(ಆತ್ಮ)ಹತ್ಯೆ

ಬಡಪಾಯಿ ಲೇಖನಿಯು ಕೊನೆಯುಸಿರೆಳೆದಿದೆ
ಕುತ್ತಿಗೆಯನು ಒತ್ತಿದ್ದಕ್ಕೆ ಉಸಿರುಗಟ್ಟಿ ಸತ್ತಿದೆ
ಸಡಿಲಬಿಡಬೇಕಿತ್ತು ಚೂರಾದರೂ ನರಾಧಮ
ಜೊತೆಗಿದ್ದೇ ಕೊಲೆಗೈದ ಕಲೆಗಾರ ಕವಿಪುಂಗವ
ಅಷ್ಟೇನೂ ಸಿಟ್ಟುತೋರಿಸುವಷ್ಟಿರಲಿಲ್ಲ,
ತೀರಾ ಅವನದೇ ಅಸಹಾಯಕತೆಗೆ
ಅವನ ತಲೆಯಲ್ಲಿ ಹಣ್ಣಾಗದಿದ್ದಕ್ಕೆ ಕವನದ ಕಾಯಿ,
ಅದೇನು ಮಾಡೀತು ಪಾಪ ಬಡಪಾಯಿ ಶಾಯಿ?
ಗೋಣು ಮುರಿಯುವ ಮುನ್ನ ನೆನಪಿಸಿಕೊಳ್ಳಲಿಲ್ಲವಲ್ಲ ಅವ
ಎಷ್ಟಾದರೂ ಬೇಗ ಮರೆಯುವವರೇ ಮನುಷ್ಯರು
ಆದರೂ ಅದೇನು ನಿನ್ನೆಮೊನ್ನೆಯ ಬಂಧವೇ?
ಅದೆಷ್ಟು ವಸಂತಗಳ ನೋಡಲಿಲ್ಲ ಭ್ರಾತೃಗಳಂತೆ?
ಸೀಸದ ಕಡ್ಡಿಯ ಕವಚ ಕವಿವರ್ಯನ ಕೈಸೇರಿದ್ದು ಅಂದು,
ಮೊದಲ ಬಾರಿಗೆ ಪ್ರಾಸವಿಟ್ಟು ಗಲೀಜಾಗಿ ಗೀಚಿದಾಗ
ಕಾವ್ಯೋತ್ಪತ್ತಿಗೆ ರಹದಾರಿಯಾಗಿ ಇಪ್ಪತ್ತಿಪ್ಪತ್ತೈದು ಮಳೆಗಾಲವಾಯ್ತು
ಮುಗಿದೆಸೆದ ಕಡ್ಡಿಗಳೇ ಉರುಳಿದ ಕಾಲದ ಮಾಪಕ
ಕವಚವು ಅನುದಿನ ಸವೆದರೂ ಸಾಯದ ಸ್ಥಾವರ
ಪ್ರಾಸವು ಮಾಸಿ ಪ್ರೇಮಪತ್ರಗಳ ಗೀಚಿದ ಮೇಲೆ
ಐದಾರು ವಿರಹಗಳು ಪದ್ಯಗಳ ತಬ್ಬಿಹಿಡಿದ ಮೇಲೆ
ಪ್ರೀತಿಗಳ ಸಾವಾಗಿ ಶೋಕಗೀತೆಗಳ ಮಣ್ಣುಹಾಕಿದ ಮೇಲೆ
ಗಂಭೀರಕಾವ್ಯಗಳು ಪ್ರೌಢತೆಯ ಸೂಸಿದ ಮೇಲೆ
ಐದಾರು ಬಿರುದು ಬಾವಲಿಗಳು, ನೂರಿನ್ನೂರು ಅಭಿಮಾನಿಗಳು
ಕವಿಯ ಗತ್ತಿನ ಮತ್ತಿಗೆ ಮದಿರೆಯಾದ ತರುವಾಯ
ಇರುವುದೆಲ್ಲವ ಬಿಟ್ಟು ಬರೆಯುವುದೇ ಬದುಕಾದ ಬಳಿಕ
ಬಂದಿತಲ್ಲ ಸೃಜನಶೀಲತೆಗೆ ಅಚಾನಕ್ಕು ಬರಗಾಲ!
ನಿಮಿಷಗಳು, ಗಂಟೆಗಳು, ದಿನಗಟ್ಟಲೆ ಕೊಸರಿದರೂ
ತಲೆಯಲ್ಲಿ ಒಂದು ಹನಿ ಕಾವ್ಯದ ಸುಳಿವಿಲ್ಲ
ಭಾವನೆಗಳ ಬಿದಿರುಮೆಳೆ ಹೂಬಿಟ್ಟು ಕುಳಿತಿದೆ
ಪದಗಳೊಂದಿಷ್ಟುದುರುತಿವೆ ಯಾತಕ್ಕೂ ಬರದವು
ಬಿದಿರಕ್ಕಿಯಲಿ ಎಂತಾದರೂ ಅನ್ನವನು ಮಾಡುವುದುಂಟೇ?
ಅಲ್ಲೇ ಶುರುವಿಟ್ಟಿದ್ದು ಹತಾಶೆಯ ಬೆಂಕಿಯಲ್ಲಿ ಕೋಪದ ಜ್ವಾಲೆ
ಹಸಿದುಬಾಯ್ತೆರೆದು ಕುಳಿತಿದ್ದ ವೈಫಲ್ಯದ ಸುಳಿಯೊಳಗೆ
ಜೀವಮಾನದ ಸಾಧನೆಯೆಲ್ಲ ಅಂತರ್ಧಾನವಾದಾಗ
ನರನರಗಳಲ್ಲೂ ಸತ್ತ ಕವಿಯ ಹೆಣದ ವಾಸನೆ
ಪಂಖಕ್ಕೆ ಕಟ್ಟಿದ ಪಂಚೆಯೊಳಗೆ ಕೊರಳುಕೊಟ್ಟು
ಕುರ್ಚಿಯ ಒದೆದದ್ದು ಔಪಚಾರಿಕತೆಯಷ್ಟೇ
ಹೋದವನು ಒಬ್ಬನೇ ಹೋಗಲಿಲ್ಲ, ಕೊನೆಘಳಿಗೆಯಲ್ಲಿ
ಲೇಖನಿಯನೂ ಕೊಂದುಹೋದ ಅದರಭಿಪ್ರಾಯವನೂ ಕೇಳದೇ
ಕೆರೆಗೆ ಹಾರುವ ತಾಯಿ ಕಂಕುಳಕಂದಮ್ಮನೊಂದಿಗೆ ಹಾರುವಂತೆ
ದೇಹಗಳುಳಿದಿವೆ ನಿಸ್ತೇಜ, ಕವಿಯದ್ದೂ-ಲೇಖನಿಯದ್ದೂ
ಕವಿಗೆ ಸಂಸ್ಕಾರ, ಧರ್ಮೋದಕ, ವೈಕುಂಠ ಸಮಾರಾಧನೆಯಿದೆ
ಮೊದಲೊರ್ಷ ವರ್ಷಾಂತಕ, ನಂತರ ಸತತ ತಿಥಿ
ನಾಲ್ಕಾರು ಜನ ತೂತುವಡೆ ತಿಂದು ಕವಿಯ ಸ್ಮರಿಸಿ ತೇಗುತ್ತಾರೆ
ಲೇಖನಿಯ ಆತ್ಮ ಮಾತ್ರ ಒಬ್ಬಂಟಿ ತಿರುಗುತಿದೆ ಮೋಕ್ಷವಿಲ್ಲದೇ;
ತನ್ನಿಂದ ಹೊರಬಂದ ಕವನಗಳ ಗುನುಗುತ್ತಾ,
ಉತ್ಪಾದನೆಯುತ್ತುಂಗದಲ್ಲಿರುವ ಲೇಖನಿಗಳೊಳತೂರಿ
ಪದಪುಂಜಗಳ ಹಿಸುಕಿ ಕವಿಗಳ ಕೈಕಡಿಯುತ್ತಾ,
ಕವಿತ್ವದ ಸಾವಿಗೊಂದು ಪ್ರೇತಗೀತೆಯ ಹೊಸೆಯುತ್ತಾ....

                                    - ಸಂಪತ್ ಸಿರಿಮನೆ

No comments:

Post a Comment