ಕ್ರಿಕೆಟ್ಟು ಅಂದರೆ ಕ್ರಿಕೆಟ್ಟಷ್ಟೇ. ಒಬ್ಬ ಬಾಲು ಎಸೀತಾನೆ, ಇನ್ನೊಬ್ಬ ಬ್ಯಾಟು ಬೀಸುತ್ತಾನೆ, ಮತ್ತೊಬ್ಬ ಬಾಲು ಹಿಡಿಯೋಕೆ ಓಡುತ್ತಾನೆ ಎಂದು ಯಾವ ಕ್ರಿಕೆಟ್ ಪ್ರೇಮಿಯೂ ಯೋಚಿಸುವುದಿಲ್ಲ. ಅವರಿಗೆ ಕ್ರಿಕೆಟ್ ಎಂದರೆ ಚೈತನ್ಯ, ಸ್ಫೂರ್ತಿ, ಸಮಯಪ್ರಜ್ಞೆ, ಚಾಕಚಕ್ಯತೆ ಎಲ್ಲ ಮೇಳೈಸಿರುವ ಅಪೂರ್ವ ಸಂಗಮ. ಬರೀ ಟೈಂಪಾಸಿಗೆ ಯಾವ ಕ್ರಿಕೆಟ್ ಪ್ರೇಮಿಯೂ ಕ್ರಿಕೆಟ್ ನೋಡುವುದಿಲ್ಲ. ಅವರಿಗೆ ಕ್ರಿಕೆಟ್ಟು ಜೀವನದ ಒಂದು ಭಾಗವೇ ಆಗಿರುತ್ತದೆ. "ನಮ್ಮ ಮಗ ಭಾಳಾ ಒಳ್ಳೆಯವ್ನು ಕಣ್ರೀ, ನಾವು ಹೇಳಿದ್ ಕೆಲ್ಸಾನೆಲ್ಲಾ ತಕ್ಷಣ ಕಮಕ್ಕಿಮಕ್ಕೆನ್ನದೇ ಮಾಡ್ತಾನೆ" ಎಂದು ಜಂಭ ಕೊಚ್ಚಿಕೊಳ್ಳುವ ತಂದೆತಾಯಂದಿರೆಲ್ಲಾ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ತಮ್ಮ ಮಗನಿಗೆ ಕಾಲ್ಕೇಜಿ ತೊಗರಿಬೇಳೆ ತರಲು ಆದೇಶಿಸಿ ಮಗನ ನಿಶ್ಠಾವಂತಿಕೆಯ ಪರೀಕ್ಷೆ ಮಾಡಬಹುದು, ಖಂಡಿತಾ ಫಲಿತಾಂಶ ಆಘಾತಕಾರಿಯಾಗಿರುತ್ತದೆ!. ಒಟ್ಟಿನಲ್ಲಿ ಕ್ರಿಕೆಟ್ ಎಂದರೆ ಅದೊಂಥರಾ ಹುಚ್ಚು. ಇದಕ್ಕೆ ಮರುಳಾಗದವರಿಲ್ಲ. ಈಗ ನಾನೇನು ಬರೆಯಲು ಹೊರಟೆನೆಂದರೆ ಅದು ಟೆಸ್ಟ್, ಏಕದಿನ, ಟ್ವೆಂಟಿಟ್ವೆಂಟಿಯಂತೆ ಕ್ರಿಕೆಟ್ಟಿನ ಇನ್ನೊಂದು ನಾಲ್ಕನೇ ರೂಪವಾಗಿರುವ ಗಲ್ಲಿ ಕ್ರಿಕೆಟ್ ಬಗ್ಗೆ. ಹೌದು, ಖಂಡಿತವಾಗಲೂ ಸಾಮಾನ್ಯವಾಗಿ ಟೆನ್ನಿಸ್ ಬಾಲ್ ಉಪಯೋಗಿಸಿ ಗಲ್ಲಿಗಲ್ಲಿಗಳಲ್ಲಿ ಆಡಲಾಗುವ ಗಲ್ಲಿ ಕ್ರಿಕೆಟ್ಟನ್ನು ಬೇರೆ ಎಲ್ಲಾ ಕ್ರಿಕೆಟ್ ಮಾದರಿಗಳಿಂದ ವಿಂಗಡಿಸುವ ಅನಿವಾರ್ಯತೆ ಖಂಡಿತಾ ಇದೆ, ಏಕೆಂದರೆ ಇಲ್ಲಿನ ನಿಯಮಗಳು ಸಾಮಾನ್ಯ ಕ್ರಿಕೆಟ್ ನಿಯಮಗಳಿಗಿಂತ ಸಿಕ್ಕಾಪಟ್ಟೆ ವಿಭಿನ್ನ, ವಿಕ್ಷಿಪ್ತ. ನಾನೊಬ್ಬ ವೃತ್ತಿಪರ ಗಲ್ಲಿಕ್ರಿಕೆಟ್ ಆಟಗಾರನಾಗಿರುವುದರಿಂದ ನನಗೆ ಈ ಮಾದರಿಯಲ್ಲಿ ಕಂಡಂತಹ ವಿಶೇಷತೆ, ವಿಶಿಷ್ಟ ನಿಯಮಗಳ ಬಗ್ಗೆ ಕೆಳಗೊಂದು ಪಟ್ಟಿ ಮಾಡಿದ್ದೇನೆ. ಹಾಗೇ ನಿರ್ಭಾವುಕರಾಗಿ ಓದಿಕೊಳ್ಳಿ. 1) ಬೇಬಿ ಓವರ್ :- ಗೊತ್ತಿಲ್ಲದವರಿಗೆ ಹೇಳುವುದಾದರೆ ಗಲ್ಲಿ ಕ್ರಿಕೇಟಲ್ಲಿ ಬೌಲರ್ ತುಂಬಾ ಕೆಟ್ಟದಾಗಿ ಬೌಲಿಂಗ್ ಮಾಡಲು ಶುರುಮಾಡಿದನೆಂದರೆ ಅವನಿಗೆ ಓವರ್ ಮುಗಿಸಲು ಬಿಡದೇ ಮೂರೇ ಎಸೆತಕ್ಕೆ ಬಾಲು ಕಿತ್ತುಕೊಂಡು ಉಳಿದ ಮೂರು ಎಸೆತಗಳನ್ನು ಬೇರೆ ಬೌಲರ್ ಗೆ ಕೊಡುವ ಒಂದು ವ್ಯವಸ್ಥೆಗೆ ಬೇಬಿ ಓವರ್ ಎನ್ನಲಾಗುತ್ತದೆ. ಇಲ್ಲಿ ಓವರನ್ನು ಅರ್ಧಮಾಡಿದ್ದಕ್ಕಾಗಿ 'ಬೇಬಿ' ಎನ್ನುವ ಪದ ಹುಟ್ಟಿರಬಹುದಾದರೂ ಪರೋಕ್ಷವಾಗಿ ಬೌಲರಿಗೆ 'ಬೌಲಿಂಗ್ ಬರದಿರೋ ಬಚ್ಚಾ' ಎಂದು ಹಂಗಿಸುವ ಅರ್ಥವೂ ಇರುವ ಸಾಧ್ಯತೆಯಿರುತ್ತದೆ. ಇಲ್ಲಿ ಅರ್ಧಕ್ಕೆ ಬೌಲಿಂಗ್ ನಿಲ್ಲಿಸಿದ ಬೌಲರು ನಾಚಿಕೆಯಿಂದ ತಲೆ ತಗ್ಗಿಸಿದರೆ ಅದನ್ನು ಸಂಪೂರ್ಣಗೊಳಿಸಲು ಬರುವ ಬೌಲರು ಗತ್ತಿನಿಂದ ಇನ್ನೂ ಚಿಗುರಿರದ ಮೀಸೆ ತಿರುವಿಕೊಂಡು ಬರುತ್ತಾನೆ. ಗಲ್ಲಿ ಕ್ರಿಕೆಟ್ಟು ಮೀಸಲಾತಿ, ಮಾನವ ಹಕ್ಕುಗಳ ವ್ಯಾಪ್ತಿಯಿಂದ ಹೊರಗಿರುವುದರಿಂದ ಈ ಪದ್ಧತಿಯನ್ನು ಯಾರೂ ವಿರೋಧಿಸುವಂತಿಲ್ಲ. ವಿರೋಧಿಸಿದರೆ ಬ್ಯಾಟಿನಲ್ಲೇ ಅಂಡಿಗೆ ಎರಡು ಬಿಡುವ ಸಾಧ್ಯತೆಯಿರುತ್ತದೆ. (ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಈ ಬೇಬಿ ಓವರ್ ವ್ಯವಸ್ಥೆ ಸಧ್ಯದ ಮಟ್ಟಿಗೆ ಇರುವುದಿಲ್ಲ). 2) ಸಬ್ ಡಿಕ್ಲೇರ್ :- ಇದು ಅಂತರರಾಷ್ಟ್ರೀಯ ಕ್ರಿಕೆಟಿನ ರಿಟೈರ್ಡ್ ಹರ್ಟ್ ಗೆ ಸಮಾನವಾಗಿರುವ ವ್ಯವಸ್ಥೆ ಎನ್ನಬಹುದು. ಗಲ್ಲಿ ಕ್ರಿಕೆಟಿನಲ್ಲಿ ಹೆಚ್ಚಾಗಿ ಆರು, ಎಂಟು, ಹತ್ತು ಓವರುಗಳ ಪಂದ್ಯಗಳು ಇರುವುದರಿಂದ ಬ್ಯಾಟ್ಸ್ಮನ್ನುಗಳು ಚುರುಕಾಗಿ ರನ್ ಗಳಿಸುವ ಅಗತ್ಯತೆಯಿರುತ್ತದೆ. ಹೀಗಾಗಿ ಯಾರಾದರೂ ಜಾಸ್ತಿ ಹೊತ್ತು ಕ್ರೀಸ್ ಆಕ್ರಮಿಸಿಕೊಂಡು ರನ್ ಗಳಿಸುವಲ್ಲಿ ವಿಫಲವಾದರೆ ಮೊದಲು " ಇವನ್ಯಾವ ಕುಟ್ಟೇಶಿ ಮಾರೇ" ಎಂದು ಜೋರಾಗಿ ಹಂಗಿಸುವುದರಿಂದ ಶುರುವಾಗಿ "ರನ್ನೂ ಮಾಡಲ್ಲ ಔಟೂ ಆಗಿ ಸಾಯಲ್ಲ" ಎಂದು ಶಪಿಸುವ ಹಂತ ತಲುಪಿ ಕೊನೆಗೆ "ಮುಚ್ಕೊಂಡು ಸಬ್ ಡಿಕ್ಲೇರ್ ಕೊಟ್ಟು ಈಚೆ ಬಾ" ಆಜ್ಞೆ ಮಾಡುವ ಮಟ್ಟ ಮುಟ್ಟುತ್ತದೆ. ಆಗ ಆತ್ಮಗೌರವ, ನಾಚಿಕೆ, ಮಾನ, ಮರ್ಯಾದೆ ಇರುವ ಯಾರಾದರೂ ಎದುರಾಳಿ ನಾಯಕನಿಗೆ ಕೇಳುವಂತೆ "ಸಬ್ ಡಿಕ್ಲೇರ್" ಎಂದು ಕೂಗಿ ಬೇರೆ ದಾಂಡಿಗನಿಗೆ ಜಾಗಬಿಟ್ಟು ಯಾರ ಹತ್ತಿರವೂ ಮಾತನಾಡದೇ ಮುಖ ಸಿಂಡರಿಸಿಕೊಂಡು ಹೋಗಿ ಬದಿಗೆ ಕೂರುತ್ತಾನೆ. ಹಾಗೂ, ಉಳಿದವರೆಲ್ಲಾ ಔಟಾಗಿ ಮತ್ತೊಮ್ಮೆ ಬ್ಯಾಟಿಂಗ್ ಸಿಗಬಹುದೇನೋ ಎಂಬ ಆಸೆಕಂಗಳಿಂದ ಪಂದ್ಯದ ಆಗುಹೋಗುಗಳನ್ನು ಗಮನಿಸುತ್ತಾನೆ.
3) ಸೆಲ್ಫ್ ಡಿಕ್ಲೇರ್ :- ಸಬ್ ಡಿಕ್ಲೇರ್ ಕೊಟ್ಟು ಹೊರನಡೆದ ಆಟಗಾರ ಉಳಿದವರೆಲ್ಲಾ ಔಟಾದ ಮೇಲೆ ಮತ್ತೊಮ್ಮೆ ಬ್ಯಾಟಿಂಗಿಗೆ ಬರುವ ಅರ್ಹತೆ ಹೊಂದಿದ್ದರೆ 'ಸೆಲ್ಫ್ ಡಿಕ್ಲೇರ್' ಎಂದು ಹೇಳಿ ಹೊರನಡೆದ ಆಟಗಾರನನ್ನು ಔಟ್ ಎಂದು ಪರಿಗಣಿಸಲಾಗುವುದು. ನನ್ನ ಗಲ್ಲಿ ಕ್ರಿಕೆಟ್ ವೃತ್ತಿಜೀವನದಲ್ಲಿ ಈ ಸೆಲ್ಫ್ ಡಿಕ್ಲೇರ್ ಬಳಸಿ ಹೊರನಡೆದ ಯಾವ ಪೆದ್ದನನ್ಮಗನನ್ನೂ ನಾನು ಕಂಡಿಲ್ಲ. ಆದರೆ ಸಬ್ ಡಿಕ್ಲೇರ್ ಹೇಳಿ ಹೊರಗಿರುವ ಆಟಗಾರ ಎಲ್ಲರೂ ಔಟಾದ ಮೇಲೆ ಮತ್ತೊಮ್ಮೆ ಕುಪ್ಪಳಿಸಿಕೊಂಡು ಬ್ಯಾಟಿಂಗಿಗೆ ಬರುವಾಗ ಎದುರಾಳಿ ತಂಡದ ಕಪ್ತಾನ "ಲೇ ನೀನು ಸೆಲ್ಫ್ ಡಿಕ್ಲೇರ್ ಕೊಟ್ಟಿದ್ಯಲೋ" ಎಂದು ಕ್ಯಾತೆ ತೆಗೆದು ಈ ದಾಂಡಿಗ " ಕಿವಿ ಕೇಳಲ್ವಾ ಲೋಫರ್ ಸಬ್ ಡಿಕ್ಲೇರ್ ಅಂದಿದ್ದು ನಾನು" ಎಂದು ಕಿರುಚಿ ಎರಡೂ ತಂಡಗಳಿಗೆ ಗಲಾಟೆಯಾಗುವುದನ್ನು ಕಂಡಿದ್ದೇನೆ. ಅಷ್ಟರಮಟ್ಟಿಗೆ ಈ 'ಸೆಲ್ಫ್ ಡಿಕ್ಲೇರ್' ಗೊಂದಲಮಯ ಸಮರೋತ್ಪತ್ತಿಕಾರಕ. 4) ಸಿಂಗಲ್ ಬ್ಯಾಟಿಂಗ್ :- ಕೆಲವೊಮ್ಮೆ ಇತ್ತಂಡಗಳಲ್ಲಿ ಜನರ ಸಂಖ್ಯೆ ಕಡಿಮೆಯಿದ್ದಾಗ ಅಂತರರಾಷ್ಟ್ರೀಯ ಕ್ರಿಕೆಟ್ಟಿನ ಎರಡು ಬದಿ ಬ್ಯಾಟ್ಸ್ಮನ್ ಇರಲೇಬೇಕೆಂಬ ನಿಯಮವನ್ನು ಸಡಿಲಗೊಳಿಸಿ ಎಲ್ಲರೂ ಔಟಾದ ಮೇಲೆ ಉಳಿದುಕೊಳ್ಳುವ ಒಬ್ಬನಿಗೆ ಏಕಾಂಗಿಯಾಗಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಲಾಗುವುದು. ಇದರ ಬಗ್ಗೆ ಪಂದ್ಯಕ್ಕೆ ಮುಂಚೆಯೇ ಎರಡು ಕಪ್ತಾನರು "ಸಿಂಗಲ್ ಬ್ಯಾಟಿಂಗ್ ಉಂಟಾ?" ಎಂದು ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವರು. ಸಿಂಗಲ್ ಬ್ಯಾಟಿಂಗ್ ಮಾಡುವಾಗ ರನ್ ಕದಿಯಲು ಏಕಾಕಿ ದಾಂಡಿಗ ಓಡುವಾಗ ರನೌಟ್ ಮಾಡಲು ಅವನು ಓಡುತ್ತಿರುವ ತುದಿಗೇ ಚೆಂಡೆಸೆಯಬೇಕೆಂದಿಲ್ಲ, ಎರಡು ತುದಿಯಲ್ಲಿ ಯಾವ ತುದಿಗೆ ಬೇಕಾದರೂ ಎಸೆಯಬಹುದು. ಇದು ಈ ವಿಶೇಷ ಸೌಲಭ್ಯದೊಂದಿಗೆ ಬರುವ ಒಪ್ಪಲೇಬೇಕಾದ ಶರತ್ತು. 5) ವಿಕೆಟ್ಟು :- ಗಲ್ಲಿಕ್ರಿಕೆಟ್ಟಿನಲ್ಲಿ ತೀರಾ ಆರು ಗೂಟಗಳು ಇರಲೇಬೇಕೆಂದೇನಿಲ್ಲ. ಬ್ಯಾಟಿಂಗ್ ಮಾಡುವ ಬದಿ ಗೋಡೆಯ ಮೇಲೆ ಮಣ್ಣಿನಲ್ಲಿ ಗುರುತು ಹಾಕಿದರೂ ಆಯಿತು. ಇಲ್ಲವಾದರೆ ಸಮಯಕ್ಕೆ, ಮೈದಾನಕ್ಕೆ ತಕ್ಕಂತೆ ಟಯರು, ದೊಡ್ಡ ಕಲ್ಲು, ಜಂಬಿಟ್ಟಿಗೆ, ಡಾಂಬರಿನ ಡಬ್ಬ ಯಾವುದು ಸಿಕ್ಕಿದರೂ ಆಯಿತು. ಇದು ಸ್ವಲ್ಪ ಅಪಾಯಕಾರಿಯಾದದ್ದು ಎಂದು ನನ್ನ ಸ್ವಂತ ಅನುಭವದಿಂದ ಹೇಳಬಹುದು. ನಾನು ಒಮ್ಮೆ ಬ್ಯಾಟಿಂಗ್ ಮಾಡುವಾಗ ಬೇಲಿಯೇ ಎದ್ದು ರಾಗಿಕಾಳು ಮೇಯ್ದಂತೆ ವಿಕೆಟ್ಟಿಗೆಂದು ಇಟ್ಟಿದ್ದ ಕಲ್ಲು ಕಾಲ ಮೇಲೆ ಮಗುಚಿಬಿದ್ದು ಬಲಗಾಲಿನ ಹೆಬ್ಬೆರಳು ಪಚಡಿಯಾಗಿತ್ತು. ಹೀಗಾಗಿ ಈ ಮೂಲಕ ವಿಕೆಟ್ಟಿಡುವಾಗ ಸ್ವಲ್ಪ ನೋಡಿಕೊಂಡು ಇಡಿ ಎಂದು ಹೇಳಬಯಸುತ್ತೇನೆ. 6) ಮೈದಾನ ನಿರ್ಣಯ :- ಕೆಲವೊಮ್ಮೆ ಮೈದಾನದ ಪಕ್ಕದಲ್ಲಿ ಬೇಲಿ ಬಂದೋ, ಅಥವಾ ಸಂಪೂರ್ಣ ಒಂದು ಪಾರ್ಶ್ವ ಗೊಚ್ಚೆಯಾಗಿಯೋ ತೊಂದರೆ ನಿರ್ಮಾಣವಾದಾಗ ಬರೀ ಆಫ್ ಸೈಡು ರನ್ನು, ಬರೀ ಲೆಗ್ಸೈಡು ರನ್ನು ಎಂಬಂತಹ ನಿಯಮಗಳನ್ನು ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಚೆಂಡಿಗ ರನ್ನಿಲ್ಲದ ಬದಿಗೆ ಹೊಡೆಯಲು ಪ್ರೇರೇಪಿಸುವ ಚೆಂಡುಗಳನ್ನೆಸೆಯುವುದರಿಂದ ಇದು ದಾಂಡಿಗನ ಚಾಕಚಕ್ಯತೆಗೆ ಸವಾಲಾಗಿರುತ್ತದೆ. 7) ಬೆನ್ನು ನಂಬರು-ಬ್ಯಾಟ್ ನಂಬರು :- ಬೇಸಿಗೆ ರಜೆಯಲ್ಲಿ ಎಲ್ಲರೂ ಅಜ್ಜಿಮನೆ, ಬೆಂಗಳೂರು ಅಂತ ಹೋದಾಗ ತೀರಾ ಆಟಗಾರರ ಸಂಖ್ಯೆ ಮೂರು-ನಾಲ್ಕಕ್ಕಿಳಿದುಬಿಡುತ್ತದೆ. ಆಗಲೂ ಪದ್ಧತಿಯನ್ನು ನಿಲ್ಲಿಸಬಾರದೆಂಬ ಕಾರಣಕ್ಕೆ ಬೌಂಡರಿ ಗೆರೆಯನ್ನು ಹತ್ತಿರಕ್ಕಿಟ್ಟುಕೊಂಡು ಆಟಗಾರರು ಆಟವಾಡುತ್ತಾರೆ. ಆಗ ತಂಡಗಳನ್ನು ಮಾಡಲು ಆಗದಿರುವುದರಿಂದ ಎಲ್ಲ ಆಟಗಾರರೂ ವೈಯಕ್ತಿಕವಾಗಿ ಅವರೇ ಒಂದು ತಂಡದಂತೆ ಆಡುತ್ತಾರೆ. ಒಬ್ಬ ಬ್ಯಾಟಿಂಗ್ ಮಾಡುವಾಗ ಅವನಿಗೆ ಒಬ್ಬ ಬೌಲರು, ಉಳಿದವರು ಕ್ಷೇತ್ರರಕ್ಷಕರು. ಅವನು ಔಟಾದ ಮೇಲೆ ಮತ್ತೊಬ್ಬ ಬಂದರೆ ಅವನಿಗೆ ಮತ್ತೊಬ್ಬ ಬೌಲರು. ಒಬ್ಬ ದಾಂಡಿಗನಿಗೆ ಒಬ್ಬ ಚೆಂಡಿಗ ಅಂತ ನಿಗದಿ ಮಾಡಲಾಗುತ್ತದೆ (ಕೆಲವೊಮ್ಮೆ ಈ ನಿಯಮ ಇರುವುದಿಲ್ಲ). ಇಂತಹ ಸಮಯದಲ್ಲಿ ಇರುವ ನಾಲ್ಕು ಜನರಲ್ಲಿ ಬ್ಯಾಟಿಂಗ್ ಕ್ರಮವನ್ನು ನಿರ್ಧರಿಸಲು ಬ್ಯಾಟ್ ನಂಬರು ಅಥವಾ ಬೆನ್ನು ನಂಬರು ತಂತ್ರವನ್ನು ಬಳಸಲಾಗುತ್ತದೆ. ಬ್ಯಾಟ್ ನಂಬರ್ ಎಂದರೆ ಯಾರೋ ಒಬ್ಬ ನೆಲದ ಮೇಲೆ ಬ್ಯಾಟನ್ನು ಅಡ್ಡ ಮಲಗಿಸಿ ಅದರ ಕೆಳಗೆ ಒಂದರಿಂದ ನಾಲ್ಕರವರೆಗೆ ಸಂಖ್ಯೆ ಬರೆದು ಅದರ ಮೇಲೆ ಬ್ಯಾಟುಮುಚ್ಚಿ ಈ ಕಡೆ ಬದಿ ಆ ಸಂಖ್ಯೆಗಳಿಗೆ ನೇರವಾಗಿ ನಾಲ್ಕು ಗೆರೆಗಳನ್ನೆಳೆಯುತ್ತಾನೆ. ಅದರಲ್ಲಿ ಗೆರೆ ಮುಟ್ಟುವ ಮೂಲಕ ಬ್ಯಾಟಿಂಗ್ ಕ್ರಮಾಂಕ ನಿರ್ಧರಿಸಲಾಗುತ್ತದೆ. ಇನ್ನು ಬೆನ್ನು ನಂಬರ್ ತುಂಬಾ ಸುಲಭ, ಯಾರೋ ಒಬ್ಬನ ಬೆನ್ನಿಗೆ ದಬಾರ್ ದಬಾರ್ ಅಂತ ಗುದ್ದಿ ಕೈಯಲ್ಲಿ ಯಾವುದೋ ಒಂದು ನಂಬರ್ ತೋರಿಸಿ "ಇದ್ಯಾರಿಗೆ?" ಎಂದು ಕೇಳಲಾಗುತ್ತದೆ. ಗುದ್ದಿಸಿಕೊಂಡವ ಸುಮ್ಮನೆ ಯಾರದ್ದೋ ಹೆಸರು ಹೇಳುತ್ತಾನೆ. ಅಲ್ಲಿ ಎರಡು ಬೆರಳು ತೋರಿಸಿದ್ದರೆ ಎರಡನೇ ಬ್ಯಾಟಿಂಗ್, ಒಂದು ಬೆರಳಿದ್ದರೆ ಮೊದಲ ಬ್ಯಾಟಿಂಗ್. ಇಲ್ಲಿ ಬೆನ್ನಿಗೆ ಸರಿಯಾಗಿ ಪೆಟ್ಟು ಬೀಳುವ ಸಂಭವವಿರುವುದರಿಂದ ಕೆಲವೊಮ್ಮೆ ಆಟಗಾರರು ಗುದ್ದಿಸಿಕೊಳ್ಳಲು ಹಿಂಜರಿಯುತ್ತಾರೆ. ಗುದ್ದಲು ಮಾತ್ರ ಯಾವಾಗ ಬೇಕಾದರೂ ತಯಾರಿರುತ್ತಾರೆ. ಈ ಎರಡೂ ಕ್ರಮಗಳು ಸಂಪೂರ್ಣ ಅದೃಷ್ಟದ ಮೇಲೆ ನಿಂತಿರುತ್ತದೆ. 8) ಟಾಸ್ ವ್ಯವಸ್ಥೆ :- ಬೇಕಾದಷ್ಟು ಜನರಿದ್ದು ಎರಡು ತಂಡಗಳಾಗಿದ್ದಾಗ ಯಾರು ಮೊದಲು ಬ್ಯಾಟ್ ಮಾಡಬೇಕೆಂದು ನಿರ್ಧರಿಸಲು ನಾಣ್ಯ ಉಪಯೋಗಿಸಿ ಟಾಸ್ ಹಾಕುವುದು ಸಾಮಾನ್ಯ ವ್ಯವಸ್ಥೆ. ಕೆಲವೊಮ್ಮೆ ಟಾಸ್ ಕೂಗಿದವನು ಕೂಗಿದ್ದು ಬೀಳದಿದ್ದಾಗ "ಕಾಯಿನ್ ಸರಿಯಾಗಿ ತಿರುಗಲಿಲ್ಲ, ಕೊಡಿಲ್ಲಿ ನಾನು ಇನೊಂದ್ಸಲ ಹಾಕ್ತೀನಿ" ಎನ್ನುವಂತಹ ಸಾಧ್ಯತೆಗಳಿರುತ್ತವೆ. ಇನ್ನು ಕೆಲವೊಮ್ಮೆ ಯಾರ ಬಳಿಯೂ ನಾಣ್ಯಗಳಿಲ್ಲದಿದ್ದಾಗ ಅತೀಸಣ್ಣ ಕಲ್ಲೊಂದನ್ನು ಒಬ್ಬ ಕಪ್ತಾನ ತನ್ನ ಕೈಯಲ್ಲಿಟ್ಟುಕೊಂಡು ಎರಡೂ ಕೈಗಳನ್ನು ಹಿಂದೆ ತಗೊಂಡು ಹೋಗಿ ಕಲ್ಲನ್ನು ಆ ಕೈಯಿಂದ ಈ ಕೈಯಿಗೆ ವರ್ಗಾಯಿಸಿ ಅಳಕಂಬಳಕ ಮಾಡಿ ಕೊನೆಗೆ ಮುಷ್ಟಿ ಕಟ್ಟಿದ ಎರಡೂ ಕೈಗಳನ್ನು ಎದುರಾಳಿ ಕಪ್ತಾನನೆದುರಿಗೆ "ಯಾವ ಕೈಯಲ್ಲಿದೆ ಹೇಳು ನೋಡೋಣ" ಎಂಬಂತೆ ಹಿಡಿಯುತ್ತಾನೆ. ಇನ್ನು ನಾಣ್ಯವಿಲ್ಲದ ಸಮಯದಲ್ಲಿ ಮತ್ತೊಂದು ಆಯ್ಕೆಯಿರುತ್ತದೆ. ಯಾವುದಾದರೂ ಚಪ್ಪಟೆ ಕಲ್ಲನ್ನು ಹುಡುಕಿ ಅದರ ಒಂದು ಬದಿಗೆ ತುಪುಕ್ಕಂತ ಉಗಿದು ಹೆಡ್ಡು-ಟೈಲು ಇದ್ದಂತೆ ಎಂಜಲು-ಖಾಲಿ ಎಂಬ ಎರಡು ಮುಖಗಳನ್ನು ಸೃಷ್ಟಿಸಿ ಮೇಲೆ ಚಿಮ್ಮಲಾಗುತ್ತದೆ. ಆದರೆ ಹೆಚ್ಚಿನ ಸಮಯದಲ್ಲಿ ದಬಾಯಿಸಿ ಉಗಿಯುವುದರಿಂದ ಒಂದು ಬದಿಯಲ್ಲಿ ಸಿಕ್ಕಾಪಟ್ಟೆ ಎಂಜಲು ಕ್ರೋಢೀಕೃತವಾಗಿ ಚಪ್ಪಟೆಕಲ್ಲು ಮೇಲೆ ಚಿಮ್ಮಿ ಗಿರಗಿರ ತಿರುಗುವಾಗ ಆ ಎಂಜಲು ಹರಿದುಬಂದು ಇತ್ತಕಡೆ ಬದಿಗೂ ಸಮಾನವಾಗಿ ಹಂಚಿಹೋಗಿ ಕೆಳಕ್ಕೆ ಬೀಳುವಷ್ಟರಲ್ಲಿ ಎರಡೂ ಬದಿ ಎಂಜಲಾಗಿ ಗೊಂದಲ ಹುಟ್ಟಿಸುವಂತಹ ಪ್ರಸಂಗಗಳಾಗುತ್ತವೆ. ಇನ್ನು ಒಂದು ದಿನಕ್ಕೆ ಒಂದೇ ಬಾರಿ ಟಾಸ್, ಅದಾದ ಮೇಲೆ ಪ್ರತೀಪಂದ್ಯ ಗೆದ್ದ ತಂಡ ಡಿಫಾಲ್ಟ್ ಆಗಿ ಮುಂದಿನ ಪಂದ್ಯದ ಟಾಸ್ ವಿಜಯಿಯಾಗಿರುತ್ತದೆ. ಮತ್ತು ಸಾಮಾನ್ಯವಾಗಿ ಗಲ್ಲಿ ಕ್ರಿಕೆಟ್ಟಿನಲ್ಲಿ ಟಾಸ್ ಗೆದ್ದವರು ಬ್ಯಾಟಿಂಗೇ ಆರಿಸಿಕೊಳ್ಳುವುದಾದರೂ ಸೌಜನ್ಯಕ್ಕಾಗಿ ಒಮ್ಮೆ "ಬ್ಯಾಟಿಂಗಾ, ಬೌಲಿಂಗಾ??" ಎಂದು ನಾಯಕನನ್ನು ಪ್ರಶ್ನಿಸಲಾಗುತ್ತದೆ.
9) ಜೋಕರ್ :- ಕೆಲವೊಮ್ಮೆ ಎರಡೂ ತಂಡಗಳಿಗೆ ಸರಿಯಾಗಿ ಹಂಚಿದ ಮೇಲೂ ಒಬ್ಬ ಉಳಿಯುವಂತೆ ಬೆಸಸಂಖ್ಯೆಯಲ್ಲಿ ಆಟಗಾರರು ಬಂದಿರುತ್ತಾರೆ. ಆಗ ಅಷ್ಟು ಚೆನ್ನಾಗಿ ಆಡದ ಯಾರೋ ಒಬ್ಬನನ್ನು 'ಜೋಕರ್' ಎಂದು ಮಾಡಲಾಗುತ್ತದೆ. ಇಸ್ಪೀಟಿನಲ್ಲಿ ಜೋಕರ್ ಗೆ ಸಿಕ್ಕಾಪಟ್ಟೆ ಪ್ರಾಮುಖ್ಯತೆಯಿದ್ದರೆ ಗಲ್ಲಿಕ್ರಿಕೆಟ್ಟಿನಲ್ಲಿ ತದ್ವಿರುದ್ಧ. ಎರಡೂ ತಂಡಗಳಲ್ಲಿ ಬ್ಯಾಟಿಂಗ್ ಸಿಗುತ್ತದೆ ಎಂದು ಪುಸಲಾಯಿಸಿ ಜೋಕರ್ ಮಾಡಿದರೂ ಎರಡೂ ಕಡೆಯೂ ಎಲ್ಲರೂ ಆಡಿದಮೇಲೆಯೇ ಅವನಿಗೆ ಬ್ಯಾಟಿಂಗ್ ಎಂದು ಎಲ್ಲರಿಗೂ ಗೊತ್ತಿರುತ್ತದೆ. ಹೀಗಾಗಿ ದಿನವಿಡೀ ಬ್ಯಾಟಿಂಗ್, ಬೌಲಿಂಗ್ ಸಿಗದೆಯೇ ಸತತವಾಗಿ ಎರಡೂ ತಂಡಗಳ ಪರವಾಗಿ ಕ್ಷೇತ್ರರಕ್ಷಣೆ ಮಾಡಬೇಕಾಗಿರುವುದರಿಂದ ಜೋಕರ್ ಆಗಲು ಯಾವ ಬಗ್ಗಿನಾಯಿಗೂ ಇಷ್ಟವಿರುವುದಿಲ್ಲ. ಜೊತೆಗೆ ಅಪರೂಪಕ್ಕೆ ಬ್ಯಾಟಿಂಗ್ ಸಿಕ್ಕಿ ಒಂದು ತಂಡಕ್ಕೆ ಚೆನ್ನಾಗಿ ಆಡಿ, ಇನ್ನೊಂದು ತಂಡದಲ್ಲಿ ಬೇಗ ಔಟಾದರೆ "ಬರೀ ಅವ್ನ ಟೀಮಿಗೆ ಮಾತ್ರ ಚೆನಾಗಾಡಿ ನಮ್ಗೆ ಚೊಂಬು ಕೊಡು ಹಲ್ಕಟ್" ಎಂಬಂತಹ ಕಠೋರ ಮನೋನಿಂದನೆಯ ಮಾತುಗಳನ್ನೂ ಕೇಳಬೇಕಾಗಿರುತ್ತದೆ. 10) ಕಳೆದವನು ಕೊಡಿಸಬೇಕು :- ತೀರಾ ಚಿಕ್ಕ ಹುಡುಗರ ಗಲ್ಲಿಕ್ರಿಕೆಟ್ಟಿನಲ್ಲಿ ಚೆಂಡು ಕಳೆದು ಹೋದರೆ ಯಾರು ಹೊಡೆದಿರುತ್ತಾರೋ, ಅಥವಾ ಎಸೆದಿರುತ್ತಾರೋ ಅವರೇ ಹೊಸಾ ಚೆಂಡು ತಂದುಕೊಡಬೇಕೆನ್ನುವ ನಿಯಮವಿದ್ದರೂ ದೊಡ್ಡವರಾಗುತ್ತಾ ಹೋದಂತೆ ಪ್ರೌಢಿಮೆ, ಸಾಮಾಜಿಕ ಪ್ರಜ್ಞೆಗಳು ಬೆಳೆದು ಇಂತಹ ಶೋಷಣೆಗಳಿಗೆ ಅಂತ್ಯ ಹಾಡಲಾಗುತ್ತದೆ. 11)ಚಕ್ ಬೌಲಿಂಗ್:- ಗಲ್ಲಿಕ್ರಿಕೆಟ್ಟಿನಲ್ಲಿ "ಮಾಡೋದಿದ್ರೆ ಸರಿಯಾಗಿ ಮಾಡು, ಇಲ್ಲಾಂದ್ರೆ ನಿಂತ್ಕೊಂಡೇ ಎಸಿ" ಎಂಬ ನಿಯಮ ಪಾಲಿಸಲಾಗುತ್ತದೆ. ಅಂದರೆ ಬೌಲಿಂಗ್ ಮಾಡುವವನು ಮೊಳಕೈ ಬಗ್ಗಿಸದೇ ಅಂತರರಾಷ್ಟ್ರೀಯ ನಿಯಮಾನುಸಾರ ಬೌಲಿಂಗ್ ಮಾಡಬೇಕಿರುತ್ತದೆ. ಅಸಮರ್ಥನಾದರೆ ನಿಂತುಕೊಂಡೇ ಬೇಸ್ ಬಾಲ್ ತರಹ ಚೆಂಡೆಸೆಯಬಹುದು. ಆದರೆ ಶೋಕಿಗೆಂದು ಹತ್ತಡಿ ದೂರದಿಂದ ರನಪ್ ತೆಗೆದುಕೊಂಡು ಬಳುಕುತ್ತಾ ಓಡಿಬಂದು ಕೊನೆಗೆ ನಿಯಮಬಾಹಿರವಾಗಿ ಮೊಳಕೈ ಬಗ್ಗಿಸಿ ಥ್ರೋ ಮಾಡಿದರೆ ಛೀ ಥೂ ಎಂದು ಉಗಿದಟ್ಟಲಾಗುತ್ತದೆ. 12) ಅಂಪೈರು-ಸತ್ಯಸಂಧತೆ :- ಗಲ್ಲಿಕ್ರಿಕೆಟ್ಟಿನಲ್ಲಿ ವೈಡ್-ನೋಬಾಲ್-ರನೌಟ್ಗಳನ್ನೆಲ್ಲಾ ನಿರ್ಧರಿಸಲು ಯಾವ ವಿಶೇಷ ಅಂಪೈರೂ ಇರುವುದಿಲ್ಲ. ಸಾಮಾನ್ಯವಾಗಿ ಬ್ಯಾಟಿಂಗ್ ತಂಡದವರೇ ಯಾರೋ ಒಬ್ಬರು ನಿರ್ಣಾಯಕರಾಗಿ ನಿಂತಿರುತ್ತಾರೆ. ಹಾಗಂತ ಅವರ ನಿರ್ಣಯಗಳನ್ನು ಬೌಲಿಂಗ್ ತಂಡದವರು ಪ್ರಶ್ನಿಸುವುದಿಲ್ಲ. ಅದಕ್ಕೆ ಎರಡು ಕಾರಣಗಳಿವೆ. ಒಂದು, ಮುಂದೆ ಅವರು ಬ್ಯಾಟಿಂಗ್ ಮಾಡುವಾಗ ಅವರ ತಂಡದಿಂದಲೂ ಒಬ್ಬ ಅಂಪೈರಾಗಿ ನಿಂತಾಗ ಅವನ ನಿರ್ಣಯಗಳನ್ನು ಮತ್ತೊಂದು ತಂಡದವರು ಒಪ್ಪಬೇಕಾಗಿರುವ ಪರಿಸ್ಥಿತಿ. ಎರಡು, ಹೊರಗಡೆ ಎಂಥ ದಗಾಕೋರರಾದರೂ ಗಲ್ಲಿಕ್ರಿಕೆಟ್ ಆಡುವ ಸಮಯದಲ್ಲಿ ಎಲ್ಲಾ ಆಟಗಾರರೂ ಸತ್ಯಹರಿಶ್ಚಂದ್ರಂಶಸಂಭೂತರಾದ ಮಹಾನ್ ಸತ್ಯಸಂಧರಾಗಿ ಬದಲಾಗುತ್ತಾರೆ ಎಂಬ ನಂಬಿಕೆ. ಹೀಗಾಗಿ ಅಂಪೈರ್ ನಿರ್ಣಯಕ್ಕೆ ಒಕ್ಕೊರಲಿನ ಒಮ್ಮತ ಸಿಕ್ಕುತ್ತದೆ. ಒಮ್ಮೊಮ್ಮೆ ಕೊನೇ ಓವರಿನಲ್ಲಿ ಎಂಟೊಂಭತ್ತು ರನ್ನು ಬೇಕಾದಾಗ ನೋಬಾಲ್-ವೈಡ್ ಕೊಟ್ಟರೆ, ರನೌಟ್ ನಿರಾಕರಿಸಿದರೆ "ಮೋಸ ಮಾಡ್ತೀಯೇನೋ ಬೇವರ್ಸಿ" ಎಂದು ಅಂಪೈರಿಗೆ ಬೈಯುವ ಮೂಲಕ ಸಣ್ಣಪುಟ್ಟ ಜಗಳಗಳಾಗುವ ಸಾಧ್ಯತೆಯಿರುತ್ತದಷ್ಟೇ. ಇನ್ನು ಕೆಲವೊಮ್ಮೆ 'ಚಕ್' ಎಂಬ ಸದ್ದಿನೊಂದಿಗೆ ಚೆಂಡು ವಿಕೆಟ್ಕೀಪರ್ ಕೈಸೇರಿದಾಗ "ಬ್ಯಾಟಿಗೆ ಟಚ್ಚಾಗಿಲ್ಲ, ಬ್ಯಾಟು ನೆಲಕ್ಕೆ ತಾಗಿ ಸೌಂಡು ಬಂದಿದ್ದು" ಎಂದು ದಾಂಡಿಗ ಹೇಳಿದರೆ ಅವನ ಮಾತಿಗೆ ಬೆಲೆಕೊಟ್ಟು "ಸಾಯ್ಲಿ ಬಿಡೋ ಎಷ್ಟು ಹೊಡೀತಾನೆ ಮಹಾ" ಎಂದು ಹೇಳುತ್ತಾ ಆಡಲು ಅವಕಾಶ ಮಾಡಿಕೊಡಲಾಗುತ್ತದೆ. ಇದು ಪಂದ್ಯದ ಸ್ಥಿತಿಗತಿಯ ಮೇಲೆ ಅವಲಂಬಿಸಿರುತ್ತದೆನ್ನುವುದೂ ಸತ್ಯ. ಹಾಗೆಯೇ ಕೆಲವೊಮ್ಮೆ ಯಾರೂ ಅಪೀಲು ಮಾಡದಿದ್ದರೂ ಔಟೆಂದು ಒಪ್ಪಿಕೊಂಡು ಹೊರನಡೆದ ಆಟಗಾರನಿಗೆ ಅವನ ಕ್ರೀಡಾಸ್ಫೂರ್ತಿಯ ಪ್ರತಿಫಲವಾಗಿ ಒಂದು ಸಣ್ಣ ಕರತಾಡನ ನೀಡಲಾಗುತ್ತದೆ, ಹಾಗೂ ಆ ಆಟಗಾರ ಹೆಮ್ಮೆಯಿಂದ ನಗುಬೀರುತ್ತಾ "ಅಯ್ಯೋ ಯಾರೂ ಅಪೀಲೇ ಮಾಡಿರ್ಲಿಲ್ವಾ??" ಎಂದು ಒಳಗೊಳಗೇ ಯೋಚಿಸುತ್ತಾನೆ. 13) ಕೊರಗುವುದು :- ಇದೊಂದು ಅಂತರರಾಷ್ಟ್ರೀಯ ಮಾದರಿಗಳಲ್ಲಿ ಕಾಣಸಿಗದ ಗಲ್ಲಿಕ್ರಿಕೆಟ್ಟಿನ ವಿಶೇಷತೆ. "ಅಯ್ಯೋ ಎಲ್ರೂ ಬೇಗ ಔಟಾಗಿ ನನ್ಗೆ ಬೇಗ ಬ್ಯಾಟಿಂಗ್ ಸಿಗಲಪ್ಪಾ" ಎಂದು ಹಲುಬುವುದಕ್ಕೆ ಕೊರಗುವುದು ಎನ್ನಲಾಗುತ್ತದೆ. ಕೆಲವೊಮ್ಮೆ ಇವತ್ತು ಬೌಲರುಗಳಿಗೆ ಬಡಿದು ಬಾರಿಸ್ತೀನಿ ಎಂದು ಎದೆಯುಬ್ಬಿಸಿಕೊಂಡು ಹೋದ ಆರಂಭಿಕ ಆಟಗಾರ ಮೊದಲ ಎಸೆತಕ್ಕೇ ಔಟಾದಾಗ ಆ ಕ್ಷಣದ ಅವಮಾನ ತಡೆಯಲಾಗದೇ ಅವನ ನಂತರ ಬ್ಯಾಟಿಂಗಿಗೆ ಬರುವವನ ಮೇಲೆ "ಕಚಡಾ ನನ್ಮಗನೇ ನೀನು ಕೊರಗಿದ್ದಕ್ಕೇ ನಾನು ಔಟಾಗಿದ್ದು, ಅದೇನು ಕೊರಗಿ ಸಾಯ್ತೀರೋ" ಎಂದು ಪುರಾವೆಯಿಲ್ಲದೇ ಆಪಾದಿಸಿ ನಿಂದಿಸುತ್ತಾನೆ. ಆಗ ಮುಂದಿನ ದಾಂಡಿಗ "ನಾನು ಕೊರಗಿಲ್ಲ ಗುರೂ, ಯಾರು ಬೇಕಾದ್ರೂ ಆಡ್ರಪ್ಪಾ ನನ್ಗೆ ಬ್ಯಾಟಿಂಗೇ ಬೇಡ" ಎಂದು ಕೂಗಾಡಿ ಆ ಕ್ಷಣಕ್ಕೆ ಅಲ್ಲಿ ವಿಷಮಪರಿಸ್ಥಿತಿ ನಿರ್ಮಾಣವಾಗುತ್ತದೆ. "ಅಯ್ಯೋ ಈ ನನ್ಮಗ ಔಟಾಗಿದ್ರೇ....." ಎಂದು ಯಾರಾದರೂ ಪ್ರಬಲವಾಗಿ ಯೋಚಿಸಿದರೆ ಆ ಯೋಚನಾತರಂಗಗಳ ಪ್ರಭಾವದಿಂದ ದಾಂಡಿಗ ನಿಜಕ್ಕೂ ಔಟಾಗುತ್ತಾನೆ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲವಾದರೂ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ಮುಂದುವರೆಸಿದ್ದಾರೆ. ನಮ್ಮ ಮನೆಯಲ್ಲಿ ಉಪ್ಪಿಟ್ಟು ಮಾಡುವಾಗ ತರಕಾರಿ ಬೇಯಿಸಿ, ನೀರು ಹಾಕಿ ಕುದಿ ಬಂದ ಮೇಲೆ ಹುರಿದಿಟ್ಟ ರವೆ ಹಾಕಿ ಮುಚ್ಚಳ ಮುಚ್ಚುತ್ತಾರೆ. ಅದೇ ಇನ್ಯಾರದ್ದೋ ಮನೆಯಲ್ಲಿ ಮೊದಲು ತರಕಾರಿ-ಬಟಾಣಿ ಜೊತೆ ನೇರವಾಗಿ ರವೆ ಹಾಕಿ ಹುರಿದು ಕೊನೆಗೆ ನೀರು ಸೇರಿಸಿದ್ದೂ ಕಂಡಿದ್ದೇನೆ. ಇನ್ನು ಕುಂದಾಪುರ ಕಡೆ ಉಪ್ಪಿಟ್ಟಿಗೆ ಶೇಂಗಾ ಎಣ್ಣೆ ಬದಲು ತೆಂಗಿನೆಣ್ಣೆ ಹಾಕಿ ಅದರ ಘಮಕ್ಕೆ ಇದನ್ನು ಬಾಯಿಗಿಟ್ಟುಕೊಳ್ಳುವುದೋ ತಲೆಗೆ ಹಚ್ಚಿಕೊಳ್ಳುವುದೋ ಎಂದು ಗೊಂದಲವಾಗುವಂತೆ ಮಾಡುತ್ತಾರೆ. ಹೀಗೆ ವಿಷಯವೊಂದೇ ಆದರೂ ನಿಯಮ, ರೀತಿಗಳು ಬೇರೆಯಾಗಿರುತ್ತವೆ. ಹಾಗೇ ಗಲ್ಲಿಕ್ರಿಕೆಟ್ ಎನ್ನುವುದು ಒಂಥರಾ ಅಮೂರ್ತ. ಅದನ್ನು ಬೇರೆಬೇರೆಯವರು ಅವರವರ ರೀತಿಯಲ್ಲಿ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಹೀಗಾಗಿ ಪ್ರದೇಶದಿಂದ ಪ್ರದೇಶಕ್ಕೆ ನಿಯಮಗಳೂ ಬೇರೆಯಿರಬಹುದು. ಹಾಗಾಗಿ ನಿಮ್ಮೂರಿನ ಕಡೆ ಏನಾದರೂ ಬೇರೆ ಬೇರೆ ವಿಶೇಷತೆಗಳಿದ್ದರೆ ಈ ಮೇಲಿನ ಪಟ್ಟಿಯ ಜೊತೆ ಸೇರಿಸಿಕೊಳ್ಳಿ. ನಿಯಮಗಳು ಜಂಗಮವಾದರೂ ಗಲ್ಲಿಕ್ರಿಕೆಟ್ಟು ಮಾತ್ರ ಎಲ್ಲ ಅಂತಃಶಕ್ತಿಗಳನ್ನೂ ಒಟ್ಟುಗೂಡಿಸುವ ಸ್ಥಾವರ ಎಂದು ಈ ಮೂಲಕ ಹೇಳಬಹುದಾಗಿರುತ್ತದೆ. 'ಜೈ ಗಲ್ಲಿ ಕ್ರಿಕೆಟ್' ಎಂಬ ಘೋಷಣೆಯೊಂದಿಗೆ ಈ ಲೇಖನಕ್ಕೆ ಮುಕ್ತಾಯ ಹೇಳಿಬಿಡಿ.
- ಸಂಪತ್ ಸಿರಿಮನೆ
No comments:
Post a Comment