ಆಗುಂಬೆಯಾ ರಸ್ತೆ ಕಂಡೆಯಾ....
ಬಳುಕುವುದರಲ್ಲಿ ಬಳ್ಳಿ, ಹಾವು, ನದಿ, ನಾರಿಯರ ನಡು ಮಾತ್ರ ಪ್ರಸಿದ್ಧ ಎನ್ನುವವರು ಆಗುಂಬೆ ಘಾಟಿಯಲ್ಲಿ ಒಮ್ಮೆ ಪ್ರಯಾಣ ಮಾಡಿದರೆ ಅಲ್ಲಿನ ರಸ್ತೆಯನ್ನು ಈ ಲಿಸ್ಟಿನಲ್ಲಿ ಮೊದಲಿಗೆ ಸೇರಿಸಿಬಿಡುತ್ತಾರೆ. ಪಶ್ಚಿಮ ಘಟ್ಟದ ಅಗಾಧ ಸೌಂದರ್ಯವನ್ನು, ಸಸ್ಯ-ಪ್ರಾಣಿವೈವಿಧ್ಯವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಆಗುಂಬೆ ಮಲೆನಾಡಿನ ಮಳೆ ಮತ್ತು ಕರಾವಳಿಯ ಶೆಕೆಯ ಮಧ್ಯೆ ಸಂಬಂಧ ಕಲ್ಪಿಸುವ ಪರಿಸರದ ಜಾರುಬಂಡಿಯಿದ್ದಂತೆ. ಘಟ್ಟದ ಮೇಲೆ ಶುರುವಾಗುವ ಆಗುಂಬೆಯ ಘಾಟಿ ರಸ್ತೆ ಹತ್ತು ಕಿಲೋಮೀಟರ್ ಬಳುಕಿ ಸೋಮೇಶ್ವರ ತಲುಪಿದಾಗ ನೀವು ಹೊಸ ಜಿಲ್ಲೆಯಷ್ಟೇ ಅಲ್ಲ, ಹೊಸ ಹವಾಮಾನದ, ಹೊಸ ಜೀವನಕ್ರಮದ ಪರಿಸರವನ್ನು ಪ್ರವೇಶಿಸಿರುತ್ತೀರಿ. ಒಮ್ಮೆ ತಿರುಗಿ ನೋಡಿದರೆ ಹತ್ತಾರು ವರ್ಷಗಳಿಂದ ಕತ್ತರಿ ಹಾಕದೇ ಬೆಳೆದಿರುವ ಗಡ್ಡದಂತೆ ಗಗನದೆತ್ತರಕ್ಕೆ ಆಗುಂಬೆಯ ಕಾಡು ಬೆಟ್ಟವನ್ನು ಆವರಿಸಿರುವುದು ಕಾಣುತ್ತದೆ. ಆ ಅಗಾಧ ಅರಣ್ಯರಾಶಿಯ ಮಧ್ಯೆ ಸಣ್ಣ ನಾಲಗೆಯಂತೆ ರಸ್ತೆ, ಘಾಟಿ ಹತ್ತುವವರಿಗೆ ರಾಕ್ಷಸನ ಬಾಯೊಳಗೆ ಪ್ರವೇಶಿಸಿದಂತ ಅನುಭವ ನೀಡುತ್ತದೆ.
ನಾನು ಈಗ ಬರೆಯಹೊರಟಿರುವುದು ಆಗುಂಬೆ ಘಾಟಿಯ ಬಸ್ ಪ್ರಯಾಣದ ಬಗ್ಗೆ. ಇಲ್ಲಿ ಬಸ್ ಪ್ರಯಾಣ ನೀವು ಕಿವಿಗೆ ಇಯರ್ ಫೋನು ಸಿಕ್ಕಿಸಿಕೊಂಡು ನಿದ್ರೆ ಮಾಡಿದರೆ ಖಂಡಿತವಾಗಿಯೂ ಒಂದು ವಿಶೇಷ ಅನುಭವವನ್ನು ಮಿಸ್ ಮಾಡಿಕೊಳ್ಳುತ್ತೀರ. ಯಾಕೆಂದರೆ ಆಗುಂಬೆ ಘಾಟಿ ಶಿರಾಡಿ, ಚಾರ್ಮಾಡಿ, ಹುಲಿಕಲ್ಲು, ಬಿಸಲೆ ಎಲ್ಲದಕ್ಕೆ ಹೋಲಿಸಿದರೆ ಅತಿ ಕಡಿದಾದ ಘಾಟಿ. ಇಲ್ಲಿ ನಿಮಗೆ ಅನೇಕ ಇಮ್ಮಡಿ ತಿರುವುಗಳು ಅಂದರೆ ಸಂಪೂರ್ಣ ತೊಂಭತ್ತು ಡಿಗ್ರಿಯ ತಿರುವುಗಳು ಸಿಗುತ್ತದೆ. ಘಟ್ಟದಿಂದ ಕೆಳಗಿಳಿಯುವ ಬೇರೆಲ್ಲಾ ಘಾಟಿಗಳಲ್ಲೂ ಎಲ್ಲಾ ತರದ ಲಾರಿ, ಉದ್ದುದ್ದ ಮಲ್ಟಿ ಆಕ್ಸಲ್ ಬಸ್ಸುಗಳು ಸಂಚರಿಸಬಹುದು, ಆದರೆ ಆಗುಂಬೆ ಘಾಟಿಯಲ್ಲಿ ಕೇವಲ ಮಿನಿಬಸ್ ಗಳು ಮಾತ್ರ ಸಂಚರಿಸಲು ಸಾಧ್ಯ, ಅದು ಬಹಳ ಪ್ರಯಾಸದ ಕೆಲಸ. ಆದರೆ ಶಿವಮೊಗ್ಗದಿಂದ ಕರಾವಳಿಗೆ ಧಾವಿಸಲು ಇದು ಬಹಳ ಹತ್ತಿರದ ಮಾರ್ಗ, ಮೊದಲೇ ಹೇಳಿದಂತೆ ಈ ಮಾರ್ಗ ಸುತ್ತಿ ಬಳಸಿ ಬರದೇ ನೇರವಾಗಿ ಮೇಲಿನಿಂದ ಕೆಳಕ್ಕೆ ಧುಮುಕಿದೆ. ಹೀಗಾಗಿ ಪ್ರತಿದಿನ ನೂರಾರು ಖಾಸಗಿ ಮಿನಿಬಸ್ ಗಳು ಘಾಟಿಯಲ್ಲಿ ಸಂಚರಿಸುತ್ತವೆ.
ಘಾಟಿಯ ಆರಂಭದಿಂದ ಕೊನೆಯವರೆಗೂ ನಾಗರಿಕ ಪ್ರಪಂಚದ ಸಂಚಾರವ್ಯವಸ್ಥೆಯ ಬಗ್ಗೆ ಚೂರೂ ತಲೆಕೆಡಿಸಿಕೊಳ್ಳದೇ ಆ ಕಡೆಯಿಂದ ಈ ಕಡೆ ಓಡಾಡುವ ಮಂಗ-ಕಾಡುಪಾಪಗಳು ಪ್ರಯಾಣದ ಆನಂದವನ್ನು ಹೆಚ್ಚಿಸುತ್ತವೆ. ಎಲ್ಲಾ ಕಡೆಯಿಂದಲೂ ಚಪ್ಪರದಂತೆ ಆವರಿಸಿರುವ ಕಾಡಿನ ಮಧ್ಯದಲ್ಲಿ ಬಸ್ಸು ಜೋರಾಗಿ ಹಾರ್ನ್ ಬಾರಿಸುತ್ತಾ ತಿರುವಿನಲ್ಲಿ ಹತ್ತುವಾಗ-ಇಳಿಯುವಾಗ ಆದಷ್ಟೂ ಒಂದು ಬದಿಗೆ, ಇನ್ನೇನು ಆ ಕಡೆಗೆ ಬಿದ್ದೇಬಿಟ್ಟಿತೇನೋ ಎಂಬಂತೆ ಹೊಗಿ ತಕ್ಷಣ ಗೇರ್ ಬದಲಿಸಿ ತೊಂಭತ್ತು ಡಿಗ್ರಿ ಕಟ್ ಹೊಡೆಯುವ ಸೌಂದರ್ಯವನ್ನು ಗೇರ್ ಬಾಕ್ಸ್ ಪಕ್ಕ ಇರುವ ಉದ್ದ ಸೀಟಿನಲ್ಲಿ ಮುಂದೆ ಕುಳಿತು ಗಾಬರಿಯೊಂದಿಗೆ ಆನಂದಿಸುವ ಮಜವೇ ಬೇರೆ. ಹೃದಯ ಗಟ್ಟಿಯಿಲ್ಲದವರಿಗೆ ಮಾತ್ರ ಇಯರ್ ಫೋನಾಸನವೇ ಸೂಕ್ತ.
ಇಲ್ಲಿ ನನಗೆ ಆಶ್ಚರ್ಯವೆನಿಸಿದ್ದೆಂದರೆ ತಮ್ಮದಷ್ಟೇ ಅಲ್ಲದೇ ಬಸ್ ನಲ್ಲಿ ಇರುವ ಎಲ್ಲರ ಪ್ರಾಣವನ್ನೂ ತಮ್ಮ ಕೈಕೆಳಗಿರುವ ಸ್ಟಿಯರಿಂಗ್-ಗೇರುಗಳಲ್ಲಿ ಹಿಡಿದುಕೊಂಡು, ಒಂದು ಚೂರೇಚೂರು ಹೆಚ್ಚುಕಮ್ಮಿಯಾದರೂ ಎಲ್ಲರ ಪ್ರಾಣಕ್ಕೆ ಅಪಾಯ ತರುವಂತಹ ಜಾಗದಲ್ಲಿ ಪ್ರತಿದಿನವೂ ಬಸ್ ಓಡಿಸುತ್ತಿದ್ದರೂ ಯಾವುದೇ ಬೇಸರ-ಚಿಂತೆಯಿಲ್ಲದೇ ಲೀಲಾಜಾಲವಾಗಿ ಚಾಲನೆ ಮಾಡುತ್ತಾ ನಗುಮೊಗ ಹೊಂದಿರುವ ಚಾಲಕರಲ್ಲಿರುವ ವೃತ್ತಿಪರತೆ, ಜೀವನಪ್ರೀತಿ. ಯಾಕೆಂದರೆ ಆಗುಂಬೆ ಘಾಟಿಯಲ್ಲಿ ತುಂಬಿದ ಬಸ್ ಗಳನ್ನು ಚಾಲನೆ ಮಾಡಲು ಅದಮ್ಯ ಆತ್ಮಸ್ಥೈರ್ಯ-ಚಾಕಚಕ್ಯತೆ ಬೇಕು. ಮಲೆ ಬರುತ್ತಿರುವಾಗಲಂತೂ ಗ್ಲಾಸಿನ ಮೇಲೆ ಬಿದ್ದ ನೀರನ್ನು ಮಳೆನೀರನ್ನು ಸಾರಿಸಿಕೊಂಡು ಈ ಕಡೆಯಿಂದ ಆ ಕದೆ ಹೊದ ವೈಪರ್ ವಾಪಸ್ ಬರುವುದರೊಳಗಾಗಿ ಗ್ಲಾಸಿನ ಮೇಲೆ ಅಧಿಪತ್ಯ ಸಾಧಿಸುವ ಮಲೆನಾಡಿನ ಜಡಿಮಳೆಯ ಹನಿಗಳ ಮಧ್ಯೆ ಎದುರಿನ ರಸ್ತೆಯ ಚಿತ್ರಣವನ್ನು ಕಣ್ಣೆದುರಿಗೆ ತಂದುಕೊಂಡು ಬಸ್ಸು ಓಡಿಸುವುದು ನಿಜವಾಗಲೂ ತಪಸ್ಸೇ ಸರಿ.ಅದರಲ್ಲಿ ಕತ್ತಲಾದ ಮೇಲೆ ಇಲ್ಲಿ ಬಸ್ ಚಾಲನೆ ಮಾಡಲು ಸಿಂಹದ ಎದೆಯೇ ಬೇಕು. ಬಸ್ಸಿನ ಗ್ಲಾಸಿನ ಮೂಲಕ ಜಲಪಾತ-ಮಂಜು-ತರಹೇವಾರಿ ಮರಗಳಿಂದ ತುಂಬಿ ರುದ್ರರಮಣೀಯವಾಗಿ ಕಾಣುವ ಪಶ್ಚಿಮಘಟ್ಟ ನಾವು ಚೂರೂ ಯಾಮಾರಿದರೂ ಅದರ ಒಡಲಲ್ಲೇ ಲೀನವಾಗಿಸಿಕೊಂಡುಬಿಡುತ್ತದೆ.
ಕೆಲವೊಮ್ಮೆ ನಮ್ಮ ಬದುಕು ಹಸನಾಗಲು ತಮ್ಮ ಬದುಕಿನಲ್ಲಿ ಅನೇಕ ಕಷ್ಟಗಳನ್ನು ತಲೆಮೇಲೆ ಹಾಕಿಕೊಂಡ ವೈದ್ಯರು, ಸೈನಿಕರಂತವರನ್ನು ನಾವು ಮರೆತುಬಿಡುತ್ತೇವೆ. ಅಂತೆಯೇ ಪ್ರತಿದಿನ ಘಟ್ಟದ ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ ಸಂಚರಿಸುವ ಸಾವಿರಾರು ಜನರ ಕ್ಷೇಮಕ್ಕೆ ಕಾರಣರಾಗಿರುವ ಎಲ್ಲಾ ಬಸ್ ಚಾಲಕರಿಗೆ ಒಂದು ದೊಡ್ಡ ಸಲಾಮ್.....