ಎಲ್ಲರ ಬೆನ್ನಿನಲ್ಲೂ ಇರುತ್ತವೆ
ಗಾಯಗಳು
ಕೆಲವರಿಗೆ ಕೆರೆದರೆ
ಖುಶಿಯಾಗುವುದಿಲ್ಲ ಅಷ್ಟೇ...
-ಶ್ರೀನಿಧಿ.
ವಿ. ನಾ.
ನಿನಗೆಲ್ಲಿ ತಿಳಿದೀತು ಹುಡುಗಿ
ಏನೇ ಆದರೂ ಹುಚ್ಚ ನಾನು,
ನೀ ಉಸಿರಾಡಿದ ಗಾಳಿಯನ್ನು
ಒಳಗೆಳೆದು,
ಹೊರಹಾಕಿದರೆ ನೀನೇ ತೆರಳಿ
ಬಿಡುವೆಯೇನೋ ಎಂದು
ಅಂಜಿದವನು ನಾನು...
-ಶ್ರೀನಿಧಿ.
ವಿ. ನಾ.
ಒಮ್ಮೆ ನಿಂತು
ಸ್ಪರ್ಶಿಸಿ ಹೋಗು ಹುಡುಗಿ
ನನ್ನೀ ಹೃದಯವ ತುಟಿಯಂಚಿನಲ್ಲಿ..
ನಿನ್ನ ಬೀಗುವ ತುಟಿಗಳಿಗೂ
ತಿಳಿಯಲಿ,
ಅದಕಿಂತ ಸಿಹಿಯಾಗಿದೆ
ನನ್ನೀ ಹೃದಯ
ತುಂಬಿಕೊಂಡು ನಿನ್ನೆಡೆಗೆ
ಪ್ರೀತಿಯನು...
-ಶ್ರೀನಿಧಿ.
ವಿ. ನಾ.
ಇಷ್ಟಕ್ಕೂ ನನ್ನ ತಪ್ಪು
ಇಷ್ಟೇ ಹುಡುಗಿ,
ನಿನ್ನ ನೋಟಕ್ಕೆ ಮನಸೋತಾಗ
ಕನ್ನಡಿ ಹಿಡಿದುಕೊಂಡಿರಲಿಲ್ಲ
ನಾ ನನ್ನ ಮುಖಕ್ಕೆ...!
-ಶ್ರೀನಿಧಿ. ವಿ. ನಾ.
ಮುಚ್ಚಿದ ಕರಡಿಗೆಯಲ್ಲೇನಿದೆ
ಯೆಂದು ನಿನಗೆಲ್ಲಿ
ಗೊತ್ತು,
ತೆರೆದು ನೋಡು ಒಮ್ಮೆ,
ನಗುವಿನಲ್ಲಿ
ಮುಚ್ಚಿಟ್ಟಿರುವೆನು ನನ್ನೀ
ಹೃದಯದ
ಹುಚ್ಚು ಒಂಟಿತನವನು...
-ಶ್ರೀನಿಧಿ.
ವಿ. ನಾ.
ತಣ್ಣನೆ ಉಸಿರಾಡಲು
ಗಾಳಿಯಾಗಿ,
ತೀರಾ ಹೊರಡುವಾಗ
ಕ್ಷಣಕಾಲ ನಿಂತು ಹೋಗೆ
ನ್ನುವ ಮರ
ಮೋಹವಲ್ಲ
ಪ್ರೀತಿಯೆನ್ನುವವನು ನಾನು...!
-ಶ್ರೀನಿಧಿ.
ವಿ. ನಾ.
ಪುಸ್ತಕದಲ್ಲಿ ಮುಚ್ಚಿಟ್ಟ
ನವಿಲುಗರಿ ಮರಿ
ಹಾಕಿದರೆ
ಅದಕೆ ನೀ ಕಾರಣವೆಂದು
ಕುಣಿಯುವ ಮನಕ್ಕೆ
ಪ್ರೀತಿಯೆನ್ನಲೋ
ಹುಚ್ಚೆನ್ನಲೋ...
-ಶ್ರೀನಿಧಿ. ವಿ. ನಾ.
ಸಾಲಾಗಿ ಜೋಡಿಸಿಡುವೆ
ನನ್ನದೆಲ್ಲವನೂ
ಬೇಕಾದ್ದು
ನಿನ್ನದಾಗಿಸಿಕೊ,
ಬೇಡದರ ಜೊತೆ ಪ್ರಸಾದವೆಂದು
ಬದುಕುವೆನು ಈ ಬದುಕನು...
-ಶ್ರೀನಿಧಿ.
ವಿ. ನಾ.
ನೀನು ಸಮುದ್ರ.
ನಿನ್ನನು ಮುಷ್ಟಿಯೊಳಗೆ
ಬಚ್ಚಿಟ್ಟುಕೊಳ್ಳಲು
ಹೋಗಿ ಒದ್ದಾಡುವ
ನನ್ನದು
ಪ್ರೀತಿಯಲ್ಲವೆಂದರೆ
ಸಣ್ಣದೊಂದು ಆಕ್ರೋಶ...
-ಶ್ರೀನಿಧಿ. ವಿ.
ನಾ.
ನನ್ನದೇನಿದ್ದರೂ ಕಣ್ಮುಚ್ಚಿ
ಹಂಬಲಿಸುವ ಕಾಯಕ..
ವಾಸ್ತವಕ್ಕೂ ನನಗೂ
ಗಾವುದ ಅಂತರ..
ನಿನ್ನ ಸುತ್ತ ಸುಳಿಯುತ್ತ
ಸ್ವರ್ಗ ಹುಡುಕುವ ನಾನು
ಸ್ವಾರ್ಥಿಯೆಂದರೆ
ನಗುವೊಂದೇ ನನ್ನ ಉತ್ತರ...
-ಶ್ರೀನಿಧಿ. ವಿ. ನಾ.
No comments:
Post a Comment