ಗೊತ್ತಾಗದಂತೆ ಹೃದಯ ಕದ್ದ ಚೋರನಿಗೆ,
ಯಾಕೋ ಇವತ್ತು ಪ್ರೀತಿ ತುಂಬಾ ಜಾಸ್ತಿ ಆಗಿದೆ ಕಣೋ ನಿನ್ಮೇಲೆ. ತೀರಾ ಸಣ್ಣ Hair clipನೂ ಕೂಡಾ ಸಾವಿರ ಸಲ ಯೋಚನೆ ಮಾಡಿ ತಗೋಳೋಳು ನಾನು, ಅಂಥದ್ರಲ್ಲಿ ನೀನೇ ನನ್ನ ಗಂಡ ಅಂತ ನೀ ಸಿಕ್ಕು ವರ್ಷ ಕಳ್ಯೋದ್ರೊಳಗೆ ನಾ ಒಪ್ಪಿಕೊಂಡುಬಿಟ್ಟೆ. ನಾ ಒಪ್ಪಿಕೊಂಡಿದ್ಕೆ ನನ್ಮೇಲೆನೇ ಆಶ್ಚರ್ಯ ಆಗ್ತಾ ಇದೆ.
ಆ ಹುಡುಗರ ಹಾಸ್ಟೆಲ್ ಎದುರು ಹತ್ತು ವರ್ಷದಿಂದ ಓಡಾಡ್ತಿದ್ದೆ. ಆದ್ರೆ ನೀ ಸಿಕ್ಮೇಲೇನೆ ಆ building ಕಡೆ ತಲೆ ಎತ್ತಿ ನೋಡಿದೋಳು ನಾನು. ಎಲ್ರೂ ಅದೆಂತದೋ MG ಅಂತಾರೆ ನಂಗೆ. ಮೌನ ಗೌರಿ ಅಂತೆ ಹಂಗಂದ್ರೆ. ಪ್ರತೀ ಮಾತನ್ನೂ ಲೆಕ್ಕ ಹಾಕಿ ತೂಕ ಮಾಡಿ ಆಡೋಳು ನಾನು. ಅದೆಷ್ಟು ಬೇಗ ನನ್ನ ಹೃದಯಕ್ಕೆ ಲಗ್ಗೆ ಇಟ್ಯೋ.. ನನ್ನೆಲ್ಲಾ ರಕ್ಷಣೆಯ ತಂತ್ರಗಳನ್ನು ಧಿಕ್ಕರಿಸಿ..?!
ನೀ ಸಿಕ್ಕಿ ಸರಿಯಾಗಿ ಹದಿನೈದನೇ ಸಂಜೆ,Hostelನ ಎದುರು ಬಂದಾಗ ನೀ ಸಿಗಲಿಲ್ಲವೆಂದು ಅತ್ತ ಹೃದಯವನ್ನು ಹುಣ್ಣಿಮೆಯ ಚಂದ್ರನಿಗೊಡ್ಡಿ ಕುಳಿತು ಚಿಂತಿಸಿದ್ದೆ.
ಏನಿದೆ ನಿನ್ನಲ್ಲಿ ಅಂತ. ಮುಗ್ದ ಮನ ನಂದು,ಉತ್ತರ ಸಿಗ್ದೇ ಸುಮ್ಮನಾಯಿತು. ಈಗಲೂ ಗೊತ್ತಿಲ್ಲ,ಏನಿದೆ ನಿನ್ನಲ್ಲಿ ಅಷ್ಟೊಂದು ಸೆಳೆಯುವ ಶಕ್ತಿ? ಅಂತ.
ಪಾರ್ಕಿನ ಮೂಲೆಯಲ್ಲಿ ಅವತ್ತು ನೀ ನನ್ನ ಮಡಿಲಲ್ಲಿ ತಲೆಯಿಟ್ಟಾಗ,ಅದೇಕೋ ನಿನ್ನ ತಲೆಗೂದಲಲ್ಲಿ ಬೆರಳುಗಳನ್ನಾಡಿಸುವುದನ್ನು ತಡೆಯದಾದೆ ಹಾಗು ಅಂದೇ ರಾತ್ರಿ ಅದೇಕೋ ಸಣ್ಣ ಭಯದಿಂದ ಅಮ್ಮನ ಬೆನ್ನು ತಬ್ಬಿ ಮಲಗಿದ್ದೆ...!
ಮರುದಿನ ಅದೇ ಪಾರ್ಕಿನ ಮೂಲೆಯಲ್ಲಿ,ಕೈಯ್ಯಲ್ಲೊಂದು ಕೆಂಪು ಗುಲಾಬಿ ಹಿಡಿದು,ನೀಲಿ ಬಣ್ಣದ ಶರ್ಟಿನಲ್ಲಿ, ಎದೆಯಲ್ಲಿ ಘಮ್ಮೆನ್ನುವ ಪ್ರೀತಿ ಹೊತ್ತು ಹುಲ್ಲಿನ ಮೇಲೆ ಮಂಡಿಯೂರಿ ನಿಂತು, ಆಸೆಗಣ್ಣಿನಿಂದ ನನ್ನೆಡೆಗೆ ನೋಡಿದ್ಯಲ ಹುಡುಗಾ, ಆಗ ಗೊತಾಯ್ತು ನನಗೆ ನಾ ಬದುಕಿದ್ದು ಇದೊಂದು ಕ್ಷಣದ ಸಾರ್ಥಕತೆಯನ್ನು ನಿರೀಕ್ಷೀಸಿ ಅಂತ..
ತೀರಾ ಸಂಜೆಯಲ್ಲಿ, ಕೆಂಪಾದ ಆಕಾಶದಡಿ, ಸಣ್ಣಗೆ ಸುರಿವ ಮಳೆಹನಿಗಳು ಛೇಡಿಸುವಾಗ,ನಾನೇ ಆಸೆಯಿಂದ ನಿನ್ನತ್ತ ಬಂದರೂ, ನಯವಾಗಿ ದೂರಾಗುವ ಪ್ರೀತಿ ನಿಂದು, ಇದೇನಾ ಪವಿತ್ರ ಪ್ರೀತಿ...!!
ಹುಟ್ಟಿದ ಹಬ್ಬದ ಆ ಸಂಜೆಯಲ್ಲಿ, ಆಸೆ ಕಂಗಳಿಂದ ನಿಂತ ನನ್ನ ಗುಬ್ಬಿ ಮರಿಯಂತೆ ತಬ್ಬಿ, ಬೆನ್ನಿನ ಮೇಲೆ ನೀ ಕೈ ಬೆರಳಾಡಿಸಿದಾಗ ಹುಟ್ಟಿದ ತಲ್ಲಣಗಳನ್ನು ಎದೆಗೂಡಿನಲ್ಲಿ ಬಚ್ಚಿಟ್ಟಿರುವೆ,ನೀ ಪ್ರತೀ ಸಲ ಸೋಕಿದಾಗಲೂ ಅದರೋಂದಿಗೆ ಹೋಲಿಸಿ,ನಮ್ಮ ಪ್ರೀತಿ,ಸ್ಪರ್ಶ ತಾಜಾ ಎಂದು ಖಾತ್ರಿ ಪಡಿಸಿಕೊಳ್ಳುತ್ತಿರುವೆನು...
-ಅಪ್ಪಿ ಮುದ್ದಾಡಿಸಿಕೊಳ್ಳಲು ಕಾಯುತ್ತಿರುವ ನಿನ್ನಾಕೆ.
Subscribe to:
Post Comments (Atom)
No comments:
Post a Comment