..............ಏನಾಗಬಹುದು ಗೆಳತಿ ???
ವರ್ಣಿಸಲಶಕ್ತನಾಗಿರುವೆ ಗೆಳತಿನಿನ್ನ ಭ್ರೂಭ್ರಮದ ಅನೂಹ್ಯತೆಯ;
ಮೇಲೆ ಮೇಲೆ ಮುಖವ ಬಡಿದು ಸವರುತ್ತಿರುವ
ನಿನ್ನ ಮುಂಗುರುಳೊಳಗೆಲ್ಲೋ ಸೆಳೆಯಲ್ಪಡುತ್ತಿದ್ದೇನೆ
ನಿನ್ನೆದೆ ಬಡಿತದೊಳಗೆಲ್ಲೋ ಮಿಳಿತವಾಗಿ ಹೋಗಿರುವೆ
ನಿನ್ನ ನಗುವನ್ನು ನೋಡಲಾಗುತ್ತಿಲ್ಲ ಮನದೊಡತೀ,
ನಿನ್ನದೇ ಕಾಡಿಗೆ ನನ್ನ ನೋಟವ ಸಾಲ ಪಡೆದಿದೆ
ನನ್ನನ್ನು ಸೆಳೆದದ್ದು ನಿನ್ನ ಹೆಜ್ಜೆಯಿರಬಹುದಾ ಹುಡುಗಿ?
ಅಥವಾ ಅದನ್ನು ಆಕರ್ಷಕವಾಗಿಸಿದ್ದ ನಿನ್ನ ಗೆಜ್ಜೆಯಾ?
ನೀನು ಕಣ್ಣೆವೆಯಿಕ್ಕುವ ರವ ಕೇಳಲು ನನ್ನ
ಉಸಿರನ್ನೂ ಶಾಂತವಾಗಿಸಲು ಅಣಿಯಾಗಿರುವ
ಅರೆಹುಚ್ಚ ನಾನು
ನಾನು ನಿನ್ನಲ್ಲಿ ಲೀನವಾಗಿ ಒಂದು ಸಾವಿರ ವರ್ಷವಾಯಿತಾ?
ಹಾಗಾದರೆ ನನ್ನ ರೆಪ್ಪೆಗಳು ರಂಪ ಮಾಡುವುದನ್ನು
ನಿಲ್ಲಿಸಿಯೂ ಆಗಿರುವುದು ಅಷ್ಟೇ ಕಾಲ
ನಾನು ಕಬ್ಬಿಣದಂತಾಗಿಹೋಗಿದ್ದೇನೆ ಹುಡುಗಿ
ನಿನ್ನದೇ ತಪ್ಪು, ನೀನು ಆಯಸ್ಕಾಂತವಾಗಿದ್ದಿಯಲ್ಲ
ನನ್ನ ಮುಖ ಹೇಗಿದೆಯೇನೋ ನೆನಪಿಲ್ಲ,
ಕನ್ನಡಿಯೆದುರು ನಿಂತಾಗಲೂ ಕಾಣಿಸುವುದು ನೀನೇ
ನೀನಿಲ್ಲದಾಗ ನೀನಿದ್ದಂತೆ ನಾ ಕಂಡ ಕನಸುಗಳ ಕೊನೆಯಲ್ಲಿ
ನನ್ನ ಒಂಟಿತನವು ಕರಗಿ ಕಣ್ಣಿಂದ ಜಾರಿ ಹೋಗಿದೆ
ಒಂಟಿಯಲ್ಲ ನಾನೀಗ; ಅಲ್ಲ ಜಂಟಿಯೂ
ತೇವವಿಲ್ಲದೇ ನನ್ನ ರೆಪ್ಪೆಗಳೀಗ ಮರಳುಗಾಡು
ಅಕಸ್ಮಾತ್ ನೀ ಸಿಕ್ಕರೆ ಖುಷಿಯಲ್ಲಿ ಮುಂಗಾರು ಬರಬಹುದು
ಯಾಕೋ ಈಗೀಗ ಹುಚ್ಚು ಕಲ್ಪನೆಗಳನ್ನೇ
ಕಚ್ಚಾ ಕವನವಾಗಿಸುವ ಎಂದೆನಿಸುತ್ತಿದೆ
ನಿನ್ನ ಕಲ್ಪನೆಯಲ್ಲೇ ಅರ್ಧ ಸತ್ತಿರುವೆ ನಾನು
ನೀನೆದುರು ಬಂದರೆ................
- ಸಂಪತ್ ಸಿರಿಮನೆ
No comments:
Post a Comment