ತಿಳಿಸಂಜೆಯಲ್ಲಿ ಬಸ್ಸನ್ನಿಳಿದು
ಅಲ್ಲಿಯವರೆಗೆ ಕಿವಿಗೆ ಜೋತು ಬಿದ್ದಿದ್ದ ಇಯರ್ ಫ಼ೋನ್ ಕಳಚಿ, ಒಂದೊಂದೇ ಹೆಜ್ಜೆ ಎತ್ತಿಡುತ್ತಾ,ದಾರಿಯಲ್ಲಿ ಕಳೆದ ಸಲಕ್ಕೂ, ಈ ಸಲಕ್ಕೂ ವ್ಯತ್ಯಾಸಗಳನ್ನು
ನನಗೆ ನಾನೇ ಪಟ್ಟಿ ಮಾಡುತ್ತಾ, ಸಾಗಿ ಬಂದಾಗ ಎಂದಿನಂತೆ ಅತ್ಯಂತ
ಸಂತೋಷದಿಂದ ಎದುರುಗೊಂಡಿದ್ದು ಹೆಸರಿಲ್ಲದ ನಮ್ಮ ಮನೆಯ ನಾಯಿ.
"ಜೀನ್ಸ್ ಪ್ಯಾಂಟ್ ಮೇಲೆ
ನಿನ್ನ ಕಾಲಿಟ್ರೆ, ಒದಿತಿನಿ ನೋಡು"
ತಕ್ಷಣ ನನ್ನ ಬಾಯಿಂದ ಬಂದ
ಮಾತು,
"ಇಷ್ಟ್ ದಿನ ಎಲ್ ಹೋಗಿದ್ದೆ
ಮಾರಾಯ, ನೀನೊಳ್ಳೆ ವರ್ಷಕ್ಕೊಂದು ಸಲ ಬರೋ ನೆಂಟನ ತರ ಆಗಿದಿಯ"
ಅನ್ನುವಂತೆ ಮಾಡುತ್ತಿದ್ದ
ನಾಯಿಯ ಪ್ರೀತಿಗೆ ಯಾಕೋ ಉತ್ತರವಲ್ಲವೆನಿಸಿ ಅಲ್ಲೇ
ಕಾಲು ಮಡಚಿ ಕೂತು ಒಮ್ಮೆ ಅದರ ತಲೆಯ ಮೇಲೆ ಕೈ ಇಟ್ಟೆ,
ಅಷ್ಟೇ...! ನಾಯಿ ಸ್ವರ್ಗ
ಸಿಕ್ಕಿದವರಂತೆ ವರ್ತಿಸಿತು...!
ಕೆಲವೊಮ್ಮೆ ಅನ್ನಿಸುವುದುಂಟು
ನನಗೂ.
ಪ್ರಾಣಿಗಳು, ಅದ್ರಲ್ಲೂ ನಾಯಿಗಳು ಬದುಕ್ಕಿದ್ದಾಗಲೇ
ಸ್ವರ್ಗನ ಕಂಡುಕೋತಾವೆ ಕಣ್ರಿ.
ಯಾಕೆಂದ್ರೆ ನನ್ನ ಪ್ರಕಾರ
ಸ್ವರ್ಗ ಸಾಕಾರವಾಗೋದು ನಾವು ಯಾರನ್ನಾದ್ರೂ ಕಣ್ಮುಚ್ಚಿ ನಂಬುವಷ್ಟು ನಂಬಿದಾಗ, ಅಥವಾ ಅಷ್ಟು ನಂಬಿಕೆ ನಮ್ಮ
ಮೇಲೆ ಯಾರಾದರೂ ಇಟ್ಟಾಗ,
ಯಾರದ್ದಾದ್ರೂ ತೋಳಿನಲ್ಲಿ
ನಮ್ಮನ್ನ ನಾವೇ ಮರೆತಾಗ, ಜೊತೆಗಾರ ಎಷ್ಟೇ ನೋಯಿಸಿದರೂ, ಸಣ್ಣದೊಂದು ಕ್ಷಮೆ ಹಾಗೂ
ಕಣ್ಣಂಚಿನಲ್ಲಿ ಮಿಂಚುವ ಕಣ್ಣೀರಿನೊಂದಿಗೆ ಬಂದಾಗ ಹೃದಯದಿಂದ ಕ್ಷಮಿಸಲು ಕಲಿತಾಗ, ಯಾರದ್ದಾದರೂ ಸಣ್ಣದೊಂದು
ಮುಗುಳ್ನಗುವಿಗೋಸ್ಕರ ಬೆಟ್ಟವನ್ನೇ ಅಲ್ಲಾಡಿಸುವಷ್ಟು ಪ್ರಯತ್ನ ತೋರಿಸಿದಾಗ,
ಎಲ್ಲಕ್ಕಿಂತ ಮುಖ್ಯವಾಗಿ, ಹಸಿವು ಹಾಗು ಸಂಬಂಧದ ಮಧ್ಯೆ
ಸಂಬಂಧವನ್ನ ಆರಿಸಿಕೊಳ್ಳಲು ಕಲಿತಾಗ. ಮನುಷ್ಯನಿಗೆ ಇದು ಕಂಡಿತಾ ಸಾಧ್ಯವಿಲ್ಲ ಕಣ್ರೀ.
ಎಂತದೇ ಸಂಬಂಧವಿರಲಿ, ಹಸಿವಿಗಿಂತ ಮೇಲಿರಲು ಸಾಧ್ಯವಿಲ್ಲ.
ಮನುಷ್ಯನದ್ದು ಹಣವೊಂದೇ ಮಾಪಕವಾಗಿ,
ಉಳಿದ್ದದ್ದೇಲ್ಲಾ ಗೌಣವಾಗಿರೋದು ಸಹಜ ಹಾಗು ಸರಿ ಎನ್ನಿಸುವಂತ ಗುಣ.
ನಾಯಿ ತನ್ನ ಪುಟ್ಟ ಬದುಕಿನಲ್ಲಿ, ಬದುಕಿ ತೋರ್ಸುತ್ತೆ ಸ್ವರ್ಗ
ಅಂದ್ರೆ ಹೆಂಗಿರುತ್ತೆ ಅಂತ.
"ಪ್ಯಾಂಟ್ ನಾ ಒಗಿಯಲ್ಲ,ಆ
ನಾಯಿ ಜೊತೆ ಒದ್ದಾಡಿ ಮಣ್ ಮಾಡಿಕೊಂಡ್ರೆ,ಮಳೆ ಬೇರೆ ಬಂದು ಗೊಚ್ಚೆ ಆಗಿದೆ ಕರ್ಮ" ಅಮ್ಮನ ಧ್ವನಿಯಿಂದ
ಎಚ್ಚೆತ್ತು, ಮತ್ತೊಮ್ಮೆ ನಾಯಿಯ ತಲೆಯ ಮೇಲೆ ಕೈ ಸವರಿ, ನಿನ್ನ ಸ್ವರ್ಗದಲ್ಲಿ ನಮಗೆ ಜಾಗವಿಲ್ಲವೆಂದೆ. ನಾಯಿಯ ಸ್ವರ್ಗ ಮತ್ತೆ
ಮಿಂಚಿತ್ತು ಅದರ ಪಾಲಿಗೆ.
~~~~~~*******~~~~~~
ಅಮ್ಮ ನಂಗೆ ಹೆದ್ರಿಕೆ ಆಗ್ತಿದೆ.
ಭಯ ಮಿಶ್ರಿತ ಗೊಣಗಾಟದೊಂದಿಗೆ, ಮಳೆ ಜೋರಾಗುವ ಮುಂಚೆ ಸೆರಗು
ತುಂಬಾ ಹೂವು ತುಂಬಿಸಿಕೊಳ್ಳುವ ಯತ್ನದಲ್ಲಿ ಮಲ್ಲಿಗೆಯ ಗಿಡದ ಬಳಿಯಿದ್ದ ಅಮ್ಮನ ಸೆರಗು ಹಿಡಿದು ನಿಂತಿದ್ದೆ.
ಅಮ್ಮ ಒಮ್ಮೆ ಗದರಿದವಳು, ನನ್ನ ಮುಖ ನೋಡಿ ಹೂವನ್ನು
ಬುಟ್ಟಿಯ ಪಾಲಿಗೊಪ್ಪಿಸಿ,ಅಲ್ಲೇ ಜಗುಲಿಯ ಮೆಟ್ಟಿಲ ಮೇಲೆ
ಕೂತು,ನನ್ನ ತನ್ನ ಮಡಿಲಲ್ಲಿ ಮಲಗಿಸಿಕೊಂಡಳು.
ಅಮ್ಮ ಮಾತಾಡುವುದಿಲ್ಲ ಇಂತ
ಗಳಿಗೆಗಳಲ್ಲಿ, ನಾನೂ ಮಾತಾಡುವುದಿಲ್ಲ.
ಇಬ್ಬರ ಹೃದಯದಲ್ಲೂ ಒಂದು ಝರಿ
ತನ್ನಷ್ಟಕ್ಕೆ ತಾನೇ ಹರಿಯುತ್ತದೆ ಅಷ್ಟೆ.
ನನ್ನ ಮನ ಸುರಿಯುತ್ತಿದ್ದ
ಮಳೆಯ ಹಿಂದೆ, ಹಳೆಯದನ್ನೇಲ್ಲಾ ಹರಡಿಕೊಂಡು ಕೂತಿತ್ತು.
ಸುಮಾರು ಹತ್ತು ವರ್ಷ ಹಿಂದಿನ
ಸಮಯ. ಆಗಿನ್ನೂ ಅಮ್ಮನ ಸೆರಗಿಲ್ಲದೆಯೂ ಬದುಕಬಹುದು ಹಾಗೂ ಹಾಗೆಯೇ ಬದುಕ ಬೇಕು ಎಂಬ ಕಹಿ ಸತ್ಯ ಅರಗಿಸಿಕೊಳ್ಳುತ್ತಿದ್ದ
ಸಮಯ.
ಶಾಲೆಯೆಂಬ, ಅಮ್ಮನ ಕಥೆಗಳಲ್ಲಿ ಬರುವ
ರಾಕ್ಷಸ ನಿರ‍್ಮಿತ ಸ್ಥಳಕ್ಕೆ ಕೈ ಹಿಡಿದು ತಂದು ಬಿಟ್ಟು ನವೋದಯದ ಬೆನ್ನತ್ತಿ ಹೋದ ಅಣ್ಣನ್ನಿಲ್ಲದೇ
ಆಗುತ್ತಿದ್ದ ಭಯ ಹಾಗೂ ಮತ್ತೆ ಮತ್ತೆ ಅಮ್ಮನ ನೆನಪು ತರುವಂತೆ ಮಾಡುತ್ತಿದ್ದ ಶಿಕ್ಷಕರ ನಿಗೂಢತೆಯ
ನಡುವೆ ನನ್ನತನವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದ ಸಮಯ.
ಬೇಡವೆಂದರೂ ಮನ ಮತ್ತದೇ ಘಟನೆಯ
ನೆನಪನ್ನು ಮೈ ಮೇಲೆ ಎಳೆದು ಕೊಂಡಿತ್ತು.
ಅಂತೂ ಇಂತೂ
ಎರಡು ವರ್ಷ ತಳ್ಳಿದ್ದೆ.
ಸಿಂಬಳ ಸುರಿಸಿಕೊಂಡು
ಚಡ್ಡಿ ಮೇಲೆಳೆದು ಕಟ್ಟಿಕೊಳ್ಳುತ್ತಾ,ಆಗಾಗ ಜಾರುವ ಲಂಗಕ್ಕೊಂದು ಲಾಡಿ ಕಟ್ಟಿಕೊಂಡಿರುತ್ತಿದ್ದವರನ್ನೆಲ್ಲಾ
ಸೇರಿಸಿ ನಮದೊಂದು ಗ್ಯಾಂಗ್ ತಯಾರಾಗಿತ್ತು.
ಅಸಲಿಗೆ ತರಗತಿಯಲ್ಲಿದ್ದವ್ರೆಲ್ಲಾ
ಸ್ವಾಭಾವಿಕವಾಗಿ ನಮ್ ಗ್ಯಾಂಗ್ ಸದಸ್ಯರೇ..!
ಸಂಧ್ಯಾ ಬಲು
ಚೂಟಿ...!
ಇಬ್ಬರು ಮಕ್ಕಳಲ್ಲಿ
ಹಿರಿಯಳು. ತಮ್ಮನ ಮಾತು ಪೂರ್ತಿ ತಾನೇ ದಾನ ತೆಗೆದುಕೊಂಡವಳಂತೆ ಮಾತಾಡುವವಳು.
ಸಹಜವಾಗಿ ಆಕೆ
ತರಗತಿಯ ಕೇಂದ್ರಬಿಂದು.
ಸದಾ ಒಂಟಿಯಾಗಿದ್ದು,
ಯಾರ ಜೊತೆಗೂ ಬೆರೆಯದೇ,ಬೆರೆತರೂ ಸದಾ ತನ್ನತನವನ್ನ ಕಾಪಾಡಿಕೊಳ್ಳುತ್ತಿದ್ದವನು ನಾನು.
ಸಂಧ್ಯಾ ಸಂಬಂಧದಲ್ಲಿ
ತಂಗಿಯಾಗಬೇಕು,ಆಕೆಯ ಮನೆಗೂ ನನ್ನ ಮನೆಗೂ ಹತ್ತಿರದ ನಂಟಿದೆ ಎಂದರಿಯುವವರೆಗೂ ಹೀಗೇ ನಡಿದಿತ್ತು.
ಆದರೆ ಇದು ಗೊತ್ತಾದ
ಮೇಲೆ,ನನ್ನ ಹಿಂಜರಿಕೆ ಚೂರ್ಚೂರಾಗಿ ಕರಗತೊಡಗಿತ್ತು.
ಈಗ ನಮ್ ಗ್ಯಾಂಗ್
ಗೆ ಅನಧೀಕೃತವಾಗಿ ಇಬ್ಬರು ನಾಯಕರು ತಯಾರಾಗಿದ್ದರು.
ಹುಡುಗರ ಪಟಾಲಂಗೆ
ನಾನೂ,ಹುಡುಗಿಯರ ಗುಂಪಿಗೆ ಅವಳು ನಾಯಕಿಯೆಂದು, ತೀರಾ ಏಳನೇ ಇಯತ್ತೆಯವರೆಗೂ ಮುಂದುವರಿದಿತ್ತು.
ಮುಗ್ದತೆಯ ಪೊರೆ
ಕಳಚಿದ ಮೇಲೆ ಸಹಜವಾಗಿ ಗುಂಪು ಟಿಸಿಲೊಡೆದಿತ್ತು.
ಅಂತದ್ದೇ ಒಂದು
ತರಗತಿಯಲ್ಲಿ,ಶಿಕ್ಷಕರಿಲ್ಲದ ಸಮಯ,ಗಲಾಟೆ ಮಾಮೂಲಿ.
ನನಗೂ ಸಂಧ್ಯಾಳಿಗೂ
ತರಗತಿಯ ಮೇಲ್ವಿಚಾರಣೆಯ ಉಸ್ತುವಾರಿ.
ತರಗತಿಯ ಗಲಾಟೆ
ತೀರಾ ಜೋರಾದಾಗ ನಮ್ಮದೊಂದು ಸಣ್ಣ ತಂತ್ರ.
ನಮ್ಮಿಬ್ಬರಿಗೂ
ಆಪ್ತನಾಗಿರುವ ಒಬ್ಬನನ್ನು ಹೆಡ್ಮಾಸ್ಟರ್ ಹತ್ತಿರ ಕರೆದುಕೊಂಡು ಹೋಗುವುದಾಗಿ ಹೇಳಿ, ಅಲ್ಲೇ ತರಗತಿಯ
ಹೊರಗೆ ಕರೆದೊಯ್ದು, ಹೊಡೆತ ತಿಂದವರಂತೆ ನಟಿಸು ಎಂದು ಹೇಳುವುದು.
ಅವನು ಸ್ವಲ್ಪ
ಹೊತ್ತು ಆದ್ಮೇಲೆ ಮೈ ಕೈ ಪೂರ್ತಿ ನೋಯ್ತಿರೋರ್ ತರ ನಾಟಕ ಆಡ್ತಾ ಬರೋನು, ನಮ್ಗೆ ಆ ಅವಧಿ ಪೂರ್ತಿ
ತಲೆಬಿಸಿ ಇರ್ತಿರ್ಲಿಲ್ಲ.
ತೀರಾ ಜಾಸ್ತಿ
ಗಲಾಟೆ ಮಾಡಿ ಶಿಕ್ಷಕರ ಹತ್ತಿರ ಹೊಡೆತ ತಿನ್ನೋದೂ ತಪ್ಪೋದು, ನಿಯಂತ್ರಣದಲ್ಲಿ ಇಟ್ಕೊಳಕಾಗಲ್ವಾ ಅಂತ
ನಾವ್ ಶಿಕ್ಷಕರ ಹತ್ರ ಬೈಸಿಕೊಳ್ಳೋದೂ ತಪ್ಪೋದು.
ಹಿಂಗೆ ನಮ್
ಪಟಾಲಂನ ಬಾಂಧವರಿಗೆ ಮೋಸ ಮಾಡಿದ್ರೂನೂ,ಅಂತಿಮವಾಗಿ ಅವರ ಹಿತ ಕಾಪಾಡೋದೇ ನಮ್ಮ ಧ್ಯೇಯ ಅನ್ನೋ ಮಾತಿನೊಂದಿಗೆ
ನಮ್ಮನ್ನ ನಾವ್ ಸಮಾಧಾನ ಪಡ್ಸಿಕೋತಿದ್ವಿ...!
ಇಂತದ್ದೇ ಕರಾಮತ್ತು
ನಡೆಸ್ತಾ ಇರ್ಬೇಕಾದರೊಂದು ದಿನ ಒಬ್ಬ ಹೊಸತೊಂದು ಆಮಿಷ ತೋರ್ಸಿಬಿಟ್ಟ.
ನಾವು ಎಂದಿನಂತೆ
ನಮಗೆ ಗೊತ್ತಿರುವ,ಮೊದಲೇ ತಿಳಿಸಿರುವ ಒಬ್ಬನನ್ನು ಕರ್ಕೊಂಡ್ ಹೋಗೋ ಬದಲು ಬಹಳ ದಿನದಿಂದ ನಂಗೂ ಸಂಧ್ಯಂಗೂ
ಕಾಟ ಕೊಡ್ತಾ, ಸಣ್ಣ ಪುಟ್ಟ ಬೆದರಿಕೆಗೆ ಹೆದರದಿದ್ದ ಒಬ್ಬನನ್ನ ನಿಜ್ವಾಗ್ಲೂ ಮೇಷ್ಟ್ರ ಹತ್ರ ಕರ್ಕೊಂಡ್
ಹೋಗೋ ಉದ್ದೇಶ ಇತ್ತು ನಮ್ದು.
ಸರಿ ನಮ್ಗೆ
ಖಾಸ್ ವ್ಯಕ್ತಿಯೊಬ್ಬನಿಗೆ ಕ್ಲಾಸಿನ ಜವಾಬ್ದಾರಿ ವಹಿಸಿ, ಇವ್ನುನ್ ಎಳ್ಕೊಂಡ್ ಹೊರಟ್ವಿ.
ನಮ್ ಮನ್ಸಲ್ಲೂ
ತಳಮಳ, ಮೇಷ್ಟ್ರು ಯಾವ್ ಮೂಡಲ್ ಇರ್ತಾರೋ ಏನೋ, ಸುಮ್ನೆ ಇದ್ದಕಿದ್ದಂಗೆ ಕರ್ಕೊಂಡ್ ಹೋಗಿ ನಿಲ್ಸಿದ್
ತಕ್ಷಣ,ಉಲ್ಟಾ ನಮ್ಗೇ ಬೈದು ಬಿಟ್ರೇನ್ ಮಾಡೋದು...!
ಈ ನಮ್ಮ ಬಂಧನದಲ್ಲಿರೋ
ಕ್ರಾಂತಿಕಾರಿಗೆ ಇದು ಗೊತ್ತಾದ್ರೆ ಮತ್ತೆ ನಮ್ಗೆ ಉಳಿಗಾಲವಿಲ್ಲ...!
ಏನೂ ಇಲ್ದೇ
ನಮ್ ಮೇಲೆ ಹರಿಹಾಯೋ ಇವನು, ಏನಾದ್ರೂ ವಿಷ್ಯ ಸಿಕ್ರೆ, ನಮ್ ಜನ್ಮ ಜಾಲಾಡೋದು ಖಂಡಿತ.
ಇದೇ ಹೆದ್ರಿಕೆ
ಮತ್ತೊಂದು ಬದಿಯಲ್ಲಿ ಅವನ ಕೈ ಹಿಡಿದುಕೊಂಡಿದ್ದ ಸಂಧ್ಯಾಳ ಮನದಲ್ಲೂ ಮಿಂಚುತ್ತಿತ್ತು.
ಸರಿ,ಇನ್ನೇನು
ಸಿಕ್ಕಿಹಾಕ್ಕೊಳ್ಳೋ ಕಾಲ ಬಂತು, ವಾಪಸ್ಸು ಹೋಗಿ ಬಿಡೋಣ ಅಂತ ನಾವಿಬ್ರೂ ಕಣ್ಸನ್ನೆಯಲ್ಲಿ ಮಾತಾಡಿಕೊಂಡು
ಬಾಯಿ ತೆಗಿಯೋ ಸಮಯಕ್ಕೆ ಸರಿಯಾಗಿ, ನಮ್ಮ ಬಂಧಿತ ಖೈದಿ ಬಾಯಿ ತೆರೆದಿದ್ದ...!
"ಈ ಚಾರ್ಟನಲ್ಲಿರೋ
ಗಿಳಿದುಕೇ ನೋಡೀದೀಯಾ...!"
ಅಲ್ಲೇ ಗೋಡೆಗೆ
ನೇತು ಹಾಕಿದ್ದ ಪ್ರಾಣಿ ಪಕ್ಷಿಗಳ ಚಾರ್ಟಲ್ಲಿ ಅತ್ಯಂತ ಆಕರ್ಷಕವಾಗಿದ್ದ ಗಿಳಿಯೊಂದನ್ನ ತೋರಿಸುತ್ತಾ
ಕೇಳುತ್ತಿದ್ದ.
ವಿಷ್ಯ ಬದಲಾಯಿಸಿ
ಹೇಗಾದ್ರೂ ತಪ್ಪಿಸಿಕೊಳ್ಳುವ ತವಕ ಅವನ ಚರ್ಯೆಯಲ್ಲಿ ಎದ್ದು ಕಾಣುತ್ತಿತ್ತು.
ಈಗ ನಾವಿಬ್ರು
ಒಂಚೂರು ಸುಧಾರಿಸಿಕೊಂಡ್ವಿ. ನಮ್ಮ ಬಂಧಿತ ಕೈದಿ ಹೆದ್ರಿಕೊಂಡಿದ್ದಾನೆ!!
"ಅದೆಂಗೋ
ನೋಡಕಾಗತ್ತೆ ಅದ್ನ, ಅದು ನಮ್ ದೇಶದ್ದಲ್ವೇ ಅಲ್ಲ, ಮೊನ್ನೆ ಮೇಷ್ಟ್ರು ಪಾಠ ಮಾಡ್ತಾ ಹೇಳಿಲ್ವಾ, ಗೂಬೆ."
ಸಂಧ್ಯಾ ಮೊದಲು
ಸುಧಾರಿಸಿಕೊಂಡು ಗದರಿಸುವ ಧ್ವನಿಯಲ್ಲಿ ಹೇಳಿದಳು.
ನಾನು ಹೌದೌದೆನ್ನುತ್ತಾ
ಅನುಮೋದಿಸಿದೆ.
ಆದ್ರೆ ನಮ್
ಖೈದಿ ಯಾಕೋ ಇದೇ ಉತ್ತರನ ನಿರೀಕ್ಷಿಸಿದಂತಿತ್ತು.
ಹೊಳೆಯುವ ಕಂಗಳೊಂದಿಗೆ,ಅಲ್ಲಿಯವರೆಗೆ
ಹೆದರಿದಂತೆ ಹಿಂದೆ ಕಟ್ಟಿದ್ದ ಕೈಗಳ್ನ ಮುಂದೆ ತಂದು ಎದೆಯ ಬಳಿ ಕಟ್ಟಿಕೊಂಡು, ಹೆಮ್ಮೆಯ ಧ್ವನಿಯಲ್ಲಿ
ಬಾಯಿ ತೆರೆದ.
"ನಮ್ದುಕೇ
ಚಾಚಾ ಫ಼ಾರಿನ್ನಲ್ಲೇ ಇರೋದು, ಬೇಕಾದ್ರೇ ಎರ‍್ಡು ಗಿಳಿ ಹಿಡ್ಕೊಂಡ್ ಬರಕ್ ಹೇಳ್ತೀನಿ"
ನಮ್ಮಿಬ್ಬರ
ಮನಸ್ಸೂ ಶಾಲೆಯ ಹಿಂದಿದ್ದ, ನಮ್ಮದೇ ಪಟಾಲಂನ ಪವಿತ್ರಾಳ ಮನೆಯ ಜಗುಲಿಯಲ್ಲಿ ನೇತುಹಾಕಿದ್ದ ಪಂಜರದಲ್ಲಿದ್ದ
ಗಿಳಿಯನ್ನು ನೆನೆಸಿಕೊಂಡ್ವು.
ನಮ್ಮ ಮನೆಗೂ
ಅಂತದ್ದೊಂದು ಗಿಳಿ ಬರೋದಾದ್ರೆ ಹೆಂಗಿರುತ್ತೆ!!
ತಕ್ಷಣ ಮನಸ್ಸು
ಪುಳಕಗೊಂಡಿತ್ತು. ಏನೇನು ತಿನ್ನಕ್ ಹಾಕ್ತ್ಯಾ ಅಂತ ಪವೀ ನ ಒಂಚೂರು ಕೇಳ್ಕೊಂಡ್ರಾಯ್ತು.
ಮನಸ್ಸು ಆಗ್ಲೇ
ಗಿಳಿಯ ಒಡೆಯನಾಗಿ ಯೋಚಿಸುತ್ತಿತ್ತು.
"ಇದ್ರಲ್ಲಿರೋ
ಕಲ್ಲರ್ ಮಾತ್ರಾನಾ? ಅಥ್ವಾ ನಮ್ಗಿಷ್ಟ ಬಂದಿದ್ ಬಣ್ಣನಾ?"
ಆಗಲೇ ಸಂಧ್ಯಾ
ಬಾಯಿಬಿಟ್ಟಾಗಿತ್ತು.
"ಇದ್ರಲ್ಲಿರೋದೇ
ಸಿಗೋದು, ಆದ್ರೆ ನಿಮ್ದುಕ್ಕೆ ಹೇಳೀದೀರಾ ಅಂದ್ರೆ ಬೇರೆ ತರ್ತಾರೆ ಚಾಚಾ"
ಅವನ ಜಾಲಕ್ಕೆ
ನಾವು ಬಿದ್ದಿರೋದು ಖಾತ್ರಿಯಾದ ಕೂಡಲೇ ಮತ್ತಷ್ಟು ವಿವರಿಸಿದ ನಮ್ಮ ಖೈದಿ.
ಅದಾಗಲೇ ನಾವಿಬ್ಬರೂ
ಗಿಳಿಯ ಒಡೆಯರಾಗಿಯಾಗಿತ್ತು.
ನಮ್ಗೇ ಗೊತ್ತಿಲ್ಲದೇ
ಅವ್ನನ್ನ ವಾಪಸ್ಸು ತರಗತಿಯ ಬಾಗಿಲ ಬಳಿ ತಂದು ನಿಲ್ಲಿಸಿಯಾಗಿತ್ತು.
"ಸರಿ,
ಇನ್ನೊಂದ್ಸಲ ಮಾತಾಡ್ಬೇಡ. ಗಿಳಿ ಬಗ್ಗೆ ನಿಮ್ ಚಾಚಾಗೆ ಹೇಳು, ಕಲ್ಲರ್ ನಾಳೆ ಹೇಳ್ತೀವಿ" ಗತ್ತಿನ
ಧ್ವನಿಯಲ್ಲಿ ನಾನು ಗದ್ರಿದ್ದೆ.
"ನಂಗೆ
ನೇರಳೇ ಬಣ್ಣದ್ದು ಬೇಕಪ್ಪಾ!!"
ಅವನು ಒಳ ಹೋದ
ಬಳಿಕ ಸಂಧ್ಯಾ ಉದ್ಘರಿಸಿದ್ದಳು.
"ಮೇಷ್ಟ್ರು
ಇರ್ಲ್ಲಿಲ್ಲ" ಅಂತಷ್ಟೇ ಹೇಳಿ,ಮೇಷ್ಟ್ರ ಹೊಡೆತದ ನೋವಿನಿಂದ ಚೀರುತ್ತಾ ಬರಬೇಕಿದ್ದ ನಮ್ ಖೈದಿಯ
ನಿರೀಕ್ಷೆಯಲ್ಲಿದ್ದ ಕ್ಲಾಸಿನ ಜನತೆಗೆ, ಆತನ ಎಂದಿನ ತುಂಟ ನಗೆಯ ಕಾರಣ ತಿಳಿಸಿ ನೆಮ್ಮದಿಯಿಂದ ನಿಟ್ಟುಸಿರು
ಬಿಡುವಂತೆ ಮಾಡಿ, ಮತ್ತೆ ಸಂಧ್ಯಾಳೊಂದಿಗೆ ಸೇರಿ ನಮ್ ಗಿಳಿಯ ಕುರಿತ ಯೋಚನೆ ಮುಂದುವರಿಸಿದ್ದೆ.
ಇದೆಲ್ಲರ ನಡುವೆ
ಮೂಲೆಯಲ್ಲಿ ನಗುತ್ತಾ ಕುಳಿತ್ತಿದ್ದ ನಮ್ಮ ಖೈದಿಯ ಮುಖದಲ್ಲಿದ್ದ ಕುಹಕ ನಮಗರ್ಥವಾಗಲೇ ಇಲ್ಲ.
ಅರ್ಥ ಮಾಡಿಕೊಳ್ಳುವ
ಗೋಜಿನಲ್ಲಿ ನಾವಿರಲೂ ಇಲ್ಲ.
~~~~~~~~~~~~~~************************~~~~~~~~~~~~~~
"ಏನು
ಸಾಹುಕಾರ್ರು, ಇಷ್ಟೊಂದು ಕೆಲ್ಸ ಮಾಡಿದಾರೇ ಇವತ್ತು" ನಾಟಕೀಯವಾಗಿ ಕೇಳುತ್ತಾ ಕಾಫ಼ೀ ಲೋಟ ಕೈಗಿತ್ತಳು
ಅಮ್ಮ. ಮನೆಗೆ ಬಂದವನೇ, ಅಡುಗೆ ಮನೆಯಲ್ಲಿದ್ದ ಒಲೆಯ ಬೂದಿ ತೆಗೆದು ಹೊರ ಹಾಕಿ, ಮರುದಿನ ಬೆಳಿಗ್ಗೆ
ಬೇಕಾಗುವಂತ ಒಂದಿಷ್ಟು ಸೌದೆ ತುಂಬಿಸಿ, ಅಮ್ಮನ ಮಡಿಲ ಬಳಿ ಕುಳಿತವನ ನನ್ನ ಮನದಲ್ಲಿದ್ದಿದ್ದು, ದೊಡ್ಡ
ಬೇಡಿಕೆಯೇ.
ಅದಕ್ಕೆಂದೇ
ದೊಡ್ಡದೇ ಕೆಲಸ ಮಾಡಿದ್ದೆ!!
"ಮ್ಮಾ,
ಆ ಈರುಳ್ಳಿ ಬುಟ್ಟಿ ನಂಗ್ಕೊಡ್ತ್ಯಾ?" ಹೇಗೋ ಧ್ಯೆರ್ಯ ಮಾಡಿ ಕೇಳಿಬಿಟ್ಟಿದ್ದೆ.
ನನ್ ಪ್ರಕಾರ
ಗಿಳಿ ಬರೋದು ಪಕ್ಕಾ ಆಗಿಯಾಗಿತ್ತು.
ಇನ್ನು ಬಾಕಿ
ಉಳಿದಿದ್ದು ಪಂಜರ ಮಾತ್ರ.
ಅಡುಗೆ ಮನೆಯಲ್ಲಿದ್ದ
ಈರುಳ್ಳಿ ಬುಟ್ಟಿ ಸಧ್ಯಕ್ಕೆ ನಂಗೆ ಪಂಜರದ ರೀತಿ ಕಾಣುತ್ತಿತ್ತು.
ಸಧ್ಯಕ್ಕೆ ಅದ್ರಲ್ಲಿ
ಇಟ್ಕೊಂಡಿರಣ, ಆಮೇಲೆ ನೋಡಿದ್ರಾಯ್ತು ಅಂತ ಯೋಚಿಸಿ, ಅಮ್ಮಂಗೆ ಅರ್ಜಿ ಹಾಕಿದ್ದು.
"ನಿಂಗೆಂತಕ
ಅದು!"
ಅಮ್ಮ ಆಶ್ಚರ್ಯದಿಂದ
ಕೇಳಿದ್ದಳು.
"ಗಿಳಿ
ಬರುತ್ತಲ ಅದ್ಕೆ!"
ಸಹಜವೆಂಬಂತೆ
ಉತ್ತರಿಸಿದ್ದೆ ನಾನು.
"ಎಂತ
ಗಿಳಿ, ಇಲ್ಲಿಗ್ ಬರುತ್ತೆ, ಅದ್ಕೆ ಪಂಜರ ಯಾಕೆ? ಯಾರ್ಹೇಳಿದ್ದು ನಿಂಗೆ ಗಿಳಿ ಬರುತ್ತೇಂತ..."
ಅಮ್ಮ ಇದ್ದಕ್ಕಿದ್ದಂತೆ
ಸಿಟ್ಕೊಂಡು ಪ್ರಶ್ನೆಯ ಹಿಂದೊಂದು ಪ್ರಶ್ನೆ ಕೇಳಲು ಶುರುಮಾಡಿದಳು.
"ನಂಗ್
ಬೇಕು ಆಷ್ಟೇ.. ಏನಾಗುತ್ತೆ ಆ ಬುಟ್ಟಿ ಕೊಟ್ರೆ,ನೀ ಬೇರೇ ತನ್ಕಾ"
ಅಮ್ಮಂಗೆ ಬದಲೀ
ಉಪಾಯ ಬೇರೇ ಸೂಚಿಸಿದೆ.
"ಹಂಗಲ್ಲಾ
ಗುಂಡಾ, ಗಿಳಿ ಸಾಕಿದ್ರೆ, ಅವು ಶಾಪ ಕೊಡ್ತಾವೆ, ಪಂಜರದಲ್ಲಿ ಇಡ್ಬಾರ್ದು ಅವುನ್ನ"
"ಹೋಗಮ್ಮಾ,
ಅದು ಫ಼ಾರಿನ್ ಗಿಳಿ, ಶಾಪ ಕೊಡಲ್ಲ ಅದು!"
ಅಮ್ಮನ ಕಿವಿ
ಚುರುಕಾಗಿದ್ದವು.
"ಎಂಥಾ??!!
ಫ಼ಾರಿನ್ನಾ?? ಯಾರ್ ತಂದ್ಕೊಡದು? ಯಾವಾಗ?..."
ಅಮ್ಮ ಮತ್ತೆ
ಬಯ್ಯುವ ಧ್ವನಿಯಲ್ಲಿ ಕೂಗಲು ಶುರು ಮಾಡಿದ್ದಳು.
"ಏ ಹೋಗಮ್ಮಾ,
ನಿಂಗೇನೂ ಗೊತ್ತಾಗಲ್ಲ.."
ಗೊಣಗುತ್ತಾ
ಹೊರಹೋಗಿದ್ದೆ. ಸ್ವಲ್ಪ ಹೊತ್ತು ಮುಖ ಸಣ್ಣದ್ದಾಗಿಸಿಕೊಂಡು ಕುಳಿತ್ತಿದ್ದವನ ಪಕ್ಕ ಬಂದು ಕುಳಿತ ಅಮ್ಮ,
"ಏನು
ಹೆಸರಿಡಣ ಗಿಳಿಗೆ?" ಅಂದ್ಳು.
"ನೀ ಬುಟ್ಟಿನೇ
ಕೊಡಲ್ಲಾ ಅಂತ್ಯಾ, ಗಿಳಿ ಹೆಂಗ್ ಸಾಕೋದು"
ಮುಖ ಇಷ್ಟಗಲ
ಊದಿಸಿಕೊಂಡು ಉತ್ತರಿಸಿದ್ದೆ.
"ಅಯ್ಯೋ
ಮಂಗ, ಕೊಡ್ತೀನಿ ಕಣೋ ಬುಟ್ಟಿನಾ, ಮೊದ್ಲು ಗಿಳಿ ಎಲ್ಲಿಂದ ಬರುತ್ತೆ ಹೇಳು"
ಅದಾಗಲೇ ನಾನು
ಸ್ವರ್ಗದಲ್ಲಿದ್ದೆ.
"ನಮ್
ಶಾಲೇಲಿ ಒಬ್ಬ ತರ್ತೀನಿ ಅಂತ ಹೇಳಿದಾನೆ"
ಆಗುತ್ತಿದ್ದ
ಸಂತೋಷದೊಂದಿಗೆ, ಹೆಮ್ಮೆಯಿಂದ ಹೇಳಿದ್ದೆ.
ಅಮ್ಮ ಒಮ್ಮೆ
ಜೋರಾಗಿ ನಕ್ಕಳು. ಅವತ್ತು ಗಿಳಿ ಬರುತ್ತೆ ಅಂತ ಖುಷಿಯಿಂದ ಅಮ್ಮ ನಗ್ತಿದಾಳೆ ಅನ್ಕೊಂಡಿದ್ದೆ,
ಆದ್ರೆ ಇತ್ತೀಚೆಗೆ
ಗೊತ್ತಾಯ್ತು, ಅಮ್ಮಂಗೆ ಎಲ್ಲಾ ಮುಂಚೇನೇ ಗೊತ್ತಿತ್ತು.
ಎಷ್ಟಾದ್ರೂ
ಅಮ್ಮ ಅಮ್ಮ ಅಲ್ವಾ, ಅವ್ಳಿಗೆಲ್ಲಾ ಗೊತ್ತಿರುತ್ತೆ.
"ಸರಿ,
ಯಾವಾಗ ಬರುತ್ತೆ ಗಿಳಿ"
ಗಿಳಿ ಬರುವ
ಖುಷಿಯಲ್ಲಿ ಇದನ್ನ ಕೇಳೋದು ಮರ್ತೇ ಬಿಟ್ಟಿದ್ವಿ.
ಮರುದಿನ ಬೆಳಿಗ್ಗೆ
ಮೊದಲು ಕೇಳಿದ್ದೇ ಅದನ್ನ, ನಮ್ ಖೈದಿ ಹತ್ತಿರ. ಅದಾಗಲೇ ಅವ್ನೂ ಸಹ ನಮ್ ಪಟಾಲಂನ ಮುಖ್ಯ ಭಾಗವಾಗಿದ್ದ.
ಅವ್ನಿಗೆ ಗೊತ್ತಿಲ್ಲವೆಂದು
ನಾವು ಅನ್ದುಕೊಂಡಿದ್ದ, ನಮ್ಮ "ಹುಸಿ-ಬಂಧನ-ಮೇಷ್ಟ್ರು" ರಹಸ್ಯ ಹೇಳುವಷ್ಟರ ಮಟ್ಟಿಗೆ
ಹತ್ತಿರವಾಗಿದ್ದ.
"ಮುಂದಿನ
ಹಫ಼್ತಾ ಈದ್ಗೆ ಬರ್ತಾರೆ ಚಾಚಾ, ಆಗ ತರ್ತಾರೆ"
"ಮಕ್ಕಳೇ
ಮುಂದಿನ ವಾರ, ಪರೀಕ್ಷೆ ಇದೆ"
ಎರ್ಡೂ ಘೋಷಣೆಗಳು
ಒಟ್ಟಿಗೇ ಮನಸ್ಸಿಗೆ ತಾಗಿದ್ದವು.
ಇನ್ನೇನು ಒಂದು
ವಾರ.
ಆಮೇಲೆ ನಮ್
ಹತ್ರನೂ ಗಿಳಿ.
ತರಗತಿಯ ಮಧ್ಯೆ
ನಡೆಯುತ್ತಿದ್ದ ಚೀಟಿ ಮಾತುಕಥೆಯಲ್ಲಿಯೂ ಅದೇ ವಿಷ್ಯವಾಗಿ ಪರಿಣಮಿಸಿತ್ತು.
ಗಿಳಿಯನ್ನ ಸಾಕುವ
ಬಗ್ಗೆ, ಅದಾಗಲೇ ಗಿಳಿಯ ಒಡತಿಯಾಗಿದ್ದ ಪವಿಯ ಬಳಿ ತರಬೇತಿ ಪಡೆಯುತ್ತಿರಬೇಕಾದರೆ ಬಂದ ನಮ್ಮ ಗಿಳಿ
ಕೊಡುವ ಪರಮಾತ್ಮ ನಕ್ಕು
"ನಿಮ್ದುಕೀ
ತಲೆ. ಅದು ಫ಼ಾರಿನ್ ಗಿಳಿ, ಇವ್ಳ್ದುಕೀ ಪಾಸ್ ಇರೋದು ಇಲ್ಲೀ ಗಿಳಿ, ಅದು ಬೇರೆ ಇದು ಬೇರೆ. ಫ಼ಾರಿನ್
ಗಿಳಿಗೆ..."
ಎನ್ನುತ್ತಾ
ತನ್ನಾ ಪಾಂಡಿತ್ಯ ಬಿಚ್ಚಿಟ್ಟಿದ್ದ.
ನಮಗೂ ಅದು ಹೌದೆನ್ನಿಸ್ಸಿತ್ತು.
ಅವನು ಕಟ್ಟಿಕೊಡುತ್ತಿದ್ದ
ಬಣ್ಣದ ಲೋಕದಲ್ಲಿ ನಾವೂ ಗಿಳಿಯಾಗಿ ಹಾರಿತ್ತಿದ್ದೆವು.
ಒಂದು ವಾರ ಹೀಗೆಯೇ
ಕಳೆದಿತ್ತು.
ಅಂದು ಪರೀಕ್ಷೆಯ
ಹಿಂದಿನ ದಿನ.
ಪರೀಕ್ಷೆಯ ದಿನ
ನಾವು ಬುಟ್ಟಿ ತಂದು ಅದ್ರಲ್ಲಿ ಗಿಳಿ ತೆಗೆದುಕೊಂಡು ಹೋಗುವ ಮಾತಾಗಿತ್ತು.
ಆದ್ರೆ ಅವತ್ತೇ
ಸಿಡಿಲಿನಂತೆ ಈ ಸುದ್ದಿ ಬಂದೆರಗಿತ್ತು.
ಸಂಧ್ಯಾ ಅದಾಗಲೇ
ಬಂದು ನಮ್ಮ ಮಾಜೀ ಖೈದಿಯ ಬಳಿ ಜಗಳವಾಡುತ್ತಿದ್ದಳು.
ನಮ್ಮ ಕನಸಿನ
ಗೋಪುರ ಚೂರಾಗಿದ್ದರಿಂದ ಪರಿಣಾಮ ಜೋರಾಗಿಯೇ ಇತ್ತು.
"ಹೇ ಹೇ.
ಗಿಳೀನೂ ಇಲ್ಲ, ನವಿಲೂ ಇಲ್ಲ.
"ನೀವೂ
ಹೆಂಗೆ ನಮ್ದುಕೇ ಮೇಷ್ಟ್ರ ಹತ್ತಿರ ಕರ್ಕಂಡ್ ಹೋಗ್ತೀನಿ ಅಂತೇಳಿ ಮಂಗ ಮಾಡ್ತೀರೋ ಹಂಗೇ ನಿಮ್ಗೂಗೆ
ಮಂಗಗೆ ಮಾಡ್ದೆ."
ಅವನ ಮುಖದಲ್ಲಿದ್ದ
ಕುಹಕ ನಗುವಿನ ಕಾರಣ ಈಗ ಸ್ಪಷ್ಟವಾಗಿತ್ತು.
ಜೀವನದಲ್ಲಿ
ಯಾರೋ ಒಬ್ಬರು ಏನೋ ಕೊಡ್ತಾರೆ ಅಂತ ನಂಬಿಕೆ ಇಟ್ಟಿದ್ದು ಅದೇ ಮೊದಲಾಗಿತ್ತು.
ನಂಬಿಕೆ ಇಟ್ಟು,
ಕೈ ಸುಟ್ಟುಕೊಂಡಿದ್ದೂ ಅದೇ ಮೊದಲು.
ಮಳೆ ಜೋರಾಗಿ
ಹೊಯ್ಯುತ್ತಿರಲಿಲ್ಲ, ಯಾರೋ ಮಧ್ಯೆ ಮಧ್ಯೆ ತಡೆಹಿಡಿದಂತೆ ಕಂತುಕಂತಾಗಿ ಬರುತ್ತಿತ್ತು.
ಮೂಲೆಯಲ್ಲಿ
ಸುಮ್ಮನೆ ಕುಳಿತ್ತಿದ್ದ ನನ್ನ ಬೇಜಾರಿಗೆ ಕಾರಣ ಅಮ್ಮ ಅದಾಗಲೇ ಊಹಿಸಿದ್ದಳು.
ಸುಮ್ಮನೆ ಬಂದು
ಮಡಿಲ ಮೇಲೆ ತಲೆಯಿರಿಸಿಕೊಂಡು ತಟ್ಟುತ್ತಾ ಅಮ್ಮಳಾಗಿದ್ದಳು.
~~~~~~~~~~~~~~*********************~~~~~~~~~~~~~~
ಖಂಡಿತಾ, ನಾವೂ
ನಮ್ಮ ಮೇಲೆ ಇಟ್ಟ ನಂಬಿಕೆಯನ್ನ ಮೋಸ ಮಾಡಲು ಉಪಯೋಗಿಸಿಕೊಂಡವರೇ.
ಆದರೆ ಅಲ್ಲಿ
ನಮ್ಮ ಅಸಹಾಯಕತೆಯಿತ್ತು, ಎಲ್ಲರಿಗೂ ಒಳಿತಾಗುವ ಆಶಯವಿತ್ತು, ಮೇಷ್ಟ್ರ ಹತ್ತಿರವೂ ಹೋಗದೇ ಅತ್ತ ಅವರ
ಕೋಪಕ್ಕೂ ತುತ್ತಾಗದೇ, ಇತ್ತ ತರಗತಿಯ ಶಾಂತಿಯನ್ನೂ ಕಾಪಾಡಿ, ಶಿಕ್ಷಕರ ದೃಷ್ಟಿ ಬೀಳದ ಹಾಗೆ ಕಾಪಾಡಿಕೊಳ್ಳುತ್ತಿದ್ದೆವು.
ಅಲ್ಲಿ ಸಮಾಜದ
ಒಳಿತಿತ್ತು. ಅಥವಾ ಕನಿಷ್ಟ ಪಕ್ಷ ನಾವು ಹಂಗೆ ಅಂದುಕೊಂಡು ಮಾಡಿದ್ದೆವು!!
ಈಗಲೂ ಯಾವುದಾದರೂ
ಪರೀಕ್ಷೆಯ ಹಿಂದಿನ ದಿನ ಮಳೆ ಬಂದರೆ, ಅದೇ ಮೋಸ ನೆನಪಾಗಿ ಮನ ಮೆಲ್ಲಗೆ ಕುಸುಗುಡುವ ಮಗುವಾಗುತ್ತೆ.
"ಕೆಲ್ಸ
ಇದೆ ಬಂದೆ ತಡಿ" ಅಮ್ಮ ಎದ್ದು ಹೋದಳು.
ಅಲ್ಲಿಯವರೆಗೆ
ಹಳೆಯದೆಲ್ಲ ಕೆದಕಿಕೊಂಡು ಕೂತಿದ್ದ ನಾನು ಎದ್ದು ಕುಳಿತೆ.
ನಿಜ ನಾವೂ ಮೋಸ
ಮಾಡಿದವರೇ.
ಎಷ್ಟೇ ಸಮಜಾಯಿಷಿ
ಕೊಟ್ಟುಕೊಂಡರೂ ನಮ್ಮದೂ ತಪ್ಪೇ.
ವಿಷ್ಯ ಅದಲ್ಲ.
ಅಷ್ಟು ಸಣ್ಣ ವಯಸ್ಸಿಗೆ ನಮ್ಮಗಳ ಮನಸ್ಸಲ್ಲಿ ಮೋಸದ ಕಲ್ಪನೆಯನ್ನು ಹುಟ್ಟು ಹಾಕಿದ ಸಮಾಜ ಏಕೆ ಹೀಗಿದೆ?
ಖಂಡಿತಾ ಆ ವಯಸ್ಸಲ್ಲಿ
ಸ್ವತಂತ್ರವಾಗಿ ಯೋಚಿಸಿ ವಂಚಿಸುವಷ್ಟು ಬುದ್ದಿ ನಮ್ಮ ಖೈದಿಗೂ ಇರಲಿಲ್ಲ, ನಮಗೂ ಇರಲಿಲ್ಲ.
ಎಲ್ಲೋ ಕೇಳಿದ್ದನ್ನ, ನೋಡಿದ್ದನ್ನ ಬಳಸಿ ಇಂತದ್ದೊಂದು ವಿಚಾರ ಹೊಳೆದಿರುತ್ತೆ.
ಅದರ ಬದಲು,
ವಿಶ್ವಾಸ ನಂಬಿಕೆಗಳನ್ನೇ ಬುದ್ದಿಯ ತುಂಬಾ ತುರುಕಿದರೆ ಹೆಂಗಿರ್ಬೋದು...!
ನಮ್ಮ ಮಕ್ಕಳನ್ನ
ಬೆಳೆಸುವಾಗಲೇ ಯಾಕಿಂತದ್ದೊಂದಿಷ್ಟು ತಲೆಯಲ್ಲಿ ತುಂಬುತ್ತೇವೆ?
ಈಗಲೂ ನನಗೆ
ಯಾರನ್ನಾದ್ರೂ ನಂಬುವುದಕ್ಕೂ ಮೊದಲು ಎರಡನೇ ಬಾರಿ ಯೋಚಿಸುವಂತಾಗುತ್ತೆ.
ಅದೆಷ್ಟೋ ಬಾರಿ
ಯೋಚಿಸಿ ಮರುಗುವುದುಂಟು,
ಆ ಗಿಳಿಯ ಘಟನೆಗಿಂತ
ಮೊದಲು ಜನರನ್ನು ಕಣ್ಮುಚ್ಚಿ ನಂಬುತ್ತಿದ್ದಂತೆ, ನಂಬುವಂತಿದ್ದಿದ್ದರೆ...!
ಹಿಂದಿನ ಕಾಲಕ್ಕೂ
ಈಗಿನ ಕಾಲಕ್ಕೂ ಬದಲಾವಣೆಯ ಬಗ್ಗೆ ಮಾತಾಡುತ್ತಿರುತ್ತೇವೆ.
"ಹಿಂದೆ
ರುಪಾಯಿಗೆ ನಲವತ್ತು ತೆಂಗಿನ ಕಾಯಿ ಬರ್ತಿತ್ತು, ಈಗ ನೂರು ರುಪಾಯಿಗೆ ನಾಲ್ಕು ಕಾಯಿ ಬಂದ್ರೆ ಹೆಚ್ಚು"
ಅಂತೇವೆ,
"ಹಿಂದೆ
ಪಡಸಾಲೆಯ ತುಂಬಾ ಜನ ಕೂತು ಊಟ ಮಾಡಿ, ಸಂಜೆಯವರೆಗೆ ಚಾವಡಿಯ ಮೇಲೆ ಕುಳಿತು ಮಾತಾಡಿದರೂ,ಕುಟುಂಬದ ಒಬ್ಬಬ್ಬರ
ಬಳಿಯೂ ಇನ್ನೂ ಮಿಕ್ಕುವಷ್ಟು ಮಾತು ಉಳಿಯುತ್ತಿತ್ತು.." ಅನ್ನುತ್ತಾ ನಮ್ಮ ಕಾಲಕ್ಕೂ ಹಿಂದಿನ
ಕಾಲಕ್ಕೂ ವ್ಯತ್ಯಾಸ ಹೇಳಬಹುದಲ್ಲವಾ?
"ಇವತ್ತು
ಬಸ್ ತಪ್ಪಿ ಆಟೋದಲ್ಲಿ ಬಂದೆ ಮಾರಾಯ, ಇಪ್ಪತ್ತು ರೂಪಾಯಿ ಲಾಸ್ ಆಯ್ತು" ಅನ್ತೇವೆ.
"ಇವತ್ತು
ಬಸ್ ತಪ್ಪಿ ಆಟೋದಲ್ಲಿ ಬಂದೆ ಮಾರಾಯ, ತಡವಾಗಿದ್ರಿಂದ ಇಪ್ಪತ್ತು ನಿಮಿಷ ಸಂತೋಷವಾಗಿ ಮಾತಾಡೋ ಕ್ಷಣಗಳು
ತಪ್ಪೋಯ್ತು" ಅನ್ನೋದಿಲ್ಲ ನಮ್ಮ ಪುಟ್ಟ ಮಗುವಿನೆದ್ರು. ಯಾಕೇಂದ್ರೆ ನಮ್ಗೇನೆ ಕೇಳೋದಕ್ಕೆ ಫ಼ನ್ನಿಯಾಗಿದೆ
ಇದು...!
ನಮಗೇನಿದ್ದರೂ
ಹಣವೇ ಮಾಪಕ.
ಹಣ ಮಾಪಕವಾಗಿರುವವರೆಗೆ
ಹಣ ಮಾಪಕವಾಗಿರುತ್ತೆ. ನಾವು ವರ್ತಿಸಿದಂತೆ ಇವೆಲ್ಲಾ.
ಇವತ್ತೇ ಒಂಚೂರ್ಚಾರಾಗಿ
ನಾವೇ ಅಳ್ವಡಿಸಿಕೊಂಡ್ರೆ ಇವೆಲ್ಲಾ ಸಾಧ್ಯ.
ಯಾಕೋ ಎಕ್ಸಾಮ್-ಮಳೆ
ಇವೆರ್ಡು ಒಂದಾದಾಗ ನಂಗಾಗೋ ಕಳವಳ-ತಳಮಳನ ಹೊರಹಾಕಣ ಅನ್ನಿಸ್ತು...!
ಮೇಲಾಗಿ ಮೋದಿ
ಸರ್ಕಾರ ಬೇರೆ ಬಂದು, ನಮ್ ದೇಶದಲ್ಲೂ ಬದಲಾವಣೆ ಸಾಧ್ಯ ಅಂತ ಗೊತ್ತಾಗಿದೆ, ಭಾವನಾತ್ಮಕವಾಗಿಯೂ ನಮ್ಮ
ಜನ ಬದಲಾಗ್ತಾರೆ, ನಾನು ಬದ್ಲಾಗ್ತೀನಿ ಅನ್ನೋ ಸಣ್ಣ ಆಸೆ ನನ್ದು...!!