ಹಾಗೆ ನೋಡಿದರೆ ರಾಣಿಯ ಜನ್ಮ ಸಾರ್ಥಕ ಸಂಪನ್ನವಾಯಿತು ಎನ್ನಬಹುದು. ನಮ್ಮೂರು ಕೊಪ್ಪದ ವಾಟರ್ ಟ್ಯಾಂಕಿನ ಆಸುಪಾಸು, ತ್ಯಾಗರಾಜ ರಸ್ತೆ - ಕಾಳಿದಾಸ ರಸ್ತೆಯಲ್ಲಿ ರಾಣಿಯ ಬಗ್ಗೆ ಗೊತ್ತಿಲ್ಲದವರು ಬಹಳ ಕಡಿಮೆಯೇ ಎನ್ನಬಹುದು. ರಾಣಿಯ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದ ಎಲ್ಲಾ ಅಂಗಡಿಯವರಿಗೆ ರಾಣಿಯ ಮೇಲೆ ವಿಶೇಷ ವಾತ್ಸಲ್ಯ, ಎಲ್ಲಾ ಮಕ್ಕಳಿಗೆ ರಾಣಿಯ ಮೇಲೆ ವಿಶೇಷ ಪ್ರೀತಿ. ಹದಿನೈದಿಪ್ಪತ್ತು ವರ್ಷದ ಜೀವಿತಾವಧಿಯಲ್ಲಿ ಇದಕ್ಕಿಂತ ಹೆಚ್ಚಿನದಿನ್ನೇನನ್ನು ಸಾಧಿಸಲು ಸಾಧ್ಯ?. ವೈಯಕ್ತಿಕವಾಗಿಯಂತೂ ನಾನು ರಾಣಿಯನ್ನು ಮರೆಯುವಂತೆಯೇ ಇಲ್ಲ. ಚಿಕ್ಕಂದಿನಿಂದಲೂ ನನಗಿದ್ದ ಸೈನೋಫೋಬಿಯಾ ದೂರವಾಗಿದ್ದು ರಾಣಿಯನ್ನು ಕಂಡ ಮೇಲೆಯೇ. ತನ್ನ ಸಮಕಾಲೀನರಿಗೆ ಹೋಲಿಸಿದರೆ ಅತ್ಯಂತ ಅಗಾಧ ಬುದ್ಧಿವಂತಿಕೆ, ಮಾನವೀಯತೆ, ವಿಶಿಷ್ಟತೆ ಹೊಂದಿದ್ದ ರಾಣಿ ರಾಜಗಾಂಭೀರ್ಯದಿಂದ ನಡೆಯಲು ಹೊರಟರೆ ಆ ಠೀವಿಗೆ ಎಂತಹವರೂ ಬೆರಗಾಗಬೇಕಿತ್ತು. ಒಟ್ಟಿನಲ್ಲಿ ನಾಯಿಗಳ ಬಗ್ಗೆ ನನಗಿದ್ದ ದೃಷ್ಟಿಕೋನವನ್ನು ಸಂಪೂರ್ಣ ಬದಲಾಯಿಸಿದ ಕೀರ್ತಿ ರಾಣಿಗೆ ಸಲ್ಲಬೇಕು. ಯಾವುದಾದರೂ ಶ್ರೀಮಂತರ ಮನೆಯ ಐದಡಿ ಗೇಟಿಗೆ ನೇತುಹಾಕಿದ್ದ 'ನಾಯಿ ಇದೆ ಎಚ್ಚರಿಕೆ' ಬೋರ್ಡಿನ ಹಿಂದೆ ಕುತ್ತಿಗೆಗೆ ಬೆಲ್ಟು ಬಿಗಿಸಿಕೊಂಡು ಕುಂಯ್ಗುಡುತ್ತಾ, ಮನೆಯ ಯಜಮಾನರು ಆಫೀಸು ಮುಗಿಸಿ ಬಂದು ಯಾವಾಗ ವಾಕಿಂಗಿಗೆ ಕರೆದುಕೊಂಡು ಹೋಗುತ್ತಾರೋ ಎಂದು ಜೀವಾವಧಿ ಶಿಕ್ಷೆಗೆ ಗುರಿಯಾದ ಖೈದಿಯಂತೆ ಉಯಿಲಿಡುತ್ತಾ ಬಿದ್ದಿರಬೇಕಾಗಿದ್ದ ಚಿನ್ನದ ಬಣ್ಣದ ರೋಮದ ಸ್ಕಾಟ್ಲ್ಯಾಂಡ್ ಮೂಲದ 'ಗೋಲ್ಡನ್ ರಿಟ್ರೀವರ್' ತಳಿಯ ಕ್ರಾಸ್ ಬ್ರೀಡ್ ಆದ ರಾಣಿಗೆ ಬೀದಿನಾಯಿಯಾಗುವ ಅದೃಷ್ಟ ಅದು ಹೇಗೆ ಒದಗಿ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ನಮ್ಮೂರಿನ ಗಂಡುಬೀದಿನಾಯಿಗಳಿಗೆ ಫಾರಿನ್ನು ಮೂಲದ ಹುಡುಗಿಗೆ ಲೈನು ಹೊಡೆಯುವ ಅವಕಾಶವಂತೂ ಸಿಕ್ಕಿತು.
ನಾನು ರಾಣಿಯನ್ನು ಮೊದಲ ಬಾರಿಗೆ ನೋಡಿದ್ದು ಎರಡನೇ ತರಗತಿಯಲ್ಲಿದ್ದಾಗ. ನನ್ನ ಚಡ್ಡಿದೋಸ್ತುಗಳಾದ ನಾಗೇಂದ್ರ ಮತ್ತು ಮಧುಚೇತನ ಒಂದು ನಾಯಿಯನ್ನು ಕಟ್ಟಿಹಾಕಿ ಬಲವಂತವಾಗಿ ಸೋಪು ನೀರಿನ ಸ್ನಾನ ಮಾಡಿಸುತ್ತಿದ್ದುದನ್ನು ನೋಡಿ "ಎಲ್ ಸಿಕ್ತ್ರೋ ಈ ಬಗ್ಗಿನಾಯಿ?" ಅಂತ ಹಾಸ್ಯ ಮಾಡಲು ಹೋಗಿ "ನನ್ ಮಗನೇ ಜಾತಿನಾಯಿ ಇದು, ಯಾರೋ ಮನೆ ಹತ್ರ ತಂದು ಬಿಟ್ಟಿದ್ರು, ನಾವೇ ಡಾಕ್ಟರ ಹತ್ರ ಇಂಜೆಕ್ಷನ್ ಹಾಕಿಸಿಕೊಂಡು ಬಂದ್ವಿ. ಅವರೇ ಹೇಳಿದ್ರು ಇದು ಗೋಲ್ಡನ್ ರೆಡ್ ರಿವರ್ರಂತೆ, ಬಗ್ಗಿ ನಾಯಿ ಅಂತೆಲ್ಲಾ ಹೇಳ್ಬೇಡ ನೀನು, ಇದರ ಹೆಸರು ರಾಣಿ" ಅಂತ ಬೈಸಿಕೊಂಡಿದ್ದೆ. ಆಮೇಲೆ ರಾಣಿ ನಮ್ಮ ಜೊತೆಗೇ ಬೆಳೆಯುತ್ತಾ ನಮ್ಮ ಬಾಲ್ಯದ ಪುಟಗಳಲ್ಲಿ ಸ್ಥಾನ ಪಡೆಯಿತು. ಮೊದಲೇ ಹೇಳಿದಂತೆ ನನಗೆ ನಾಯಿಗಳೆಂದರೆ ಭಯಂಕರ ಹೆದರಿಕೆಯಿತ್ತು. ನಡೆದುಕೊಂಡು ಹೋಗುತ್ತಿರುವಾಗ ದೂರದಲ್ಲಿ ಬದಿಯಲ್ಲೆಲ್ಲಾದರೂ ನಾಯಿ ಮಲಗಿದ್ದು ಕಂಡರೆ ನನ್ನ ಮನಸ್ಸಿನಲ್ಲಿ ತಳಮಳದ ಪ್ರವಾಹವೆದ್ದು ಸೇಫ್ಟಿಗೆ ಅಂತ ಕೈಯಲ್ಲಿ ಕಲ್ಲು ತೆಗೆದುಕೊಂಡು , ಆದರೂ ಹತ್ತಿರ ಹೋಗುತ್ತಿದ್ದಂತೆ ಭಯ ಜಾಸ್ತಿಯಾಗಿ ರಸ್ತೆಯ ಆ ಬದಿಗೆ ಹೋಗಲೋ ಈ ಬದಿಯಲ್ಲೇ ಹೋಗಲೋ ಗೊತ್ತಾಗದೇ ನಿಂತಲ್ಲೇ ಭರತನಾಟ್ಯ ಮಾಡಿ ಕೊನೆಗೆ ನಾಯಿಯೇ ಗೊಂದಲಕ್ಕೀಡಾಗಿ ಪೇರಿ ಕೀಳುವಂತೆ ಸೀನ್ ಕ್ರಿಯೇಟು ಮಾಡ್ತಿದ್ದೆ. ನಾಯಿಗಳೆಂದರೆ ರಸ್ತೆಯಲ್ಲಿ ಓಡಾಡುವವರನ್ನು ಕಚ್ಚಲಿಕ್ಕೆಂದೇ ದೇವರು ಸೃಷ್ಟಿಸಿರುವ ರಾಕ್ಷಸರು ಎಂಬುದು ನನ್ನ ಭಾವನೆಯಾಗಿತ್ತು. ಆದರೆ ತಲೆ-ಕುತ್ತಿಗೆ ನೇವರಿಸಿದರೆ ಕಣ್ಣು ಮುಚ್ಚಿಕೊಂಡು ಆನಂದಿಸುವ, ಒಂದೂ ಬಿಸ್ಕತ್ತು ಹಾಕದಿದ್ದರೂ ಬಾಲ ಅಲ್ಲಾಡಿಸಿಕೊಂಡು ಹಿಂದೆ ಬರುವ ರಾಣಿಯನ್ನು ನೋಡಿದಮೇಲೆ ನಾಯಿಗಳೆಂದರೆ ಎಂತಹ ಸುಂದರ ಸೃಷ್ಟಿ ಎಂಬುದು ಅರ್ಥವಾಗುತ್ತಾ ಬಂತು. ಮಧುಚೇತನ ಯಾವಾಗಲೂ ನೆನಪಿಸಿಕೊಳ್ಳುವ ಒಂದು ಘಟನೆ ನೋಡಿದರೆ ರಾಣಿಯ ವ್ಯಕ್ತಿತ್ವ ಅರಿವಾಗುತ್ತದೆ. ದೀಪಾವಳಿ ಲಕ್ಷ್ಮೀಪೂಜೆಗೆಂದು ದಾರಿಯಲ್ಲಿ ಹೋಗುತ್ತಿದ್ದ ಬೀಡಾಡಿ ಹಸುವನ್ನು ಬಾ ಎಂದು ಕರೆದದ್ದನ್ನು ತನಗೇ ಕರೆದದ್ದೆಂದು ತಪ್ಪು ತಿಳಿದುಕೊಂಡು ಬಾಲ ಅಲ್ಲಾಡಿಸಿಕೊಂಡು ಬಂದ ರಾಣಿಗೆ "ನಿಂಗಲ್ಲ ಕರ್ದಿದ್ದು ಹೋಗೇ" ಎಂದು ಗದರಿಸಿದ್ದು ಆತ್ಮಗೌರವಕ್ಕೆ ಎಷ್ಟು ಪೆಟ್ಟಾಗಿತ್ತೆಂದರೆ ಅದಾದ ಮೇಲೆ ಎಷ್ಟು ಕೂಗಿದರೂ ರಾಣಿ ಮನೆಯ ಹತ್ತಿರ ಬರದೇ, ಊಟ ಹಾಕಿದರೂ ತಿನ್ನದೇ, ಕೊನೆಗೆ ರಾಣಿ ಇದ್ದಲ್ಲಿಗೇ ಊಟ ತೆಗೆದುಕೊಂಡು ಹೋಗಿ ತರಾವರಿ ಮುದ್ದು ಮಾಡಿದ ಮೇಲೇ ರಾಣಿ ಸಮಾಧಾನಗೊಂಡಿದ್ದು. ಹಾಗಾಗಿಯೇ ಯಾವಾಗಲೂ ಅನ್ನಿಸುವುದು ಅನ್ನದ ಋಣಕ್ಕಿಂತ ಮಿಗಿಲಾಗಿ ವಿಶ್ವಾಸ-ಪ್ರೀತಿ ರಾಣಿಗೆ ಮುಖ್ಯವಾಗಿತ್ತು ಎಂದು. ನನಗೆ ಯಾವಾಗಲೂ ರಾಣಿಯ ಸಂಭಾವಿತ- ಅಚ್ಚುಕಟ್ಟು- ನಿರ್ಲಿಪ್ತ ನಡೆನುಡಿಗಳನ್ನು ನೋಡಿದಾಗ ಇದೇನಾದರೂ ಹಿಂದಿನ ಜನ್ಮದಲ್ಲಿ ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿ ದೈವಿಕತೆಯನ್ನು ಪಡೆದ ಋಷಿಯಾಗಿತ್ತೇನೋ ಅನಿಸುತ್ತಿತ್ತು. ಅದರ ಮುಖದಲ್ಲಿ ಸಾಧುತನ ಮತ್ತು ಗತ್ತು ಹದವಾಗಿ ಮಿಳಿತವಾಗಿತ್ತು. ಇಷ್ಟೆಲ್ಲಾ ಶಾಂತಸ್ವಭಾವದ್ದಾಗಿದ್ದರೂ ಅದೇಕೋ ಚಿಂದಿಬಟ್ಟೆಯ ಭಿಕ್ಷುಕರನ್ನು ಕಂಡರೆ ಮಾತ್ರ ರಾಣಿಯ ಕೋರೆಹಲ್ಲುಗಳು ಅಸ್ತಿತ್ವ ಪಡೆದುಕೊಂಡು ಧ್ವನಿಪೆಟ್ಟಿಗೆಯು ಜಾಗೃತವಾಗುತ್ತಿತ್ತು. ಕೆಲವೊಮ್ಮೆ ಪರಿಚಿತರೇ ಹಳೇ ಕೊಳಕು ಪಂಚೆ ಉಟ್ಟು ಬಂದಾಗಲೂ ರಾಣಿ ಗುರ್ರೆಂದು ಅವರ ಹತ್ರ ಬೈಸಿಕೊಂಡಿದ್ದು ನೆನಪಾದಾಗ ರಾಣಿಗೂ ಬಡವ- ಶ್ರೀಮಂತರೆಂಬ ಬೇಧಭಾವವಿತ್ತೇ ಎಂದು ಆಶ್ಚರ್ಯವಾಗುತ್ತದೆ. ಎಷ್ಟಾದರೂ ಒಂದಂಶ ಹೊರದೇಶದ್ದಲ್ಲವೇ!?
ಹೀಗೆ ಎಲ್ಲರಿಗೂ ಪ್ರೀತಿಪಾತ್ರವಾಗಿ ಸುವರ್ಣಾಕ್ಷರಗಳಿಂದಲೇ ತುಂಬಿದ್ದ ರಾಣಿ ಕಥೆಯಲ್ಲಿ ಕರಿಮಸಿಯ ಪುಟಗಳು ಶುರುವಾದವು. ರಾಣಿಯ ಸ್ವಭಾವವೇನೂ ಬದಲಾಗಲಿಲ್ಲ ಆದರೆ 'ಶಾಂತಲಕ್ಷ್ಮಿಗೊಂದು ಶನಿಮುಂಡೆ ಹುಟ್ಟಿತು' ಎಂಬಂತೆ ರಾಣಿಗೊಂದು ಗಂಡುಮರಿ ಹುಟ್ಟಿತು. 'ಎಂಥಾ ತಾಯಿಗೆ ಎಂಥಾ ಮಗ?!' ಎಂದು ದಾರಿಯಲ್ಲಿ ಓಡಾಡುವವರೆಲ್ಲಾ ಹಿಡಿಶಾಪ ಹಾಕುವಂತೆ ಪರಮಪರಪೀಡಕನಾಗಿ ಅದು ಬೆಳೆಯಿತು. ಅದಕ್ಕೆ 'ಟೈಗರ್' ಎಂದು ಯಾರು ಹೆಸರಿಟ್ಟರೆನ್ನುವುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ!. ಸ್ವಭಾವಕ್ಕೆ ತಕ್ಕ ಹೆಸರೋ ಅಥವಾ ಹೆಸರಿಟ್ಟದ್ದಕ್ಕೆ ಜಂಭ ಬಂದು ಕಾಡುಪ್ರಾಣಿಯಂತೆ ಆಡಲು ಶುರುಮಾಡಿತೋ ಗೊತ್ತಿಲ್ಲ, ಒಟ್ಟಿನಲ್ಲಿ ನಾಯಿಗಳ ಬಗ್ಗೆ ಮರೆಯಾಗಿದ್ದ ನನ್ನ ಹೆದರಿಕೆ ವಾಪಸ್ ಬಂದು ಬೃಹದಾಕಾರವಾಗಿ ಬೆಳೆಯಿತು. ಇದಕ್ಕೆ ಪುಷ್ಟಿ ಕೊಡುವಂತೆ ಒಂದು ಘನಘೋರ ಘಟನೆ ಬೇರೆ ನಡೆಯಿತು. ನಾಗೇಂದ್ರನನ್ನು ಕ್ರಿಕೆಟ್ ಆಡಲು ಕರೆಯಲೆಂದು ಅವನ ಮನೆಯ ಬಳಿಗೆ ಹೋದಾಗ ಬದಿಯಲ್ಲೆಲ್ಲೋ ರಾ ಏಜೆಂಟ್ ತರ ಅವಿತುಕೊಂಡಿದ್ದ ಟೈಗರ್ ಛಂಗನೇ ನೆಗೆದು ಮೈಮೇಲೆ ಬಂತು. ಮೊದಲೇ ಹೆದರಿ ಹೇತುಕೊಂಡವನಿಗೆ ಹಣೆ ಮೇಲೆ ಹಾವಿನ ಮರಿ ಬಿಟ್ಟಂತಾಗಿ ನಾನು ಭರತನಾಟ್ಯ ಶುರುಮಾಡಿದೆ. "ಅದು ಆಟ ಆಡಕ್ಕೆ ಬರ್ತಿದೆ ಕಣೋ ಹೆದರಬೇಡ್ವೋ" ಅಂತ ನಾಗೇಂದ್ರನೇನೋ ಕೂಗಿದ, ಆದರೆ ನನಗೆ ಅದರ ಮುಖದಲ್ಲಿ ಆಟ ಆಡಲು ಬರುವ ಪುಟ್ಟ ಮಗುವಿನ ಬದಲು ಎದುರು ನಿಂತವರ ಎದೆಬಗೆದು ರಕ್ತ ಕುಡಿಯಲು ಸಿದ್ಧನಾದ ನರಸಿಂಹ ಕಾಣಿಸಿದ. ಇದಾಗಿದ್ದೇ ಅಲ್ಲ ಅಂತ ಕೈಯಲ್ಲಿದ್ದ ಹಳೇ ಉದ್ದ ಛತ್ರಿಯ ಸಮೇತ ಓಡಲು ಶುರುಮಾಡಿದೆ. ಕಾಳಿದಾಸ ರಸ್ತೆಯುದ್ದಕ್ಕೂ ಛತ್ರಿಯ ಬಿಡಿಭಾಗಗಳನ್ನು ಒಂದೊಂದಾಗಿ ಬೀಳಿಸಿಕೊಳ್ಳುತ್ತಾ ಅಂಡಿನ ಮೇಲೆ ಪೋಲೀಸರ ಲಾಠಿ ಏಟು ಬಿದ್ದವನಂತೆ ಕಿರುಚಿಕೊಳ್ಳುತ್ತಾ ಓಡಿದ ನನ್ನನ್ನು ಅಂದು ನೋಡಿದವರಾರೂ ಮರೆತಿರಲಿಕ್ಕಿಲ್ಲ. ಇನ್ನೇನು ಟೈಗರ್ ಗೆ ನಾನು ಮೊದಲ ನರಬಲಿಯಾಗಿಬಿಟ್ಟೆ ಎನ್ನುವಷ್ಟರಲ್ಲಿ ಸಿನಿಮಾಗಳಲ್ಲಿ ನಾಯಕಿಯನ್ನು ವಿಲನ್ನುಗಳು ಅಟ್ಟಿಸಿಕೊಂಡು ಹೋಗುವಾಗ ನೆಲದಡಿಯಿಂದೆಲ್ಲಾ ಪ್ರತ್ಯಕ್ಷವಾಗಿ ನಾಯಕಿಯ ಮಾನ ಕಾಪಾಡುವ ನಾಯಕನಂತೆ ಅದೆಲ್ಲಿಂದಲೋ ರಾಣಿ ಧುತ್ತೆಂದು ಎದುರು ಬಂದು ಟೈಗರ್ ಜೊತೆ ಜಗಳವಾಡಿ ಎಳೆದುಕೊಂಡು ಹೋಯಿತು. ಸತ್ತೆನೋ ಕೆಟ್ಟೆನೋ ಎಂದು ನಾನು ಛತ್ರಿಯ ಭಾಗಗಳನ್ನೆಲ್ಲಾ ಸಂಗ್ರಹಿಸಿಕೊಂಡು ಮಿಂಚಿನಂತೆ ನಾಗೇಂದ್ರನ ಮನೆ ಸೇರಿಕೊಂಡೆ. ಆದರೆ ಇವತ್ತಿಗೂ ಕಾಳಿದಾಸ ರಸ್ತೆಗೆ ಹೋದಾಗ ಪರಿಚಯದವರೆಲ್ಲಾ ನಮ್ಮ ಬಾಲ್ಯದ ತುಂಟಾಟಗಳನ್ನು ನೆನಪಿಸಿಕೊಳ್ಳುವಾಗ ಯಾಕೋ ನನ್ನ ಕಡೆ ನೋಡಿ "ಅಯ್ಯೋ ನಿನ್ ಜನ್ಮಕ್ಕಿಷ್ಟು" ಎನ್ನುವಂತೆ ಮುಗುಳುನಗುತ್ತಾರೆ ಎಂದು ನನಗೆ ಅನುಮಾನ.
ಏನೇ ಆದರೂ ಹುಸೇನ್ ಸಾಬರ ಘಟನೆಯ ಮುಂದೆ ನನ್ನದು ನೂರು ಪಾಲು ಉತ್ತಮ. ರಾಣಿಗೆ ಭಿಕ್ಷುಕರನ್ನು ಕಂಡರೆ ದ್ವೇಷವಿದ್ದಂತೆ ಟೈಗರ್ ಗೆ 'ಹಾರ್ನ್' ಎಂದರೆ ಅಲರ್ಜಿ. ಪಾಪ ಹುಸೇನ್ ಸಾಬರು ಭಾನುವಾರ ಬಂಗುಡೆಯನ್ನು ಭರ್ಜರಿ ಬಟವಾಡೆ ಮಾಡೋಣ ಅಂತ ಹುಮ್ಮಸ್ಸಿನಿಂದ ತಮ್ಮ ಎಂ80 ಯಲ್ಲಿ 'ಎರಡು ಕನಸು' ರಾಜಣ್ಣನ ತರ ಬರುತ್ತಿದ್ದರು. ಮೀನು ತಗೊಳ್ಳುವವರಿಗೆ ಸೂಚನೆ ಕೊಡೋಣ ಎಂದು ತ್ಯಾಗರಾಜ ರಸ್ತೆ ಹಳೇ ಎಲ್ಲೈಸಿ ಆಫೀಸು ಹತ್ತಿರ ವಿಶ್ವಪ್ರಸಿದ್ಧ ಮೀನುಗಾಡಿಯ ಹಸಿರು ಹಾರನ್ನನ್ನು 'ಪೋಂಯ್ಕ್' ಅನ್ನಿಸಿದ್ದೇ ತಡ ವಾರವಿಡೀ ಉರಿಮುಖ ಮಾಡಿ ಸುಸ್ತಾಗಿ ಮಲಗಿದ್ದ ಟೈಗರ್ ನ ಕರ್ಣಮಂಡಲದಲ್ಲಿ ಆಸ್ಫೋಟವಾದಂತಾಗಿ ಸ್ಟೆನ್ ಗನ್ನಿನಿಂದ ಸಿಡಿದ ಗುಂಡಿನಂತೆ ಅದು ಹುಸೇನ್ ಸಾಬರ ಎಂ80 ಬೆನ್ನು ಹತ್ತಿತು. ಟೈಗರ್ ನ ವೇಗದ ಕಾಲುಗಳಿಗೆ ಸೋಲುಣಿಸಬೇಕಾದ ಅನಿವಾರ್ಯತೆಯಲ್ಲಿ ಹುಸೇನ್ ಸಾಬರು ಬದುಕಿಡೀ ಕೊಡದಷ್ಟು ಎಕ್ಸಲರೇಟರ್ ಜಡಿದ ಹೊಡೆತಕ್ಕೆ ಅವರ ನೀಲಿ ಬಣ್ಣದ ಪಟ್ಟೆ ಪಟ್ಟೆ ಲುಂಗಿ ಪ್ಯಾರಾಚೂಟ್ ತರ ಗಾಳಿಯಲ್ಲಿ ಹರಡಿಕೊಂಡು ದೂರದಿಂದ ನೋಡಿದವರಲ್ಲಿ ಕೆಲವರಿಗೆ ಗರಿಬಿಚ್ಚಿದ ನವಿಲಿನ ತರಹವೂ, ಕೆಲವರಿಗೆ ನೀಲಿ ಕಾಗೆಯ ತರಹವೂ ಕಾಣಿಸುತ್ತಿದ್ದರಂತೆ. ಅವರ ಪರಿಸ್ಥಿತಿಯನ್ನು ಸಮಾನದುಃಖಿಯಾದ ನಾನು ಅರ್ಥಮಾಡಿಕೊಳ್ಳಬಲ್ಲೆ. ಕೊನೆಗೂ ಹುಸೇನ್ ಸಾಬರ ಪ್ರಾಣ ರಕ್ಷಿಸಲೂ ರಾಣಿಯೇ ಬರಬೇಕಾಯಿತು. ಹುಸೇನ್ ಸಾಬರ ಲುಂಗಿ ಮಾತ್ರ ತನ್ನಿಂದ ಕರ್ತವ್ಯಲೋಪವಾಗಿದ್ದಕ್ಕೆ ಕಣ್ಣೀರಿಡುತ್ತಿತ್ತು. ಅದಾದ ಮೇಲೆ ವಾಟರ್ ಟ್ಯಾಂಕಿನ ಸುತ್ತಮುತ್ತ ಎಲ್ಲೂ ಹುಸೇನ್ ಸಾಬರು 'ಪೋಂಯ್ಕ್' ಎನ್ನಿಸಿದ್ದು ಕೇಳಲಿಲ್ಲ.
ಹೀಗೇ ಮಗ ಮಾಡಿದ ತಪ್ಪನ್ನೆಲ್ಲಾ ಕೈಲಾದಷ್ಟು ಸರಿಮಾಡುತ್ತಾ ಸಹನಾಮೂರ್ತಿಯಾಗಿ ಬಾಳಿದ ರಾಣಿ ಕೊನೆಗೆ ಆಯಸ್ಸು ತೀರಿ ಸರಳ ಸಹಜ ಮರಣವನ್ನಪ್ಪಿತು. ಆದರೆ ನನ್ನ ಶಾಪವೋ, ಹುಸೇನ್ ಸಾಬರ ಲುಂಗಿಯ ಶಾಪವೋ, ಅಥವಾ ನಮ್ಮಂತೆಯೇ ಎಲ್ಲರೆದುರು ಶೋಷಣೆಗೊಳಗಾದ ಯಾರದಾದರೂ ಶಾಪವೋ ಏನೋ ಒಟ್ಟಿನಲ್ಲಿ ಮುನಿಸಿಪಾಲಿಟಿಯವರು ಬೀದಿನಾಯಿಗಳ ನಿಯಂತ್ರಣ ಮಾಡಲಿಕ್ಕೆಂದು ಬಂದಾಗ ಕುತ್ತಿಗೆಯಲ್ಲಿದ್ದ ಬೆಲ್ಟು ಬಿದ್ದುಹೋಗಿದ್ದರಿಂದ ಟೈಗರ್ ಅವರುಗಳ ಉರುಳಿಗೆ ಸಿಕ್ಕಿ 'ಕಂಯ್ಕ್'ಎಂದಿತು. ಆದರೆ 'ಸತ್ತ ಮೇಲೆ ಹತ್ತಿರಾದರು' ಎನ್ನುವಂತೆ ಈಗ ಯೋಚಿಸಿದರೆ ಕೇವಲ ಹೆದರಿಸಿದ್ದು ಬಿಟ್ಟರೆ ಯಾರಿಗೂ ಕಚ್ಚದ ಟೈಗರ್ ಮುಂಗೋಪಿಯಾಗಿದ್ದರೂ ಒಂದು ಪಾಪದ ಪ್ರಾಣಿಯಾಗಿತ್ತು ಎನಿಸುತ್ತದೆ.
- ಸಂಪತ್ ಸಿರಿಮನೆ
Awesome bro.....
ReplyDeleteBeautiful old memories....
Thanks maga. Yes bro awesome memories :-)
Deleteಬಹಳ ಚೆನ್ನಾಗಿದೆ ಗುರುಗಳೇ,,,,,
ReplyDeleteThank you maiyya :-)
Deleteತುಂಬಾ ಚೆನ್ನಾಗಿದೆ.
ReplyDeleteಧನ್ಯವಾದಗಳು :-)
DeleteNice one kano... MEmories are alwayz swweet, if i think about Dog first name i say rani !!
ReplyDeleteThanks maga. Hu kano that's why raani is so special :-)
DeleteYou're sampath sirimane for a reason man...! A nice solid cheerful start for the morning.. Awesome writing dude.
ReplyDeleteThank you roommate :-)
DeleteYou're sampath sirimane for a reason man...! A nice solid cheerful start for the morning.. Awesome writing dude.
ReplyDeleteSuper'le.............
ReplyDelete