ಈ ಚಿತ್ರ ನಮ್ಮ ಹಿರಿಯಪ್ಪನ(ಅಪ್ಪನ ಅಣ್ಣನ) ಮನೆಯದು. ಅಲ್ಲಿ ಬಿಸಾಕಿದಂತೆ ಬಿದ್ದಿರುವ ಕಾಲು ನಂದೇ..! ಮೊನ್ನೆ ಯಾವತ್ತೋ ಹೋದಾಗ ಹಂಗೇ ಕ್ಲಿಕ್ಕಿಸಿದ್ದೆ.
ನಾನು ಹುಟ್ಟಿ ಬೆಳೆದದ್ದು ಇಲ್ಲೇ. ರಾತ್ರಿ ವಿನಾ ಕಾರಣ ಅಳಕೆ ಶುರು ಮಾಡಿದಾಗ ನನ್ನ ಹಿರಿಯಪ್ಪ,ಅಲ್ಲೇ ಕಾಣುವ ಚಾವಡಿಯ ಬದಿ, ನನ್ನನ್ನ ತನ್ನ ಬೆಚ್ಚನೆಯ ಕಂಕುಳಲ್ಲಿ ಅಪ್ಪಿಕೊಂಡು, ಆಕಾಶವನ್ನು ತೋರಿಸುತ್ತಾ ರಾತ್ರಿಯಿಡೀ ಓಡಾಡುತಿದ್ದರಂತೆ, ಅಮ್ಮ ಆಗಾಗ ನೆನಪಿನ ಬುತ್ತಿಯಿಂದ ಬಿಚ್ಚಿಡುವಾಗ ಹೇಳುತ್ತಿರುತ್ತಾಳೆ. ಬಹುಶಃ ಆ ಆಕಾಶವನ್ನ ನನ್ನೆದೆಯೊಳಗೆ ತುಂಬಿಸಿಕೊಂಡು, ಆಕಾಶದ ಶಾಂತಿಯನ್ನೆಲ್ಲಾ ನನ್ನದಾಗಿಸಿಕೊಳ್ಳುತ್ತಿದ್ದೆನೋ ಏನೋ, ಈಗಲೂ ಅವರ ಮನೆಯ ಜಗುಲಿಯಲ್ಲಿ ಕೂತು ಸುಮ್ಮನೇ ಅಂಗಳದ ತುದಿಯಲ್ಲಿ ಬಿದ್ದಿರುವ ಆಕಾಶವನ್ನ ದಿಟ್ಟಿಸಿದರೆ ಅದೇನೋ ನಿರಾಳತೆ.
ಹಿರಿಯಪ್ಪನ ಹಾಗೂ ಹಿರಿಯಮ್ಮನದು ಹಿಂದಿನ ಕಾಲದಲ್ಲೇ ಪ್ರೇಮ ವಿವಾಹ..! ಅಂಗಳದ ತುದಿಯಲ್ಲಿ, ಸದಾ ಕಾಲ ಹರಿಯುತ್ತಾ, ಬೇಸಿಗೆಯ ಬಿರುಬಿಸಿಲಿನಲ್ಲಿಯೂ ಜುಳು ಜುಳು ನಿನಾದ ಹೊಮ್ಮಿಸುವ ಹಳ್ಳದಂತೆ, ಅವರಿಬ್ಬರ ಪ್ರೀತಿ ಚಿರನೂತನ. ಅವ್ರ ಮೂರು ಹೆಣ್ಮಕ್ಳು, ನಂಗೆ ಇಲ್ಲದ ಅಕ್ಕನ ಸ್ಥಾನ ತುಂಬಿದವ್ರು, ಅವ್ರಲ್ಲಿ ಮಾತು ಕಲ್ತೆ, ಅವ್ರ ಮಗ, ನನ್ನ ಮತ್ತೊಬ್ಬ ಅಣ್ಣನ ಕೈಲಿ ಮೌನ ಕಲ್ತೆ, ನನ್ನ ಮೊದಲ ಅತ್ತಿಗೆ, ಹಿರಿಯಣ್ಣನ ಹೆಂಡ್ತಿ, ಇನ್ನಿಲ್ಲದಷ್ಟು ಗೌರವ ಉಕ್ಕಿಸುವವರು. ಹಿರಿಯಮ್ಮ, ಮುದ್ದೆಯಾಗಿದ್ದ ನನ್ನ, ತಿದ್ದಿ ತೀಡಿ ಆಕಾರ ಕೊಟ್ಟವರು...!
ಅಲ್ಲಿ ಹೋದರೆ, ಚೈತನ್ಯ ತುಂಬುತ್ತೆ ನನ್ನಲ್ಲಿ, ಕಾರಣವಿಲ್ದೇ ಮನಸ್ಸು ಗುನುಗುನಿಸುತ್ತೆ, ಮನಸ್ಸಿನಲ್ಲಿ ಪ್ರೀತಿಯ ಕೊಡ ತುಂಬಿ ಉಕ್ಕುತ್ತೆ, ಮತ್ತೆ ಅಮ್ಮನ ಗರ್ಭಕ್ಕೆ ಹೋದಂತೆ ಬೆಚ್ಚಗಾಗುತ್ತೆ ಮೈಮನ. ಒಂಥರಾ ಇಷ್ಟವಾಗಿರೋ ಹಾಡನ್ನ ಕೇಳ್ತಾ, ಜೊತೆಗೆ ನಾವೂ ಗುನುಗುನಿಸ್ತಾ, ಮುಖದಲ್ಲೊಂದು ನಿಶ್ಕಲ್ಮಷ ನಗು ಮೂಡುತ್ತಲ್ಲಾ, ಆ ರೀತಿಯ ಭಾವ ನಂಗಲ್ಲಿ. ಸ್ವರ್ಗದ ತುಂಡೊಂದು ಹಂಗೇ ಚೂರಾಗಿ, ಇಲ್ಲಿ ಬಿದ್ದಂಗ್ ಇದೆ.
ಎರ್ಡು ದಿನದ ಹಿಂದೆ, ಏನೋ ಹುಡುಕ್ತಾ, ಈ ಫೋಟೋ ಸಿಕ್ತು, ಅದ್ನೇ ಡೆಸ್ಕ್  ಟಾಪಿಗೆ ಹ್ಹಾಕಿಬಿಟ್ಟಿದ್ದೆ, ಅಲ್ಲಿ ಹೋದಾಗ ನಂಗ್ ಆಗೋ ಖುಷಿ, ಉತ್ಸಾಹವನ್ನ ಪದ ರೂಪಕ್ಕೆ ಇಳಿಸೋ ಸಣ್ಣ ಪ್ರಯತ್ನ ಮಾಡ್ದೆ.

No comments:

Post a Comment