಿದ್ದರೂ ಕಣ್ಮುಚ್ಚಿ
ಹಂಬಲಿಸುವ ಕಾಯಕ..
ವಾಸ್ತವಕ್ಕೂ ನನಗೂ
ಗಾವುದ ಅಂತರ..
ನಿನ್ನ ಸುತ್ತ ಸುಳಿಯುತ್ತ
ಸ್ವರ್ಗ ಹುಡುಕುವ ನಾನು
ಸ್ವಾರ್ಥಿಯೆಂದರೆ
ನಗುವೊಂದೇ ನನ್ನ ಉತ್ತರ...
                                               

                                                     ೪


ಅಮ್ಮ......!!


ರಾತ್ರಿಯ ಯಾವುದೋ ಜಾವದಲ್ಲಿ
ಅದ್ಯಾವುದೋ ಗುಮ್ಮನ ಕನಸು ಕಂಡು
ಬೆಚ್ಚಿ ಬಿದ್ದ ನನ್ನನ್ನು
ಮತ್ತಷ್ಟು ತಬ್ಬಿ,
ತಲೆಯ ಕೂದಲೊಳಗೆ
ಇರದ ಏನನ್ನೋ ಹುಡುಕುತ್ತಾ
ರಾತ್ರಿ ಇಡೀ ಮುಗುಳ್ನಗುತ್ತಾ
ನನ್ನನ್ನೇ ನೋಡುತ್ತಾ,
ಮತ್ಯಾವುದೋ ಜಾವದಲ್ಲಿ
ನಾ ಸಂರಕ್ಷಿತನಾಗಿ
"ಅಮ್ಮ...!" ಎಂದು ಉದ್ಘರಿಸಿದಾಗ
ಕುಷಿಯಿಂದ ಕಣ್ತುಂಬಿಕೊಳ್ಳುವ ಅಮ್ಮ,,,,,


ನಿನ್ನ ಮಡಿಲು ಬೇಕೆನಿಸಿದೆ ಅದೇಕೋ
ಬೆಚ್ಚಿ ಬಿದ್ದು
ಈ ಜಗತ್ತಿನಿಂದ ಹೆದರಿ ಹೋಗಿದ್ದೇನೆ
ನಿನ್ನ ಮಡಿಲ ಮಮತೆಯನ್ನು
ಮತ್ತೆ ಮತ್ತೆ ನೆನಪಿಸಿದೆ
ಈ ಜಗ.....
                                             

No comments:

Post a Comment