ನನ್ನುಸಿರ ಉಸಿರಾಡೋಣ ಬಾ ಗೆಳತಿ...!


ಪ್ರೀತಿಯ ಹುಡುಗೀ...!


     ಮೊನ್ನೆ ನಾ ಹುಟ್ಟಿದ್ದ ಮನೆಗೆ ಹೋಗಿದ್ದೆ. ಬೆಚ್ಚಗಿನ ಆಳೆತ್ತರದ ಮರಗಳು ಸೂರ್ಯನಿಗೆ ಅಡ್ಡಲಾಗಿ ನಿಂತು, ಜುಳುಜುಳನೆ ಹರಿಯುವ ನೀರು,ನಿಶ್ಶಬ್ಧ ಮನೆಯ ತುಂಬಾ ತನ್ನದೇ ರೀತಿಯಲ್ಲಿ ಸಂಗೀತ ತುಂಬುವ ಮನೆ ಅದು...!

      ಒಮ್ಮೆ ನಿಂತು ಮನೆಯ ನೆಲದ ಮೇಲಿದ್ದ ಧೂಳನ್ನು ಸ್ಪರ್ಶಿಸಿ ನೋಡಿದೆ. ನನ್ನದೆನಿಸಿತು ಒಂದು ಕ್ಷಣ. "ಎಂತ ಮಾಡ್ತಿದ್ಯ ಪುಂಡ ಮಣ್ಣು ಮೂಸ್ತಾ...?" ಅಂದರು ನನ್ನ ಹಿರಿಯಪ್ಪ. ಅವರೇ ನನ್ನ ಎತ್ತಾಡಿಸಿದವರು. ಪೆದ್ದುಪೆದ್ದಾಗಿ ಉತ್ತರಿಸಿ ಅಲ್ಲಿಂದ ತಪ್ಪಿಸಿಕೊಂಡೆ.
                                                                                                                                       ನಿನ್ನೊಮ್ಮೆ ಅಲ್ಲಿಗೆ ಕರೆದುಕೊಂಡು ಹೋಗಬೇಕು ಚಿನ್ನಾ. ನಾ ಮೊದಮೊದಲು ಉಸಿರಾಡಿದ ಆ ಗಾಳಿಯಿನ್ನೂ ಅಲ್ಲೇ ಎಲ್ಲೋ ಹಾರಾಡುತ್ತಿದೆ. ಅಂಗೈಯಲ್ಲಿ ಹಿಡಿದು ಒಮ್ಮೆ ನಾವಿಬ್ಬರೂ ಒಟ್ಟಿಗೆ ಉಸಿರಾಡೋಣ...!,ಅದೇ ಗಾಳಿಯನ್ನು..
ಸಂಜೆಯಾದರೆ ಸಾಕು, ದಿನವಿಡೀ ಹರಿವ ನೀರು,ಮತ್ತಷ್ಟು ಸ್ಪಶ್ಟವಾಗಿ, ಮತ್ತಷ್ಟು ಮಂದವಾಗಿ ಹರಿಯುತ್ತದೆ. ಒಮ್ಮೆ ಕಣ್ಮುಚ್ಚಿ ಕುಳಿತರೆ ಸಾಕು. ಮೆಲ್ಲನೆ ಅಮ್ಮ ಸಂಜೆ ಕೆಲಸ ಮಾಡುತ್ತಾ ಗುನುಗುನಿಸುವ ಯಾವುದೋ ಹಾಡಿನ ಭಾಗದಂತೆ ಕೇಳುತ್ತೆ, ಆ ಹರಿವ ನೀರು.

    ಸದ್ದು ಮಾಡುತ್ತಾ ಮನೆಯ ತುಂಬೆಲ್ಲಾ ಆವರಿಸಿ, ನಾ ಸುಮ್ಮನೇ ಸಂಜೆಯಲ್ಲಿ ಕುಸುಕುಸು ಶುರು ಮಾಡುವಾಗ ನನ್ನ ಸುಮ್ಮನಾಗಿಸುತ್ತಿತ್ತಂತೆ ಆ ತಣ್ಣನೆಯ ಹರಿವ ನೀರಿನ ಶಬ್ಧ. ಮತ್ತೊಮ್ಮೆ ನಿನ್ನ ತೆಕ್ಕೆಯಲ್ಲಿ ಸೇರಿ ಆ ನೀರಿನಲ್ಲಿ ಕಾಲುಬಿಟ್ಟು ಕೂರುವ ಆಸೆ ನಂದು..!

      ಇನ್ನೇನು ಸಂಜೆ ಇನ್ನಷ್ಟು ಆವರಿಸಿತೆನ್ನುವಾಗ ಸುತ್ತೆಲ್ಲಾ ಹಾಲು ಚೆಲ್ಲಿದಂತೆ ಹಾಜರಾಗುವುದು ಬೆಳದಿಂಗಳು. ಕ್ಷಣಕ್ಷಣಕ್ಕೂ ಒಂದೊಂದೇ ಹೆಜ್ಜೆ ಇಡುತ್ತಾ, ಬೆತ್ತಲಿರುವ ಎಲ್ಲವನ್ನೂ ಬಯಲು ಮಾಡುವ ಹುರುಪು ಅದರದ್ದು..! ಅಂಗಳದಲ್ಲಿ ಬೆಳಿಗ್ಗೆ ಹಾಕಿರುವ ರಂಗೋಲಿ, ಮೆಟ್ಟಿಲ ಮೇಲಿಟ್ಟ ಹೂವಿನ ಕುಸುಮಗಳು, ಸಂಜೆಗೆ ಜಾರಿದ ಇಬ್ಬನಿಯ ಹನಿಗಳು, ನಾವಿಬ್ಬರೂ ಮಲಗಿರುವ ಮಂಚ, ನಿನ್ನ ಬಾಚಿ ತಬ್ಬಿರುವ ನನ್ನ ಮುಂಗೈಯ ಬೆರಳುಗಳು, ಕೆಂಪಗಿನ ನಿನ್ನ ಕೆನ್ನೆ, ಎಲ್ಲವನ್ನೂ ಬೆತ್ತಲಾಗಿಸುತ್ತೆ ಬೆಳದಿಂಗಳು...

    ಈ ಬೆಳದಿಂಗಳು,ಈ ಸಂಜೆ, ಈ ಹರಿವ ನೀರ ಹಿನ್ನೆಲೆ ನಾದದ ಬಗ್ಗೆ ಹಿರಿಯಪ್ಪ ನಗುತ್ತಾ ಒಂದು ಮಾತಾಡುತ್ತಾರೆ. "ಇವೆಲ್ಲದರಿಂದಲೇ ನಾಲ್ಕು ಆಗಿದ್ದು ಗೊತ್ತಾಗಲೇ ಇಲ್ಲ..!", ಅವರು ಮಕ್ಕಳ ಬಗ್ಗೆ ಮಾತಾಡುತ್ತಿದ್ದರೆಂದು ಕ್ಷಣ ಕಾಲದ ನಂತರ ತಿಳಿಯಿತು...!


     ನಿನ್ನೊಮ್ಮೆ ಬಿಗಿದಪ್ಪಿ ನನ್ನವನನ್ನಾಗಿಸಿಕೊಳ್ಳಬೇಕು ಅಲ್ಲಿ. ನನ್ನ ಪ್ರತಿ ಕಣಕಣವೂ ಬದುಕಿರುವಲ್ಲಿ, ನಿನ್ನೊಮ್ಮೆ ದೀರ್ಘವಾಗಿ ಚುಂಬಿಸಬೇಕು, ನಾ ಮೊದಲು ಉಸಿರಾಡಿದ ಜಾಗದಲ್ಲಿ ಉಸಿರನ್ನೊಮ್ಮೆ ಕಟ್ಟಿ...! ಅಂಗೈಯಲ್ಲಿ ನಿನ್ನ ಅಂಗೈ ಇಟ್ಟು ಕ್ಷಣಕಾಲ ಕಣ್ಮುಚ್ಚಿ ಪೆದ್ದುಪೆದ್ದಾಗಿ ಏನೇನೋ ಬಡಬಡಿಸಿ, ನೀ ಅಲ್ಲೇ ನಿದ್ರೆಗೆ ಜಾರಿದಾಗ, ನಿನ್ನ ಹಣೆಗೊಮ್ಮೆ ತುಟಿಯೊತ್ತಿ, ಎದೆಗಾನಿಸಿಕೊಂಡು ರಾತ್ರಿ ಪೂರ್ತಿ ಕಳೆವ ಸಣ್ಣ ಆಸೆ ನಂದು...