ಹುಡುಗೀ..!
ಇದೀಗಷ್ಟೇ ಬಸ್ ಹತ್ತಿ ಕೂತವನಿಗೆ ಕಂಡಿದ್ದು ಆ ದೃಶ್ಯ. ಬೆಳಿಗ್ಗೆ ಕೆಲಸಕ್ಕೇಂತ ಹೊರಟಿದ್ದ ಹೆಂಡ್ತೀನ ಬಸ್ಸಿಗೆ ಬಿಡೊಕೆ ಬಂದಿದ್ದ ಆ ಅಪರಿಚಿತ. ಸೋಮವಾರ ಬೆಳಿಗ್ಗೆಯಾದ್ದರಿಂದಲೋ ಏನೋ, ಸಹಜವಾಗಿ ಅದೆಂತೋ ಬೇಜಾರಿನಲ್ಲಿ, ಸ್ಕೂಲಿಗೆ ಹೋಗಲು ಹಠ ಮಾಡುವಂತ ಮಗುವಿನಂತೆ ನಿಂತಿದ್ದ ಆಕೆಗೆ, ಅದೇನೋ ಅವಳಿಗೆ ಮಾತ್ರ ಕೇಳುವಂತೆ ಹೇಳಿದ್ದ. ಅವಳು ಸ್ವಲ್ಪವೇ ನಕ್ಕಂತೆ ಮುಗುಳ್ನಕ್ಕು, ಕಣ್ಣಲ್ಲೇ ತನ್ನ ಪತಿಯನ್ನ ಮುದ್ದಿಸಿದ್ದಳು. ಬಸ್ಸಿನ ಕಿಟಕಿಯಲ್ಲಿ ಎಲ್ಲವನ್ನ ನೋಡುತಿದ್ದ ನಾನು, ಅದೆಂತೋ ಹೇಳಲಾರದ ಭಾವದಲ್ಲಿ, ಒಮ್ಮೆ ನಿಟ್ಟುಸಿರು ಬಿಟ್ಟು, ನನ್ನ ನಾನೇ ಅಪ್ಪಿಕೊಂಡೆ. ನನ್ನ ತುಟಿಯಂಚಿನಲ್ಲಿ ಸಣ್ಣಗೆ, ಐಸ್ ಕ್ಯಾಂಡಿ ಮಾರುವ ಅಂಗಡಿಯವನನ್ನ ಕಂಡು ನಗುವಂತ, ಮಗುವಿನ ಮುಗುಳ್ನಗುವಿನಂತೆ ನಗು...!

ಪಕ್ಕದಲ್ಲಿ ಕೂತಿದ್ದ ಮಧ್ಯವಯಸ್ಸಿನ ಮಹಿಳೆ, "ಯಾರಾದ್ರೂ ನೆನಪಾದ್ರೆನಪ್ಪಾ...!" ಅನ್ನುವಂತೆ ನನ್ನೇ ದಿಟ್ಟಿಸುತ್ತಿದ್ದರು.! "ಹೂಂ,ನನ್ನ ಹುಡುಗೀನೂ ಹಿಂಗೇ...!" ಅಂತ ಹೇಳೊಕೆ ಹೋದವನು,ಸುಮ್ಮನಾದೆ. ನಿನ್ನ ಬಗ್ಗೆ ಹೇಳಿ, ನಾವಿಬ್ಬರೂ ಕ್ಷಣಕಾಲ ದೂರಾದರೂ ನೀ ತೋರುತ್ತಿದ್ದ ವಿಚಿತ್ರ ನಡವಳಿಕೆಯನ್ನೆಲ್ಲಾ,ಪಕ್ಕದಲ್ಲಿ ಕೂತವರಿಗೆ ಹೇಳಿ ನಗುವ ಮನವಾಯಿತಾದರೂ, ಅದೆಲ್ಲೋ ದೂರದಲ್ಲಿದ್ದರೂ ನಿನಗೆ ಗೊತ್ತಾದಿತೆಂಬ ಹುಚ್ಚು ಕಲ್ಪನೆಯಲ್ಲಿ ಸುಮ್ಮನೆ ಕುಳಿತೆ. ನಿನ್ನ ನೆನಪಿಗೆ ನನ್ನ ಆವರಿಸಿಕೊಳ್ಳಲು ಬಿಟ್ಟು, ಸುಮ್ಮನೆ ಕಣ್ಮುಚ್ಚಿದೆ.

"ಲೋ ಹೋಗ್ಲೇಬೇಕೇನೋ...!" ಎನ್ನುವಂತೆ ನೋಡುತ್ತಾ ಕುಳಿತಿದ್ದೆ ನೀನು. ಇನ್ನೇನು ಬಸ್ಸಿಗೆ ಐದು ನಿಮಿಷ, ಕಣ್ತುಂಬಾ ಕಣ್ತುಂಬಿಸಿಕೊಳ್ಳುವ ಆತುರದಲ್ಲಿ ನಾನು, ನಿನ್ನೇ ದಿಟ್ಟಿಸುತ್ತಿದ್ದೆ. "ಮರ್ತುಬಿಡ್ಬೇಡ್ವೋ ನನ್ನ..!", ಗೊಣಗಿದಂತೆ ಉಸುರಿದ್ದೆ ನೀನು. ಗಂಟಲಿನಲ್ಲಿ ಸಣ್ಣಗೆ ಗಂಟಾದ ಎಂಜಲು ನುಂಗಿ, "ಹುಚ್ಚೀ!! ನನ್ನ ಹತ್ತು ಮಕ್ಕಳ ತಾಯಿ ನೀನು, ನಿನ್ನ ಹೆಂಗ್ ಮರಿಲಿ ಹೇಳು.." ಎಂದುಸುರಿದ್ದೆ. "ಮೆತ್ತಗೆ ಹೇಳೊ ಕಪಿ, ಯಾರಾದ್ರೂ ಕೇಳಿದ್ರೆ..." ಒಂದು ಕ್ಷಣ ಎಲ್ಲವನ್ನ ಮರ್ತು ಸುತ್ತಮುತ್ತ ಗಾಬರಿಯಿಂದ ನೋಡಿದ್ದೆ ನೀನು. 
"ಕೇಳ್ಲಿ ಬಿಡು, ಒಂದಿನ ಆಗದೇ ತಾನೇ..!" ಅಲ್ಲಿಗೆ ಬಾಯಿ ಮುಚ್ಚಿದ್ದೆ ನೀನು.  

"ಅದ್ಯಾವುದೋ ತಿರುವಿನಲ್ಲಿ, ಪ್ರೀತಿಯುಕ್ಕಿಸುವ ಸಂಜೆಯಲ್ಲಿ, ನನ್ ಪಾಡಿಗೆ ನಾ ಹೋಗ್ತಿರುವಾಗ, ಅದೆಲ್ಲಿಂದಲೋ ಪ್ರತ್ಯಕ್ಷ್ಯಳಾಗಿದ್ದೆ ನೀನು. ಮೊದಲ ಬಾರಿ ಸಿಕ್ಕಾಗಲೇ ಅಪ್ಪಿಕೊಂಡು,ದೂರಾಗಲು ಬಿಡಬಾರದಿತ್ತೆಂದು ಅವತ್ತು ರಾತ್ರಿ ಚಡಪಡಿಸಿದ್ದೆ. ಮರುದಿನ ಮತ್ತೆ ಸಿಕ್ಕಿದರೆ, ಬೇರೆನೂ ಹೇಳದೇ ನಿನ್ನ ಗಟ್ಟಿಯಾಗಿ ತಬ್ಬಿಕೊಂಡು, ನಾಲ್ಕೈದು ಜನ್ಮಕ್ಕಾಗುವಷ್ಟು ಪ್ರೀತಿಯನ್ನ ಅನುಭವಿಸಿಬಿಡಬೇಕೆಂದು ನಿಶ್ಚಿಸಿದ್ದೆ. ಮರುದಿನ ಅಲ್ಲೇ ಸಿಕ್ಕಾಗ, ಅದ್ಯಾಕೋ ಹಿಂಜರಿಯುತ್ತಿದ್ದ ನನ್ನ, ಕೊರಳ ಬಾಚಿ, ಜನ್ಮಜನ್ಮದ ಪರಿಚಿತರಂತೆ ತಬ್ಬಿದ್ದೆ ನೀನು. ಕ್ಷಣಮಾತ್ರದ ಈ ಘಟನೆಯಿಂದ ಚೇತರಿಸಿಕೊಂಡು, ನಿನ್ನ ಕಿವಿಯಲ್ಲಿ ಉಸುರಿದ್ದೆ ನಾನು,ಬಿಸಿಯುಸಿರಿನೊಂದಿಗೆ 'ರಾಜಕುಮಾರಿ...!'
ಬೆಕ್ಕಿನ ಮರಿಯಂತೆ ಮತ್ತಷ್ಟು ಗಟ್ಟಿಯಾಗಿ ತಬ್ಬಿಕೊಂಡಿದ್ದೆ ನೀನು...!"

ತೀರಾ ಹೊರಡವ ಮೊದಲು, ಇನ್ನೇನು ಅಳುವ ಹಂತದಲ್ಲಿದ್ದ ನಿಂಗೆ, ಹಿಂಗೆಲ್ಲಾ ಉಸುರಿದ್ದೆ ಒಂದೇ ಉಸಿರಿನಲ್ಲಿ.

"ಏನೋ ಅದು...! ನಮ್ ಕಥೆ ಅಲ್ಲ.. ಯಾರ್ ಅದು?"
"ಅದೇ ನೀನು ಹನ್ನೆರಡನೇ ಮಗುಗೇ ಸಾಕು ಅಂದ್ಯಲ್ಲ, ಅದ್ಕೇ ಹೊಸ ಸೆಟಪ್...!"
ಗಪ್ಪನೆ ಹೇಳಿ ಸುಮ್ಮನೆ ಕುಳಿತಿದ್ದೆ. ಇನ್ನೆನು ಅಳುವ ಹಂತದಲ್ಲಿದ್ದ ನೀನು, ಓಡಿ ಬಂದು ಬೆನ್ನ ಮೇಲೆ ಗುದ್ದುತ್ತಾ, ಹೆಗಲ ಮೇಲೆ ಕೈ ಹಾಕಿ, 
"ನನ್ನ ರಾಜನ ಕಥೆ, ನಂಗೊತ್ತಿಲ್ವಾ" ಅಂದಿದ್ದೆ. 
ನಿನಗೆ ನನ್ನ ಮೇಲಿದ್ದ ನಂಬಿಕೆ, ಎಲ್ಲವನ್ನ ಬರೀ ನಮ್ಮ ಪ್ರೀತಿಯಿಂದಲೇ ಗೆದ್ದುಬಿಡೋಣವೆಂಬ ಭರವಸೆ, ಇವೆಲ್ಲವನ್ನ ನಿನ್ನ ಕಣ್ಣಲ್ಲಿ ದಿಟ್ಟಿಸಿ, ಬಂದು ನಿಂತಿದ್ದ ಬಸ್ಸಿಗೆ ಹತ್ತಿದ್ದೆ.


ಸಣ್ಣಗೆ ಶುರುವಾಗಿತ್ತು ಮಳೆ, ಬಸ್ಸಿನ ಹೊರಗೆ ನೋಡುತ್ತಾ, ಮತ್ತೆ ನಿನ್ನ ನೆನಪಿನಲ್ಲಿ, ಮಗ್ಗಲು ಬದಲಾಯಿಸಿದ್ದೆ ನಾನು.

ಇಂತಿ ನಿನ್ನ ಪ್ರೀತಿಯ ಹುಡುಗ..

No comments:

Post a Comment