1)
ನಿನ್ನ ಸುಂದರ ಮೊಗವ ನೆನೆನೆನೆದು ನಸುನಗುತ
ಪೌರ್ಣಮಿಯ ಚಂದ್ರನಡಿ ನದಿಗುಂಟ ನಡೆದಿರುವೆ ಒಲವಿರದೇ ಕೃಶವಾದ ಹಡಬಿಟ್ಟಿ ಬದುಕೆನದು ಮರೆತಿರುವ ನಿದ್ರೆಯೊಂದೊಮ್ಮೆ ಬರಬಾರದೇ?? ಹಾಳೆಗಟ್ಟಲೆ ಪ್ರೇಮಪತ್ರಗಳು ಕೊರಗುತಿವೆ ಪುಕ್ಕಲನ ಕೈಯಿಂದ ಮೋಕ್ಷವಿಲ್ಲದ ದೆಸೆಗೆ ಯಾವುದೋ ಬಿಳಿಹಕ್ಕಿ ಓಲೆಯನು ಹೊತ್ತೊಯ್ದು ಕೊನೆಪಕ್ಷ ಕನಸಿನಲಿ ನೀನು ಸಿಗಬಾರದೇ???
2)
ಕಾಣದವನಾಡಿಸುವ ತೊಗಲುಗೊಂಬೆಯ ತೆರದಿ
ಜಗದ ಜಂಗುಳಿಯಲ್ಲಿ ಜೀವ ಸವೆಸಿರುವಾಗ ನಿನ್ನ ನೆನಪಿನ ಮಿಂಚು ಮಳೆಯ ಸುರಿಸಿದ ಪರಿಗೆ ಮನದ ಮೈದಾನದಲಿ ಕೆಸರು ಕೆಸರು.... ಎಳೆಯ ಮಗುವಿನ ಮಾತ ಮಾತೆಯರಿಯುವ ರೀತಿ ಎನ್ನೊಲವ ಅರ್ಥೈಸಿ ಮುಗುಳುನಕ್ಕರೆ ನೀನು ಜತನದಲಿ ಕಾಪಿಟ್ಟ ಕನಸ ಬೀಜಗಳೊಡೆದು ಬಯಲುಸೀಮೆಯ ಬಾಳು ಹಸಿರು ಹಸಿರು.......
- ಸಂಪತ್ ಸಿರಿಮನೆ
No comments:
Post a Comment