ಬಹುಶಃ ಈ ರೀತಿ ಕರೆಯುವ ಹಕ್ಕು ನಾನೇ ಕಳೆದುಕೊಂಡಿದ್ದೇನೆ. ಪ್ರತೀ ಹುಡುಗನ ಬದುಕಿಗೊಂದು ಅಚ್ಚುಕಟ್ಟುತನ,
ಚೌಕಟ್ಟು ಹಾಗೂ ಅರ್ಥ ತಂದುಕೊಡುವವಳು ಮೊದಲ ಹುಡುಗಿ. ಹಾಗಾಗಿಯೇ
ಮೊದಲ ಸಲ ಪ್ರೇಮವಾದಾಗ ಮನಸ್ಸು ಶುಭ್ರವಾಗುತ್ತೆ, ಉದ್ದೇಶ ನಿಲ್ಕ್ಮಷವಾಗಿರುತ್ತೆ.
ನಂತರ ಮತ್ತೆ ಬೇರೊಬ್ಬಳ ಮೇಲೆ ಹುಟ್ಟುವುದು ಒಲವಲ್ಲ, ಕೇವಲ
ಹೊಂದಾಣಿಕೆ,ಪ್ರೀತಿಯ ರಂಗು ತೊಡಿಸಿ ಬದುಕುತ್ತೇವೆ ಅಷ್ಟೇ. ಅಂಥಾ ಮೊದಲ ಪ್ರೀತಿ ತಂದವಳು ನೀನು. ಆದರೇಕೋ ಒಲವು ಜಾಸ್ತಿಯಾಗಿ
ಕಮರಿಹೋಯಿತು ನಮ್ಮ ಸಂಬಂಧ.
ಎಲ್ಲಾ ಪ್ರೀತಿಯಾಗಿರದ ಹುಡುಗರಂತೆ ನನಗೂ ಪ್ರೀತಿಯೆಂದರೆ ಅಷ್ಟಕಷ್ಟೇ, ನೀ ಬಂದ ದಿನದವರೆಗೆ ಮಾತ್ರ. ಬದುಕಿಗೊಂದು ಚಂದವೆನಿಸುವ ಅರ್ಥ ತಂದುಕೊಟ್ಟವಳು ನೀನು. ಅತ್ತ
ತೀರಾ ಬಡವರೂ ಅಲ್ಲದ, ಶ್ರೀಮಂತರೂ ಅಲ್ಲದ ಕುಟುಂಬ ನನ್ನದು. ಹೇಳಿಕೊಳ್ಳಬಹುದಾದಂಥ ನೋವಾಗಲೀ, ಹಂಚಿಕೊಳ್ಳಬಹುದಾದಂಥ ಖುಷಿಯಾಗಲೀ
ಇರದ ತೀರಾ ಮಾಮೂಲಿ ಬದುಕುಗಾಗಿತ್ತು ನನ್ನದು.
ನಂಬು ಗೆಳತೀ!!, ನೀ ಕಲಿಸಿಕೊಟ್ಟ ದಾರಿಯಲ್ಲಿ ಬದುಕಿ, "ಹಿಂಗೂ ಬದುಕಿದ್ದೆನಾ.."
ಅಂತನಿಸುತ್ತೆ, ಹಳೆಯದೆಲ್ಲಾ ಕೆದಕಿಕೊಂಡು ಕೂತರೆ.!
ಇನ್ನೂ ನೆನಪಿದೆ ನನಗೆ. ಅದೇ ಆ ನಮ್ಮೂರ ನದೀ ತೀರ, ಹಾಗೂ ಅದರ ಬಳಿ ಸುಮ್ಮನೇ ತಪಸ್ವಿಯಂತೆ
ಕೂತಿದ್ದ ನೀನು. ಅದೊಂದೇ ನೆನಪಿರುವುದು, ನನ್ನವಳಲ್ಲದ
ನಿನ್ನ ಬಗ್ಗೆ. ಸದ್ದಿಲ್ಲದೇ ಜೊತೆಯಾಗಿ ಬಿಟ್ಟೆ. ದಿನದಿನವೂ ಬದಲಾದೆ ನಿನ್ನೊಡನಾಟದಲ್ಲಿ. ಅದೊಂದು ದಿನ ಅಮ್ಮ,
ರಾತ್ರಿ ಇನ್ನೇನು ಮಲಗಬೇಕೆನ್ನುವಷ್ಟರಲ್ಲಿ ಬಂದು, "ಯಾರೋ ಅವಳು..." ಎಂಬಂತೆ ನೋಟ ಬೀರುತ್ತಾ,
"ಏನೂ ಸಾಹೆಬರು ಭಾರೀ ಖುಷಿಯಾಗಿರ್ತಾರಲ ಇತ್ತೀಚೆಗೆ...!" ಅಂದಿದ್ದಳು. ಅಮ್ಮನ ತೊಡೆ ಮೇಲೆ ಮಲಗಿಬಿಟ್ಟೆ ಹುಡುಗೀ ಅವತ್ತು.
ಐದನೇ ವರ್ಷದ ನಂತರ ಅಮ್ಮನನ್ನು ಮುಟ್ಟಲೂ ಕೂಡ ಅದೇನೋ ಹುಚ್ಚು ಹಮ್ಮು ತಡೆಯುತಿತ್ತು
ನನಗೆ. "ದೊಡ್ಡವನು ನಾನೀಗ.." ಎಂಬಂಥ
ಸೊಕ್ಕು. ಅವತ್ತಿನಿಂದ ಅಮ್ಮನ ಮಡಿಲಲ್ಲಿ ಮತ್ತೆ ಮಗುವಾಗಿಬಿಟ್ಟಿದ್ದೆ.
"ಮ್ಮಾ.. "
"ಹೇಳು ಬಂಗಾರ! ಏನು ಹೆಸರು
ಅವಳದ್ದು" ಧಡಕ್ಕನೆ ಎದ್ದು ಕೂತು, ’ಹೇಗೆ
ತಿಳಿಯಿತಮ್ಮಾ ಇವೆಲ್ಲಾ’ ಎಂಬಂತೆ ನೋಡುತ್ತಿದ್ದ ನನ್ನನ್ನು ಮತ್ತೆ ಮಡಿಲಿನಲ್ಲಿ
ಮಲಗಿಸಿಕೊಂಡು, ’ಅಯ್ಯೋ ಹುಚ್ಚಾ, ನಿನ್ನಮ್ಮ ಕಣೋ
ನಾನು. ನಿನ್ನ ಬಗ್ಗೆ ನೀನು ತಿಳಿದುಕೊಳ್ಳೋದಕ್ಕೂ ಮೊದಲೇ ನನಿಗೆ ನಿನ್ನ
ಬಗ್ಗೆ ಗೊತ್ತಿತ್ತು ರಾಜ’ ಎನ್ನುವಂತೆ ಮೈದಡವಿದಳು.
"ನಿನ್ನದೇ ಹೆಸರು ಕಣಮ್ಮಾ...!ಆದರೆ ನಿನ್ನಷ್ಟು ಸುಂದರಿಯಲ್ಲ."
ಅಮ್ಮ ಒಮ್ಮೆ ನಕ್ಕಂತೆ ನಕ್ಕು ಮತ್ತೆ ಮಾಮೂಲಿನಂತೆ ತನ್ನ ಮುಗುಳ್ನಗೆಯ
ಮುಖಕ್ಕೆ ವಾಪಸ್ಸು ಬಂದಿದ್ದಳು.
ಅಮ್ಮ ’ನಾನಿರುವೆನು’
ಎಂಬಂತೆ ಕಣ್ಣಿನಲ್ಲೇ ಧೈರ್ಯ ಸೂಚಿಸಿ, ಕ್ಷಣಕಾಲ ಕಣ್ಮುಚ್ಚಿದಾಗ
ಬಿದ್ದ ಕಣ್ಣಿರ ಹನಿಯಲ್ಲಿ, ವಯಸ್ಸಿನ ಅಹಮ್ಮಿನಲ್ಲಿ ದೂರಾಗಿದ್ದ ಮಗನನ್ನು ಮರಳಿ ಪಡೆದ ಖುಷಿ ಹಾಗೂ
ಮರಳಿ ತಂದುಕೊಟ್ಟ ನಿನ್ನನ್ನು ಸೊಸೆಯಾಗಿ ಸ್ವೀಕರಿಸಿದ ನಿರ್ಧಾರವಿತ್ತು.
ಅದರ ಮರುದಿನವೇ ಅಮ್ಮನ ಅಣತಿಯಂತೆ, ಕೈಬೆರಳಿನಂಚಿನಲ್ಲಿ ಒಂಚೂರು ಕುಂಕುಮವನ್ನು ಸೀದಾ ನಿನ್ನ ಹಣೆಗೇರಿಸಿದ್ದೆ. ಕಣ್ತುಂಬಿಕೊಂಡು ನನ್ನ ನೋಡಿದ್ದ ನೀನು, ಮರುಕ್ಷಣ ನನ್ನ ಕೈಹಿಡಿದುಕೊಂಡು
ಓಡಿಸಿಕೊಂಡು ಹೋಗಿದ್ದೆ. ಜನರಿಲ್ಲದ ಜಾಗಕ್ಕೆ ಹೋಗಿ ದೇಹಗಳಿಗೂ ಪರಸ್ಪರ
ಪರಿಚಯ ಮಾಡಿಸುವ ಇರಾದೆ ನಿನ್ನದೆಂದು ತಿಳಿದು, ನನ್ನ ದೇಹದ ವಾಂಛೆಗಳು ಜಾಗೃತಗೊಂಡಿದ್ದವು.
ಆದರೆ ನೀ ತಂದು ನಿಲ್ಲಿಸಿದ್ದು ಸೀದಾ
ಆ ಅನಾಥಾಶ್ರಮದ ಎದುರು. "ಇಲ್ಲಿ ಚಂದ್ರು ಅಂತ ಒಂದು ಪಾಪು ಇದೆ.
ಅದನ್ನೇ ದತ್ತು ತಗೋಳೋಣ" ಎಂದುಸುರಿದ್ದೆ ನೀನು.
ಮರುಮಾತಿಗೆ ಅವಕಾಶ ನೀಡದೇ ಸೀದಾ ಆ ಚಂದ್ರುವಿನ ಮುಂದೆ ತಂದು ನಿಲ್ಲಿಸಿದ್ದೆ.
ನಂತರವೇ ನನಗೇ ತಿಳಿದಿದ್ದು, ಚಂದ್ರುವಿಗಿನ್ನೂ ಆರು ತಿಂಗಳು. ಯಾರೋ ವಾಂಛೆ ತೀರಿಸಿಕೊಂಡ ಫಲವಾಗಿ
ಜನಿಸಿದ್ದವನೆಂದು.
ಇಷ್ಟೆಲ್ಲಾ ಗಡಿಬಿಡಿಯನ್ನ ನೋಡಿ, "ಅಮ್ಮಾವ್ರು ನಾನು ಕುಂಕುಮವನ್ನೇರಿಸುವದಷ್ಟಕ್ಕೇ
ಕಾಯುತ್ತಿದ್ರೇನೋ..!", ಕಿವಿಯಲ್ಲಿ ಉಸುರಿದ್ದೆ ಆತ್ಮದಷ್ಟು ಸನಿಹ ನಿಂತು.
ಕ್ಷಣಕಾಲ ನಾಚಿಕೆಯಿಂದ ಕಣ್ಮುಚ್ಚಿದ್ದ ನೀನು, ಕಣ್ತೆರೆದು ನನ್ನನ್ನೇ ದಿಟ್ಟಿಸಿ,
"ನೂರಾರು ಹುಣ್ಣಿಮೆಗಳಲ್ಲಿ ಚಂದ್ರನನ್ನೇ ದಿಟ್ಟಿಸಿ ನೋಡಿ, ಎದೆಯೊಳಗೆ ಕನಸ ಕೂಸಿಗೆ ಜನ್ಮವಿತ್ತಿದ್ದೆ.
ಇತ್ತೀಚೆಗೆ ಗೊತ್ತಾಗಿಹೋಗಿತ್ತು, ಆ ನನ್ನ ಕನಸ ಹೆಸರು ನಿನ್ನದೇ ಅಂತ" ಕೊನೆಯ ಪದ ಹೇಳುವಾಗ
ನಿನ್ನ ಕಣ್ಣಂಚು ಮಿಂಚುತಿತ್ತು.
ನಂಬು ಹುಡುಗೀ, ಅದೊಂದು ಕ್ಷಣಕ್ಕೋಸ್ಕರ ಪ್ರತೀ ಹುಡುಗನ ಹೃದಯ ಮಿಡಿಯುವುದು.
ನಿನ್ನ ಕಣ್ಣಲ್ಲಿ ನನ್ನೆಡೆಗೊಂದು ಹೆಮ್ಮೆ ಇತ್ತು. ’ನೀ ಸಿಕ್ಕಾಯಿತಲ್ಲ ಹುಡುಗ, ಇನ್ನೇನು ಬೇಕಿದೆ
ನನಗೆ ಈ ಬದುಕಲ್ಲಿ’ ಅನ್ನುವಂತೆ ದಿಟ್ಟಿಸಿ ನೋಡುತಿದ್ದೆ. ಅದಾಗಲೇ ನನ್ನ ಮನ ನಿನ್ನೊಂದಿಗೇ ಮುದುಕನಾಗುವ
ಕನಸು ಕಟ್ಟಿತ್ತು, ನಿನ್ನ ತೋಳಿನ್ನಲ್ಲಿ ಬಿದ್ದ ಮೊದಲ ಕ್ಷಣದಲ್ಲೇ.
ಸಣ್ಣವನಿದ್ದಾಗ ಅಪ್ಪ ಮನೆಯಿಂದ ಹೊರಗೆ ಹೊರಟರೆ ಸಾಕು, ಯೋಗಿಯಂತೆ ಕೂತುಬಿಡುತಿದ್ದೆ,
ಮನೆಯ ಜಗುಲಿಯಲ್ಲಿ, ಅಪ್ಪ ಬರುವಾಗ ತರುವ ತಿಂಡಿಗಾಗಿ ಕಾಯುತ್ತಾ. ಆ ಕಾತರ, ಅದೇ ಉತ್ಸಾಹ, ಅದೇ ಒಲವಿನಿಂದ
ಕಾಯುತಿದ್ದೆ ನಿನಗಾಗಿ, ಅದೊಂದು ಸಂಜೆಯವರೆಗೆ, ಅದಾದ ನಂತರವೂ ಕಾಯುತ್ತಿರುವೆ, ನೀನೂ ಬರುವೆ ಆಗಾಗ,
ಆದರೆ ನಾವಿಬ್ಬರೂ ನಾವಾಗಿ ಉಳಿದಿಲ್ಲ.
ಅಂದು ನಮ್ಮಿಬ್ಬರ ಸಂಬಂಧಕ್ಕೆ ಹೆಸರಿಟ್ಟು ಭರ್ತಿ ಒಂದು ವರ್ಷವಾಗಿತ್ತು.
ಏನಾಗುತ್ತಿದೆಯೆಂದು ತಿಳಿಯುವುದಕ್ಕೂ ಮೊದಲೇ ನೀ ಕಣ್ಣೀರಾಗಿದ್ದೆ, ನನ್ನ ಕೋಪ ತಹಬದಿಗೆ ಬರುವುದಕ್ಕೂ
ಮೊದಲೇ ನಿನ್ನ ಹೆಗಲ ಮೇಲೆ ಆ ಆಗುಂತಕನ ಕೈ ಇತ್ತು.
ತಣ್ಣಗಾಗಿದ್ದ ನನ್ನ ಮನ ನಿನ್ನ ಕಣ್ಣಲ್ಲಿ ನೀರ ತರಿಸಿದ್ದಕ್ಕೆ ನಿನ್ನಿಂದ
ದೂರಾಗುವುದೇ ಶಿಕ್ಷೆಯೆಂದು ತೀರ್ಪಿತ್ತು, ದೂರದಿಂದ ನಿನ್ನ ನೋಡಿ ಸುಮ್ಮನಾಗಿತ್ತು ನನ್ನ ಮನ. ಅದ್ಯಾವುದೋ
ದಿವ್ಯಮೌನಕ್ಕೆ ಶರಣಾಗಿದ್ದೆ ನಾನು.
ಈಗ ನೀ ಆಗಾಗ ಅದೇ ಸಂಜೆಗಳಲ್ಲಿ ಬಂದು ಅದೇನೋ ಹುಡುಕುವೆ ನೀನು. ನನಗೇ ಹುಡುಕುತ್ತಿರುವೆಯೆಂದು
ತಿಳಿದೂ ಸುಮ್ಮನಿರುವೆ ನಾನು ಮರೆಗಳ ಹಿಂದೆ. ಆಗಾಗ ನಿನ್ನ ಜೊತೆ ಬರುವ ನಿನ್ನವನಾಗಿದ್ದ ಆ ಆಗುಂತಕ,
ಅವನ ಜೊತೆಗಿನ ನಿನ್ನ ಒಡನಾಟ ನೋಡಿ, ನೀ ಖುಷಿಯಾಗಿರುವೆಯೆಂದು ನೆಮ್ಮದಿಯೇನೋ ಆಗತ್ತೆ.
ಆದರೆ ಖಾಲಿ ಬಾಹುಗಳು ನೆನಪಿಸುವ ನಿನ್ನ ನೆನಪಿನಿಂದಾಗಿ, ಆಟಿಕೆ ಕಳೆದುಕೊಂಡ
ಮಗುವು ಹತಾಶೆಯಿಂದ ನೋಡುವಂತೆ,ನಿನ್ನೆಡೆಗೆ ನೋಡುತ್ತೇನೆ. ಆದರೆಂದೂ ನಿನ್ನ ಉಸಿರಿನಲ್ಲಿ ತಲ್ಲಣಗಳ
ಹುಟ್ಟು ಹಾಕಲು ಬರುವುದಿಲ್ಲ ಗೆಳತಿ...
ಎಂದಿಂದಿಗೂ ನಿನ್ನ ಹೆಸರಲ್ಲಿ ದೀಪ ಹಚ್ಚುವವ..
Awesome... :-) neenu preethisuva hudugi nénage sigali yendu haraisuttene... :) :)
ReplyDeleteKeep writing.. :)
Thank you :)
Delete