ಹೆಜ್ಜೆಯಿಟ್ಟಾಗಲೆಲ್ಲಾ
ನಿನ್ನೊಂದಿಗೆ
ಜೊತೆಯಾಗಲು
ಮತ್ತೊಂದು ಜೊತೆ
ಹೆಜ್ಜೆಯೀಗ ತಯಾರು...

ಕಣ್ಮುಚ್ಚಿ ಕ್ಷಣಕಾಲ
ಅಮ್ಮನ ಕೈ ಬಳೆಯ
ಸದ್ದು ಅರಸುತ್ತಾ
ಕೂತರೂ,
ನಗಿಸುತ್ತಾ ನಗುವ
ತರುವವನು ಆತ,
ನಿನ್ನೊಂದಿಗಿನ್ನು ಸದಾ..

ಇನ್ನು ಏನೋ
ಯೋಚಿಸುತ್ತಾ ಸುಮ್ಮನೆ
ಕಣ್ತುಂಬಿ ಬಂದರೂ,
ಕಾರಣ ಕೇಳುತ್ತಾ ಬರುವ
ಆತನ ಪ್ರೀತಿಯಲ್ಲಿ
ಮಗುವಾಗುವ ನಿನ್ನ ಮನ,
ಮತ್ತಷ್ಟು ಮುದ್ದಿಸಲಿಯೆಂದು
ಸುಮ್ಮನೆ ರಚ್ಚೆ ಹಿಡಿಯಲಿದೆ...


ಸಂಜೆ ತಿರುಗಿ ಆತ ಬರುವ
ದಾರಿಯನ್ನೇ ಕಾಯುವ
ಮನ
ಬರೀ ಹೆಜ್ಜೆ ಸಪ್ಪಳ ಕೇಳಿಯೇ
ಪುಳಕಗೊಳ್ಳಲಿದೆ...

 
ದೇವರಲ್ಲಿ ಬೇಡಲು ಹೋದರಿನ್ನು,
ಕುತ್ತಿಗೆಯ ತುಂಬಾ
ತಾಳಿಯಾಗಿ ಚಾಚಿಕೊಂಡಿರುವ
ಆತನ ನೆನಪಿಸಿಕೊಂಡು,
ಒಮ್ಮೆ ನಗೆಯ ನೆರಳನ್ನು
ಮುಖದ ಮೇಲೆ ತಂದುಕೊಂಡು,
ಖುಷಿಯಲ್ಲಿ
ತುಂಬಿ ಬರುವ ಹೃದಯಕ್ಕೊಂದು
ಲಗಾಮು ಹಾಕಿಕೊಂಡು,
ಆರತಿ ತಟ್ಟೆಯಂಚಿನ
ಒಂಚೂರು ಕುಂಕುಮವನ್ನು
ಹಣೆಗಿಂತ ಮೊದಲು
ತಾಳಿಯ ತುದಿಗೆ
ಹಚ್ಚಿಕೊಂಡು, ಹಣೆ ತಾಗಿಸಿ
ನಮಸ್ಕರಿಸುವಾಗ ಬಿಡದೇ
ನೆನಪಾಗುತ್ತಾನೆ ಆತ...


ಎರಡಕ್ಷರದ ಹೆಸರಿನ್ನು
ಮತ್ತಷ್ಟು ದೊಡ್ದವಾಗಲಿದೆ,
ದಿನನಿತ್ಯ ಎದ್ದ ಕೂಡಲೇ
ಆತನ ಜೊತೆಯಿನ್ನು
ಮಾಮೂಲಿಯಾಗಲಿದೆ..


ಒಂಚೂರು ದೂರ
ನಡೆಯಬೇಕಾದರೂ
ಕಿರುಬೆರಳ ತುದಿಯಿನ್ನು
ಜೊತೆಗಾಗಿ ಗೋಗರೆಯಲಿದೆ...


ಬದುಕಿನ್ನು ಎರಡಾದರೂ

ಒಂದೇ ಆಗಲಿದೆ...!
ನೀನೆಲ್ಲಿ
ಬಂದು ಮಲಗಿದಂತೆ ಮಲಗಿರುವ
ನನ್ನ ನೋಡಿ, ಸುಮ್ಮನೆ ಒಮ್ಮೆ
ನಕ್ಕು,
ಕೂದಲನೊಮ್ಮೆ ನೇವರಿಸಿ,
ಹೃದಯಗಳಿಗೆ ಮಾತ್ರ ಕೇಳುವಷ್ಟು
ಸಪ್ಪಳದೊಂದಿಗೆ
ಹಣೆಗೊಮ್ಮೆ ತುಟಿ ತಾಗಿಸಿ,
ನಿನ್ನ ಸಂಭ್ರಮವೆಲ್ಲ ಆ ಸ್ಪರ್ಶದಲ್ಲಿ
ತೋರ್ಪಡಿಸಿಕೊಂಡ ಖುಷಿಯಲ್ಲಿ ನೀ
ಹಿಂತಿರುಗಿ ಹೊರಟಾಗ,
ಇಷ್ಟು ಮಾತ್ರದ ಪ್ರೀತಿಗೆ
ಹುಚ್ಚನಾಗಿ, ನಿದ್ರಿಸಿದಂತೆ ನಟಿಸುವ
ಪ್ರೀತಿಯ ಮುದ್ದೆ
ಮನ, ಮತ್ತು ನಾನು,
ಕಳೆಯುವ ಸಂಜೆಗಳಿಗೊಂದಿಷ್ಟು
ಹೆಸರಿಟ್ಟಿರುವೆ,
’ನೀನು’ ಎಂದರೆ ಸಾಕಲ್ಲವೆ...!!