ಟಿಕ್ಕಿ

ಕಿವಿಯಲ್ಲಿದ್ದ 'ಟಿಕ್ಕಿ'ಯೊಂದು ಬಿಟ್ಟರೆ ಅನಂತನಿಗೆ ಬದುಕಿನಲ್ಲಿ ಇನ್ಯಾವ ಚಿಂತೆಯೂ ಇರಲಿಲ್ಲವಾದರೂ ಅದೊಂದು ಚಿಂತೆಯೇ ದಿನವಿಡೀ ಅವನು ಕೊರಗುತ್ತಾ ಕೂರುವಂತೆ ಮಾಡಲು ಸಾಕಾಗಿತ್ತು. ಹೆಸರು ಅನಂತಪದ್ಮನಾಭನಾದರೂ ಟಿಕ್ಕಿಯ ದೆಸೆಯಿಂದ ಕ್ಲಾಸಿನಲ್ಲಿ 'ಟಿಕ್ಕಿ ಅನಂತ'ನೆಂದೂ, ವಠಾರದಲ್ಲಿ 'ಕಿವೀಲಿ ಟಿಕ್ಕಿ ಇರೋ ಭಟ್ರುಡುಗ'ನೆಂದೂ, ಗೆಳೆಯರ ಗುಂಪಿನಲ್ಲಿ 'ಹೆಣ್ ಹೆಂಗ್ಸು' ಎಂದೂ ಕರೆಸಿಕೊಂಡೂ ಕರೆಸಿಕೊಂಡೂ ಅವನದೇ ಕಿವಿಯ ಟಿಕ್ಕಿ ಅವನಿಗೆ ಆಜನ್ಮಶತ್ರುವಾಗಿ ಮಾರ್ಪಾಟಾಗಿತ್ತು. ಮನೇಲಿ ಈ ವಿಷಯವಾಗಿ ಗಲಾಟೆಯಾದಾಗಲೆಲ್ಲಾ "ಬಿಡ್ತು ಅನ್ನು, ಟಿಕ್ಕಿ ತೆಗುಸ್ತಾನಂತೆ ಭಡವಾ, ನಮ್ ಕುಟುಂಬದ ಸಂಪ್ರದಾಯ ಅದು, ಅದನ್ನ ತೆಗೆಸೋ ಮಾತಾಡಿದ್ರೆ ಇಡೀ ಕುಟುಂಬಾನೇ ನಾಶ ಆಗುತ್ತೆ ಅಪಭ್ರಂಶ ಮುಂಡೇದೇ" ಅಂತ ಬೈಯುವ ಅಜ್ಜಿ ಮಾತಿಗೆ ಟಿಕ್ಕಿಧಾರಿಗಳಾದ ಅಜ್ಜ-ಅಪ್ಪ ಹ್ಞೂಗುಟ್ಟಿ ಇವನ ಮೇಲೇ ಹೂಂಕರಿಸುತ್ತಿದ್ದರು. ಆಗೆಲ್ಲಾ ಅನಂತನಿಗೆ ಕಿವಿಯನ್ನೇ ಕತ್ತರಿಸಿ ಬಿಸಾಡುವಷ್ಟು ಕೋಪ ಬಂದರೂ ಎದುರು ಮನೆಯ ತನ್ನದೇ ಕ್ಲಾಸಿನ ಸೀತಾಲಕ್ಷ್ಮಿ ಎದುರುಸಿಕ್ಕಾಗಲೆಲ್ಲಾ ಎರಡೂ ಕಿವಿಗಳನ್ನು ಹಿಂಡಿ "ನಮ್ ಅನಂತೂ ಕಿವಿಗೆ ಟಿಕ್ಕೀನೇ ಚಂದ" ಅಂತ ಮುದ್ದುಮಾಡುತ್ತಿದ್ದುದು ನೆನಪಾಗಿ ಸುಮ್ಮನಾಗುತ್ತಿದ್ದ. ಆದರೆ ವರ್ಷಗಳುರುಳುತ್ತಾ ಬಂದಂತೆ ಸೀತಾಲಕ್ಷ್ಮಿ ಕಿವಿಹಿಂಡುವುದನ್ನೂ ನಿಲ್ಲಿಸಿ ಅನಂತನಿಗೆ ಟಿಕ್ಕಿಯಿಂದಾವೃತವಾದ ಇದ್ಯಾವುದೋ ಘೋರ ನರಕದಲ್ಲಿ ಸಿಕ್ಕಿಹಾಕಿಕೊಂಡಂತೆನಿಸತೊಡಗಿತು. ಊರಲ್ಲೇ ಇಂಜಿನಿಯರಿಂಗು ಮುಗಿಸಿ ಮನೆಬಿಟ್ಟು ಬೆಂಗಳೂರಿಗೆ ಬಸ್ಸು ಹತ್ತಿದಾಗಲೇ ಸ್ವತಂತ್ರ ಹಕ್ಕಿಯಂತಾಗಿದ್ದ ಅನಂತನ ತಲೆಯಲ್ಲಿದ್ದುದು ಬೆಂಗಳೂರಿಗೆ ಹೋದ ತಕ್ಷಣ ಮೊದಲು ಈ ಅನಿಷ್ಟದ ಟಿಕ್ಕಿಯನ್ನು ತೆಗೆಯಬೇಕೆನ್ನುವುದು. ಆದರೆ ಟಿಕ್ಕಿ ವರ್ಷಾನುಗಟ್ಟಲೆ ಠಿಕಾಣಿ ಹೂಡಿ ಭದ್ರವಾಗಿದ್ದರಿಂದ ಕೈಯಲ್ಲಿ ತೆಗೆಯಲು ಬಾರದೇ ಕಂಪನಿಗೆ ಮೊದಲ ದಿನ ಟಿಕ್ಕಿಧಾರಿಯಾಗೇ ಹೋಗಬೇಕಾಯಿತು. ಅನಂತನ ಅದೃಷ್ಟ ಕೆಟ್ಟಿತ್ತೋ ಏನೋ ಬಾಸ್ ಗೆ ಇವನ ಟಿಕ್ಕಿ ಕೆಟ್ಟದಾಗಿ ಕಾಣಿಸಿ ಎಲ್ಲರೆದುರು ಇವನನ್ನು ಹೀಯಾಳಿಸಿ "ಇದೇನು ನಿಮ್ಮೂರ ಜಾತ್ರೆ ಅಲ್ಲ ಬೇಕಾಬಿಟ್ಟಿ ಬರೋಕೆ, ಯೂ ಶುಡ್ ಮೇಂಟೇನ್ ಸಮ್ ಡಿಸಿಪ್ಲಿನ್, ಬ್ಲಡಿ ವಿಲೇಜ್ ಗಯ್ಸ್ , ಹಾಗೇ ಬಂದುಬಿಡ್ತಾರೆ ಬಚ್ಚಲುಮನೆಗೆ ಬಂದ ಹಾಗೆ" ಅಂದುಬಿಟ್ಟರು. ಜ್ವಾಲಾಮುಖಿಯಂತೆ ಅನಂತನಿಗೆ ರೋಷ ಉಕ್ಕಿ ಬಂದು "ಟಿಕ್ಕಿ ಅಷ್ಟೇ ಅಲ್ಲ ನಾಳೆಯಿಂದ ಪಂಚೆ ಉಟ್ಕೊಂಡು ಬರ್ತೀನಿ ನೀನ್ಯಾವನೋ ಕೇಳೋಕೆ?, ಈ ಕಂಪನಿಯೇನು ನಿಮ್ಮಪ್ಪಂದಾ?, ಇಲ್ಲೆಲ್ಲೂ ರೂಲ್ಸು ಹಾಕಿಲ್ಲ ಟಿಕ್ಕಿ ಹಾಕಿಕೊಂಡಿರಬಾರ್ದು ಅಂತ, ನೀನು ಕೊಡೋ ಟಾರ್ಗೆಟ್ಸ್ ಮುಟ್ಟದೇ ಇದ್ರೆ ಕೇಳು ಅದು ಬಿಟ್ಟು ಎಕ್ಸ್ಟರ್ನಲ್ ಅಪಿಯರೆನ್ಸ್ ಬಗ್ಗೆ ಮಾತಾಡೋಕೆ ನಿನಗ್ಯಾವ ಹಕ್ಕೂ ಇಲ್ಲ" ಅಂತ ತಿರುಗಿಸಿ ಬೈದೇಬಿಟ್ಟ. ಈ ವಿಷಯ ಸಂದರ್ಶನದಲ್ಲಿ ಇವನ ಉತ್ತರಗಳಿಂದ ಸಂತಸಗೊಂಡಿದ್ದ ಮೇಲಿನವರವರೆಗೆ ಹೋಗಿ ಒಳ್ಳೆಯ ಹುಡುಗನನ್ನು ಕಳೆದುಕೊಳ್ಳಲಿಷ್ಟವಿಲ್ಲದೇ ಅವರು ಕೊನೆಗೆ ಬಾಸಿಗೇ ತಿಳಿಹೇಳಿ ಟಿಕ್ಕಿ ಹಾಕಿಕೊಂಡು ಬರಲು ಅನುಮತಿಯನ್ನೂ ಕೊಟ್ಟರು. ಅನಂತ ಕಿವಿಯುಬ್ಬಿಸಿ ಆಫೀಸಿಗೆ ಬರಲು ಶುರುಮಾಡಿದ. ಇಷ್ಟರವರೆಗೆ ಇರಿಸುಮುರುಸು ಉಂಟುಮಾಡುತ್ತಿದ್ದ ಟಿಕ್ಕಿ ಈಗ ಅವನ ಸ್ವಾಭಿಮಾನ-ಆತ್ಮಗೌರವದ ದ್ಯೋತಕವಾಯಿತು. ಬೂದಿ ಮುಚ್ಚಿದ ಕೆಂಡದಂತೆ ಎಲ್ಲವೂ ತಣ್ಣಗಾಯಿತು. ಬಾಸಿಗೆ ಅನಂತನ ಮೇಲೆ ಆಕ್ರೋಶ ಉರಿಯುತ್ತಿದ್ದರೂ ಎಲ್ಲಾ ಕೆಲಸಗಳನ್ನು ಸರಿಯಾಗಿ ಮಾಡಿ ಮುಗಿಸುತ್ತಿದ್ದ ಅವನಿಗೆ ಏನೂ ಮಾಡಲಾಗಲಿಲ್ಲ. ಕೆಲವು ಸಮಯದಲ್ಲಿ ಬಾಸಿಗೆ ಬೇರೆ ಕಡೆ ವರ್ಗವೂ ಆಯಿತು. ಮಾರನೇ ದಿನವೇ ಅನಂತ ಟಿಕ್ಕಿ ತೆಗೆಸಿದ.......

                  -ಸಂಪತ್ ಸಿರಿಮನೆ

6 comments: