ದೂರ ದಿಗಂತವನ್ನು ತನ್ಮಯತೆಯಿಂದ ದಿಟ್ಟಿಸುತ್ತಾ,
ಮನದೊಳಗೇ ಹಾಡಾಗುತ್ತಾ ,
ಮುಖದ ಮೇಲೊಂದು ನಗೆಯ ನೆರಳೊಂದಿಗೆ,
ಕುಳಿತಿರುವ
ನನಗಿನ್ನೂ ಸಿಗದ ನನ್ನವಳಿಗೆ......!!
ಎಲ್ಲರೆದುರು ಎಷ್ಟೇ ಇಲ್ಲವೆಂದರೂ
ಮನದ ಮೂಲೆಯಲ್ಲೆಲ್ಲೋ ಇನ್ನೂ ಸಿಗದ
ನನ್ನ (ಅಂದರೆ ನಿನ್ನವನ!!) ಬಗ್ಗೆ ಒಮ್ಮೆ ನಿರ್ಭಾವುಕವಾಗಿ
ಯೋಚಿಸಿ,ಮರುಕ್ಷಣವೇ ಹಾಗೆ ಯೋಚಿಸಿದ್ದಕ್ಕೆ
ಮೃದುವಾಗಿ ನಿನ್ನ ತಲೆಗೆ ನೀನೇ ಹೊಡೆದುಕೊಂಡು
ನಕ್ಕು ಸುಮ್ಮನಾಗುವವಳು ನೀನು..
ಯಾರೂ ಇಲ್ಲದಾಗ ಸುಮ್ಮನೆ ಕೂತು, ಬೀದಿ
ಬದಿಯಲ್ಲಿ ಅಂಟಿಕೊಂಡಂತೆ ನಡೆಯುವ
ಚಿಗುರು ಜೋಡಿಯನ್ನು ಕಂಡು,
ಅದೆಷ್ಟೇ ತಡೆದರೂ ಮನದೊಳಗೇ
ಕನಸನ್ನು ನೇಯುತ್ತಾ
ಎದುರುಗಿರುವ ಜೋಡಿಯಲ್ಲಿ
ನಿನ್ನನ್ನೂ-ನನ್ನನ್ನೂ ಕಲ್ಪಿಸಿಕೊಂಡು,
ಶಾಂತ ನೀರಿನ ಸರೋವರ,ನಿನ್ನ ಮನಸನ್ನು
ಚಂಚಲವಾಗಿಸಿಕೊಳ್ಳುವಾಕೆ ನೀನು...
ಫ಼ೇಸ್ಬುಕ್ಕಿನ ಅದ್ಯಾವುದೋ ಅನಾಮಿಕ ಗೆಳತಿಯ
"ಎಂಗೇಜ್ಡ್" ಎಂಬ ಸ್ಟೇಟಸ್ ಅಪ್ದೇಟ್ ನೋಡಿ
ನಿಂತಲ್ಲೇ ಕಾರಣವಿಲ್ಲದೇ ಕನಲಿದಂತೆ ಮಾಡುವ
ಮನಸ್ಸನ್ನು
ಮುದ್ದುಗರೆಯುತ್ತಾ ಸುಮ್ಮನಾಗಿಸುತ್ತಾ ನಿಟ್ಟುಸಿರಾಗುವ ನೀನು...
ಜೋತೆಯಲ್ಲೇ ಇರುವ ರೂಮ್ ಮೇಟ್
ಇದ್ದಕಿದ್ದಂತೇ ಒಂದು ಸಂಜೆ
ಮೊಬೈಲ್ ನಲ್ಲೊಂದು ಚಿಗುರುಮೀಸೆಯ ಹುಡುಗನ
ಫ಼ೋಟೋ ತೋರಿಸಿ,ಕಣ್ಣು ಮಿಟುಕಿಸಿ ನಕ್ಕು
"ಇವನೇ ಕಣೆ ಅವನು" ಅಂದಾಗ
ಅವಳೆದುರು ಸಂತೋಷ ನಟಿಸಿ,
ಮೌನದಲ್ಲಿ ಒಂಟಿಯಾಗುವ ಮನದೊಂದಿಗೆ
ನನಗಾಗಿ ಕಾದಿರುವವಳಿಗೆ,
ನನ್ನ ಸ್ಥಿತಿಯೂ ನಿನ್ನಂತೆಯೇ ಆಗಿದೆ,
ಕಾದಿರುವ ಮನಕ್ಕೆ ಇನ್ನು ಸುಳ್ಳುಸಮಾಧಾನ
ರುಚಿಸದು,
ಒಂದು ಸಂಜೆ,
ಎದೆಯಲ್ಲಿ ಎಂದಿಗೂ ಮಿಕ್ಕುವ
ಪ್ರೀತಿಯನ್ನೂ,
ಕಂಗಳೊಳಗೆ ಒಂದಿಷ್ಟು ನಿರೀಕ್ಷೆಯನ್ನೂ
ತುಂಬಿಕೊಂಡು,ನಿನ್ನ ಮುಂದೆ
ನಿಂತುಬಿಡುವೆ,ಒಂದಾಗಿಸಿಕೊಳ್ಳುವ
ಹೊಣೆಯಷ್ಟೇ ನಿನ್ನದು.....!!
No comments:
Post a Comment