ಸುಮ್ಮನೇ ಕುಳಿತವನು ಎರಡು ಸಾಲು ಬರ್ದುಬಿಟ್ಟೆ, ಮಳೆಯ ನೆನಪ ತಂದುಕೊಂಡು ಓದಿಕೊಳ್ಳಿ...!


ಹೆಂಚಿನ ಮಾಡಿನ ತುದಿಯನ್ನೇ ದಿಟ್ಟಿಸುತ್ತಾ
ಕುಳಿತವನನ್ನ ಬರಸೆಳೆದು ಬಿಗಿದಪ್ಪಿಕೊಂಡಿತು
ನಿನ್ನ ನೆನಪು...
ಅದೇ ಮೊದಲ ಮಳೆಯ ಸಂಜೆಯಲ್ಲಿ
ನಿನ್ನ ಆತ್ಮದಷ್ಟು ಹತ್ತಿರ ನಿಂತು,
ಕಿವಿಯಲ್ಲಿ ಬೆಚ್ಚಗೆ ಉಸುರಿದ್ದ ಆ
ಎರಡು ಅಕ್ಷರಗಳು..



ಇಬ್ಬರೂ ಜೊತೆಗೂಡಿ,
ಸಂಜೆ ಕರಗುವಷ್ಟರಲ್ಲಿ
ಮನತುಂಬುವಷ್ಟು ಮಾತಾಡಿ,
ನಿನ್ನ ಪಡೆದಿದ್ದಕ್ಕೆ ಒಮ್ಮೆ
ಹೆಮ್ಮೆಯಿಂದ ನಿನ್ನತ್ತ ನೋಡಿ,
ಕಣ್ಣಂಚಲ್ಲಿ ಜಾರುವ ಹನಿಯನ್ನು
ತುದಿಬೆರಳಲ್ಲಿ ಒರೆಸಿ,
ನಿನ್ನತ್ತ ನಗುವ ಆ ನಗುವೇ
ಹೇಳೀತು ಹುಡುಗಿ,
ಅದೆಷ್ಟು ಧನ್ಯನಾಗಿರುವೆ ನಾನೆಂದು...


ಮಳೆಯ ಹನಿ ಜಾರಿ ಒಂದೊಂದೇ
ಸರಿಯುವಾಗ, ಸದ್ದಿಲ್ಲದೇ ನಗುವಾಗುತ್ತೇನೆ..
ಕಣ್ಮುಚ್ಚಿ ತೋಳಲ್ಲಿ ನಿನ್ನ ಕಲ್ಪಿಸಿಕೊಂಡು,
ಒಮ್ಮೆಲೆ ಉಕ್ಕುವ ಒಲವಿನ ರಭಸಕ್ಕೆ
ನನ್ನ ನಾ ತೆರೆದುಕೊಂಡು,
ಬದುಕಿನ ಮೇಲೆ ಇನ್ನಿಲ್ಲದಷ್ಟು ಒಲವಾಗಿ,
ಮನ ಮುದ್ದಿಸಿಕೊಂಡ ಬೆಕ್ಕಿನಂತಾಗುತ್ತೆ.


ಸುಮ್ಮನೇ ಅತ್ತುಬಿಡಬೇಕೆನ್ನುವಂತೆ
ನಾ ನಿನ್ನ ಹೆಗಲಮೇಲೆ ಮುಖವೊಡ್ಡಿದಾಗ,
ಕೂದಲಲ್ಲಿ ಇಲ್ಲದ ಏನನ್ನೋ ಹುಡುಕುವ ನಿನ್ನ ಬೆರಳು,
ಮಡುಗಟ್ಟಿದ ದುಃಖವೆಲ್ಲಾ ಕರಗಿದ ಮೇಲೆ
ನಿನ್ನ ಹಣೆಯ ಸ್ಪರ್ಶಿಸುವಾಗ,
ನಿರಾಳತೆಯಿಂದ ನಡುಗುವ ನನ್ನ
ತುಟಿಗಳು ಹಾಗೂ ಮಳೆಯ
ನಂತರದ ತಣ್ಣನೆಯ ಗಾಳಿಯನ್ನು ಹೋಲುವ
ನಿನ್ನ ಕಣ್ರೆಪ್ಪೆಯ ಆ ಸಣ್ಣ
ಹಂದಾಡುವಿಕೆ...


                                                                    - ಶ್ರೀನಿಧಿ. ವಿ ನಾ

No comments:

Post a Comment