ಮೂರ್ಕಥೆ

1) ಪಶ್ಚಾತ್ತಾಪ
      ಮೊನ್ನೆ ತಾನೇ ಖಾದರ್ ಸಾಬರ ಲೆಗ್ ಫ್ಯಾಷನ್ ಶೂ ಅಂಗಡೀಲಿ ನೂರಿಪ್ಪತ್ತೈದು ನಿಮಿಷ ಚೌಕಾಶಿ ಮಾಡಿ ಕೊನೆಗೆ ಒಲ್ಲದ ಮನಸ್ಸಿನಿಂದಲೇ ಸಾವಿರದ ನೋಟು ಕೊಟ್ಟು ತಂದಿದ್ದ ಝಗಮಗಿಸುವ 'ಬ್ಲಾಕ್' ಕಂಪನಿಯ ಫಾರ್ಮಲ್ ಶೂಗಳು ನಿನ್ನೆಯೊಂದೇ ದಿನ ಹಾಕುವ ಭಾಗ್ಯ ಕರುಣಿಸಿ ಇವತ್ತು ಬೆಳಗ್ಗೆ ಚಪ್ಪಲಿ ಸ್ಟ್ಯಾಂಡಿನಿಂದ ದಿಢೀರನೆ ಕಣ್ಮರೆಯಾಗಿದ್ದು ನೋಡಿ ಒಂದು ಕ್ಷಣ ಎದೆ ಧಸಕ್ಕೆಂದಿತ್ತು. ಆಫೀಸಿಗೆ ಹಾಕಿಕೊಂಡು ಹೋಗಲು ಬೇರೆ ಶೂ ಇಲ್ಲದ ಸಂದಿಗ್ಧತೆ, ಎರಡು ದಿನದ ಸಂಬಳ ನೀರಲ್ಲಿ ಹೋಮವಾಯಿತೆನ್ನುವ ಬೇಸರ ಇವೆಲ್ಲಕ್ಕಿಂತ ಹೆಚ್ಚಾಗಿ ಕದ್ದವನಾರೋ ಅದೆಲ್ಲೋ ನನ್ನೆಡೆಗೆ ಹೇವರಿಕೆಯ ನಗು ಬೀರುತ್ತಾ ಕುಳಿತಿರಬಹುದು ಎನ್ನುವ ಕಲ್ಪನೆಯೇ ಮೈಯೆಲ್ಲಾ ಉರಿ ಹತ್ತಿಸಿತ್ತು. ಹಾಗೇ ಆಗಿದ್ದಾಯಿತು ಎಂದು ಆಫೀಸು ಮುಗಿಸಿ ಸಾಯಂಕಾಲ ನಾನು ಮನೆಯ ಹತ್ತಿರ ಬರುವುದಕ್ಕೂ, ಮೆಟ್ಟಿಲ ಹತ್ತಿರ ಕೂತಿದ್ದ ಹೊಸದಾಗಿ ಬಂದಿದ್ದ ಪರಿಚಯವಿಲ್ಲದ ಎದುರುಮನೆಯ ಅಂಕಲ್ ಬಳಿ ಅವರ ಪುಟ್ಟ ಮಗಳು ಸೂಚನೆಯೇ ಕೊಡದೆ "ಅಪ್ಪಾ ಈ ಶೂ ನಂಗೆ" ಎಂದು ಮನೆಯೊಳಗಿಟ್ಟಿದ್ದ ನನ್ನವೇ ಶೂಗಳನ್ನು ತನ್ನ ಪುಟ್ಟ ಕಾಲುಗಳಿಗೆ ಹಾಕಿಕೊಂಡು ಮುದ್ದಾಗಿ ನಡೆದುಬರುವುದಕ್ಕೂ ಸರಿಯಾಯಿತು. ಒಂದು ಕ್ಷಣ ಕೊಳೆತುಹೋದ ಪಚ್ಚಬಾಳೆಯಂತಾದ ಅವರ ಮುಖ ನೋಡಿ ನಗುತ್ತಾ "ಏನಂಕಲ್ ಹೊಸಾ ಶೂ ತಗೊಂಡ್ರಾ?, ಚೆನಾಗಿದೆ" ಎಂದು ಮನೆಯೊಳಗೆ ಹೋದೆ. ಬೆಳಗ್ಗೆ ಏಳುವಾಗ ಚಪ್ಪಲಿ ಸ್ಟ್ಯಾಂಡಿನಲ್ಲಿ ಮತ್ತೆ ನನ್ನ ಶೂಗಳು ಝಗಮಗಿಸುತ್ತಿದ್ದವು...

2) ಅರಿವು
"ಅವಲಕ್ಕಿ ಬೆಳಗ್ಗೇದು, ಹಾಳಾಗಿರೋ ಹಾಗಿದೆ, ನಂಗೆ ಬೇಡ" ಎಂದೆ. "ಹೊತ್ತುಹೊತ್ತಿಗೂ ಬಿಸಿಬಿಸಿ ಬೇಕು ಅಂದ್ರೆ ನಾನೆಲ್ಲಿಗೆ ಹೋಗ್ಲಿ?, ನಿನಗೆ ಕಷ್ಟ ಅಂದ್ರೆ ಏನು ಅಂತ ಗೊತ್ತಿಲ್ಲ ಅದ್ಕೇ ಹಿಂಗಾಡ್ತೀಯ" ಅಂತ ಅಮ್ಮ ಬೇಸರದಿಂದ ಅಡಿಗೆ ಮಾಡಲು ಹೊರಟಳು. ಇತ್ತೀಚೆಗೆ ಯಾಕೋ ಊಟವೇ ಸೇರುತ್ತಿಲ್ಲ. ಜೊತೆಗೆ ನಿದ್ರಾಹೀನತೆ ಬೇರೆ. ವೈದ್ಯರು ಗಟ್ಟಿಮುಟ್ಟಾಗಿದ್ದೀಯಾ ಎಂದರೂ ಯಾಕೋ ಒಂಥರಾ ಅನುಕ್ಷಣವೂ ಹಿಂಸೆ. ಕಾಲೇಜಿನಲ್ಲಿ ಪಾಠ ಕೇಳಲೂ ಆಸಕ್ತಿಯಿಲ್ಲ. "ನಿನ್ನ ವಯಸ್ಸಿನ ಹುಡುಗರು ಎಷ್ಟು ಉತ್ಸಾಹದಿಂದಿರಬೇಕು, ನೀನೊಳ್ಳೆ ಕಟ್ಟಿಹಾಕಿದ ಎಮ್ಮೆಯ ತರ ಇದ್ದೀಯಲ್ಲ, ನಿನಗಿಂತ ನಾನೇ ಪರವಾಗಿಲ್ಲ" ಅಂತ ಅಪ್ಪ ಹೇಳಿದಾಗಲೆಲ್ಲಾ ಸಿಟ್ಟು ಬಂದು "ನಿಮ್ಮ ಕಾಲದಲ್ಲಿ ತಿನ್ನೋ ಆಹಾರ ಶುದ್ಧವಾಗಿರ್ತಿತ್ತು, ನಮ್ಮ ಕರ್ಮಕ್ಕೆ ಈಗ ಎಲ್ಲದರಲ್ಲೂ ಕಲಬೆರಕೆ" ಅಂತ ಉತ್ತರ ನೀಡಿದರೂ ಯಾಕೋ ಈಗೀಗ ಉತ್ಸಾಹಹೀನತೆ ಸ್ವಲ್ಪ ಜಾಸ್ತಿಯೇ ಚಿಂತೆಯುಂಟುಮಾಡಿತ್ತು. ಇಷ್ಟರ ಮಧ್ಯೆ ಅಪ್ಪನಿಗೆ ಹುಶಾರು ತಪ್ಪಿದ್ದರಿಂದ ಅವರ ಕೆಲಸವಾದ ಮನೆಮನೆಗೆ ಹೋಗಿ ಪಿಗ್ಮಿ ಸಂಗ್ರಾಹಣೆ ಮಾಡುವುದು ನನ್ನ ಹೆಗಲಿಗೆ ಬಿತ್ತು. ಬೆಳಗ್ಗಿನಿಂದ ಸಂಜೆಯವರೆಗೆ ನಡೆದೂ ನಡೆದೂ "ಅಪ್ಪ ಪ್ರತಿದಿನ ಇಷ್ಟೊಂದು ಕಷ್ಟಪಡ್ತಾರಾ" ಅಂತ ಯೋಚಿಸುತ್ತಾ ಸುಸ್ತಾಗಿ ಮನೆಗೆ ಬಂದವನಿಗೆ ಹೊಟ್ಟೆಯಲ್ಲೆಲ್ಲಾ ಚಿಟ್ಟೆ ಹಾರಾಡಿದಂತೆ ಸಂಕಟ. ತಡೆಯಲಾಗದೇ ಪಾತ್ರೆಯಲ್ಲಿದ್ದ ಸಾಂಬಾರಿಗೆ ಅನ್ನ ಕಲಸಿ ಗಬಗಬ ತಿಂದಾಗ ಅದರ ರುಚಿಗೆ ಒಂದು ರೀತಿ ಇಲ್ಲಿಯವರೆಗೂ ಆಗದಂತಹ ದಿವ್ಯಾನುಭವವಾಯ್ತು. ಹಾಗೇ ಸೋಫಾದ ಮೇಲೆ ಕಾಲುಚಾಚಿದವನಿಗೆ ಕಂಡುಕೇಳರಿಯದಂತಹ ಪ್ರಚಂಡ ನಿದ್ರೆ. ಬೆಳಗ್ಗೆ ಅಮ್ಮ ಎಬ್ಬಿಸಿ "ಆ ಸಾಂಬಾರು ಯಾಕೋ ತಿಂದೆ??, ಹಾಳಾಗಿತ್ತು, ಎಸೀಬೇಕು ಅಂತ ಇಟ್ಟಿದ್ದೆ" ಅಂದಾಗ ಒಂದು ಮುಗುಳ್ನಗೆ ಮುಖದಲ್ಲಿ ಮೂಡಿತು....

3) ದೃಷ್ಟಿಕೋನ
"ಈಗ ಇಲ್ಲಿ ಗಾಡಿ ಓಡಿಸ್ಲಿಕ್ಕೆ ಭಾರೀ ಖುಷಿಯಾಗುತ್ತೆ ಮಾರಾಯ್ರೇ, ಚಂದ ಮಾಡಿದಾರೆ ರಸ್ತೆ, ದಿನಕ್ಕೆರಡು ಸಲ ಬಸ್ಸೂ ಬರುತ್ತೆ" ಅಂತ ಆಟೋ ಚಾಲಕ ಸುರೇಶಣ್ಣ ಬೀರಿದ ದೇಶಾವರಿ ನಗುವಿಗೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಉಹ್ಞುಂ, ಯಾವುದನ್ನೂ ಬಿಟ್ಟಿಲ್ಲ, ನಾನು ಮೊದಲಬಾರಿಗೆ ಹತ್ತಿ ಕೈಮುರಿದುಕೊಂಡ ಪೇರಲೆಮರ, ಮುಂಗಾರಿನಲ್ಲಿ ಜಂಗುಳಿಯ ಮಧ್ಯೆ ಸೆಲೆಬ್ರಿಟಿಯಾಗಿರುತ್ತಿದ್ದ ಹಳ್ಳದ ಪಕ್ಕದ ಮಾವಿನಮರ, ಕಿಟ್ಟಣ್ಣನ ಮನೆಹಿಂದಿನ ನೇರಳೆಮರ, ನಮಗಿಂತ ಕರಡಿಗಳಿಗೇ ಡಾರ್ಲಿಂಗ್ ಆಗಿದ್ದ ಹೆಬ್ಬಲಸಿನ ಮರ, ಎಲ್ಲವೂ ಇರಲೇ ಇಲ್ಲವೇನೋ ಎಂಬಂತೆ ಮಾಯವಾಗಿದ್ದವು. ನಾನು ಕೂತಿರುವ ಮೋಟಾರಿನ ಕೆಳಗಿರುವ ಕರಿಬಕಾಸುರನ ಹೊಟ್ಟೆಗೆ ಆಹಾರವಾಗಿದ್ದ ಅವುಗಳ ಶವದ ಮೇಲೆ ಮೆರವಣಿಗೆ ಹೋಗುತ್ತಿರುವ ನನ್ನ ಮುಖ ನನಗೆ ಆಟೋವಿನ ಎದುರುಗನ್ನಡಿಯಲ್ಲಿ ಯಮನ ತರಹ ಕಾಣಿಸಿತು. ಹಾಗೇ ಇತ್ತೀಚೆಗೆ ಜಾಸ್ತಿ ಪ್ರಸಿದ್ಧವಾಗಿರುವ ನಮ್ಮೂರ ಜಲಪಾತದ ಹತ್ತಿರ ಬಂದಾಗ ಸಾಲುಗಟ್ಟಿ ನಿಂತಿದ್ದ ಪ್ರವಾಸಿ ವಾಹನಗಳನ್ನು ನೋಡಿ ಗಾಬರಿಯಾಯಿತು. ಹತ್ತಿರ ಹೋಗುವವರೆಗೂ ಕಿವಿಗಡಚಿಕ್ಕುವಂತೆ ಕೂಗುತ್ತಿದ್ದರೂ ತುಸುನಾಚಿಕೆಯಿಂದ ನೂರುಗಟ್ಟಲೆ ಮರಗಳ ಮರೆಯಲ್ಲಿ ಅಡಗಿರುತ್ತಿದ್ದ ನಮ್ಮೂರ 'ಅಬ್ಬಿ'ಗೂ ನಾಚಿಕೆ ಬಿಡಿಸಿದ್ದಾರೆ ಎಂದರ್ಥವಾಯಿತು. ಹಾಗೇ ಬೇಸರದಿಂದ ಅಜ್ಜಿಮನೆಯೆದುರು ಹೋಗಿ ಶೂ ಬಿಚ್ಚುತ್ತಿದ್ದವನನ್ನು ನೋಡಿ ಓಡಿ ಬಂದ ದೊಡ್ಡಮ್ಮ "ಬಾರೋ ಹುಡುಗಾ, ರಸ್ತೆ ಆದ್ಮೇಲೆ ಬರ್ಲೇ ಇಲ್ಲ ನೀನು, 'ಅಬ್ಬಿಗುಂಡಿ' ದೆಸೆಯಿಂದ ನಮಗೆಲ್ಲಾ ಶುಕ್ರದೆಸೆ ಬಂತು ನೋಡು. ಮೊನ್ನೆ ಮೇಲಿನ್ಮನೆ ಹಿರಿಯಮ್ಮಂಗೆ ಹುಶಾರಿಲ್ಲ ಆದಾಗ ಮನೇವರೆಗೂ ಶೃಂಗೇರಿ ಆಸ್ಪತ್ರೆ ಆಂಬುಲೆನ್ಸ್ ಬಂದಿತ್ತು. ಮುಂಚೆ ಆಗಿದ್ರೆ ಆ ಕಾಡುದಾರೀಲಿ ಅವರನ್ನು ಆಸ್ಪತ್ರೆಗೆ ಸೇರಿಸಿ ಉಳಿಸಿಕೊಳ್ಳೋಕಾಗ್ತಿತ್ತಾ?. ಈಗ ಪೇಪರ್, ಹಾಲು, ಪೋಸ್ಟು ಎಲ್ಲಾ ಮನೆಗೇ ಬರುತ್ತೆ. ಅಷ್ಟೇ ಯಾಕೆ ಕೆಲಸ ಕಾರ್ಯ ಇಲ್ದೆ ಅಲೀತಿದ್ದ ಸೀನಣ್ಣ ಈಗ ಫಾಲ್ಸ್ ಹತ್ರ ಕಾಫಿ-ಟೀ-ಪಾನಿಪೂರಿ ಅಂಗಡಿ ಇಟ್ಟು ದುಡಿಯೋಕೆ ಶುರುಮಾಡಿದ್ದಾನೆ. ನಮ್ಮೂರಿಗೆ ರಸ್ತೆ ಬಂದು ಒಂದು ಕ್ರಾಂತೀನೇ ಆಯ್ತು" ಎಂದಾಗ ತಲೆಯೆತ್ತಿದ ನನ್ನ ಕಣ್ಣುಗಳಲ್ಲಿ ಪಾತ್ರೆಗಟ್ಟಲೆ ಗೊಂದಲವಿತ್ತು....

- ಸಂಪತ್ ಸಿರಿಮನೆ

No comments:

Post a Comment