ಪ್ರೀತಿಯ "ಇವಳೇ...!"
ವಿಚಿತ್ರ ಅನ್ಸುತ್ತೆ ನೋಡು, ನೀ
ಇದ್ದಾಗ "ಇವಳೇ..." ಅಂತ ಬಿಟ್ಟು ಬೇರೇನೂ ಕರ್ದವನೇ ಅಲ್ಲ ನಾನು. ನೀನೇ ಇಲ್ದಿರುವಾಗ,
ಏನಾದ್ರು ಕನವರಿಸೋಣ ಅಂದ್ರೆ, ಮೊದ್ಲು ನೆನ್ಪಾಗೋದು ’ಇವಳೇ...’. ಚಿನ್ನ, ರನ್ನ, ಮುದ್ದು ಈ ರೀತಿಯೆಲ್ಲ ಒಮ್ಮೆಯೂ ಉದ್ಘರಿಸಿಲ್ಲ,
ಹಾಗೆ ಉದ್ಘರಿಸದೆಯೂ ನಿನ್ನ ಮುಗುಳ್ನಗು ಹದಿನೈದು ವಸಂತಗಳಲ್ಲಿ ಒಮ್ಮೆಯೂ ಮಾಸಿರಲಿಲ್ಲವೆಂಬುದು ನೆನಪಾದಾಗ,
ನಿನ್ನ ಮೇಲೆ ಮತ್ತಷ್ಟು ಗೌರವ ಉಕ್ಕಿ, ಮನ ಕುಳಿತಲ್ಲೇ ಮಡಿಲಲ್ಲಿ ಮುದ್ದು ಮಾಡಿಸಿಕೊಂಡ ಬೆಕ್ಕಿನಂತಾಗುತ್ತದೆ...
ಚುಮು ಚುಮು ಛಳಿಯಲ್ಲಿ, ನೀ ಘಲ್
ಘಲ್ ಎಂದು ಕಾಡುವ ನಿನ್ನ ಬಳೆಗಳಿಗೆ ಗದರುತ್ತಾ, ಆಗ ತಾನೇ ಮಿಂದ ನಿನ್ನ ಕೂದಲಿಗೊಂದು ಹಾಗೇಯೇ ಎಂಬಂತೆ
ಗಂಟು ಹಾಕಿಕೊಂಡು,ಬೆರಳ ತುದಿಯಲ್ಲಿ ಸಿಕ್ಕಿದಷ್ಟು ಕುಂಕುಮವನ್ನು ಆ ನಿನ್ನ ವಿಶಾಲ ಹಣೆಗೆ, ಮನದಲ್ಲೇ
ನನ್ನ ನೆನೆದು ಪುಳುಕಗೊಳ್ಳುತ್ತಾ ಹಚ್ಚಿಕೊಂಡು, ಅಂಗಳದಲ್ಲಿ ಆಗ ತಾನೇ ನೀನೇ ಹಾಕಿದ ರಂಗೋಲಿ ತಪ್ಪಾಯಿತೆಂದು ಮುಗ್ದ ಗಾಬರಿ ಪಡುತ್ತಾ, ಆಗ ತಾನೇ ಕರೆದ
ಹಾಲಿಗೆ ಒಂಚೂರು ಕಾಫಿ ಬೆರೆಸಿ ತಂದಿಟ್ಟು, ಆಗಿನ್ನೂ ಮಲಗಿದಲ್ಲೇ ಗೊಣುಗುತ್ತಿರುವ ನಾನು ಎಚ್ಚರಗೊಂಡಿರುವ
ವಿಷಯ ತಿಳಿಯದೇ, ಹಾಸಿಗೆಯಲ್ಲಿ ನನ್ನ ಬಳಿ ಕುಳಿತು ನನ್ನ ಕೂದಲಲ್ಲಿ ಇಲ್ಲದ ಏನನ್ನೋ ಹುಡುಕುತ್ತಾ,
ನಾನು ಅರೆಗಣ್ಣು ತೆರೆದು ತುಟಿಕಚ್ಚಿ ನಿನ್ನತ್ತ ನೋಡಿ ನಗುತ್ತಿರುವುದು ಗೊತ್ತಾಗಿ, ನಿನ್ನ ಬಳಸಿದ
ನನ್ನ ಕೈಗಳಿಂದ ತಪ್ಪಿಸಿಕೊಂಡು ಓಡುತ್ತಿದ್ದ ನೀನು, ಇವತ್ತೂ ಬರುವೆಯೆಂದು ಸಣ್ಣ ಆಸೆಯಲ್ಲಿ ಮಲಗಿದಲ್ಲೇ
ಕನವರಿಸುತ್ತಾ ಮುದುರಿದ್ದೆ, ಎಬ್ಬಿಸಲು ಬಂದಿದ್ದು ಮಗಳು, "ಏನಪ್ಪಾ,ಅಮ್ಮನಿಗೆ ಕಾಯ್ತಿದಿಯ"
ಎಂದು ಕೆನ್ನೆ ಹಿಂಡಿದಾಗ ಇಲ್ಲವೆನ್ನಲಾಗಲಿಲ್ಲ ನನಗೆ...
ನೀ ಹೊರಟ ದಿನ ಮನದಲ್ಲಿನ್ನೂ ತಾಜಾ.
"ಅಪ್ಪ,ಅಮ್ಮ ನಮ್ನ ಬಿಟ್ಟ್ಹೋದ್ಲಪ್ಪ" ಅಂದಿದ್ಲು ಶ್ರಾವಣಿ, ಒಂದು ಕ್ಷಣ ಬೀಳಲು ಹೊರಟಿದ್ದ
ನನ್ನ ನಾ ತಡೆದುಕೊಂಡಿದ್ದೆ. "ಸರ್ ಒಂದರ್ಧ ದಿನ ರಜ ಬೇಕು, ನನ್ ಹೆಂಡ್ತಿ ಹೋದ್ಲಂತೆ"
ನಿರ್ಭಾವುಕವಾಗಿ ನಿಂತಿದ್ದೆ ಬಾಸ್ನೆದುರು. ಶಾರದಳನ್ನೂ ಬಲ್ಲ ಆತ, ಸಾಂತ್ವನವೆಂಬಂತೆ ಒಮ್ಮೆ ಅಪ್ಪಿ,
ಭುಜ ತಬ್ಬಿ ಮನೆಗೆ ತಂದುಬಿಟ್ಟಿದ್ದ. ಅದಾಗಲೇ ಸುತ್ತಮುತ್ತಲಿನ ಜನ ಸೇರಿದ್ದರು. ಸೋಫಾದ ಮೇಲೆ ಕುಳಿತಂತಯೇ
ಎದ್ದು ಹೋಗಿದ್ದೆ ನೀನು. ಕಲ್ಲಿನಂತೆ ದಿಟ್ಟಿಸುತ್ತಾ ನಿಂತಿದ್ದ ನನ್ನ ತೆಕ್ಕೆಯೊಳಗೆ ಬಿದ್ದ ಶ್ರಾವಣಿ,
"ಒಮ್ಮೆ ಅತ್ತುಬಿಡು ಅಪ್ಪ..." ಅಂತ ಗೋಳಿಟ್ಟಿದ್ದಳು. ಆದರೆ ನಿನ್ನ ಸಾವಿನ ಸುದ್ದಿ ಕೇಳಿದ
ಕೂಡಲೆ ನಿನಗೆ ಕೊಟ್ಟ ಮಾತು ನೆನಪಾಗಿತ್ತಲ್ಲ ನನಗೆ.
"ರೀ..." ಮಟ ಮಟ ಮಧ್ಯಾಹ್ನ,
ಮಗಳನ್ನ ಬಲವಂತವಾಗಿ ಗೆಳತಿಯ ಮನೆಗೆ ದೂಡಿ, ಸನಿಹ ಬಂದು ಆಸೆಗಂಗಳಿಂದ ಕುಳಿತ ನಿನ್ನ ನೋಡಿ ಆಶ್ಚರ್ಯವಾಗಿತ್ತು.
ರಾತ್ರಿಯ ಕತ್ತಲಿನ ಸೆರಗಿನಲ್ಲೇ ನಾಚುತ್ತಾ ಬಳುಕುವ ನಿನ್ನ ಕಂಗಳು, ಆಸೆಯನ್ನ ಹೊರಹಾಕುತ್ತಾ ನನ್ನನ್ನೇ
ದಿಟ್ಟಿಸುವುದ ನೋಡಿ, ಸದ್ದಿಲ್ಲದೇ ಜಾಗೃತವಾಗಿತ್ತು ನನ್ನ ದೇಹ. "ಛೀ ಹೋಗಿಪ್ಪಾ, ಯಾವಾಗ ನೋಡಿದ್ರೂ
ಅದೇನೆ ನಿಮ್ಗೆ" ಹುಸಿಕೋಪ ನಟಿಸುತ್ತಾ, ದೇಹದ ಮೇಲೆ ಬಿದ್ದಿದ್ದ ನನ್ನ ಕೈ ದೂರ ತಳ್ಳಿದ್ದೆ
ನೀನು. ರಸಭಂಗವಾದಂತಾಗಿ ದೂರ ಕುಳಿತಿದ್ದ ನನ್ನ, ಮಡಿಲ ಮೇಲೆ ಮಲಗಿಸಿ ನಿನ್ನ ಬೆರಳುಗಳಿಗೆ ನನ್ನ ಕೂದಲು
ಪರಿಚಯಿಸಿದ್ದೆ. ಚತುರೆ ನೀನು! ಅದೆಷ್ಟೇ ಕೋಪವಿದ್ದರೂ ನಿನ್ನ ಮಡಿಲ ಮೇಲೆ ಕರಗದಿರುವ ಜೀವ ನನ್ನದಲ್ಲ
ಅಂತ ಅರಿತವಳು ನೀನು. "ಏನೂಂದ್ರೇ..." ಸ್ವಲ್ಪ ನಿಲ್ಲಿಸಿ ಮುಂದುವರಿಸಿದ್ದೆ ನೀನು, ನನ್ನ
ಬಿಟ್ಟು ಹೊರಡುವುದಕ್ಕಿಂತ ಒಂದು ವಾರ ಮೊದಲಿನ ಆ ಸೋಮವಾರದಂದು. "ಆ ಬೀದಿ ಬದಿಯ ಸೀತಮ್ಮನವರ
ದೇವಸ್ಥಾನದಲ್ಲಿ,ಮಂಗಳವಾರ ರಾತ್ರಿ ಕಲ್ಯಾಣಿಯಲ್ಲಿ ಮಿಂದು ದೀಪದಾರ್ತಿ ಮಾಡಿದರೆ ಮುತ್ತೈದೆ ಸಾವು
ಬರುತ್ತಂತೆ ಕಂಡ್ರಿ. ನಾಳೆ ಹೋಗ್ತೀನಿ ನಾನು. ನೀವಿದ್ನೆಲ್ಲ ನಂಬಲ್ಲ, ಆದ್ರು ಅಕಸ್ಮಾತ್ ನಿಮ್ಕಿಂತ
ಮುಂಚೆ ನಾ ಹೊರ್ಟೆ ನೀವ್ ಅಳ್ಬಾರ್ದು ಯಾವತ್ತೂ. ಅತ್ರೆ ಮುಂದಿನ ಜನ್ಮದಲ್ಲಿ ನೀವು ನನಗೆ ಗಂಡ ಆಗಿ
ಸಿಗಲ್ವಂತೆ" ಗಾಬರಿಯಿಂದ ಹೇಳಿ ಮುಗಿಸಿದ್ದೆ ನೀನು. ಅವತ್ಯಾಕೋ ನಿನ್ನ ಮಡಿಲ ಬಿಟ್ಟು ಏಳೋ ಮನಸ್ಸೇ
ಬಂದಿರಲಿಲ್ಲ.
ಜೀವನ ಪರ್ಯಂತ ನೀ ಆಸೆ ಪಟ್ಟಿದ್ದು ಅದೊಂದೆ.
ಮುಂದಿನ ಜನ್ಮದಲ್ಲೂ, ಮತ್ತೆ ನನಗಾಗಿ ಆಸೆ ಪಡ್ಬೇಕು ಅಂತ ಆಷ್ಟೇ..! ಯಾರಿಗ್ಗೊತ್ತು, ಹಿಂದೆಷ್ಟು
ಜನ್ಮದಲ್ಲಿ ನೀ ಇದೇ ಸೀತಮ್ಮನ ಗುಡಿಯ ಕಲ್ಯಾಣಿಗಳಲ್ಲಿ ಮುಳುಗಿ ಅದೆಷ್ಟು ಜನ್ಮಗಳಿಗೆ ನನ್ನ ಕೋರಿಕೊಂಡಿರುವೆಯೋ
ಏನೋ.. ನೀ ನನ್ನೊಳಗೆ ಬೆರೆತ ಪರಿಯನ್ನು ನೋಡಿದರೆ,ಒಂದು ಜನ್ಮದಲ್ಲಂತೂ ನೀ ಈ ಪರಿ ಸಾಂಗತ್ಯ ಬೆಳೆಸಿದ್ದು
ಸುಳ್ಳೆನ್ನುತ್ತದೆ ಮನ.
ಸುತ್ತ ಹುಡುಕಿದರೆ ಎಲ್ಲಿ ನೀನಿಲ್ಲವೆಂದು ಪ್ರತ್ಯೇಕಿಸುವುದೇ
ಕಷ್ಟವಾಗುತ್ತದೆ ಕೆಲವೊಮ್ಮೆ. ಬಾಗಿಲು ತೆಗೆದರೆ ನಿರೀಕ್ಷೆಯೇ ತಾನಾಗಿ ಕಾಯುವ ಶ್ರಾವಣಿಯ ಕಂಗಳಲ್ಲಿ
ಅವಳಮ್ಮ ಮಿಳಿತವಾಗಿರುವುದು ಸ್ಪಷ್ಟವೆನಿಸುತ್ತೆ. ರಾತ್ರಿ ಹನ್ನೆರಡಾದರೂ ಅದೇ ಕಾಳಜಿಯಿಂದ ಕಾಯುತ್ತಿದ್ದವಳು
ಅವಳಮ್ಮ. ಮಲಗಲೆಂದು ಕೋಣೆಗೆ ಬಂದರೆ ಬೆಚ್ಚಗೆ ಸ್ವಾಗತಿಸುವುದು ನಿನ್ನ ಘಮ. ದೇಹದ ಇಂಚಿಂಚೂ ಬಿಡದೇ,
ಘಾಢವಾಗಿ ಅಪ್ಪಿ ಕ್ಷಣಕಾಲ ನನ್ನದೆಲ್ಲವನ್ನೂ ಮರೆಸುತ್ತಿದ್ದ ನಿನ್ನ ಅಪ್ಪುಗೆಯನ್ನು ಈಗ ನಿನ್ನ ದಿಂಬು,
ಕೈ ಚಾಚಿದರೆ ಸ್ವಾಗತಿಸುವ ನೀನಿಲ್ಲದ ನಿನ್ನ ಹಾಸಿಗೆ, ನೀ ಇನ್ನಿಲ್ಲದಷ್ಟು ಪ್ರೀತಿಯಿಂದ ಉಡುತ್ತಿದ್ದ
ನಿನ್ನ ಕೆಂಪಂಚಿನ ಸೀರೆ, ನಿನಗಿಂತ ಜಾಸ್ತಿ ಮಾತಾಡುತ್ತಿದ್ದ ಆ ನಿನ್ನ ಕಿವಿಯಂಚಿನಲ್ಲಿ ಜೋತುಬೀಳುತ್ತಿದ್ದ
ಓಲೆ, ನಿನಗೆ ನನ್ನಷ್ಟೇ ಹತ್ತಿರವಿದ್ದ,ಸದಾ ನನ್ನ ತೋರುತ್ತಿದ್ದ ಆ ನಿನ್ನ ತಾಳಿ, ಇವೆಲ್ಲವನ್ನು ಅಪ್ಪಿ
ಪಡೆಯುವವನು ನಾನು.
ಇಂತಿ ನಿನ್ನವ,
No comments:
Post a Comment