ಪ್ರೀತಿಯ ಹೆಂಡ್ತಿ...!
ಬಟ್ಟೆ ಒಗ್ಯೋಕೆ ಮೊದ್ಲು, ನನ್ನ ಶರ್ಟ್ ಜೇಬಲ್ಲಿ ಎನಾದ್ರೂ ಇದ್ಯಾ ಅಂತ ನೀ ನೋಡ್ಬೇಕಾದ್ರೆ,ನಿನ್ನ ಕೈಗೆ ಸಿಗುವಂತೆ ಈ ಕಾಗದ ನಿಂಗೆ. ಸೀದಾ ನಿಂಗೇ ಕೊಡ್ಬೋದಿತ್ತು. ಆದ್ರೆ ನಿಂಗೆ ಅಕಸ್ಮಾತ್ ಆಗಿ ಈ ಕಾಗದ ಸಿಕ್ಕಾಗ, ನೀ ಖುಷಿ ಪಡಲಿ ಅಂತ, ಈ ಅಡ್ಡದಾರಿ...! ಅದೂ ಅಲ್ದೇ, ಸಂಜೆ ಈ ಅಚ್ಚರಿಯನ್ನ ಕಣ್ಣ ತುದಿಯಲ್ಲಿ ತೋರ್ಸ್ತಾ, ಬಾಗ್ಲು ತೆಗಿತ್ಯಲಾ, ಅದೊಂದು ಕ್ಷಣಕ್ಕೆ, ಇಂತಾ ನೂರು ಆಟ ಆಡ್ತಿನಿ ಕಣೆ...!

ನಿಂಗೆ ಗೊತ್ತಾ...! ಇವತ್ತು ನಮ್ಮ ಆನಿವರ್ಸರಿ. ಅಲ್ಲಾ ಅಂತ್ಯಾ, ನಿನ್ನ ಮೊದ್ಲು ನೋಡಿದ್ದು ನಾನು, ಇವತ್ತೇ. ಐದು ವರ್ಷದ ಹಿಂದೆ. ನೀನು ಅದ್ಯಾವ್ದೋ ಬಸ್ಸಿನ ಕಿಟಕಿ ಪಕ್ಕದ ಸೀಟಿನಲ್ಲಿ ಕೂತು ಹೊರಗೆ ದಿಟ್ಟಿಸ್ತಾ ಇದ್ದೆ. ಅಲ್ಲೇ ಪ್ರೀತಿಯಾಗೊಯ್ತು ಅಂತಂದ್ರೆ ಹುಚ್ಚು ಅಂತ್ಯೆನೊ, ಆದ್ರೆ ಸಣ್ಣದೊಂದು ಆಸೆ ಹುಟ್ಟಿದ್ದಂತೂ ಹೌದು. "ನಿನ್ನ ಹುಡುಗಿ ಹೆಂಗಿರ್ಬೇಕೋ..." ಅಂತ ಕೇಳ್ತಿದ್ದ ನನ್ನ ಪಕ್ಕ್ದಲ್ಲಿದ್ದ ಗೆಳೆಯನಿಗೆ ನಿನ್ನ ತೋರ್ಸಿದ್ದೆ.!

ಹಂಗಾಗಿ, ಇನ್ಮುಂದೆ ನಿನ್ನ ಮೂಗನ್ನ, ನನ್ನ ಮೂಗಿಗೆ ತಾಗ್ಸ್ತಾ, ಮುದ್ದಾಡುವಾಗ, "ನಿಮ್ಮುನ್ನ ನಾನೇ ಜಾಸ್ತಿ ಪ್ರೀತಿಸೋದು ಕಣ್ರೀ,ನಿಮ್ಕಿಂತ" ಅಂತ ಹೇಳ್ಬೇಡ. ಯಾಕಂದ್ರೆ ನಂದು, ನಿನ್ಕಿಂತ ಹಳೇ ಒಲವು...!

ಆಮೇಲೊಂದಿನ ಸಂಜೆ, ಬತ್ತಿ ಹಾಕಿ ಹಚ್ಚಿಟ್ಟಿದ್ದ ಎಣ್ಣೆಯ ದೀಪದ ಸನಿಹದಲ್ಲಿ ಕೂತು, ನೀನು ಅದ್ಯಾವುದೋ ರಾಗದಲ್ಲಿ, ಅದೊಂದು ಹಾಡು ಹಾಡಲೆಂದೇ ಹುಟ್ಟಿದವಳ ರೀತಿ, ತನ್ಮಯಳಾಗಿ ಹಾಡ್ತಿರ್ವಾಗ, ನಾನಿದ್ದೆ ಅಲ್ಲಿ. ನೀನು ಪ್ರತೀ ಸಂಜೆ, ಆ ದೀಪದ ಬಳಿ ಕೂತು ಹಾಡಿದಾಗ, ನಾನಿದ್ದೆ ಅಲ್ಲಿ. ನಿನ್ನ ಹಾಡಿಗೆ ಕಿವಿಯಾಗಿ. ಈಗ ಅದೇ ಹಾಡನ್ನ ನೀನು, ನನ್ನ ತೋಳಲ್ಲಿ ಸೇರ್ಕೊಂಡು ನಂಗೆ ಮಾತ್ರ ಕೇಳುವಂತೆ ಪಿಸುಗುಟ್ಟುವಾಗ, ಅದೆಂತದೋ ಹೆಮ್ಮೆ. ಮನಸ್ಸು ಖುಷಿ ಪಡುತ್ತೆ, ನಿನ್ನ ದೇಹವನ್ನ ಬಳಸಿದ ತೋಳು ಮತ್ತಷ್ಟು ಗಟ್ಟಿಯಾಗಿ ತಬ್ಬಿಕೊಳ್ಳುತ್ತೆ!

ಬೆಳ್ಗೆ ಸ್ನಾನ ಮಾಡ್ಬೇಕಾದ್ರೆ, ಅದೀಗ ತಾನೇ ಸ್ನಾನ ಮಾಡಿ ಹೋದ ನಿನ್ನ ಪರಿಮಳದಲ್ಲಿ ನನ್ನ ನಾನೇ ಮರೆಯುತ್ತಾ, ಹೊರಗೆ ಹೊರಡುವವರೆಗೂ, ನಿನ್ನ ಪರಿಮಳದ ಗುಂಗಲ್ಲಿ, ನಿನ್ನ ಸುತ್ತ ಮುತ್ತಾ ತಿರ್ಗುವಾಗ, ಜಗತ್ತಲ್ಲಿ ಮತ್ತೆನೂ ನೆನ್ಪಾಗಲ್ಲ ಕಣೇ ಹುಡುಗೀ ನಂಗೆ, ಬರೀ ನೀನು, ನಾನು ಮತ್ತು ನಮ್ಮಿಬ್ಬರ ಪ್ರೀತಿ.

ರಾತ್ರಿಯ ಯಾವುದೋ ಜಾವದಲ್ಲಿ, ಕೆಟ್ಟ ಕನಸು ಬಿದ್ದು, ನಿದ್ರೆ ಮರೆಯಲ್ಲೇ ನನ್ನ ಗಟ್ಟಿಯಾಗಿ ತಬ್ಬಿ, ನಾನಿದಿನಿ ಎಂಬ ಖುಷಿಗೋ ಏನೋ, ಸಣ್ಣಗೆ ಮುಗುಳ್ನಕ್ಕು ಮತ್ತೆ ಮಲಗ್ತ್ಯಲ ನೀನು, ಆಗ ನನ್ನ ಮನಸ್ಸೊಳಗೆ ನೋಡ್ಬೇಕು ಕಣೇ ನೀನು. ಅದೋಂತರಾ ಸಾರ್ಥಕ್ಯತೆನೂ ಮೀರಿದ ಭಾವ. ಅಲ್ಲಿ ಎಲ್ಲವನ್ನೂ ಹೊಂದಿದ ತೃಪ್ತಿಯಿರುತ್ತೆ. ನನ್ನ ಜೊತೆ ನೀನು, ನಿನ್ನ ಜೊತೆ ನಾನು ಎಂಬ ನಂಬಿಕೆ ಇರುತ್ತೆ. ಎಲ್ಲಕ್ಕಿಂತ ಮಿಗಿಲಾಗಿ ಈ ಸಂಜೆಗೆ, ನಾಳೆಯ ಸಂಜೆಗೆ, ಜೀವನದ ಎಲ್ಲಾ ಸಂಜೆಗೂ ನೀ ಜೊತೆಗಿರುವೆ ಎಂಬ ವಾಸ್ತವತೆ ಇರುತ್ತೆ.

ಇನ್ನೇನು ಸಂಜೆ ಆಗಿರುತ್ತೆ. ನಾನು ಬರೋದನ್ನೇ ಕಾಯ್ತಾ, ಕೈಲೊಂದು ಕಾಫಿ ಕಪ್ಪಿನೊಂದಿಗೆ, ಇದನ್ನ ಓದ್ತಾ ಕೂತಿರ್ತ್ಯಾ. ನಿನ್ನ ಕೂದಲಿನ ತುದಿಯನ್ನ ಹಂಗೇ ಮುಖದ ಮೇಲಿಂದ ತೆಗ್ದು ಹಿಂದೆ ಸೇರ್ಸಿಬಿಡು. ಯಾಕಂದ್ರೆ, ನಾ ಬಂದ್ ತಕ್ಷಣ ನಿನ್ನ ಕೆನ್ನೆಯನ್ನ ಮಾತಾಡಿಸುವ ನನ್ನ ತುಟಿಗಳಿಗೆ ಅಡ್ಡ ಆಗ್ಬಾರ್ದಲ...!

ನಿನ್ನ ಗುಂಗಲ್ಲೇ,
ನಿನ್ನವ...!

No comments:

Post a Comment