ಸರ್ಕಾರದ ಸೌಲಭ್ಯಗಳಲ್ಲಿ ನಿಮಗೆಷ್ತು ಪಾಲು?
ನವೆಂಬರ್ ೨೯, ೧೯೪೯ರಂದು ನಮ್ಮ ದೇಶದ ಸಂವಿಧಾನ ಪೂರ್ಣಗೊಂಡಾಗ, ಸಂವಿಧಾನ ರಚನೆಯಲ್ಲಿ ತೊಡಗಿದ್ದ ೨೯೯ ಪರಿಶ್ರಮಿಗಳ (ಭಾರತ-ಪಾಕಿಸ್ತಾನ ವಿಭಜನೆಗೂ ಮುನ್ನ ಈ ಸಂಖ್ಯೆ ೩೮೯) ಕಣ್ಣಲ್ಲಿದ್ದುದು ಒಂದು ಸ್ವತಂತ್ರ, ಪರಿಪೂರ್ಣ ದೇಶದ ಚಿತ್ರಣ. ಮುನ್ನೂರು ವರ್ಷಗಳ ಪಾಶ್ಚಿಮಾತ್ಯರ ಆಳ್ವಿಕೆ, ಅವರ ಪೂರ್ವದಲ್ಲಿ ಬೇರೆ-ಬೇರೆ ರಾಜರ ಅಡಿಯಲ್ಲಿ ಕೈ ಕಟ್ಟಿ ನಿಂತಿದ್ದ ದೇಶಕ್ಕೆ ಪ್ರಜಾಪ್ರಭುತ್ವ ನೀಡಿದ, ಆ ಪ್ರಜಾಪ್ರಭುತ್ವಕ್ಕೆ ಒಂದು ಮಾರ್ಗಸೂಚಿಯನ್ನು ನೀಡಿದ ಹೆಮ್ಮೆ ಅವರಲ್ಲಿತ್ತು. ಆ ಮಾರ್ಗಸೂಚಿಯಂತೆಯನ್ನ ದೇಶ ಅಡಕ ಮಾಡಿಕೊಂಡು ನಡೆಯುತ್ತಾ ಸಾಗಿತು.
ಸಂವಿಧಾನವನ್ನು ಅನುಸರಿಸುತ್ತಾ ಅರವತ್ತೈದು ವರ್ಷಗಳೇ ಸಂದಿವೆ. ಆಯಾ ಕಾಲಘಟ್ಟಕ್ಕೆ ಸರಿಹೊಂದುವಂತೆ ಹತ್ತು ಹಲವು ಮಾರ್ಪಾಡುಗಳಿಗೂ ನಮ್ಮ ಸಂವಿಧಾನ ಒಳಪಟ್ಟಿದೆ. ಸಂವಿಧಾನದ ಜೀವಾಳವೆಂದೇ ಬಿಂಬಿತವಾದ `ಮೂಲಭೂತ ಹಕ್ಕು'ಗಳಿಂದ ಆಸ್ತಿಯ ಹೊಂದುವ ಹಕ್ಕನ್ನು ಕೈ ಬಿಡಲಾಗಿದೆ. ಹೀಗೆ ಎಷ್ಟೆಲ್ಲಾ ಮಾರ್ಪಾಡುಗಳಾದರೂ, ಸಂವಿಧಾನ ಶಿಲ್ಪಿಗಳೇ ಹೇಳಿದ್ದರೂ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳಿಗೆ ನೀಡುವ ಮೀಸಲಾತಿಯನ್ನು ಇನ್ನೂ ಶ್ರೀರಾಮ ರಕ್ಷೆ ನೀಡಿ ಕಾಯ್ದುಕೊಂಡು ಬಂದಿದ್ದಾರೆ. ಈ ಮೀಸಲಾತಿ ಪ್ರಕ್ರಿಯೆಯ ಮೇಲೊಂದು ಬೆಳಕು ಚೆಲ್ಲುವ ಪ್ರಯತ್ನ.
ಸಂವಿಧಾನದಲ್ಲಿ ಮೀಸಲಾತಿಯ ಅಡಕವೇಕೆ?
ಸ್ವಾತಂತ್ಯ್ರ ಪೂರ್ವ ಭಾರತದಲ್ಲಿ ಜಾತಿ ಪದ್ಧತಿ ಬಹಳ ಆಳವಾಗಿ ಬೇರೂರಿತ್ತು. ಕೆಳ ವರ್ಗದ ಜನರ ಮೇಲಿನ ಶೋಷಣೆ ಭರದಿಂದ ಸಾಗಿತ್ತು. ಸಾಮಾನ್ಯ ಜನರೊಂದಿಗೆ ಅವರನ್ನು ಸೇರಿಸದೆ, `ಅಸ್ಪೃಶ್ಯ' ಎಂಬ ಹಣೆಪಟ್ಟಿ ಕಟ್ಟಿ ಸಮಾಜದಿಂದಲೇ ಹೊರಗಿಡಲಾಗಿತ್ತು.
ಈ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಹಾಗೂ ಕೆಳ ವರ್ಗದ ಜನರ ಸಬಲೀಕರಣಕ್ಕೆ ಸಂವಿಧಾನದಲ್ಲಿ ಒಂದು ಒಡಂಬಡಿಕೆಯನ್ನು ಸೃಷ್ಟಿಸಿ, ಆ ಜನರಲ್ಲಿ ಆತ್ಮಸ್ಥೈರ್ಯವನ್ನು ತುಂಬುವುದು ಅನಿವಾರ್ಯವಾಗಿತ್ತು. ಈ ವಿಚಾರಧಾರೆಯಿಂದ ಹುಟ್ಟಿದ ಕೂಸೇ `ಮೀಸಲಾತಿ'.
ಮೀಸಲಾತಿಯ ಕುರಿತು ಸಂವಿಧಾನ ಶಿಲ್ಪಿಗಳ ಅಭಿಪ್ರಾಯವೇನು?
ದೇಶದಲ್ಲಿ ಸರ್ಕಾರದ ಅಧೀನಕ್ಕೆ ಒಳಪಡುವ ಯಾವುದೇ ಸಂಘ-ಸಂಸ್ಥೆಗಳಲ್ಲಿ (ಕೆಲವನ್ನು ಹೊರತುಪಡಿಸಿ) ಸಮಾಜದಲ್ಲಿ `ಪರಿಶಿಷ್ಟರು' ಎಂದು ಪರಿಗಣಿಸಲ್ಪಡುವ ವ್ಯಕ್ತಿಗಳಿಗೆ ಕೆಲವು ಶೇಖಡ ಮೀಸಲಾತಿಯನ್ನು ನೀಡಿ, ಸಮಾಜದ ಎಲ್ಲಾ ಘಟ್ತಗಳಿಗೂ ಅವರು ತಲುಪುವಂತಾಗಬೇಕು. ಆ ಮೂಲಕ, ಅವರ ಸಾಮಾಜಿಕ, ಆರ್ಥಿಕ ಭದ್ರತೆ ಏರ್ಪಡಬೇಕು. ಹೀಗೆ, ಸಮಾಜದಲಿ ಬಿತ್ತಿರುವ ವಿಷ ಬೀಜದ ನಿವಾರಣೆಯಾಗಬೇಕು.
ದೇಶದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರ ಈ ನಿಟ್ಟಿನಲ್ಲಿ ಅವರ ರಕ್ಷಣೆಗೆ ನಿಂತು, ಬೆಂಬಲಿಸಿ ಮುಂಬರುವ ಹತ್ತು ವರ್ಶಗಳಲ್ಲಿ ಅವರಿಗೆ ಸರಿಯಾದ ಸ್ಥಾನ-ಮಾನ ಕಲ್ಪಿಸಿ ಆ ನಂತರ ಈ `ಮೀಸಲಾತಿ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂಬುದು ಸಂವಿಧಾನ ರಚಿಸಿದ `ಸಾಂವಿಧಾನಿಕ ಶಾಸನ ಸಭೆ'ಯ ಅಭಿಪ್ರಾಯವಾಗಿತ್ತು.
ಸಂವಿಧಾನದ ಅನುಷ್ಠಾನವಾಗಿ ಆರು ದಶಕಗಳಾದರೂ ಇನ್ನೂ ಏಕೆ ಈ ಮೀಸಲಾತಿ ಪ್ರಕ್ರ್ಇಯೆ ಜಾರಿಯಲ್ಲಿದೆ?
ಮೀಸಲಾತಿ ಪದ್ಧತಿ, ಹಿಂದುಳಿದ ವರ್ಗದವರ ಸಂಘ-ಸಂಸ್ಥೆಗಳೆಲ್ಲಾ ಬಂದು ಸಮಾಜದಲ್ಲಿ ಹಿಂದುಳಿದ ವ್ಯಕ್ತಿಗಳೆಲ್ಲಾ ಸಾಕಷ್ಟು ಸಧೃಢರಾಗಿದ್ದಾರೆ. ಆದರೂ ಸಹಾ, ಈ ಮೀಸಲಾತಿಯನ್ನು ಕೈ ಬಿಟ್ಟರೆ ಅದರಿಂದ ಹಿಂದುಳಿದ ವರ್ಗದ ಜನರ ವಕ್ರದೃಷ್ಟಿಗೆ ಗುರಿಯಾಗಿ, ಎಲ್ಲಿ ತಮ್ಮ ಮತಗಳು ನಶಿಸಿ, ರಾಜಕೀಯ ವಲಯದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತೇವೋ ಎಂಬ ರಾಜಕೀಯ ಪಕ್ಷಗಳ ಸ್ವಾರ್ಥ ಮನೋಭಾವವೇ ಇದಕ್ಕೆ ಕಾರಣ. ಅರವತ್ತು ವರ್ಷ ಸುಧೀರ್ಘ ಆಡಳಿತದಲ್ಲಿದ್ದ ಕಾಂಗ್ರೆಸ್, `ಅವರಿಂದಾಗದ್ದನ್ನು ನಾವು ಸಾಧಿಸುತ್ತೇವೆ' ಎಂದು ಅಧಿಕಾರಕ್ಕೆ ಬಂದ ಭಾ.ಜ.ಪ., ಇಬ್ಬರ ಜಗಳದಲ್ಲಿ ಮೂರನೆಯವರಾಗಿ ಲಾಭ ಪಡೆಯುತ್ತಿರುವ ಇತರೆ ರಾಜಕೀಯ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ. ಇದನ್ನು ನಿಲ್ಲಿಸುವ ಬದಲು ಪರಿಶಿಷ್ಟರ ಗುಂಪಿಗೆ ಇತರೆ ಜಾತಿಗಳನ್ನೂ ಸೇರಿಸಿ, ಇಲ್ಲದ ಆಮಿಷ ನೀಡಿ ತಮ್ಮ ಮತಗಳನ್ನು ಇನ್ನಷ್ಟು ವೃದ್ಧಿಸುವ ಸಂಚಿನಲ್ಲಿ ಅವರೆಲ್ಲಾ ತೊಡಗಿದ್ದಾರೆ.
ಇದರಿಂದ ಆಗುತ್ತಿರುವ ಅನಾನುಕೂಲಗಳೇನು?
ಕೆಲವು ದಿನಗಳ ಹಿಂದಷ್ಟೇ ೧೦ನೇ ಹಾಗೂ ೧೨ನೇ ತರಗತಿಗಳ ಫಲಿತಾಂಶ ಪ್ರಕಟವಾಗಿದೆ. ಅದರ ಬೆನ್ನಲ್ಲೇ ಸರ್ಕಾರದ ಘೋಷಣೆ, `ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರವೇಶ ಶುಲ್ಕ ವಿತರಣೆ'. ಏಕೆ, ಪರಿಶಿಷ್ಟರಲ್ಲದ ಇತರೆ ಬಡವ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಓದುವ ಹಕ್ಕಿಲ್ಲವೇ? ಹೀಗೆ ಜಾತಿಯ ವಿಷ ಬೀಜವನ್ನು ಇನ್ನೂ ದೇಶದ ಮಣ್ಣಿನಲ್ಲಿ ರಕ್ಷಿಸಿಟ್ಟಿರುವ ನೇತಾರರೇ ಜನರ ಮಧ್ಯೆ ಇನ್ನಷ್ಟು ವಿಷ ಬೀಜ ಬಿತ್ತುತ್ತಿದ್ದಾರೆ.
ಯೋಚಿಸಿ: ನೀವು ಪರಿಶಿಷ್ಟ ಜಾತಿ, ಪಂಗಡ ಹೀಗೇ ಯಾವುದೇ ಮೀಸಲಾತಿಗೆ ಅನ್ವಯಿಸದೇ ಇದ್ದೀರಿ. ಚೆನ್ನಾಗಿ ಓದಿ ೮೦-೮೫ ಶೇಖಡ ಅಂಕ ಪಡೆದರೂ ಏನೂ ಉಪಯೋಗವಿಲ್ಲ. ಏಕೆಂದರೆ, ಉನ್ನತ ವ್ಯಾಸಂಗಕ್ಕಾಗಿ ತೊಂಭತ್ತಕ್ಕಿಂತಾ ಜಾಸ್ತಿ ಅಂಕ ಪಡೆದ ವಿದ್ಯಾರ್ಥಿಗಳು ಕಾಲೇಜಿನ ಕಡಿಮೆ ಶುಲ್ಕದ ಸಾಲಿನಲ್ಲಿ ನಿಂತಿದ್ದರೆ, ಅವರ ಹಿಂದೆ ೬೦-೭೦ ಶೇಖಡ ಅಂಕ ಪಡೆದ ಪರಿಶಿಷ್ಟ ವಿದ್ಯಾರ್ಥಿಗಳ ದೊಡ್ಡ ಸಾಲೇ ಇರುತ್ತದೆ. ಆಗ ನೀವು ಸಾಲ-ಸೋಲ ಮಾಡಿ ಉನ್ನತ ವ್ಯಾಸಂಗ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಇದು ಇಲ್ಲಿಗೇ ಮುಗಿಯುವುದಿಲ್ಲ. ಹೇಗೋ ಓದಿ ಮುಂದೆ ಹೋದಾಗಲೂ, ಕೆಲಸ ಗಿಟ್ಟಿಸಿಕೊಳ್ಳುವ ಸಮಯದಲ್ಲಿ ಮತ್ತದೇ ಅಧಿಕ ಅಂಕ ಪಡೆದವರ, ಪರಿಶಿಷ್ಟರ ಮುಖದರ್ಶನವಾಗುತ್ತದೆ. ಆಗ ಕೆಲಸಕ್ಕಾಗಿ ಲಂಚ ನೀಡಿ, ಕೆಲಸ ಸೇರಿದ ನಂತರ ತಾನು ಮಾಡಿಕೊಂಡ ಸಾಲ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ತಾನೂ ಲಂಚ ಪಡೆಯಲು ಪ್ರಾರಂಭಿಸುತ್ತಾನೆ. ಇಲ್ಲವೇ, ಪ್ರಾಮಾಣಿಕನಾಗಿದ್ದು ಹೆಚ್ಚಿನ ಹಣ ಗಳಿಸಲು ವಿದೇಶದ ಮೊರೆ ಹೋಗುತ್ತಾನೆ. ಇವೆರಡರಿಂದಲೂ ನಷ್ಟ ನಮ್ಮ ದೇಶಕ್ಕೇ.
ಸಮಾಜದಲ್ಲಿರುವ ಹಿಂದುಳಿದವರ ಏಳ್ಗೆ ಮಾಡುತ್ತೇವೆಂದು ಪೊಳ್ಳು ಭರವಸೆ ನೀಡಿ, ಮಧ್ಯಮ ವರ್ಗ ಹಾಗೂ ಇತರೆ ಬಡವರನ್ನು ಸಾಲಿನಲ್ಲಿ ಹಿಂದುಳಿಸಿದ್ದಾರೆ. ನಮ್ಮ ಏಳ್ಗೆ ಮಾಡುವವರ್ಯಾರು?
ನಿಜವಾಗಿಯೂ ಪರಿಶಿಷ್ಟರು ಯಾರು?
ಸಮಾಜದಲ್ಲಿ ಮೂಲೆ ಗುಂಪಾಗಿ, ಯಾವುದೇ ಸೌಲಭ್ಯಗಳಿಲ್ಲದೇ ವಂಚಿತರಾಗಿ, ಎಲ್ಲರಿಂದಲೂ ದೂರವಿರಿಸಲ್ಪತ್ತಿದ್ದವರು `ಪರಿಶಿಷ್ಟರು'. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಈ ಸಾಲಿನಲ್ಲಿದ್ದ ಜನರೆಲ್ಲರೂ ಈಗ ಸ್ವಂತ ಪರಿಶ್ರಮದಿಂದಲೋ, ಮೀಸಲಾತಿಯ ಪ್ರಭಾವದಿಂದಲೋ ಸಾಕಷ್ಟು ಅಭಿವೃದ್ಧಿ ಹೊಂದಿದ್ದಾರೆ.
ಈಗ ನೋಡುವುದಾದರೆ, ಹಾಗೆ ಮೂಲೆ ಗುಂಪಾಗಿ, ಸಕಲ ಸೌಲಭ್ಯಗಳಿಂದ ವಂಚಿತರಾಗಿರುವವರು ಮಧ್ಯಮ ವರ್ಗದ ಜನರು. ಈಗ ಹೇಳಿ; ಇವರಿಬ್ಬರಲ್ಲಿ ಯಾರು ಪರಿಶಿಷ್ಟರು?
ಇದಕ್ಕೆ ಪರಿಹಾರವೇನು?
ಇದಕ್ಕೆ ನಿಶ್ಚಿತ ಪರಿಹಾರವಿಲ್ಲ. ಒಂದು ವೇಳೆ ತಾವು ಮಾಡಿದ ತಪ್ಪಿನ ಅರಿವಾಗಿ, ಪಾಪ ಪ್ರಜ್ನೆ ಕಾಡಿ, ಯಾವುದೋ ಒಂದು ಪಕ್ಷ ಈ ಮೀಸಲಾತಿಯನ್ನು ತಡೆ ಹಿಡಿದರೂ, ಚುನಾವಣೆಯ ವೇಳೆ ಮತ್ತೊಂದು ಪಕ್ಷ ಆ ಮೀಸಲಾತಿಯನ್ನು ಪುನಃ ತರುವ ಬ್ರಹ್ಮಾಸ್ತ್ರ ಹೂಡಿ, ಅಧಿಕಾರಕ್ಕೆ ಬಂದು ಆ ಪರಿಶ್ರಮವನ್ನೇ ವ್ಯರ್ಥ ಮಾಡುತ್ತದೆ.
ಅದರ ಬದಲು, ಈ ಎಲ್ಲಾ ಅಸಮಾನತೆಯನ್ನು ಮನಗಂಡು, ಪರಿಶಿಷ್ಟರೆಲ್ಲರೂ ಒಂದಾಗಿ, `ನಮಗೆ ಯಾವುದೇ ಮೀಸಲಾತಿ ಬೇಡ. ಸ್ವಂತ ಪರಿಶ್ರಮದಿಂದ ನಾವೆಲ್ಲಾ ಬದುಕುತ್ತೇವೆ. ಯಾರಿಗೆ ಪ್ರತಿಭೆ ಇದೆಯೋ ಅಂಥವರಿಗೇ ಮನ್ನಣೆ ಸಿಗುವಂತಾಗಲಿ' ಎಂದು ಮನಸ್ಪೂರ್ವಕವಾಗಿ ಒಪ್ಪಿದಾಗ ಮಾತ್ರ ಈ ಸಮಸ್ಯೆ ಪರಿಹಾರವಾಗಬಹುದು.
ಅಥವಾ, ಇದಾವುದೂ ನಡೆಯದೇ, ಈ ವಿಚಾರಗಳನ್ನೆಲ್ಲಾ ಪ್ರಸ್ತಾಪ ಮಾಡಿದ ನಾನು ಒಬ್ಬ ನಕ್ಸಲ, ಸಮಾಜ ವಿರೋಧಿ ಎಂಬ ವಾದ ಬಂದು ದೊಡ್ಡ ಗಲಭೆ ಪ್ರಾರಂಭವಾದರೂ ಆಶ್ಚರ್ಯವಿಲ್ಲ.
No comments:
Post a Comment