ಮುಂಜಾವಿನಲಿ ಬೆಚ್ಚನೆಯ
  ಉಸಿರ ಸೂಸುತ,
ನೀ ಬಳಿ ಬಂದು,
ಆಗ ತಾನೇ ಮುಖದ ಮೇಲೆ
  ಚಿಮುಕಿಸಿದ ನೀರ ಹನಿ
ಹೊಳೆವಾಗ,ಮಲಗಿದಲ್ಲೇ ನಿನ್ನೊಮ್ಮೆ
ಹಾಸಿಗೆಗೆ ಎಳೆದು ಅಪ್ಪಿ,
ನೀ ಕೊಸರಾಡುವಾಗೊಮ್ಮೆ
ನಿನ್ನ ಮೂಗಿನ ತುದಿಯಲ್ಲಿ
 ಮಿಂಚುವ ನೀರ ಹನಿಗೊಮ್ಮೆ
ತುಟಿಯೊತ್ತಿ,
ರಾತ್ರಿಯ ಸಾಂಗತ್ಯಕ್ಕೊಂದು
ತೄಪ್ತಿಯ ತರ್ಪಣ ನೀಡಿ,
ಮತ್ತೆ ರಾತ್ರಿಯವರೆಗೆ
ಕಾಯುವ ನಾನು
ನಿನ್ನೊಲವ ದಾಸ.....

ಮುಂಜಾನೆ ಮಿಂದು,
     ಮೆದುವಾದ ಮುಂಗುರುಳ,
ಮಲಗಿರುವ ನನ್ನ ಮುಖದ
    ಮೇಲೆ ಮುತ್ತಿಸುತ್ತಾ,
ಶುಭೋದಯ ಹಾಡುವ
   ಗೆಳತೀ ನಿನ್ನ ಮುಂಗುರುಳಿಗೊಂದು ಪ್ರಣಾಮ...


ಅಪ್ಪಿ ಮುದ್ದಾಡುತ್ತಾ
      ಕಚಗುಳಿಯಿಡುವ,
ನಿನ್ನ ಕೂದಲ ಕತ್ತಲೊಳಗೆ
      ಕಳೆದು ಹೋಗುವ ನನ್ನ,
ಹುಡುಕುವ ನಿನ್ನ ಕಣ್ಣಿನೊಳಗೆ,
      ನನಗೆಂದು ಮಿಂಚುವ
ಪ್ರೀತಿಗೊಂದು ಪ್ರಣಾಮ.....


ನಿನ್ನ ಕೆನ್ನೆಯೊಂದಿಗೆ
    ಮುದ್ದಾಡುವ ನನ್ನ,
ತುಟಿಗಳ ಕಡೆ
    ಆಸೆಯಿಂದ ದಿಟ್ಟಿಸುವ
ನಿನ್ನ, ಅರೆ ಮುಚ್ಚಿದ
   ರೆಪ್ಪೆಗೊಮ್ಮೆ ತುಟಿಯನ್ನೊತ್ತಿ,
ಪೂರ್ತಿ ನಿನ್ನ ಕಂಗಳ ಮುಚ್ಚಿ
    ನಿನ್ನೊಳಗೆ ಒಂದಾಗಿ,
ನನಗೆ ನನ್ನೇ ಮರೆಸುವ
   ನಿನ್ನ ಈ ಪ್ರೀತಿಗೊಂದು ಪ್ರಣಾಮ......