ನಾ ಕಂಡ ನೋಯ್ಡಾ

ಒಂದು ಊರು ಹೇಗೆ ಹುಟ್ಟುತ್ತದೆ ಎನ್ನುವುದು ಬಹಳ ಕುತೂಹಲಕಾರಿ ವಿಷಯ ನನ್ನ ಪ್ರಕಾರ. ಊರು ಎಂದರೆ ನೂರಾರು ಜನ ಇರುವ ಹಳ್ಳಿಯೂ ಆಗಬಹುದು, ಸಾವಿರಾರು ಜನವಿರುವ ಪಟ್ಟಣವೂ ಆಗಬಹುದು, ಲಕ್ಷಾಂತರ ಜನವಿರುವ ನಗರವೂ ಆಗಬಹುದು. ಒಟ್ಟಿನಲ್ಲಿ ಊರು ಎಂದರೆ ಅಲ್ಲಿ ಒಂದಷ್ಟು ಜನರಿರಬೇಕು, ಒಂದು ಚೂರು ಜೀವಂತಿಕೆಯಿರಬೇಕು, ಎಲ್ಲರನ್ನೂ ಒಳಗೊಂಡು ತನ್ನಿಂದ ತಾನೇ ನಡೆದುಕೊಂಡು ಹೋಗುವ ಒಂದು ದೈನಂದಿನ ಸ್ವಯಂಚಾಲಿತ ವ್ಯವಸ್ಥೆಯಿರಬೇಕು. ಇದೆಲ್ಲಕಿಂತ ಮುಖ್ಯವಾಗಿ ಅಲ್ಲಿ ಬಾಂಧವ್ಯದ ಸೆಲೆಯಿರಬೇಕು. ಇಷ್ಟೆಲ್ಲಾ ಸಾಮಗ್ರಿಗಳು ಒಟ್ಟಾಗಬೇಕು ಎಂದರೆ ಈ ಊರು ಎಂಬುದರ ಜನನ ಮತ್ತು ಬೆಳವಣಿಗೆ ಹಂತಹಂತಗಳಲ್ಲಿ ಅಲಿಖಿತ ನಿಯಮಗಳನ್ನು ಅನುಸರಿಸಿ ಸಾಗಬೇಕು. ಉದಾಹರಣೆಗೆ ಒಂದು ಭೂಪ್ರದೇಶದಲ್ಲಿ ಒಂದೈವತ್ತು ನೂರು ಜನ ವಾಸ ಮಾಡಲು ಶುರುಮಾಡಿದರೆಂದರೆ ಅದು ಊರು ಹುಟ್ಟುವ ಮುನ್ಸೂಚನೆ. ಆಗ ಅಲ್ಲಿಗೆ ಮೊದಲು ಬರುವುದು ದಿನಸಿ ಮತ್ತು ತರಕಾರಿ ಅಂಗಡಿ. ನಂತರ ಒಂದು ಖಾನಾವಳಿ. ಅದಾದ ಮೇಲೆ ಪ್ರಾಯಶಃ ಒಂದು ಸರ್ಕಾರಿ ಪ್ರಾಥಮಿಕ ಶಾಲೆ, ಒಂದು ಜನರಲ್ ಸ್ಟೋರು ಮತ್ತು ಒಂದು ಅಂಚೆ ಕಛೇರಿ. ಇದಾದ ನಂತರವೇ ಅಲ್ಲಿ ಉದ್ಭವವಾಗುವುದು ಒಂದು ದೇವಸ್ಥಾನ. ಇವುಗಳ ಬೆನ್ನತ್ತಿ ಮಿಲ್ಲು, ಚಪ್ಪಲಿ ಅಂಗಡಿ, ಕ್ಷೌರದಂಗಡಿ, ಪಾತ್ರೆ ಅಂಗಡಿ, ಬಟ್ಟೆ ಅಂಗಡಿ, ಗ್ಯಾಸ್ ಏಜೆನ್ಸಿ, ಬ್ಯೂಟಿ ಪಾರ್ಲರ್ರು, ಐಸ್ ಕ್ರೀಮ್ ಪಾರ್ಲರ್ರು, ಶೋರೂಮು, ಗ್ಯಾರೇಜು, ಕೊನೆಗೆ ಒಂದು ಬಾರು ಮತ್ತು ಮಟನ್ ಶಾಪು. ಇವೆಲ್ಲದರ ಹಿಂದೆಯೇ ಕೇಬಲ್ಲಿನವರು, ಎಲೆಕ್ಟ್ರಿಷಿಯನ್ನು, ಪ್ಲಂಬರ್ರು, ಮನೆ ದಲ್ಲಾಳಿಗಳು ಎಲ್ಲರೂ ಮಧ್ಯಮಧ್ಯದಲ್ಲಿ ಬಂದು ಸೇರಿಕೊಳ್ಳುತ್ತಾರೆ. ಇಷ್ಟಾದ ಮೇಲೆ ಅಲ್ಲಿಗೆ ಒಂದು ಬ್ಯಾಂಕು ಬರುತ್ತದೆ, ಬಹುಶಃ ಪ್ರಾರಂಭಕ್ಕೆ ಸ್ಟೇಟ್ ಬ್ಯಾಂಕು!. ನಂತರ ಒಂದು ಗ್ರಾಮ ಪಂಚಾಯ್ತಿಯದ್ದೋ, ಪಟ್ಟಣ ಪಂಚಾಯ್ತಿಯದ್ದೋ ಕಛೇರಿ. ಆಮೇಲೆ ಇಷ್ಟೆಲ್ಲಾ ಜನ ಸೇರಿದ ಮೇಲೆ ವ್ಯಾಜ್ಯಗಳಾಗದೇ ಇರುತ್ತವೆಯೇ?, ಅದಕ್ಕೊಂದು ಪೋಲಿಸ್ ಠಾಣೆ, ಆಮೇಲೊಂದು ನ್ಯಾಯಾಲಯ. ಇಷ್ಟಾಗುವಷ್ಟರಲ್ಲಿ ಬದಿಯಲ್ಲಿ ಝೆರಾಕ್ಸ್ ಅಂಗಡಿಯವರೂ, ಸೈಬರ್ ಕೆಫೆಯವರೂ ಬಂದಿರುತ್ತಾರೆ. ಹಾಗೆಯೇ ಒಂದು ಚಿತ್ರಮಂದಿರ ತಲೆಯೆತ್ತುತ್ತೆ. ಒಂದೆರಡು ಸರ್ಕಾರಿ ಬಸ್ಸುಗಳೂ, ಅಷ್ಟರಲ್ಲಿ ಆ ಊರಿನಲ್ಲೇ ಶ್ರೀಮಂತರಾಗಿರುವವರದ್ದೋ, ಪಕ್ಕದೂರಿನವರದ್ದೋ ಒಂದಷ್ಟು ಖಾಸಗಿ ಬಸ್ಸುಗಳು ಓಡಾಡಲು ಶುರುಮಾಡುತ್ವೆ. ಅಷ್ಟರಲ್ಲಿ ಊರದೇವರ ಜಾತ್ರೆ ಬರುತ್ತೆ, ತೇರೆಳೆಯಲು ಒಂದಷ್ಟು ಯುವಕ ಸಂಘಗಳ ಹುಡುಗರು ಪೈಪೋಟಿ ನಡೆಸುತ್ತಿರುತ್ತಾರೆ. ಅದು ಮುಗಿದರೆ ಚುನಾವಣೆ, ಅಲ್ಲೇ ಯಾರೋ ಒಬ್ಬ ಪುಢಾರಿ ಹುಟ್ಟುತ್ತಾನೆ. ಅದಾದ ಮೇಲೆ ಊರಿನಿಂದ ಹುಟ್ಟಿದ ಸಾಧಕರು, ಸಾಧಿಸಿದ ಮೇಲೆ ಹೆಮ್ಮೆಯಿಂದ ನಮ್ಮ ಊರು ಎಂದು ನೆನಪಿಸಿಕೊಳ್ಳುತ್ತಾರೆ. ಅಲ್ಲಿಗೆ ಜನರಿಂದಲೇ ಹುಟ್ಟಿದ ಊರು ನಿಟ್ಟುಸಿರುಬಿಡುತ್ತದೆ. ಈ ಬೆಳವಣಿಗೆಯ ಚಕ್ರದಲ್ಲಿ ಸಾರ್ಥಕತೆಯಿದೆ, ನೆಮ್ಮದಿಯಿದೆ. ಈಗ ಇಷ್ಟೆಲ್ಲಾ ಯಾಕೆ ಕೊರೆದೆ ಅಂದರೆ ಮೇಲೆ ಕಂಡ ರೀತಿಯಲ್ಲಿ ಊರು ಬೆಳೆಯಲು ದಶಕಗಳೇ ಬೇಕಾಗಬಹುದು. ಅದು ಗಜಗರ್ಭದ ನಾರ್ಮಲ್ ಹೆರಿಗೆಯ ತರಹ. ಅಕಸ್ಮಾತ್ ಇಲ್ಲೂ ಸಿಸೇರಿಯನ್ ಪ್ರಯತ್ನಿಸಿದರೆ ಹೇಗಿರುತ್ತದೆ??. ಫೆಬ್ರವರಿ 29ಕ್ಕೆ ಹೆರಿಗೆಯ ದಿನಾಂಕವಿರುವ ತಾಯಂದಿರಲ್ಲಿ ಬಹಳಷ್ಟು ಜನ ವೈದ್ಯರನ್ನು ಒತ್ತಾಯಿಸಿ ಮಗುವನ್ನು ತಮ್ಮಿಷ್ಟಕ್ಕೆ ಬೇಗ ಭೂಮಿಗಿಳಿಸುತ್ತಾರಲ್ಲಾ ಹಾಗೇ ಒಂಚೂರು ಫಾಸ್ಟ್ ಫಾರ್ವರ್ಡು ಮಾಡಿ ನಮ್ಮಿಷ್ಟಕ್ಕೆ ಊರು ಹುಟ್ಟಿಸಬಹುದೇ? ಎಂಬ ವಿಚಿತ್ರ ಪ್ರಶ್ನೆಗೆ ಉತ್ತರವಾಗಿ ನಿಂತಿರುವಂತಹ ನಗರ ನೊಯ್ಡಾ. ಅರ್ಥಾತ್ (ನ್ಯೂ ಓಖ್ಲಾ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಥಾರಿಟಿ). ಹೌದು, ಇದಂತೂ ಬಿಲ್ಕುಲ್ ಬಲವಂತದ ಹೆರಿಗೆ. ಆ ಬಲವಂತದ ಶಿಶುವಿನೊಡಲಲ್ಲಿ ನಾನು ಕಳೆದ ಒಂದೈವತ್ತು ದಿನಗಳ ಬಗ್ಗೆ ಒಂಚೂರು ಬರೆಯೋಣ ಅಂತ.
             ಮತ್ತೇನಿಲ್ಲ, ನಂದೂ ಒಂದು ಮಾಮೂಲಿ ಬಹುರಾಷ್ಟ್ರೀಯ ಕಂಪನಿಯ ಮಾಮೂಲಿ ಗಗನಚುಂಬಿ ಕಟ್ಟಡದ ಲಿಫ್ಟಿನಲ್ಲೇ ಹೋಗುವಷ್ಟು ಎತ್ತರದ ಯಾವುದೋ ಮಾಮೂಲಿ ಅಂತಸ್ತಿನಲ್ಲಿ ಕಂಪ್ಯೂಟರಿನ ಮುಂದೆ ಕೂತು ಕೀಬೋರ್ಡು ಕಟಕಟ ಅನ್ನಿಸುವ ಅತಿಮಾಮೂಲಿ ಕೆಲಸ. ಇನ್ನೇನು. ಮಾಮೂಲಿಯಂತೆ ನನಗೂ ಬೆಂಗಳೂರು ಸಿಗುತ್ತದೆ ಅಂತಿದ್ದವನಿಗೆ ಕಂಪನಿ ದಿಢೀರ್ ಶಾಕ್ ಕೊಟ್ಟಿತ್ತು. ನನ್ನನ್ನು ಏಕ್ದಮ್ 2300 ಚಿಲ್ಲರೆ ಕಿಲೋಮೀಟರ್ ದೂರವಿರುವ ಉತ್ತರಪ್ರದೇಶದ ನೋಯ್ಡಾಕ್ಕೆ ಕಳುಹಿಸುವ ತೀರ್ಮಾನಕ್ಕೆ ಠಸ್ಸೆ ಒತ್ತಿಬಿಟ್ಟಿತ್ತು. ತಲಕಾವೇರಿಗೆ ಪ್ರವಾಸಕ್ಕೆ ಹೋಗಿದ್ದಾಗ ಮೊಬೈಲಲ್ಲಿ ರೋಮಿಂಗ್ ಚಿಹ್ನೆ ಬಂದಿದ್ದು ನೋಡಿ "ಅಬ್ಬಾ ಅಂತೂ ಹೊರರಾಜ್ಯಕ್ಕೆ ಕಾಲಿಟ್ಟೆ" ಅಂತ ಖುಷಿಪಟ್ಟುಕೊಂಡಿದ್ದವ ನಾನು. ಕೊಟ್ಟಿಗೆ, ಮೈದಾನ, ಗೊಚ್ಚೆಗುಂಡಿ ಅಂತ ಆರಾಮಾಗಿ ಬಿದ್ದೆದ್ದುಕೊಂಡಿದ್ದ ಕೋಣಕ್ಕೆ ಇದ್ದಕ್ಕಿದ್ದಂತೆ ಹಿಮಾಲಯಕ್ಕೆ ಹೋಗಲು ಆಜ್ಞಾಪಿಸಿದಂತಾಗಿತ್ತು ನನ್ನ ಪರಿಸ್ಥಿತಿ. ನುಣುಚಿಕೊಳ್ಳುವಂತಿರಲಿಲ್ಲ, ಅನ್ನ ಸಂಪಾದನೆಯ ಪ್ರಶ್ನೆ. ಉಳ್ಳವರು ಶಿವಾಲಯವ ಕಟ್ಟುವರು ಶೈಲಿಯಲ್ಲಿ ಹೇಳುವುದಾದರೆ "ದುಡ್ಡುಳ್ಳವರು ಫಾರಿನ್ನಿಗೆ ಹೋಗಿ ಎಮ್ಮೆಸ್ಸು ಮಾಡುವರು, ನಾನೇನು ಮಾಡಲಿ ಬಡವನಯ್ಯ; ರಿಸರ್ವೇಶನ್ನುಳ್ಳವರು ಸರ್ಕಾರಿ ಕೆಲಸಕ್ಕೆ ಹೋಗುವರು, ನಾನೇನು ಮಾಡಲಿ ಬ್ರಾಹ್ಮಣನಯ್ಯ; ಶ್ರಮಜೀವಿಗಳು ಐ.ಎ.ಎಸ್ಸು ಮಾಡುವರು, ನಾನೇನು ಮಾಡಲಿ ಶುದ್ಧ ಸೋಂಬೇರಿಯಯ್ಯ" ಎನ್ನುವಂತಹ ಪರಿಸ್ಥಿತಿಯಿದ್ದಿಂದರಿಂದ ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಟಿಕೆಟ್ಟು ಬುಕ್ಕು ಮಾಡಿಯಾಯಿತು. ವಿಮಾನಪ್ರಯಾಣ ಅನ್ನುವುದೇ ಒಂಥರಾ ಕುತೂಹಲ, ದುಗುಡ ತಂದಿಟ್ಟಿತ್ತು. ಯಾಕೆಂದರೆ ಮೊನ್ನೆಮೊನ್ನೆ ಇಂಜಿನಿಯರಿಂಗು ಮುಗಿಯುವವರೆಗೂ ಆಕಾಶದಲ್ಲಿ ವಿಮಾನದ 'ವ್ರೂಮ್....' ಎಂಬ ಸದ್ದು ಕೇಳಿದೊಡನೇ ಉಟ್ಟಬಟ್ಟೆಯಲ್ಲೇ ಅದರದ್ದೊಂದು ಮೈಕ್ರೋಸ್ಕೋಪಿಕ್ ವ್ಯೂ ಪಡೆದು ಜೀವನ ಧನ್ಯ ಮಾಡಿಕೊಳ್ಳಲು ಹೊರಗೋಡಿಬರುತ್ತಿದ್ದೆವು. ಕ್ರಿಕೆಟ್ಟು ಆಡುತ್ತಿರುವಾಗ ತಿಳಿನೀಲಿ ಆಗಸದಲ್ಲೆಲ್ಲಾದರೂ ಉದ್ದುದ್ದ ಬಿಳಿ ಧೂಮದ ಗೆರೆ ಕಂಡರೆ "ಅಲ್ಲಿ ನೋಡ್ರೋ ಜೆಟ್ಟು!!" ಅಂತ  ಐದು ನಿಮಿಷ ಆಟ ನಿಲ್ಲಿಸುತ್ತಿದ್ದ ನಮ್ಮಂತ ಮಾಮೂಲಿ ಮನುಷ್ಯರಿಗೆ ವಿಮಾನದೊಳಗೆ ಕೂತು ಹಾರುವುದು ಎನ್ನುವುದು ಮೈಮನಗಳನ್ನೆಲ್ಲಾ ರೋಮಾಂಚನಗೊಳಿಸುವಂತಹ ವಿಷಯ. ಹೊರಡುವ ದಿನ ಹತ್ತಿರ ಬಂದ ಹಾಗೇ ಅಮ್ಮ ಬೇರೆ "ಮುಂದಿನವಾರ ಇಷ್ಟೊತ್ತಿಗೆ ವಿಮಾನದಲ್ಲಿರ್ತೀಯಾ" ಅಂತೆಲ್ಲಾ ಹೇಳಿ ಒಂಥರಾ ಖುಷಿಯ ಸಿಹಿ, ಒಂಥರಾ ಹೆದರಿಕೆಯ ಹುಳಿ ಸೇರಿ ಕಿತ್ತಳೆಹಣ್ಣಿನ ತರ ಆಗಿದ್ದೆ. ಬೆಂದಕಾಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ಹಂತದ ತಪಾಸಣೆ ಮುಗಿಸಿ ಬೋರ್ಡಿಂಗಿಗೆ ಕಾಯುತ್ತಾ ಕಿಟಕಿಯ ಮೂಲಕ ಒಳ್ಳೆ ಕೊಪ್ಪ ಬಸ್ ನಿಲ್ದಾಣದಲ್ಲಿ 'ಸಹಕಾರ ಸಾರಿಗೆ' ಬಸ್ಸುಗಳ ತರ ನಿಂತಿರೋ ವಿಮಾನಗಳನ್ನು ನೋಡುತ್ತಿದ್ದಾಗ "ಪ್ಯಾಸೆಂಜರ್ಸ್ ಟು ಡೆಲ್ಲಿ-ಲಕ್ನೋ ಫ್ಲೈಟ್ ಪ್ಲೀಸ್ ಕಂ ಫಾರ್ವರ್ಡ್" ಎಂಬ ಘೋಷಣೆ ಒಮ್ಮೆಗೇ ಪೂರ್ತಿ ಗಾಬರಿಯುಕ್ಕಿಸಿ ಪೂರ್ತಿ ಲಿಂಬೆಹಣ್ಣಾಗಿಬಿಟ್ಟೆ!!. ಆ ಗಾಬರಿಯ ಮಧ್ಯದಲ್ಲಿ ಅಂದದ ನಗುಬೀರುತ್ತಾ ಸ್ವಾಗತಿಸಿದ ಗಗನಸಖಿಯರನ್ನು ಸರಿಯಾಗಿ ಕಣ್ತುಂಬಿಕೊಳ್ಳಲೂ ಆಗಲಿಲ್ಲ. ಕೂತಿದ್ದಾಯಿತು, ಹೊಟ್ಟೆಗೆ ಬೆಲ್ಟು ಬಿಗಿದುಕೊಂಡಿದ್ದಾಯಿತು. ಮೊಬೈಲನ್ನು ನಿದ್ರೆಗೆ ಕಳಿಸಿ ಎಂಬ ಆಜ್ಞೆಯನ್ನು ಗಡಿಬಿಡಿಯಿಂದ ಪಾಲಿಸಿ ಅತ್ತ ಇತ್ತ ನೋಡಿದರೆ ಎಲ್ಲರೂ ಆರಾಮವಾಗಿ ಮೊಬೈಲು, ಲ್ಯಾಪ್ಟಾಪು ಬಳಸುತ್ತಿದ್ದಾರೆ!. ಬೇಕಾದಷ್ಟು ಸಲ ಪ್ರಯಾಣ ಮಾಡಿದ ಮೇಲೆ ಈ ತರ ಬೇಕಾಬಿಟ್ಟಿತನ ಬರುತ್ತದೇನೋ. ನನ್ನ ಮೊಬೈಲಿನ ಏರೋಪ್ಲೇನು ಮೋಡು ಮಾತ್ರ ಜೀವನದಲ್ಲಿ ಮೊದಲ ಬಾರಿಗೆ ಹೆಸರಿಗೆ ತಕ್ಕ ಕೆಲಸ ಮಾಡಿದ ಖುಷಿಯಲ್ಲಿತ್ತು!. ಅಷ್ಟರಲ್ಲಿ ವಿಮಾನವೇನಾದರೂ ಅಪಘಾತವಾದರೆ ಪ್ಯಾರಾಚೂಟು ಯಾವ ಸಂದಿಯಲ್ಲಿದೆ, ಹೊರಗೆ ಹಾರಲು ತುರ್ತು ನಿರ್ಗಮನದ ಬಾಗಿಲುಗಳು ಯಾವ ಯಾವ ಕಡೆಗಿದೆ ಅಂತೆಲ್ಲಾ ಹೇಳಿ ಮತ್ತಷ್ಟು ಗಾಬರಿಪಡಿಸಿದ್ದಾಯಿತು. ನಿಧಾನಕ್ಕೆ ಆಮೆಗತಿಯಲ್ಲಿ ರನ್ ವೇ ಗೆ ಹೋಗಿ ಒಂದೇ ಸಲ ಅಂಡಿನಲ್ಲಿ ಬೆಂಕಿಯುಗುಳುತ್ತಾ ವೇಗಪಡೆದು ಮುನ್ನುಗ್ಗಿ ಕಾಲೆತ್ತಿ ಆಗಸದತ್ತ ಯಂತ್ರಪಕ್ಷಿ ನೆಗೆದೇಬಿಟ್ಟಿತು. ನನಗೆ ಮಾತ್ರ ಇದೆಲ್ಲೋ ಮಿಸ್ ಹೊಡೀತಾ ಇದೆ, ಯಾಕೋ ವಿಮಾನ ಬೀಳೋ ಹಾಗೆ ಆಗ್ತಿದೆ ಅಂತಲೇ ಅನುಮಾನ. ಕೊನೆಗೂ ಕೆಳಗಿನ ಭೂಮಿಯೆಲ್ಲಾ ಗೂಗಲ್ ಉಪಗ್ರಹದಿಂದ ತೆಗೆದ ಚಿತ್ರಗಳ ತರಹ ಹಸಿರು-ಬಿಳಿ-ನೀಲಿ ಕಾಣುವಷ್ಟು ಮೇಲೆ ಹೋದಮೇಲೆ ಸೀಟ್ ಬೆಲ್ಟ್ ಬಿಚ್ಚಿ, ಬಿಗಿದು ಹಿಡಿದುಕೊಂಡಿದ್ದ ಕಾಲನ್ನು ಉದ್ದಕ್ಕೆ ನೀಡಿ, ಕಟ್ಟಿಕೊಂಡಿದ್ದ ಗಂಟಲು ಸರಿಮಾಡಿಕೊಂಡು, ತಲೆಯನ್ನು ಸೀಟಿಗೊರಗಿಸಿ ಕೂರುವಷ್ಟು ಧೈರ್ಯ ಬಂದಿತು. ಒಂದೂವರೆ ಘಂಟೆಗಿದ್ದ ವಿಮಾನಕ್ಕೆ ನಾಲ್ಕು ಘಂಟೆ ಮುಂಚೆಯೇ ನಿಲ್ದಾಣಕ್ಕೆ ಬಂದು ಚೆಕ್ಕಿನ್ನು ಮಾಡಿಕೊಂಡಿದ್ದರಿಂದ ಕಿಟಕಿ ಬದಿಯ ಸೀಟೇ ಸಿಕ್ಕಿತ್ತು. ಐದು ರೂಪಾಯಿ ಸಕ್ರೆ ಕಾಫಿಗೆ ಮೇಲೊಂದಿಷ್ಟು ನೊರೆ ಹಾಕಿ ನೂರು ರೂಪಾಯಿಗೆ ಮಾರುತ್ತಿದ್ದ 'ಕ್ಯಾಪುಚಿನೋ' ಎಂಬ ಹೆಸರಿನ ವಿಚಿತ್ರ ಪೇಯವನ್ನು ಕುಡಿಯುತ್ತಾ ಇನ್ನೆರಡುಮೂರು ಘಂಟೆಯೊಳಗೆ ನಾನು ತಲುಪುವ ಭೂಪ್ರದೇಶ ಹೇಗಿರಬಹುದು ಎಂದು ಯೋಚಿಸಲು ಶುರುಮಾಡಿದವನಿಗೆ ಪರಿಚಯದವರೆಲ್ಲಾ "ನೋಯ್ಡಾನಾ????..., ಜಾಗ ಸರಿಯಿಲ್ಲ, ಸ್ವಲ್ಪ ಜೋಪಾನ" ಅಂತ ಹೇಳಿದ್ದು ನೆನಪಾಗಿ ಸಣ್ಣಗೆ ಬೆನ್ನುಹುರಿಯಲ್ಲಿ ಛಳಕು ಪ್ರಾರಂಭವಾಯ್ತು. ಈ ರೀತಿ ನಾವು ಹೋಗುವ ಜಾಗದ ಬಗ್ಗೆ ಮುಂಚಿತವಾಗಿಯೇ ಮನಸ್ಸಿನಲ್ಲಿ ಒಂದು ಚಿತ್ರಣ ಮೂಡಿಸಿಕೊಳ್ಳುವುದು ಬಹಳ ಅಪಾಯಕಾರಿ. ಯಾಕೆಂದರೆ ಆನಂತರ ನಾವು ನಮ್ಮೆದುರಿಗೆ ಸಿಗುವ ಎಲ್ಲರನ್ನೂ ನಾವು ಅನುಮಾನದ ದೃಷ್ಟಿಯಿಂದ ನೋಡಲು ಶುರುಮಾಡುತ್ತೇವೆ. ನನ್ನ ವಿಷಯದಲ್ಲಿ ಹಾಗೇನೂ ಆಗಲಿಲ್ಲ. ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನ ಭೂಸ್ಪರ್ಶಿಸಿದ ಮೇಲೆ ಬಸ್ಸಿನಲ್ಲಿ ಒಳಗೆ ಕರೆದುಕೊಂಡು ಹೋಗಿ ಟ್ರಾಲಿಯ ಎದುರು ನಿಲ್ಲಿಸಿದರು. ಅಲ್ಲಿ ನನ್ನ ಬ್ಯಾಗು ನಿಧಾನಕ್ಕೆ ದೂರದಲ್ಲಿ ಬರುತ್ತಿರುವುದು ಕಂಡಾಗ ರೊಮ್ಯಾಂಟಿಕ್ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಜಗತ್ತೇ ಗೆದ್ದುಬಂದ ನಾಯಕನೆಡೆಗೆ ನಾಯಕಿ ನಿಧಾನಗತಿಯಲ್ಲಿ ಓಡಿಬರುತ್ತಿರೋ ಫೀಲಿಂಗು. ಅಲ್ಲಿಂದ ಟ್ಯಾಕ್ಸಿಯಲ್ಲಿ ನಮ್ಮ ಕಂಪನಿಯವರು ಮೊದಲೇ ಕಾಯ್ದಿರಿಸಿದ್ದ ನೊಯ್ಡಾ ಸೆಕ್ಟರ್ 31 ರ ಪಿ.ಕೆ.ಬೊಟಿಕ್ ಹೋಟೆಲ್ ಗೆ ಹೋಗಿ ಬ್ಯಾಗು ಬಿಸಾಕಿ ಹಾಸಿಗೆಯ ಮೇಲೆ ಮೈಚೆಲ್ಲಿದಾಗ ಈ ಪ್ರವಾಸಪ್ರಬಂಧದಲ್ಲಿ ಪೀಠಿಕೆ ಮುಗಿದಂತಾಗಿತ್ತು.

         ಮೊದಲ ಕೆಲಸದ ದಿನ ಎಂದು ಅತ್ಯುತ್ಸಾಹದಿಂದ ಏಳಕ್ಕೆ ಎದ್ದು ಎಂಟಕ್ಕೆ ತಯಾರಾಗಿ ಹೊರಗೆ ಹೋಗಿ ನೋಡಿದರೆ ಊರೆಲ್ಲಾ ಯಾರೋ ಹಂಡೆಗಟ್ಟಲೆ ಸಾಮ್ರಾಣಿ ಹೊಗೆ ಹಾಕಿರುವಂತೆ ಮಂಜುಗಟ್ಟಿ ಮಸುಕುಮಸುಕಾಗಿತ್ತು. ಕಂಪನಿಯ ಟಾಟಾಸುಮೋ ಆರಾಮಾಗಿ ಹತ್ತೂಮುಕ್ಕಾಲಿಗೆ ಬಂದಾಗ ಗೊತ್ತಾಯಿತು ಇಲ್ಲಿ ಎಲ್ಲರ ದೈನಂದಿನ ಚಟುವಟಿಕೆಗಳು ಶುರುವಾಗುವುದೇ ಹನ್ನೊಂದು ಗಂಟೆಯ ಮೇಲೆ ಎಂದು. ಹೋಟೆಲ್ಲಿನಿಂದ ಹೊರಗೆ ಕಾಲಿಟ್ಟರೆ ಮೈಯೊಳಗೆ ಹರಿಯುತ್ತಿರುವ ಐದೂವರೆ ಲೀಟರ್ ರಕ್ತ ಹಂತಹಂತವಾಗಿ ಹೆಪ್ಪುಗಟ್ಟುತ್ತಿದೆಯೇನೋ ಎನಿಸುವಂತೆ ಮಾಡುವ ಪ್ರಚಂಡ ಚಳಿ ಈ ಜೀವನಕ್ರಮಕ್ಕೆ ಕಾರಣವಾಗಿದೆ ಅಂತ ಅರ್ಥವಾಯಿತು.
ಹೋಟೆಲ್ಲಿನಿಂದ ಆಫೀಸಿಗೆ ಸುಮಾರು ಮೂವತ್ತು ಮೂವತ್ತೈದು ಕಿಲೋಮೀಟರ್ ದಾರಿ. ಕೊಪ್ಪದಿಂದ ಶೃಂಗೇರಿಯ ಇಪ್ಪತ್ತೆಂಟು ಕಿಲೋಮೀಟರ್ ದಾರಿ ಕ್ರಮಿಸಲಿಕ್ಕೆ ಬಸ್ಸುಗಳು ಆಕಡೆ ಈಕಡೆ ವಾಲಾಡಿ ವಾಲಾಡಿ ಮುಕ್ಕಾಲು ಗಂಟೆ ತಗೊಳ್ತಾ ಇದ್ದದ್ದನ್ನೇ ನೋಡಿ ಅಭ್ಯಾಸವಿದ್ದ ನನಗೆ ನಾನ್ ಸ್ಟಿಕ್ ತವಾದ ತರ ಕರ್ರಗೆ ನುಣ್ಣಗಿದ್ದ ನೊಯ್ಡಾ-ಗ್ರೇಟರ್ ನೊಯ್ಡಾ ಎಕ್ಸ್ಪ್ರೆಸ್ ವೇ ಮೇಲೆ ನಿಂತಿದೆಯೋ ಚಲಿಸುತ್ತಿದೆಯೋ ಅಂತಲೇ ಗೊತ್ತಾಗದಂತೆ ವಾಹನ ಸುಯ್ಯನೆ ಇಪ್ಪತ್ತು ನಿಮಿಷದಲ್ಲಿ ಆಫೀಸು ತಲುಪುವುದು ಮೊದಮೊದಲಿಗೆ ದೊಡ್ಡ ಅಚ್ಚರಿಯಂತೆ ಕಂಡಿತು. ಸುತ್ತಲೂ ಮಂಜು ಮುಸುಕಿರುವ ವಾತಾವರಣದಲ್ಲಿ ದಿಗಂತದುದ್ದಕ್ಕೆ ಕರ್ರಗೆ ಕಾಲು ಹಾಸಿ ಮಲಗಿದ್ದ ಅಗಲವಾದ ರಸ್ತೆಯ ಮೇಲೆ ಎಲ್ಲಾ ವಾಹನಗಳೂ ತೊಂಭತ್ತು-ನೂರು ಕಿಲೋಮೀಟರ್ ವೇಗದಲ್ಲಿ ಸಾಗುವಾಗ ಕ್ಯಾಬ್ ಚಾಲಕ ಹಾಕಿರುವ ಹಳೇ ಹಿಂದಿ ಹಾಡುಗಳನ್ನು ಕೇಳುತ್ತಾ ಕೇಳುತ್ತಾ ಒಂದು ವಿಚಿತ್ರ ಚಲನಶೀಲ ಜಡತೆ ಸೃಷ್ಟಿಯಾಗುತ್ತೆ. ಕಿವಿಯಲ್ಲೆಲ್ಲಾ ಗುಂಯ್ ಅಂತ ಡಿ.ಟಿ.ಎಸ್. ಶಬ್ದ ಬಂದಂತೆ, ಒಂದು ಕ್ಷಣ ಎಲ್ಲಾ ಸ್ತಬ್ಧವಾಗಿದೆಯೇನೋ ಎಂಬಂತಹ ಜಡತೆ. ಆ ಜಡತೆ ಒಂಥರಾ ಭಯ ಹುಟ್ಟಿಸುತ್ತೆ, ಮನಸ್ಸಿನಲ್ಲಿ ನಮ್ಮ ಅಸ್ತಿತ್ವದ ಬಗ್ಗೆ ನೂರಾರು ಪ್ರಶ್ನೆಗಳನ್ನು ಹುಟ್ಟಿಸುತ್ತೆ, ಅಳು ಬರಿಸುತ್ತೆ, ಕೊನೆಗೆ ನೆಮ್ಮದಿ ನೀಡುತ್ತೆ. ಇಷ್ಟಾದ ಮೇಲೆ ಒಂದು ಸಣ್ಣ ನಿದ್ರೆಯ ಜೋಂಪು ತರಿಸುತ್ತೆ. ಹಾಗೇ ತೂಕಡಿಸಿ ತೂಕಡಿಸಿ ಬಿದ್ದೆನೆನ್ನುವಷ್ಟರಲ್ಲಿ ನೂರ ಹನ್ನೊಂದರಲ್ಲಿ ಇನ್ನೊಂದು ಎಂಬಂತಿರುವ ನಮ್ಮ ಕಂಪನಿಯ ಗೇಟು ಎದುರಾಗಿ ದ್ವಾರಪಾಲಕನ ಕೂಗಿಗೆ ಎಚ್ಚರವಾದಾಗ ಒಂಥರಾ 'ನಾನು ಎಲ್ಲಿದ್ದೀನಿ?' ಅನ್ನುವಂತಹ ಅನುಭವ. ಈ ಘಟನೆಗಳ ಸರಣಿ ಒಂಥರಾ ನನಗೆ ದಿನಾಗಲೂ ಟಾನಿಕ್ ತರ ಇರ್ತಿತ್ತು ಅಂದರೆ ತಪ್ಪಾಗಲ್ಲ. ಕಂಪನಿಯ ಬಹುಮಹಡಿ ಕಟ್ಟಡದೊಳಗಿನ ಬಿಟ್ಟಿ ಕಾಫಿ-ಟೀ, ಟೈಲ್ಸು ಹಾಕಿದ ನೆಲದ ಮೇಲೆ ಶೂ ಹಾಕಿಕೊಂಡು ನಡೆದಾಗ ಬರುವ 'ಟಕಟಕ' ಶಬ್ದ ನೀಡುವ ಸಿ.ಐ.ಡಿ. ಆಫೀಸರ್ ಫೀಲಿಂಗು, ಒಲಿಂಪಿಕ್ಸ್ ಪದಕ ಗೆದ್ದವರೇನೋ ಎಂಬಂತೆ ನೋಡುವ ಸೆಕ್ಯುರಿಟಿಯವರ ಅತಿಗೌರವ ಒಂದೆರಡು ಮೂರು ದಿನ ಖುಷಿ ಕೊಟ್ಟಿತ್ತಷ್ಟೆ. ಆಮೇಲೆ ಮಾಮೂಲಿನಂತೆ 'ಅಯ್ಯೋ ನಂದೂ ಒಂದು ಲೈಫು' ಅನ್ನಿಸೋಕೆ ಶುರುವಾಯಿತು. ಆದರೆ ಅದಕ್ಕೆ ನೋಯ್ಡಾವನ್ನು ದೂರುವುದು ತಪ್ಪಾಗುತ್ತದೆ ಬಿಡಿ. ಅದು ನನ್ನೊಳಗಿನ ಡಿಫಾಲ್ಟ್ ಸೆಟ್ಟಿಂಗು. ತೀರಾ ರಂಗ್ ದೆ ಬಸಂತಿ, ಚಕ್ ದೇ ಇಂಡಿಯಾ, ಬಂಗಾರದ ಮನುಷ್ಯ ಸಿನಿಮಾಗಳನ್ನು ನೋಡಿದಾಗ ಜೀವನದಲ್ಲಿ ಏನಾದ್ರೂ ಸಾಧನೆ ಮಾಡ್ಬೇಕು, ದಂಟು ಕಡೀಬೇಕು, ಕಡಿದು ಗುಡ್ಡೆ ಹಾಕ್ಬೇಕು ಅಂತ ಎದೆಸೆಟೆಸಿಕೊಂಡು ಗುಂಪುಗುಂಪಲ್ಲಿ ಎದ್ದುನಿಂತು ಆಮೇಲೆ 'ಸರಿ ಏನು ಮಾಡೋದು?' ಅನ್ನೋ ಪ್ರಶ್ನೆ ಬಂದಾಗ ಮಾತ್ರ ಒಬ್ಬೊಬ್ರಿಗೆ ಒಂದೊಂದು ಉಪಾಯ ಬಂದು ಒಮ್ಮತ ಮೂಡದೆಯೇ ಕೊನೆಗೆ ಕ್ರಾಂತಿಯನ್ನು ಒಂದೆರಡು ದಿನ ಮುಂದೂಡಿ ಆರಾಮಾಗಿ ಇನ್ನೊಂದ್ ಸಿನಿಮಾ ನೋಡ್ಕೊಂಡು ಅನ್ನ ತಿಂದು ರಗ್ಗು ಹೊದ್ದು ಮಲಗಿ 'ಕ್ರಾಂತಿ' ಅನ್ನುವ ಪದವೇ ಮರೆತುಹೋಗುವಷ್ಟು ತಡವಾಗಿ ಎದ್ದು ಇಡೀ ಜಗತ್ತೇ ಸರಿಯಿಲ್ಲ ಅಂತ ಬೈಕೊಂಡು ಮತ್ತೆ ಮಾಮೂಲಿ ಜೀವನ ನಡೆಸುತ್ತಾ ಕಾಲವನ್ನು 'ತಳ್ಳುವಂತಹ' ಲಕ್ಷಾಂತರ ಜನ ವೇಸ್ಟುಬಾಡಿಗಳಲ್ಲಿ ನಾನೂ ಒಬ್ಬ. ನಾನೇನು ಮಾಡುತ್ತಿದ್ದೀನೋ ಅದರ ಬಗ್ಗೆ ಚೂರೂ ಆಸಕ್ತಿ, ಹೆಮ್ಮೆ ಇರದಿದ್ದರೂ ಅದನ್ನು ಬಿಟ್ಟು ಓಡುವ ಧೈರ್ಯವಿಲ್ಲದೇ ಇಡೀ ಜಗತ್ತೇ ಸಂಚುಹೂಡಿ ನನ್ನನ್ನಿಲ್ಲಿ ಕಟ್ಟಿಹಾಕಿದೆ ಅಂತ ನನಗೆ ನಾನೇ ಕೊಟ್ಟುಕೊಳ್ಳುವ ಸಮಜಾಯಿಷಿಯಲ್ಲಿಯೇ ವಿಕೃತ ಸಂತೋಷ ಹುಡುಕುತ್ತಾ ಬದುಕುವ ನನ್ನ ಜೀವನ ಹೊರಗಡೆ ಹೊಳೆಯುತ್ತಾ ಒಳಗಡೆ ಕೊಳೆತುಹೋಗಿರೋ ಮಾವಿನಹಣ್ಣಿನ ತರಹ. ಇಲ್ಲೇ ಯಾಕೋ ನನಗೂ ನೋಯ್ಡಾಕ್ಕೂ ಒಂಥರಾ ಅವಿನಾಭಾವ ಸಂಬಂಧವಿದೆ ಅನಿಸಿದ್ದು. ಹೌದು, ನೋಯ್ಡಾ ಕೂಡಾ ನನ್ನ ತರಾನೇ ಚೆನ್ನಾಗಿ ವಾರ್ನಿಶ್ ಮಾಡಿ ಝಗಮಗಿಸುತ್ತಾ ಇರೋ ಮರದ ಕಂಬದ ತರಹ, ಒಳಗಡೆ ಮಾತ್ರ ಟೊಳ್ಳು.
              ಇರಲಿ, ಈಗ ಆಫೀಸಿನಲ್ಲಿ ಮೊದಲನೇ ದಿನಕ್ಕೆ ವಾಪಸ್ ಬರೋಣ. ಅತಿಥಿಗಳು ಅಪರೂಪಕ್ಕೆ ಮನೆಗೆ ಬಂದಾಗ ಮೊದಲ ದಿನ ಭಾರೀ ಉಪಚಾರ ಮಾಡ್ತಾರಂತೆ. ಹಾಗೇ ಕಂಪನಿಯಲ್ಲೂ ನಮಗೆ ರತ್ನಗಂಬಳಿಯ ಸ್ವಾಗತ ದೊರೆಯಿತು. ಆದರೂ ಹೆಚ್.ಆರ್. ಬೀರುತ್ತಿದ್ದ ಮಂದಹಾಸದ ಹಿಂದೆ 'ಮುಂದೈತೆ ಮಾರಿಹಬ್ಬ' ಎನ್ನುವ ಆಕಾಶವಾಣಿ ಯಾಕೋ ಕೇಳಿದಂತಾಯ್ತು. ಅದಾದ ಮೇಲೆ ಸಂಸ್ಥೆಯ ಹಿರಿಮೆಯ ಬಗ್ಗೆ, ಅದಿಲ್ಲದಿದ್ದರೆ ಸೂರ್ಯ ಚಂದ್ರರು ಹೇಗೆ ಉದಯಿಸುವುದೇ ಇಲ್ಲ ಎನ್ನುವುದರ ಬಗ್ಗೆ ಕೊರೆದರು. ಆಮೇಲೆ ಐಸಿಐಸಿಐ, ಯೆಸ್ ಬ್ಯಾಂಕ್ ಇತ್ಯಾದಿಯವರು 'ನಮ್ ಬ್ಯಾಂಕಲ್ಲಿ ಅಕೌಂಟ್ ಮಾಡಿ' ಎಂದು ದುಂಬಾಲು ಬಿದ್ದರು. ಅಲ್ಲೀವರೆಗೂ 'ಏ ಹುಡ್ಗಾ, ಲೋ ಮಗಾ, ಲೇ ಹಲ್ಕಾ, ಬೇವರ್ಸಿ' ಅಂತೆಲ್ಲಾ ಕರೆಸಿಕೊಂಡೇ ಅಭ್ಯಾಸವಾಗಿದ್ದ ನನಗೆ ಇವರುಗಳು 'ಸರ್ ಸರ್' ಎಂದು ಕರೆಯುತ್ತಿದ್ದುದು ಗಾಬರಿಯನ್ನೇ ಹುಟ್ಟಿಸಿತೆನ್ನಬಹುದು!. ತಿಂಗಳಿಗೊಂದು ಸಿನಿಮಾ ಟಿಕೆಟ್ಟು ಫ್ರೀ ಇದೆ ಅಂತ ಹೆಚ್ಡಿಎಫ್ಸಿಯವರು ಹೇಳಿದ ತಕ್ಷಣ ಕಣ್ಣಿನ ಸುತ್ತಳತೆ ನಾಲ್ಕೈದು ಸೆಂಟಿಮೀಟರ್ ಜಾಸ್ತಿಯಾಗಿ 'ಅದೇ ಬೇಕಾಗಿದ್ದು ತಾನೇ!!' ಅಂತ ಅಕೌಂಟು ಓಪನ್ ಮಾಡಿದೆ. ಆಮೇಲೆ ಸಣ್ಣಗೆ ನಕ್ಷತ್ರ ಹಾಕಿ 'ನಿಯಮಗಳು ಅನ್ವಯವಾಗುತ್ತವೆ' ಅಂತ ಹೇಳಿದ್ದು ಬೇರೆ ವಿಷಯ. ಅದಾದ ಮೇಲೆ ಎರಡನೇ ದಿನದಿಂದ ಪ್ರೋಗ್ರಾಮಿಂಗ್ ಭಾಷೆಗಳ ತರಬೇತಿ ಶುರುವಾಯಿತು. ಪಿ.ಯು.ಸಿ. ಮುಗಿಸಿದ ತಕ್ಷಣ ಏನು ಮಾಡಬೇಕು ಅಂತ ಗೊತ್ತಿಲ್ಲದೇ 'ನಾನು ವಿಶ್ವೇಶ್ವರಯ್ಯನವರ ತರ ಆಗ್ತೀನಿ' ಅಂತ ಗೂಳಿಯಂತೆ ಇಂಜಿನಿಯರಿಂಗಿಗೆ ಗುಂಪುಗುಂಪಾಗಿ ನುಗ್ಗುವವರಲ್ಲಿ ಕೆಲವರು 'ನಾವು ಕಂಪ್ಯೂಟರ್ ಮುಂದೆ ಕೂರುವವರಲ್ಲ, ಎಲೆಕ್ಟ್ರಾನಿಕ್ಸು-ಎಲೆಕ್ಟ್ರಿಕಲ್ಲು-ಮೆಕ್ಯಾನಿಕಲ್ಲು ಓದಿ ದೇಶಕ್ಕೇ ಬೆಳಕು ಕೊಡ್ತೀವಿ, ಆಗಸಕ್ಕೆ ರಾಕೆಟ್ಟು ಬಿಡ್ತೀವಿ' ಅಂತ ಬೇರೆಯದೇ ದಿಟ್ಟ ಮಾರ್ಗವನ್ನು ಹಿಡಿದು ಕೊನೆಗೆ ಕೋರ್ ಕಂಪನಿಗಳಲ್ಲಿ ಕೆಲಸ ಸಿಗದೇ ನಾಲ್ಕು ವರ್ಷ ತಲೆಗೆ ತುಂಬಿಕೊಂಡ ರೆಸಿಸ್ಟರು-ಕ್ಯಪಾಸಿಟರು-ಲೇತ್ ಮೆಶಿನ್ನುಗಳನ್ನೆಲ್ಲಾ ಒಂದೇ ಹೊಡೆತಕ್ಕೆ ಶಿಫ್ಟ್ ಡಿಲಿಟ್ಟು ಮಾಡಿ ಮೂರೇ ತಿಂಗಳಲ್ಲಿ ಜಾವಾನೋ ಪಿಹೆಚ್ಪಿನೋ ಕಲಿತು ಸಾಫ್ಟ್ವೇರ್ ಕ್ಷೇತ್ರ ಉದ್ಧಾರ ಮಾಡಲು ಅನಿವಾರ್ಯವಾಗಿ ಮುಂದಡಿಯಿಡುತ್ತಾರೆ. ನನ್ನದೂ ಸುಮಾರಿಗೆ ಮೇಲಿನವರದೇ ಪಟ್ಟಿಗೆ ಸೇರುವ ಕಥೆ. ಹೀಗಾಗಿ ಎರಡನೇ ದಿನದಿಂದ ನೋಯ್ಡಾದ ಆಫೀಸಿನ ಕೋಣೆಯೊಳಗೆ ಕಳೆದ ಸಮಯ ಯಾವುದೇ ವಿಶೇಷತೆಗಳನ್ನು ಒಳಗೊಂಡಿಲ್ಲ. ಆದರೆ ಅಲ್ಲಿರುವಷ್ಟು ದಿನ ವಾರಾಂತ್ಯದಲ್ಲಿ ಹೋಟೆಲ್ಲಿನ ರೂಮಿನಲ್ಲಂತೂ ಕೂರಬಾರದೆನ್ನುವ ನಿಲುವನ್ನು ಹೊಂದಿದ್ದ ನಾನು ಮೊದಮೊದಲಿಗೆ ಗೆಳೆಯರ ಜೊತೆ, ಕೊನೆಗೆ ಯಾರೂ ಸಿಗದಿದ್ದಾಗ ಒಬ್ಬನೇ ನೋಯ್ಡಾ ಮತ್ತು ದೆಹಲಿಯನ್ನು ಸುತ್ತಲು ಶುರುಮಾಡಿದ ಮೇಲೆ ನಿಧಾನವಾಗಿ ನೋಯ್ಡಾದ ಜೊತೆಗೆ ಒಂದು ಸಂಪರ್ಕ ಬೆಳೆಯಲು ಶುರುವಾಗಿದ್ದು ನನ್ನ ಮಟ್ಟಿಗೆ ವಿಶೇಷವೇ. ಸಂಭಾಳಿಸುವಷ್ಟು ಹಿಂದಿ ಬರುತ್ತಿದ್ದುದರಿಂದ ಭಾಷೆಗಂತೂ ತೊಂದರೆಯಾಗಲಿಲ್ಲ ಎನ್ನುವುದಕ್ಕೆ ಕೊನೆಕೊನೆಗೆ ಅಂಗಡಿಯವರ ಹತ್ತಿರ ಹಿಂದಿಯಲ್ಲಿಯೇ ಚೌಕಾಶಿ ಮಾಡೋಕೆ ಶುರುಮಾಡಿದೆ ಎನ್ನುವುದನ್ನು ಸಬೂತಾಗಿ ತೆಗೆದುಕೊಳ್ಳಬಹುದು!. ಆದರೂ ನಿನ್ನೆಗೂ ಕಲ್ - ನಾಳೆಗೂ ಕಲ್, ಮೊನ್ನೆಗೂ ಪರ್ಸೋ - ನಾಡಿದ್ದಿಗೂ ಪರ್ಸೋ ಎನ್ನುವ ಹಿಂದಿಯ ಪದದಾಕ್ಷಿಣ್ಯ ನನಗೆ ಸರಿಕಾಣಲಿಲ್ಲ. ಭಾಷೆ ಹೊರತುಪಡಿಸಿದರೆ ದಕ್ಷಿಣದಿಂದ ಉತ್ತರ ಭಾರತಕ್ಕೆ ಹೋಗುವವರಿಗೆ ನಂತರದ ದೊಡ್ಡ ಚಿಂತೆಯೆಂದರೆ ಆಹಾರದ್ದು. ಮೂರು ಹೊತೂ ಅನ್ನ-ಸಾಂಬಾರು-ಉಪ್ಪಿಟ್ಟು-ಪಲಾವು-ಇಡ್ಲಿವಡೆ ತಿಂದುಕೊಂಡು ಆರಾಮಾಗಿದ್ದ ನನಗೆ ಉದ್ದುದ್ದ ಹಿಂದಿ ಸಿನಿಮಾಗಳ ಶೀರ್ಷಿಕೆಗಳಂತಿದ್ದ ಆಹಾರಪದಾರ್ಥಗಳು ಗಾಬರಿಹುಟ್ಟಿಸಿದ್ದಲ್ಲದೇ ಹೆಸರಿನಿಂದ ಸಸ್ಯಜನ್ಯವೋ ಪ್ರಾಣಿಜನ್ಯವೋ ಎಂಬ ಗುಟ್ಟುಬಿಟ್ಟುಕೊಡದೇ ಗೊಂದಲಕ್ಕೀಡುಮಾಡಿದವು. ಮಕ್ಕೇ ಕೀ ರೋಟಿ- ಸರ್ಸೋ ಕಾ ಸಾಗ್, ಕರೇಲಾ ದೋ ಪ್ಯಾಜಾ, ಲೌಕೀ ಕೋಫ್ತಾ ಖಡೀ, ಭೈಗನ್ ಕಾ ಭರ್ತಾ, ಚಟ್ಪಟೇ ಕಾಲೇ ಚನ್ನಾ, ಭಗರೇ ಭೈಂಗನ್, ಲಾಲ್ ಲಬಿಯಾ ಮಸಾಲಾ ಗುಡ್ಕೀ ಪಟ್ಟೀ ಅವುಗಳಲ್ಲಿ ಕೆಲವು ಹೆಸರುಗಳು. ದಿನಾಲೂ ಕ್ಯಾಂಟೀನಿನಲ್ಲಿ ಮೆನು ಕಾರ್ಡನ್ನು ಜೋರಾಗಿ ಓದುತ್ತಾ ನಾನು ಯಾಕೆ ನೆಗಾಡುತ್ತಿದ್ದೆ ಎಂದು ಅಲ್ಲಿ ಪರಿಚಯವಾಗಿದ್ದ, ನಮ್ಮ ಹಳೇ ಪ್ರಧಾನಿಯಷ್ಟೇ ಮಿತಭಾಷಿಯಾಗಿದ್ದ ಹಿಮಾಚಲ ಪ್ರದೇಶದ ಗೆಳೆಯ ಮನಮೋಹನ್ ಸಿಂಗ್ ನಿಗೆ ಕೊನೆಗೂ ಅರ್ಥವಾಗಲಿಲ್ಲ!!.
                ದಿನಗಳುರುಳುತ್ತಾ ಬಂದಂತೆ ಯಾವುದೇ ಹೊಸಾ ಜಾಗವಾದರೂ ನಮಗೇ ಗೊತ್ತಿಲ್ಲದಂತೆ ನಮಗೆ ಪರಿಚಿತವಾಗುತ್ತಾ ಹೋಗುತ್ತದೆ. ಹಾಗೆಯೇ ನನಗೂ ಎಲ್ಲಿ ಆಟೋ ಹತ್ತಿದರೆ ಮೆಟ್ರೋ ನಿಲ್ದಾಣಕ್ಕೆ ಹೋಗುತ್ತದೆ, ಮೆಟ್ರೋ ಹತ್ತಿದ ಮೇಲೆ ಎಲ್ಲಿ ಇಳಿದರೆ ದೆಹಲಿಯ ಯಾವ ಜಾಗಕ್ಕೆ ಹೋಗಲು ಸುಲಭವಾಗುತ್ತದೆ, ಹತ್ತಿರದಲ್ಲಿ ಎಲ್ಲಿ ದಿನಸಿ ಅಂಗಡಿ, ಮೆಡಿಕಲ್ ಶಾಪು, ಹೋಟೆಲ್, ಮಾಲ್ ಇವೆ, ನೋಯ್ಡಾದ ಯಾವ ಸೆಕ್ಟರ್ ನ ಯಾವುದೋ ಮೂಲೆಯಲ್ಲಿ ಬಿಟ್ಟರೆ ಹೇಗೆ ವಾಪಸ್ ನಮ್ಮ ಹೋಟೆಲ್ ರೂಮು ಸೇರಿಕೊಳ್ಳಬಹುದು ಎಂಬವೆಲ್ಲಾ ನಿಧಾನಕ್ಕೆ ತಿಳಿಯುತ್ತಾ ಹೋಯಿತು. ಹಾಗೆಯೇ ಕೆಂಪುಕೋಟೆ, ಇಂಡಿಯಾಗೇಟ್, ಜಂತರ್ ಮಂತರ್, ಕುತುಬ್ ಮಿನಾರ್ ಇತ್ಯಾದಿ ಅಚ್ಚರಿಯ ಪ್ರವಾಸೀತಾಣಗಳ ದರ್ಶನವೂ ಆಯಿತು. ಇಲ್ಲೆಲ್ಲಾ ಹೋದಾಗ ಕೆಲವು ಕಡೆ ಕನ್ನಡಿಗರು ಸಿಕ್ಕಿದಾಗ ಕುಟುಂಬದವರೇ ಸಿಕ್ಕಿದಷ್ಟು ಖುಷಿಯಾಗುತ್ತಿತ್ತು. ಅದಕ್ಕೇ ಅನಿಸುತ್ತದೆ, ಮೇಲೆಮೇಲೆ ಹೋದಂತೆ ನಮ್ಮ ಮನಸ್ಸು ಸಂಕುಚಿತತೆಯಿಂದ ಬಿಡಿಸಿಕೊಳ್ಳುತ್ತದೆ ಎನ್ನುವುದು. ನೋಯ್ಡಾದಲ್ಲಿ ಕನ್ನಡ ಕೇಳಿ ಖುಷಿಯಾದರೆ ಹೊರದೇಶಕ್ಕೆ ಹೋದಾಗ ತಮಿಳು-ತೆಲುಗು-ಹಿಂದಿ ಯಾವುದು ಕೇಳಿದರೂ ಖುಷಿಯಾಗುತ್ತದೆ!. ಅದೇ ದೇಶದೊಳಗೆ ಬಂದಮೇಲೆ ಮಾತ್ರ ಅದೇ ಭಾಷಿಗರ ವಿರುದ್ಧ ಕಿಡಿಕಾರುತ್ತೇವೆ!. ಇರಲಿ, ಒಂದು ವಿಷಯ ಅಚ್ಚರಿಗೊಳಿಸಿದ್ದೆಂದರೆ ದೆಹಲಿಯ ಮೆಟ್ರೋ ವ್ಯವಸ್ಥೆ. ಹರಿಯಾಣದ ಗುರ್ಗಾಂವ್(ಈಗ ಗುರುಗ್ರಾಮ)ದಿಂದ ದೆಹಲಿಯ ಮೂಲಕ ಹಾಯ್ದು ಉತ್ತರ ಪ್ರದೇಶದ ನೋಯ್ಡಾದವರೆಗೂ ವಿಸ್ತರಿಸಿರುವ, ಇನ್ನೂ ಮುಂದೆ ವಿಸ್ತರಿಸುತ್ತಲೇ ಇರುವ ದೆಹಲಿ ಮೆಟ್ರೋ ಮೂರು ರಾಜ್ಯಗಳನ್ನು ಸೇರಿಸುವುದು ಅಚ್ಚರಿಯೇ ಸರಿ. ಮೊದಮೊದಲಿಗೆ ಜೇಡರಬಲೆಯಂತಿದ್ದ ಮೆಟ್ರೋನಕ್ಷೆ ರಾಜೀವ್ ಚೌಕ್, ಚಾಂದಿನೀ ಚೌಕ್, ಪಟೇಲ್ ಚೌಕ್ ಎಂಬ ಚೌಕಗಳಿಂದ ತುಂಬಿಹೋಗಿ ಎಲ್ಲಿ ಇಳಿಯಬೇಕೆನ್ನುವುದು ತಿಳಿಯದೇ ಗಾಬರಿ ಹುಟ್ಟಿಸುತ್ತಿತ್ತು. ಆದರೆ ಸತತವಾಗಿ ಸೊಳ್ಳೆಗಳಿಗೆ ಕಾಯಿಲ್ ಹಚ್ಚುತ್ತಿದ್ದರೆ ವಂಶವಾಹಿಗಳಲ್ಲೇ ಬದಲಾವಣೆಯಾಗಿ ಕ್ರಮೇಣ ಅದಕ್ಕೆ ಅವು ಹೊಂದಿಕೊಂಡುಬಿಡುತ್ತಾವಲ್ಲಾ ಹಾಗೇ ನಾನೂ ಹೊಂದಿಕೊಂಡೆ. ನನಗ್ಯಾರೂ ಕಾಯಿಲ್ ಹಚ್ಚಿಟ್ಟಿರಲಿಲ್ಲ ಆದರೆ ನನ್ನ ರೂಂಮೇಟಿನ ಸಿಗರೇಟಿನ ಹೊಗೆ ಅದಕ್ಕಿಂತ ಕಡಿಮೆಯೇನಿರಲಿಲ್ಲ!. ಇನ್ನು ದೆಹಲಿಗೆ ಹೋದಮೇಲೆ ತಾಜ್ ಮಹಲ್ ನೋಡದಿದ್ದರೆ ಹೇಗೆ?, ಅಲ್ಲಿಗೂ ಹೋಗಿದ್ದಾಯಿತು. ಹೋಗುವುದಕ್ಕಿಂತ ಮುಂಚೆಯೇ ಅಲ್ಲಿ ಹೋಗಿ ಯಾವ ಪೋಸಿನಲ್ಲಿ ಫೋಟೋ ತೆಗೆಸಿಕೊಳ್ಳಬೇಕೆನ್ನುವುದನ್ನು ಮನಸ್ಸಿನಲ್ಲಿಯೇ ಗುರುತು ಹಾಕಿಕೊಂಡು, ಬಂದಮೇಲೆ ವಾಟ್ಸಾಪಿನಲ್ಲಿ 'ತಾಜುಮಹಲಿನ ಬಿಳಿಗೆ ಐದು ಡಿಗ್ರಿಯ ಚಳಿಗೆ ಒಂದು ಹಿಡಿ ವೈರಾಗ್ಯ ಬಂದಿತಪ್ಪೋ' ಎಂದು ಸ್ಟೇಟಸ್ ಹಾಕಿಬಿಡುವ ಎಂದೂ ಅಂದುಕೊಂಡಿದ್ದೆ. ಆದರೆ ನನ್ನ ದುರಾದೃಷ್ಟಕ್ಕೆ ಅಂದು ಅಷ್ಟು ಚಳಿಯೂ ಇರಲಿಲ್ಲ, ಹೊಗೆಯ ಮಧ್ಯೆ ನನ್ನ ಕಂಗಳಿಗೆ ತಾಜುಮಹಲು ಅಷ್ಟು ಬಿಳಿಯೂ ಕಾಣಲಿಲ್ಲ, ಹೀಗಾಗಿ ನನಗೆ ವೈರಾಗ್ಯವೂ ಬರಲಿಲ್ಲ!.
     
               ನೋಯ್ಡಾದ ಬಗ್ಗೆ ಯೋಚಿಸಿದಾಗ ನನಗೆ ತಕ್ಷಣ ಹೊಳೆಯುವ ಎರಡು ಉಪಮಾನಗಳು ಕೃತಕ ಮತ್ತು ಪರಿಪೂರ್ಣ. ಹೌದು, ನಗರನಿರ್ಮಾಣದ ದೃಷ್ಟಿಯಲ್ಲಿ ನೋಡಿದರೆ ನೋಯ್ಡಾ ಪರಿಪೂರ್ಣವಾಗಿದೆ. ಸುಮಾರು ಹದಿನೈದು ವರ್ಷಗಳ ಕೆಳಗೆ ಆಕ್ರಮಿಸಿಕೊಂಡ ಐಟಿಬಿಟಿ ಸಂಸ್ಥೆಗಳ ಹೊಡೆತದಿಂದ ಹಸಿರನ್ನು ಹೊದ್ದುಕೊಂಡು ಮಲಗಿದ್ದ ಬೆಂಗಳೂರು ಒಂದೇಸಲ ಎದ್ದು ಕೂತು ಅಭಿವೃದ್ಧಿ-ಪರಿಸರ ರಕ್ಷಣೆಗಳ ನಡುವೆ ತಾಕಲಾಟದಲ್ಲಿ ಸಿಲುಕಿಕೊಂಡು ಸಿಕ್ಕಸಿಕ್ಕಲ್ಲೆಲ್ಲಾ ರಸ್ತೆ ಕೊರೆದು, ಮೆಟ್ರೋ ಮಾಡಿ ಸಕಲಾಸ್ತ್ರಗಳನ್ನು ಪ್ರಯೋಗಿಸಿದರೂ ಅರೆಕಾಸಿನ ಮಜ್ಜಿಗೆಯಂತಾಗಿ, ಎತ್ತೆತ್ತರ ಕಟ್ಟಡಗಳು - ಟ್ರಾಫಿಕ್ ಜಾಮ್ ಎಂಬ ರಾವಣರ ಹಿಡಿತದಲ್ಲಿ ಇಂದಿಗೂ ಸಿಲುಕಿ ಏದುಸಿರುಬಿಡುತ್ತಿರುವುದನ್ನು ನೋಡಿದಾಗ ಕೇವಲ ಏಳೆಂಟು ವರ್ಷಗಳಲ್ಲಿಯೇ ಎಲ್ಲಾ ಮೂಲಭೂತ ಸೌಕರ್ಯಗಳೂ ಸಮರ್ಪಕವಾಗಿರುವ ಅತ್ಯಾಧುನಿಕ ತಂತ್ರಜ್ಞಾನಸ್ನೇಹಿ ನಗರವಾಗಿ ಮಾರ್ಪಾಡಾದ ನೋಯ್ಡಾ ಅಚ್ಚರಿಯೇ ಎನಿಸುತ್ತದೆ. ಬುದ್ಧಿವಂತಿಕೆ - ರಾಜಕೀಯ ಇಚ್ಛಾಶಕ್ತಿ ಎರಡು ಒಟ್ಟುಗೂಡಿದರೆ ಎಂಥ ಅದ್ಭುತಗಳನ್ನು ಸೃಷ್ಟಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ಅಲ್ಲಿನ ರಸ್ತೆಗಳಲ್ಲಿ ಗುಂಡಿಗಳು ಹುಡುಕಿದರೂ ಸಿಗುವುದಿಲ್ಲ, ಟ್ರಾಫಿಕ್ ಜಾಮ್ ಆಗುವುದು ಕಡಿಮೆ, ಮಳೆ ಬಂದರೆ ರಸ್ತೆಯ ಮೇಲೆ ನೀರು ಹರಿಯುವುದಿಲ್ಲ, ಯಾವಾಗಲೂ ವಿದ್ಯುತ್ ಕಡಿತವಾಗುವುದಿಲ್ಲ. ಹೀಗಾಗಿಯೇ ಇರೋಬರೋ ಬಹುರಾಷ್ಟ್ರೀಯ ಕಂಪನಿಗಳೆಲ್ಲಾ ನೋಯ್ಡಾದಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿವೆ. ಈ ಎಲ್ಲಾ ಕೋನಗಳಿಂದ ನೋಡಿದಾಗ ನೋಯ್ಡಾ ಪರಿಪೂರ್ಣ. ಆದರೆ ಇಲ್ಲೇ ಇರುವುದು ಮುಖ್ಯ ಕೊರತೆ. ನೀವು ನಿಮ್ಮ ಮನೆ - ನಿಮ್ಮ ಆಫೀಸು ಬಿಟ್ಟರೆ ಬೇರೇನೂ ಯೋಚಿಸದ, ಬೇರೇನೂ ಅಗತ್ಯವೇ ಇಲ್ಲದ ಯಂತ್ರಮಾನವರಾಗಿದ್ದರೆ ನಿಮಗೆ ನೋಯ್ಡಾ ಅನುರೂಪವಾದ ನಗರ. ಆದರೆ ನಿಮ್ಮಲ್ಲಿ ಚೂರಾದರೂ ಮಾನವರ ಅಂಶ, ಭಾವನೆಗಳ ಸೆಲೆ ಉಳಿದಿದ್ದಲ್ಲಿ ನಿಮಗೆ ನೋಯ್ಡಾ ಬಂಧೀಖಾನೆಗಿಂತ ಹೆಚ್ಚೇನೂ ಚೆಂದವೆನಿಸದು. ಯಾಕೆಂದರೆ ನೋಯ್ಡಾದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಒಂದು ಹಿಡಿ ಜೀವಂತಿಕೆ ಸಿಗುವುದಿಲ್ಲ. ಇಪ್ಪತ್ನಾಲ್ಕು ಗಂಟೆಯೂ ಕೇಳಿಬರುವ ವಾಹನಗಳ ಸದ್ದು, ಕಟ್ಟಡಗಳ ಏಸಿ ಸದ್ದು ಖಂಡಿತವಾಗಿಯೂ ಜೀವಂತಿಕೆಯ ಕುರುಹಲ್ಲ ನನ್ನ ಪ್ರಕಾರ. ಮೊದಲೇ ಹೇಳಿದಂತೆ ನೋಯ್ಡಾ ಒತ್ತಾಯಕ್ಕೆ ಹುಟ್ಟಿರುವ ನಗರ. ಅಲಂಕಾರಕ್ಕೆಂದು ತಯಾರಿಸಿದ ಕೃತಕ ಹೂವಿನಂತೆ, ಯಾವತ್ತೂ ಸುಗಂಧ ಬೀರುವುದಿಲ್ಲ. ಇನ್ನು ಅದೆಷ್ಟು ದಶಕಗಳು ಕಳೆದರೂ ನೋಯ್ಡಾದ್ದೇ ಸ್ವಂತದ್ದು ಎಂದು ಹೇಳಿಕೊಳ್ಳಲು ಒಂದು ವಿಶೇಷ ಸಂಸ್ಕೃತಿ ಹುಟ್ಟಲು ಸಾಧ್ಯವೇ ಇಲ್ಲ. ಮೊದಲನೆಯದಾಗಿ ನೋಯ್ಡಾದಲ್ಲಿ ಯಾವ ಮನೆಗೂ, ಅಂಗಡಿಗೂ, ಹೋಟೆಲಿಗೂ ಹೆಸರೇ ಇರುವುದಿಲ್ಲ!, ಎಲ್ಲದಕ್ಕೂ ಒಂದು ನಂಬರ್ರು!. ಸೆಕ್ಟರ್ 67 ಸಿ 1/5, ಸೆಕ್ಟರ್ 43 ಬಿ 2/6 ಹೀಗೆ. ಸಣ್ಣ ಸಣ್ಣ ಅಂಗಡಿಗಳಿಗೂ 'ಯಡಿಯೂರು ಶ್ರೀಸಿದ್ಧಲಿಂಗೇಶ್ವರ ಪಾನ್ ಶಾಪ್', 'ಮಹಾಮಹಿಮ ಬೆಟ್ಟದಪುರದಯ್ಯ ಮೊಬೈಲ್ ಶಾಪ್', 'ಹೋಟೆಲ್ ಜನರೇಗತಿ' ಇತ್ಯಾದಿ ಇತ್ಯಾದಿ ಹೆಸರುಗಳನ್ನು ನೋಡಿ ಅಭ್ಯಾಸವಾಗಿದ್ದ ನನಗೆ ನೋಯ್ಡಾ ಬರೀ ಪ್ಲಾಟುನಂಬರುಗಳಿರುವ ಸ್ಮಶಾನದ ತರಹ ಕಾಣಿಸಿತು. ಇನ್ನು ರಾತ್ರಿಯಿಡೀ ಬೀದಿದೀಪಗಳುರಿಯುತ್ತಿದ್ದರೂ ನೋಯ್ಡಾದಲ್ಲಿರುವಷ್ಟು ಅಪರಾಧಗಳ ಸಂಖ್ಯೆ ಬೇರೆಡೆಯಲ್ಲಿಲ್ಲ. ಆರುಷಿ ತಲ್ವಾರ್ ಕೊಲೆಯಾದದ್ದು ನಾವಿದ್ದ ಹೋಟೆಲ್ ಹಿಂದೆಯೇ, ಅಲ್ಲೇ ಪಕ್ಕದಲ್ಲಿ ನಿಟಾರಿ ಹತ್ಯಾಕಾಂಡವಾದ ಪ್ರದೇಶವೂ ಇತ್ತು. ಹೀಗೇ ಮುಂದುವರಿದರೆ ಮುಂದೊಮ್ಮೆ ಕೊಲೆಗಳನ್ನು ಆಧರಿಸಿಯೇ ಪ್ರದೇಶಗಳನ್ನು ಗುರುತಿಸುವಂತಾಗಬಹುದು!. ಒಮ್ಮೆ ರಾತ್ರಿ ಮಲಗಿದ್ದಾಗ ರೈಫಲ್ಲಿನಿಂದ ಗುಂಡುಗಳು ಹಾರುವ ಸದ್ದು ಕೇಳಿ ಸತ್ತೆನೋ ಕೆಟ್ಟೆನೋ ಎಂದು ಓಡಿಬಂದರೆ ಅಲ್ಲಿ ಯಾರೂ ಅದಕ್ಕೆ ಚೂರೂ ತಲೆಕೆಡಿಸಿಕೊಂಡಿರಲಿಲ್ಲ!. ಅದಕ್ಕೆಲ್ಲ ಅಲ್ಲಿನ ಜನ ಒಗ್ಗಿಹೋಗಿದ್ದಾರೆ. ಪ್ರತಿದಿನ ಹೆದ್ದಾರಿಯಲ್ಲಿ ಹೋಗುವಾಗ ಮಧ್ಯದಲ್ಲಿ ಸಾಕಾಗಿ ನೆಟ್ಟ ಗಿಡಮರಗಳಿಗೆ ಟ್ಯಾಂಕರ್ನಲ್ಲಿ ನೀರುಣಿಸುವುದು ಕಾಣುತ್ತಿತ್ತು. ಆದರೆ ಧೂಳಿನಿಂದ ಆವೃತವಾಗಿದ್ದ ಆ ಮರಗಳ ಎಲೆಗಳಲ್ಲಿ ಸ್ವಲ್ಪವೂ ಚೈತನ್ಯ ಕಾಣುತ್ತಿರಲಿಲ್ಲ. ಆ ಊರನ್ನೂ, ಅಲ್ಲಿಯ ಬದುಕನ್ನೂ ಪ್ರತಿನಿಧಿಸುವಂತಿರುತ್ತಿದ್ದ ಆ ಮರಗಳನ್ನು ನೋಡಿದಾಗ ಮನಸ್ಸು ವ್ಯಾಕುಲವಾಗುತ್ತಿತ್ತು. ಪ್ರತಿದಿನ ಆಫೀಸಿನಿಂದ ಮನೆಗೆ ಬಂದು ಮುಖತೊಳೆಯುವಾಗ ಬಾಯಿ ಮೂಗು ಎಲ್ಲೆಡೆ ಕರಿಪರದೆಯೊಂದು ಆವರಿಸಿರುತ್ತಿತ್ತು. ಆಗೆಲ್ಲಾ ಆ ಮರಗಳದ್ದೇ ಸ್ಥಿತಿ ನೆನಪಾಗುತ್ತಿತ್ತು. ಅದಕ್ಕೇ ಹೇಳಿದ್ದು, ನೈಸರ್ಗಿಕವಾಗಿ ಬೆಳೆಯುವ ನಗರದಲ್ಲಿ ವಿವರಿಸಲಾಗದ ಜೀವಂತಿಕೆಯ ಅಂದವಿರುತ್ತದೆ, ಬಲವಂತ ಮಾಡಲು ಹೋದರೆ ಅಚ್ಚುಕಟ್ಟಾಗಿರುವ ಏನೋ ಒಂದು ಹುಟ್ಟುತ್ತದೆ, ಆದರೆ ಅದನ್ನು 'ಊರು' ಎಂದು ಕರೆಯಲಾಗುವುದಿಲ್ಲ ಅಷ್ಟೇ. ಈ ಲೇಖನ ಮುಗಿಸುವಷ್ಟರಲ್ಲಿ ವಾರ್ತೆಗಳಲ್ಲಿ ಇಡೀ ನೋಯ್ಡಾ ಮಂಜು ಮತ್ತು ಹೊಗೆಯಿಂದ ಮುಚ್ಚಿಹೋಗಿ ನರಳುತ್ತಿರುವುದನ್ನು ತೋರಿಸುತ್ತಿದ್ದಾರೆ. ತನ್ನ ಅನುಕೂಲಕ್ಕಷ್ಟೇ ಮನುಷ್ಯ ಮಾಡುವ ಯಾವ ಕೆಲಸವೂ ಒಳ್ಳೆಯ ಫಲಿತಾಂಶ ನೀಡುವುದಿಲ್ಲ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ.

                ತರಬೇತಿಯಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಕೊಪ್ಪ, ಮಲೆನಾಡು, ಚಿಕ್ಕಮಗಳೂರು, ಆಗುಂಬೆ ಘಾಟಿ ಎಂದೆಲ್ಲಾ ಗೂಗಲ್ ಸರ್ಚ್ ಮಾಡಿ ಫೋಟೋ ನೋಡಿ ಅತೀವ ನೆಮ್ಮದಿ ಗಳಿಸುತ್ತಿದ್ದ ನನಗೆ ಎರಡು ತಿಂಗಳು ತರಬೇತಿ ಮುಗಿಸಿ ವಾಪಸ್ಸು ಬೆಂದಕಾಳೂರಿಗೆ ಕಾಲಿಟ್ಟು ಕನ್ನಡ ಫಲಕಗಳನ್ನು ನೋಡಿದಾಗ ಆದ ಸಂತೋಷವನ್ನು ವರ್ಣಿಸಲು ಪದಗಳಿಂದ ಸಾಧ್ಯವಾಗುವುದಿಲ್ಲ. ಈಗಲೂ ಕೆಲವೊಮ್ಮೆ ಬೆಂಗಳೂರಿನ ಯಾಂತ್ರಿಕ ಜೀವನ ಅತಿಯಾಗಿ ಕಿರಿಕಿರಿ ಮಾಡಿದಾಗಲೆಲ್ಲಾ ನೋಯ್ಡಾವನ್ನು ನೆನಪಿಸಿಕೊಳ್ಳುತ್ತೇನೆ. 'ಅದಕ್ಕಿಂತ ಇದು ಸಾವಿರ ಪಾಲು ಉತ್ತಮ' ಎಂದು ಮನಸ್ಸು ಪ್ರಫುಲ್ಲಗೊಳ್ಳುತ್ತದೆ......

                              - ಸಂಪತ್ ಸಿರಿಮನೆ