ಸುಮ್ನೇ ಒಂದು ಆರ್ಟಿಕಲ್ಲ...
ತಮಿಳುನಾಡು, ಆಂಧ್ರದಲ್ಲಿ ಭಾಷೆಗಾಗಿ ಬಟ್ಟೆ ಹರಿದುಕೊಳ್ಳಲು ಸಿದ್ಧರಿರುವ ಜನರಿರುವಾಗ ಕರ್ನಾಟಕದಲ್ಲಿ ಮಾತ್ರ 'ದಯವಿಟ್ಟು ಕನ್ನಡಿಗರು ಸ್ವಲ್ಪವಾದ್ರೂ ಕನ್ನಡ ಮಾತಾಡಿ' ಎಂದು ಗೋಗರೆಯುವ ಪರಿಸ್ಥಿತಿ ಬಂದಿದೆ. ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಪಾಪಕ್ಕಿಂತ ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಮಾತಾಡಲು ಹಿಂಜರಿಯುವುದರಿಂದ ಬರುವ ಪಾಪ ಯಾವುದೇ ದೃಷ್ಟಿಯಲ್ಲೂ ಕಡಿಮೆಯೇನಲ್ಲ. ಇದಕ್ಕೆಲ್ಲಾ ನಾವು ತುಂಬಾ ಹೊಂದಿಕೊಂಡು ಹೋಗಿದ್ದೇವೆ ಎನ್ನುವುದು ವಿಪರ್ಯಾಸ. ಇರಲಿ ಬಿಡಿ, ಕನ್ನಡದ ಗಿಡ ನೆಟ್ಟು ಪಾತಿ ಮಾಡಿ ನೀರೆರೆದು ಹೂವು ಬೆಳೆಸಿ ಅದರ ಘಮ ರಾಷ್ಟ್ರಾದ್ಯಂತ ಹರಡುವ ಕೆಲಸವನ್ನು ಕೆಂಪು-ಹಳದಿ ಬಟ್ಟೆಯನ್ನು ಕೊರಳಿಗೆ ಹಾಕಿಕೊಂಡು ನವೆಂಬರ್ ನಲ್ಲಿ ಅಂಡಿಗೆ ಬೆಂಕಿ ಕೊಟ್ಟಂತೆ ಸಂದಿಗೊಂದಿಗಳಲ್ಲೆಲ್ಲಾ 'ಜೈ ಭುವನೇಶ್ವರಿ' ಅಂತ ತಿರುಗಾಡುವ ಸಾವಿರಾರು ಕನ್ನಡ ಕುಲಪುತ್ರರಿಗೆ ಬಿಟ್ಟುಬಿಡೋಣ. ನಾನು ಏನು ಬರೆಯಲು ಹೊರಟೆಯೆಂದರೆ, ನಾವು ಮಾತಾಡುತ್ತಿರುವ ಕನ್ನಡ ಎಲ್ಲಾ ರೀತಿಯ ಆಧುನಿಕತೆ-ಜಾಗತೀಕರಣದ ಅಲೆಗಳಿಗೆ ಸಿಲುಕಿ ಬಣ್ಣ ಕಳೆದುಕೊಳ್ಳುತ್ತಿದೆ ಅಥವಾ ಬಣ್ಣ ಬದಲಾಯಿಸುತ್ತಿದೆ. ನಮಗೆ ಎಂಟನೇ ತರಗತಿಯಲ್ಲಿ ಕನ್ನಡ ಪಾಠ ಮಾಡಲು ಅ.ರಾ. ನಂಜುಂಡಶಾಸ್ತ್ರಿ ಎಂಬ ಗುರುಗಳು ಬರುತ್ತಿದ್ದರು. ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಯಾವಾಗಲೂ ನಮ್ಮ ಹೆಸರುಗಳನ್ನು ಕೇಳಿದಾಗ ಬೈಯುತ್ತಿದ್ದರು. ಯಾಕೆಂದರೆ ಅವರು ಹೇಳುವಂತೆ ಕನ್ನಡದಲ್ಲಿ ಅರ್ಧವ್ಯಂಜನಗಳಿಗೆ ಯಾವುದಾದರೂ ಸ್ವರ ಸೇರಿದ ಮೇಲೆ ಹುಟ್ಟುವ ಸಂಪೂರ್ಣಾಕ್ಷರವೇ ಅಚ್ಚ ಕನ್ನಡಾಕ್ಷರ. ಅಂದರೆ ಕ್+ಅ=ಕ, ಅಥವಾ ಕ್+ಈ=ಕೀ ಇತ್ಯಾದಿ. ಅದು ಬಿಟ್ಟು ಬರೀ ಅರ್ಧವ್ಯಂಜನಗಳಿಗೆ ಯಾವ ಅಸ್ತಿತ್ವವೂ ಇಲ್ಲ, ಅರ್ಧ ವ್ಯಂಜನಗಳಿಂದ ಅಂತ್ಯವಾಗುವ ಪದಗಳು ಅಪೂರ್ಣ ಮತ್ತು ಅಪಭ್ರಂಶ ಕನ್ನಡ ಪದಗಳು ಎಂದು ಹೇಳುತ್ತಿದ್ದರು. ಹಾಗಾಗಿ ಸಂಪತ್, ಭರತ್, ನಿಖಿಲ್, ವಿನಯ್, ಸುಜಯ್ ಇದಾವುದೂ ಸರಿಯಲ್ಲ, ಅವು ಸಂಪತ್ತು, ಭರತ, ನಿಖಿಲ, ವಿನಯ, ಸುಜಯ ಎಂದಾಗಬೇಕು ಎನ್ನುತ್ತಿದ್ದರು. ಈಗಿನ ತಂದೆತಾಯಿಯರು ಹೀಗೆ ಅರ್ಧಂಬರ್ಧ ಹೆಸರಿಟ್ಟು ನಮಗೇ ಗೊತ್ತಿಲ್ಲದೇ ಆಂಗ್ಲಭಾಷೆಯ ಅಡಿಯಾಳಾಗುತ್ತಿದ್ದೇವೆ ಎನ್ನುತ್ತಿದ್ದರು. ಸಂಪತ್ ಆದ್ರೇನು ಸಂಪತ್ತು ಆದ್ರೇನು ಎರಡೂ ಒಂದೇ ಅಲ್ವಾ ಅಂತ ನಾನು ತಲೆಕೆರೆದುಕೊಂಡರೆ ನಮ್ಮ ತರಗತಿಯಲ್ಲೇ ರಂಜಿತ, ರಕ್ಷಿತ ಅಂತ ಹುಡುಗಿಯರು ಇದ್ದಿದ್ರಿಂದ ರಂಜಿತ್, ರಕ್ಷಿತ್ ಇಬ್ಬರೂ ಮುಖ ದಪ್ಪಮಾಡಿಕೊಂಡು ಮನಸ್ಸಿನಲ್ಲೇ ಅಪ್ಪ-ಅಮ್ಮಂಗೆ, ಮಾಸ್ತರಿಗೆ, ಕನ್ನಡ ಭಾಷೆಗೆ ಎಲ್ಲದಕ್ಕೂ ಬೈದುಕೊಳ್ಳುತ್ತಿದರು. ಇನ್ನು ಕೆಲವು ಕಿಲಾಡಿಗಳು ಜೋರಾಗಿ "ರಂಜಿತಾ... ರಕ್ಷಿತಾ...." ಅಂತ ಕರೆದು ಹುಡುಗಿ ತಿರುಗಿದಾಗ "ನಿಂಗಲ್ಲ ಕರ್ದಿದ್ದು, ಇವನಿಗೆ" ಅಂದು ಪಕಪಕನೇ ನಕ್ಕಾಗಲಂತೂ ಆ ಹುಡುಗರ ಮುಖ ರೆಡ್ ಆಕ್ಸೈಡ್ ನೆಲದ ತರ ಆಗಿರುತ್ತಿತ್ತು. ನಂಜುಂಡಶಾಸ್ತ್ರಿಗಳೇ ಇನ್ನೊಮ್ಮೆ ಯಾವಗಲೋ ಇವರ ಸಮಸ್ಯೆ ಬಗೆಹರಿಸುವಂತೆ "ಕೃಷ್ಣ ಅಂತ ಬರೆದರೆ ಪುಲ್ಲಿಂಗ, ಅದೇ ಕೃಷ್ಣಾ ಅಂತ ದೀರ್ಘವಾದರೆ ಸ್ತ್ರೀಲಿಂಗ" ಎಂದಿದ್ದರು.ಈಗ ಇವೆಲ್ಲಾ ಯಾಕೆ ನೆನಪಾಯ್ತು ಅಂದ್ರೆ ಮೊನ್ನೆ ಭಾರತೀಯ ರೈಲ್ವೆ ಪರೀಕ್ಷೆ ಬರೆಯೋಕೆ ಗುಲ್ಬರ್ಗಾಕ್ಕೆ ಅಲ್ಲಲ್ಲ ಕಲಬುರಗಿಗೆ ಹೋಗಿದ್ದೆ. ಅಲ್ಲಿನ ಅಂಗಡಿಗಳ ಫಲಕಗಳನ್ನು, ಬಸ್ಸಿನ ಬೋರ್ಡುಗಳನ್ನು ನೋಡಿದಾಗ ನಮ್ಮ ನಂಜುಂಡಶಾಸ್ತ್ರಿಗಳೇನಾದರೂ ಮುಂಚೆ ಇಲ್ಲಿ ಪಾಠ ಮಾಡುತ್ತಿದ್ದರೇನೋ ಎಂಬ ಅನುಮಾನ ಮೂಡಿತು. ಎಲ್ಲ ಕಡೆಯೂ ಸಂಪೂರ್ಣಾಕ್ಷರಗಳಿಂದ ತುಂಬಿದ್ದ ಪದಸಮೂಹಗಳು. 'ರೂರಲ ಎಂಜಿನೀಯರಿಂಗ ಕಾಲೇಜ', ' ಕಾಮತ ಹೊಟೇಲ', 'ರಜತ ಕನ್ಸ್ಟ್ರಕ್ಷನ್ಸ', 'ಅಜಿತ ಇಂಜಿನಿಯರಿಂಗ ವರ್ಕ್ಸ', 'ಮಲ್ಲಿಕಾರ್ಜುನ ಅಂಡ ಸನ್ಸ ಕ್ಲಾತ ಸೇಂಟರ' ಹೀಗೇ ಹಲವಾರು. ಊರಿನ ಹೆಸರುಗಳೂ ಅಷ್ಟೇ, 'ಶಹಾಪುರ', 'ಸುರಪೂರ', 'ಬೀದರ', 'ಲಿಂಗಸುಗೂರ', 'ಸಿಂಧನೂರ' ಇತ್ಯಾದಿ. ಆಕರ್ಷಕವಾಗಿ ಕಂಡಿತು. ಜೊತೆಗೆ ಇನ್ನೊಂದು ಬರೆಯಬಲ್ ವಿಷಯವೆಂದರೆ ಅಲ್ಲಿನ ಜನಗಳಿಗೆಲ್ಲಾ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಜನಪ್ರತಿನಿಧಿಗಳ ಬಗ್ಗೆ, ಸರಿಯಾಗಿ ಮಳೆಸುರಿಸದ ವರುಣನ ಬಗ್ಗೆ, ಕಿರಣಗಳನ್ನು ಕಾರಿ ಜೀವಶಕ್ತಿ ಹೀರುವ ಸೂರ್ಯನ ಬಗ್ಗೆ ಹೀಗೆ ಅವರ ಜೀವನವನ್ನು ಸಂಕಷ್ಟಕ್ಕೀಡುಮಾಡಿರುವವರ ಬಗ್ಗೆ ಸಿಟ್ಟೋ ಏನೋ, ಒಟ್ಟಿನಲ್ಲಿ ಎಲ್ಲಾ ಕಡೆಯೂ 'ಶಾಪ' ಕೊಡುವುದು ಜಾಸ್ತಿಯಾಗಿತ್ತು. ಹೌದು, 'ಅಬ್ದುಲ ರಹೀಮ ವೇಲ್ಡಿಂಗ ಶಾಪ', 'ಕಿರಣ ಮೊಬೈಲ ಶಾಪ', 'ಸಪನಾ ಝರಾಕ್ಸ ಶಾಪ' ಹೀಗೆ. ಕರ್ನಾಟಕದ ವಿಶಿಷ್ಟತೆಯೇ ಇದು, ನೂರಿನ್ನೂರು ಮೈಲಿಗಳಿಗೊಮ್ಮೆ ಆಯಾ ಪ್ರದೇಶದ ಭೌಗೋಳಿಕ ಪರಿಸ್ಥಿತಿ, ಜನಜೀವನವನ್ನನುಸರಿಸಿ ಕನ್ನಡವೂ ನೀರಿನಂತೆ ಆಕಾರ ಬದಲಿಸುತ್ತದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹಿಂದಿ ಪ್ರಭಾವವಿರುವುದರಿಂದ ಕನ್ನಡ ಅಲ್ಲಿಗೆ ಸರಿಯಾದ ರೂಪ ತಳೆದಿರಬಹುದು. ಅದೇನೇ ಇರಲಿ, ಪ್ರೀತಿ ವಿಶ್ವಾಸಗಳನ್ನು ಪೂರ್ಣ ಮನಸ್ಸಿನಿಂದ ತೋರುವ ಉತ್ತರ ಕರ್ನಾಟಕದ ಜನರ ಭಾಷೆಯೂ 'ಅರ್ಧಂಬರ್ಧ'ವಾಗದೇ 'ಪೂರ್ಣ'ವಾಗಿದೆ ಎಂಬುದು ವಿಶೇಷ.
- 'ಸಂಪತ್ತು' ಸಿರಿಮನೆ
No comments:
Post a Comment