ತೀನ್ ಪತ್ತಿ
1. ಊರ ಹೊರಗಿದ್ದ ನಮ್ಮ ಹಾಸ್ಟೆಲ್ ಪಕ್ಕವೇ ಝಗಮಗಿಸುವ ದೀಪಗಳು, ಸ್ಕೋಡಾ-ಬಿಎಂಡಬ್ಲ್ಯು ಕಾರುಗಳ ಮಧ್ಯೆ ಹೊಚ್ಚಹೊಸ ಅತ್ಯಾಧುನಿಕ 'ಅಡುಗೆಮನೆ' ಚಾಟ್ ಸೆಂಟರ್ ಆರಂಭವಾಗಿತ್ತು. ಊರಿಗೆಲ್ಲಾ ಹಂಚಿದ್ದ ಆಹ್ವಾನಪತ್ರಿಕೆಯಲ್ಲಿದ್ದ ವಿಚಿತ್ರ ಹೆಸರಿನ ತಿಂಡಿಗಳನ್ನು ಕಂಡು ನನ್ನ ಬಾಯಲ್ಲಿ ಸ್ಫುರಿಸಿದ ಲಾಲಾರಸ ಐದು ಲೀಟರ್ ದಾಟಿತ್ತೇನೋ. "ಒಂದ್ ಕೈ ನೋಡಣ" ಅಂತ ಹೋಗಿ ಬರ್ಗರ್ ತಿಂದು ಬಿಲ್ ಮೊತ್ತ 80 ರೂಪಾಯಿ ಕೊಟ್ಟು ಬಂದ ಮೇಲೆ ದುಡ್ಡು ಹಾಳು ಮಾಡಿದೆ ಎಂದು ಒಪ್ಪಲು ಬಿಡದ ಮನಸ್ಸು "ಅಲ್ಲಾ, 80 ರೂಪಾಯ್ ಕೊಟ್ಟಿದ್ದೇನು ಲಾಸ್ ಇಲ್ಲ, ಏನ್ ಕಡ್ಮೆ ಐಟಮ್ಸ್ ಹಾಕಿದ್ರಾ ಅದರೊಳಗೆ?, ಅಷ್ಟಕ್ಕೂ ಬರ್ಗರ್ ಏನು ಸುಲಭಕ್ಕೆ ಮಾಡೊಕಾಗುತ್ತಾ?, ಸರಿಯಾಗಿಯೇ ಇದೆ ರೇಟು" ಎಂದು ಸಮಜಾಯಿಷಿ ಕೊಟ್ಟಿತ್ತು. ಮರುದಿನ ಮಾಮೂಲಿಯಂತೆ ಶಂಕ್ರಣ್ಣನ ಬೇಕರಿಗೆ ಹೋದಾಗ ಬರ್ಗರ್ ಕಂಡು "ಏನ್ ಶಂಕ್ರಣ್ಣಾ, ಬರ್ಗರ್ ಎಲ್ಲಾ ಶುರು ಮಾಡಿಬಿಟ್ಟಿದ್ದೀರಿ, ಏನ್ ರೇಟು?" ಎಂದೆ. ಶಂಕ್ರಣ್ಣ "ಹಂಗೇನಿಲ್ಲ, ಈ ಹೊಸಾ ದೊಡ್ಡ ಹೋಟ್ಲು ಶುರುವಾಗಿದ್ಯಲ್ಲಾ ಅಲ್ಲಿಗೆ ಬರ್ಗರ್ ಬನ್ನು- ಒಳಗೆ ಹಾಕೋ ಪಲ್ಯ ಎಲ್ಲಾ ನಾನೇ ಮಾಡಿಕೊಡೋದು, ಅವ್ರು ಬೇಕಾದಂಗೆ ಜೋಡಿಸ್ಕೊಂಡು ಬಿಸಿ ಮಾಡ್ತಾರೆ ಅಷ್ಟೆ. ಅಲ್ಲಿಗೆ ಮಾಡಿದ್ನಲ್ಲಾ, ನೋಡೋಣ ಅಂತ ನಮ್ ಬೇಕ್ರಿಲೂ ಇಟ್ಟೆ. ಹದಿನೈದು ರೂಪಾಯಿಗ್ ಮಾರ್ತೀನಿ, ಇವತ್ ಓಪನಿಂಗ್ ಅಲ್ವಾ ಹತ್ತು ರೂಪಾಯಿ ಕೊಡಿ ಸಾಕು" ಎಂದರು....
2. ಶಾಲೆಯಲ್ಲಿ ಸಾಯಂಕಾಲದ ಪ್ರಾರ್ಥನೆ ನಡೆಯುತ್ತಿತ್ತು. ರಾಷ್ಟ್ರಗೀತೆ ಶುರುವಾಗುತ್ತಿದ್ದಂತೆಯೇ ಎರಡನೇ ಕ್ಲಾಸಿನ ಭರತನಿಗೆ ಪಕ್ಕದ ಸಾಲಿನಲ್ಲಿ ನಿಂತಿದ್ದ ಹುಡುಗ ತಲೆಗೆ ಟೊಪ್ಪಿ ಹಾಕಿಕೊಂಡಿದ್ದು ಸರಿಕಾಣಲಿಲ್ಲ. ರಾಷ್ಟ್ರಗೀತೆಗೆ ಗೌರವ ಸಲ್ಲಿಸಬೇಕು ಎಂಬ ಪಾಠ ನೆನಪಾಗಿ ದೇಶಭಕ್ತಿ ಉಕ್ಕಿ ಹರಿದು ರಕ್ತ ಕುದ್ದು ತಡೆದುಕೊಳ್ಳಲಾಗದೇ ಅವನ ಟೊಪ್ಪಿ ಕಿತ್ತು ಕೆಳಕ್ಕೆ ಬಿಸಾಡಿದ. ಏನೋ ಸಾಧಿಸಿದಂತಹ ನೆಮ್ಮದಿಯಾಯಿತು. ಅಷ್ಟರಲ್ಲಿ ಅವನ ಎದುರಿಗಿದ್ದ ಶರತ ಆ ಟೊಪ್ಪಿಯನ್ನು ಹೆಕ್ಕಿ ಹುಡುಗನಿಗೆ ವಾಪಸ್ ಕೊಟ್ಟ, ಟೊಪ್ಪಿ ಮತ್ತೆ ಅವನ ತಲೆಯೇರಿತು. ರಾಷ್ಟ್ರಗೀತೆ ಮುಗಿಯುವವರೆಗೆ ಇವನ್ನೆಲ್ಲಾ ಸುಮ್ಮನೆ ಗಮನಿಸುತ್ತಿದ್ದ ಪಿ.ಟಿ. ಮಾಸ್ಟರು ಮುಗಿದಾಕ್ಷಣ "ರಾಷ್ಟ್ರಗೀತೆ ಹೇಳುವಾಗ ಆಟ ಆಡ್ತೀರೇನ್ರೋ ಹಲ್ಕಾ ನನ್ ಮಕ್ಳಾ" ಅಂತ ಮೂವರಿಗೂ ಬೆತ್ತ ಮುರಿಯುವವರೆಗೆ ಬಾರಿಸಿದರು....
3. ಜೇಸಿಯವರೋ ರೋಟರಿಯವರೋ ನಿರ್ಮಿಸಿದ ಪ್ರಯಾಣಿಕರ ತಂಗುದಾಣದಲ್ಲಿ ಕುಳಿತಿದ್ದೆ. ಮನಸ್ಸು ಟಾರು ಕಿತ್ತು ಹೋಗಿರುವ ಆ ದಾರಿಯಲ್ಲಿ ಬರುವ ಬಸ್ಸುಗಳ ಸ್ಥಿತಿಯಂತೆಯೇ ಡೋಲಾಯಮಾನವಾಗಿತ್ತು. ಒಂದೇ ವಿಷಯ ಗುಂಗಿಹುಳದಂತೆ ಕೊರೆಯುತ್ತಿತ್ತು. "ರೀ ಮಿಸ್ಟರ್, ಅವತ್ತಿಂದ ನೋಡ್ತಾ ಇದೀನಿ ಯಾವಾಗ್ಲೂ ನನ್ನ ಕಡೇನೇ ನೋಡ್ತಾ ಇರ್ತೀರಾ ಕಾಮುಕನ ತರ, ತೀಟೆ ಜಾಸ್ತಿಯಾಗಿದ್ರೆ ಹೋಗಿ ಮದುವೆ ಮಾಡ್ಕೊಳ್ಳಿ, ಹೀಗೆ ಹಿಂಸೆ ಕೊಡ್ಬೇಡಿ, ವರ್ಕಿಂಗ್ ವುಮೆನ್ ಅಂದ್ರೆ ಏನನ್ಕೊಂಡಿದೀರಾ?, ಥೂ ಎಲ್ಲಾ ಹಂದಿಜಾತಿಯೋವು" ಎಂದು ಕಛೇರಿಯಲ್ಲಿ ನನ್ನ ಎದುರಿನ ಟೇಬಲ್ ನಲ್ಲಿ ಕೂರುವ ಮಹಿಳೆ ಎಲ್ಲರೆದುರು ನಿಂದಿಸಿದ್ದಳು. "ಅಲ್ಲಾ, ಮುಖ-ದೃಷ್ಟಿಗಳು ಮನಸ್ಸಿನ ಕನ್ನಡಿ ಆಗಲೇಬೇಕು ಅಂತೇನಿದೆ?, ಚಿಕ್ಕಂದಿನಿಂದಲೂ ದುಡ್ಡಿಲ್ಲದ ಮನೇಲಿ ಬೆಳೆದೆನೇ ಹೊರತು ಸಂಸ್ಕಾರವಿಲ್ಲದ ಪರಿಸರದಲ್ಲಲ್ಲ. ಆಫೀಸಲ್ಲಿ ಕುಳಿತಾಗ ಯಾವಾಗಲೂ ಮುಂದಿನ ತಿಂಗಳು ಅಂಗಡಿ ಶೆಟ್ರಿಗೆ ಕೊಡಬೇಕಾದ ದುಡ್ಡು, ಬ್ಯಾಂಕ್ ಸಾಲ, ಬಾಡಿಗೆ, ತಂಗಿ ಮದುವೆ ಎಲ್ಲಾ ಕಷ್ಟಗಳು ನೆನಪಾದಾಗ ಆಗಾಗ ಒಂದೇ ಕಡೆಗೆ ದಿಟ್ಟಿಸುತ್ತಾ ಯೋಚನಾಮಗ್ನನಾಗುವುದು ಯಾವ ತಪ್ಪು??, ದೃಷ್ಟಿಯಲ್ಲಿ ಒಳ್ಳೆಯದು- ಕೆಟ್ಟದ್ದು ಎಂದು ವಿಂಗಡಿಸುವುದು ಇನ್ನೊಂದು ದೃಷ್ಟಿಯೇ ತಾನೇ?, ಆ ದೃಷ್ಟಿಯೇ ಕಲುಷಿತವಾಗಿದ್ದರೆ??". ಗಜಾನನನ ಹಾರ್ನ್ ಸದ್ದಿನಿಂದ ಬಾಹ್ಯಪ್ರಪಂಚಕ್ಕೆ ಬಂದೆ. ತುಂಬಾ ಹೊತ್ತಿನಿಂದ ಒಂದೇ ಕಡೆ ದಿಟ್ಟಿಸುತ್ತಿದ್ದೆ ಅಂತ ಕಾಣುತ್ತದೆ. ಎದುರುಗಡೆ ಬೆಂಚಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಸೆರಗು ಸರಿಮಾಡಿಕೊಂಡು ಇರುಸುಮುರುಸಿನ ನೋಟ ಬೀರಿದರು........
- ಸಂಪತ್ ಸಿರಿಮನೆ