ಟಿಕ್ಕಿ

ಕಿವಿಯಲ್ಲಿದ್ದ 'ಟಿಕ್ಕಿ'ಯೊಂದು ಬಿಟ್ಟರೆ ಅನಂತನಿಗೆ ಬದುಕಿನಲ್ಲಿ ಇನ್ಯಾವ ಚಿಂತೆಯೂ ಇರಲಿಲ್ಲವಾದರೂ ಅದೊಂದು ಚಿಂತೆಯೇ ದಿನವಿಡೀ ಅವನು ಕೊರಗುತ್ತಾ ಕೂರುವಂತೆ ಮಾಡಲು ಸಾಕಾಗಿತ್ತು. ಹೆಸರು ಅನಂತಪದ್ಮನಾಭನಾದರೂ ಟಿಕ್ಕಿಯ ದೆಸೆಯಿಂದ ಕ್ಲಾಸಿನಲ್ಲಿ 'ಟಿಕ್ಕಿ ಅನಂತ'ನೆಂದೂ, ವಠಾರದಲ್ಲಿ 'ಕಿವೀಲಿ ಟಿಕ್ಕಿ ಇರೋ ಭಟ್ರುಡುಗ'ನೆಂದೂ, ಗೆಳೆಯರ ಗುಂಪಿನಲ್ಲಿ 'ಹೆಣ್ ಹೆಂಗ್ಸು' ಎಂದೂ ಕರೆಸಿಕೊಂಡೂ ಕರೆಸಿಕೊಂಡೂ ಅವನದೇ ಕಿವಿಯ ಟಿಕ್ಕಿ ಅವನಿಗೆ ಆಜನ್ಮಶತ್ರುವಾಗಿ ಮಾರ್ಪಾಟಾಗಿತ್ತು. ಮನೇಲಿ ಈ ವಿಷಯವಾಗಿ ಗಲಾಟೆಯಾದಾಗಲೆಲ್ಲಾ "ಬಿಡ್ತು ಅನ್ನು, ಟಿಕ್ಕಿ ತೆಗುಸ್ತಾನಂತೆ ಭಡವಾ, ನಮ್ ಕುಟುಂಬದ ಸಂಪ್ರದಾಯ ಅದು, ಅದನ್ನ ತೆಗೆಸೋ ಮಾತಾಡಿದ್ರೆ ಇಡೀ ಕುಟುಂಬಾನೇ ನಾಶ ಆಗುತ್ತೆ ಅಪಭ್ರಂಶ ಮುಂಡೇದೇ" ಅಂತ ಬೈಯುವ ಅಜ್ಜಿ ಮಾತಿಗೆ ಟಿಕ್ಕಿಧಾರಿಗಳಾದ ಅಜ್ಜ-ಅಪ್ಪ ಹ್ಞೂಗುಟ್ಟಿ ಇವನ ಮೇಲೇ ಹೂಂಕರಿಸುತ್ತಿದ್ದರು. ಆಗೆಲ್ಲಾ ಅನಂತನಿಗೆ ಕಿವಿಯನ್ನೇ ಕತ್ತರಿಸಿ ಬಿಸಾಡುವಷ್ಟು ಕೋಪ ಬಂದರೂ ಎದುರು ಮನೆಯ ತನ್ನದೇ ಕ್ಲಾಸಿನ ಸೀತಾಲಕ್ಷ್ಮಿ ಎದುರುಸಿಕ್ಕಾಗಲೆಲ್ಲಾ ಎರಡೂ ಕಿವಿಗಳನ್ನು ಹಿಂಡಿ "ನಮ್ ಅನಂತೂ ಕಿವಿಗೆ ಟಿಕ್ಕೀನೇ ಚಂದ" ಅಂತ ಮುದ್ದುಮಾಡುತ್ತಿದ್ದುದು ನೆನಪಾಗಿ ಸುಮ್ಮನಾಗುತ್ತಿದ್ದ. ಆದರೆ ವರ್ಷಗಳುರುಳುತ್ತಾ ಬಂದಂತೆ ಸೀತಾಲಕ್ಷ್ಮಿ ಕಿವಿಹಿಂಡುವುದನ್ನೂ ನಿಲ್ಲಿಸಿ ಅನಂತನಿಗೆ ಟಿಕ್ಕಿಯಿಂದಾವೃತವಾದ ಇದ್ಯಾವುದೋ ಘೋರ ನರಕದಲ್ಲಿ ಸಿಕ್ಕಿಹಾಕಿಕೊಂಡಂತೆನಿಸತೊಡಗಿತು. ಊರಲ್ಲೇ ಇಂಜಿನಿಯರಿಂಗು ಮುಗಿಸಿ ಮನೆಬಿಟ್ಟು ಬೆಂಗಳೂರಿಗೆ ಬಸ್ಸು ಹತ್ತಿದಾಗಲೇ ಸ್ವತಂತ್ರ ಹಕ್ಕಿಯಂತಾಗಿದ್ದ ಅನಂತನ ತಲೆಯಲ್ಲಿದ್ದುದು ಬೆಂಗಳೂರಿಗೆ ಹೋದ ತಕ್ಷಣ ಮೊದಲು ಈ ಅನಿಷ್ಟದ ಟಿಕ್ಕಿಯನ್ನು ತೆಗೆಯಬೇಕೆನ್ನುವುದು. ಆದರೆ ಟಿಕ್ಕಿ ವರ್ಷಾನುಗಟ್ಟಲೆ ಠಿಕಾಣಿ ಹೂಡಿ ಭದ್ರವಾಗಿದ್ದರಿಂದ ಕೈಯಲ್ಲಿ ತೆಗೆಯಲು ಬಾರದೇ ಕಂಪನಿಗೆ ಮೊದಲ ದಿನ ಟಿಕ್ಕಿಧಾರಿಯಾಗೇ ಹೋಗಬೇಕಾಯಿತು. ಅನಂತನ ಅದೃಷ್ಟ ಕೆಟ್ಟಿತ್ತೋ ಏನೋ ಬಾಸ್ ಗೆ ಇವನ ಟಿಕ್ಕಿ ಕೆಟ್ಟದಾಗಿ ಕಾಣಿಸಿ ಎಲ್ಲರೆದುರು ಇವನನ್ನು ಹೀಯಾಳಿಸಿ "ಇದೇನು ನಿಮ್ಮೂರ ಜಾತ್ರೆ ಅಲ್ಲ ಬೇಕಾಬಿಟ್ಟಿ ಬರೋಕೆ, ಯೂ ಶುಡ್ ಮೇಂಟೇನ್ ಸಮ್ ಡಿಸಿಪ್ಲಿನ್, ಬ್ಲಡಿ ವಿಲೇಜ್ ಗಯ್ಸ್ , ಹಾಗೇ ಬಂದುಬಿಡ್ತಾರೆ ಬಚ್ಚಲುಮನೆಗೆ ಬಂದ ಹಾಗೆ" ಅಂದುಬಿಟ್ಟರು. ಜ್ವಾಲಾಮುಖಿಯಂತೆ ಅನಂತನಿಗೆ ರೋಷ ಉಕ್ಕಿ ಬಂದು "ಟಿಕ್ಕಿ ಅಷ್ಟೇ ಅಲ್ಲ ನಾಳೆಯಿಂದ ಪಂಚೆ ಉಟ್ಕೊಂಡು ಬರ್ತೀನಿ ನೀನ್ಯಾವನೋ ಕೇಳೋಕೆ?, ಈ ಕಂಪನಿಯೇನು ನಿಮ್ಮಪ್ಪಂದಾ?, ಇಲ್ಲೆಲ್ಲೂ ರೂಲ್ಸು ಹಾಕಿಲ್ಲ ಟಿಕ್ಕಿ ಹಾಕಿಕೊಂಡಿರಬಾರ್ದು ಅಂತ, ನೀನು ಕೊಡೋ ಟಾರ್ಗೆಟ್ಸ್ ಮುಟ್ಟದೇ ಇದ್ರೆ ಕೇಳು ಅದು ಬಿಟ್ಟು ಎಕ್ಸ್ಟರ್ನಲ್ ಅಪಿಯರೆನ್ಸ್ ಬಗ್ಗೆ ಮಾತಾಡೋಕೆ ನಿನಗ್ಯಾವ ಹಕ್ಕೂ ಇಲ್ಲ" ಅಂತ ತಿರುಗಿಸಿ ಬೈದೇಬಿಟ್ಟ. ಈ ವಿಷಯ ಸಂದರ್ಶನದಲ್ಲಿ ಇವನ ಉತ್ತರಗಳಿಂದ ಸಂತಸಗೊಂಡಿದ್ದ ಮೇಲಿನವರವರೆಗೆ ಹೋಗಿ ಒಳ್ಳೆಯ ಹುಡುಗನನ್ನು ಕಳೆದುಕೊಳ್ಳಲಿಷ್ಟವಿಲ್ಲದೇ ಅವರು ಕೊನೆಗೆ ಬಾಸಿಗೇ ತಿಳಿಹೇಳಿ ಟಿಕ್ಕಿ ಹಾಕಿಕೊಂಡು ಬರಲು ಅನುಮತಿಯನ್ನೂ ಕೊಟ್ಟರು. ಅನಂತ ಕಿವಿಯುಬ್ಬಿಸಿ ಆಫೀಸಿಗೆ ಬರಲು ಶುರುಮಾಡಿದ. ಇಷ್ಟರವರೆಗೆ ಇರಿಸುಮುರುಸು ಉಂಟುಮಾಡುತ್ತಿದ್ದ ಟಿಕ್ಕಿ ಈಗ ಅವನ ಸ್ವಾಭಿಮಾನ-ಆತ್ಮಗೌರವದ ದ್ಯೋತಕವಾಯಿತು. ಬೂದಿ ಮುಚ್ಚಿದ ಕೆಂಡದಂತೆ ಎಲ್ಲವೂ ತಣ್ಣಗಾಯಿತು. ಬಾಸಿಗೆ ಅನಂತನ ಮೇಲೆ ಆಕ್ರೋಶ ಉರಿಯುತ್ತಿದ್ದರೂ ಎಲ್ಲಾ ಕೆಲಸಗಳನ್ನು ಸರಿಯಾಗಿ ಮಾಡಿ ಮುಗಿಸುತ್ತಿದ್ದ ಅವನಿಗೆ ಏನೂ ಮಾಡಲಾಗಲಿಲ್ಲ. ಕೆಲವು ಸಮಯದಲ್ಲಿ ಬಾಸಿಗೆ ಬೇರೆ ಕಡೆ ವರ್ಗವೂ ಆಯಿತು. ಮಾರನೇ ದಿನವೇ ಅನಂತ ಟಿಕ್ಕಿ ತೆಗೆಸಿದ.......

                  -ಸಂಪತ್ ಸಿರಿಮನೆ

ವಿದಾಯ

ಮರದಲ್ಲಿ ಹಾಯಾಗಿ ಕುಳಿತಿದ್ದ ಎಲೆಯೊಂದ
ಬಿರುಗಾಳಿ ಬೀಸೆಳೆದು ಕಡುದೂರ ಒಯ್ದಂತೆ
ಬೆಚ್ಚನೆಯ ಮಡಿಲಲ್ಲಿ ಮಲಗಿದ್ದ ಏಡಿಮರಿ
ದಡಮುಟ್ಟಿ ಬರಸೆಳೆದ ಅಲೆಯೊಳಗೆ ಸಿಕ್ಕಂತೆ
ಶರಧಿಯಲಿ ಮಡುಗಟ್ಟಿ ವಿಶ್ರಮಿಪ ನೀರನ್ನು
ದಿನಕರನ ಉರಿಗಣ್ಣು ಆಗಸಕೆ ಎಳೆದಂತೆ
ಬೆಚ್ಚನೆಯ ಗೂಡನ್ನು ಬಿಟ್ಟುಹೊರಟಿಹೆ ನಾನು
ಸಿದ್ಧಸೂತ್ರಗಳ ಜಗಕೆ ಬಲಗಾಲನಿಟ್ಟು
ಅಲ್ಲೆಲ್ಲೋ ಬಯಲಿನಲಿ ಯಂತ್ರಗಳ ಮೆರವಣಿಗೆ
ಎರಡನೆಯ ಸಾಲಿನಲಿ ನಾನೇ ಕಾಣಿಸುತಿರುವೆ
ನಮ್ಮೂರ ಜಾತ್ರೆಯಲಿ ಮಗುವೊಂದು ಕಿರುಚುತಿದೆ
ಅಪ್ಪ-ಅಮ್ಮನ ಕೈಯ ಆಸರೆಯು ತಪ್ಪಿದೆ
ಹೆದ್ದಾರಿ ಮಧ್ಯದಲಿ ಕಾರಿರುಳ ರಾತ್ರಿಯಲಿ
ನವಜಾತ ನಾಯಿಮರಿ ಕಂಗೆಟ್ಟು ಕೂಗುತಿದೆ
ಕೆಟ್ಟ ಕನಸಿನ ಸರಣಿ ಮುಗಿವ ಮುನ್ನವೇ ಯಾರೋ
ನಿದ್ರೆಯಿಂದೆಚ್ಚರಿಸಿ ಹಗ್ಗದಿಂದೆಳೆದಂತೆ
ಗಮ್ಯವಾವುದೋ ತಿಳಿಯೆ ದೂರವೆಷ್ಟಿದೆಯರಿಯೆ
ನಡೆದಿರುವೆ ಸುಮ್ಮನೇ ಸಮ್ಮೋಹಿಯ ಕರೆಗೆ

                          -   ಸಂಪತ್ ಸಿರಿಮನೆ

ರಾಣಿ ಕಥೆ

                          ರಾಣಿ ಕಥೆ

       ಹಾಗೆ ನೋಡಿದರೆ ರಾಣಿಯ ಜನ್ಮ ಸಾರ್ಥಕ ಸಂಪನ್ನವಾಯಿತು ಎನ್ನಬಹುದು. ನಮ್ಮೂರು ಕೊಪ್ಪದ ವಾಟರ್ ಟ್ಯಾಂಕಿನ ಆಸುಪಾಸು, ತ್ಯಾಗರಾಜ ರಸ್ತೆ - ಕಾಳಿದಾಸ ರಸ್ತೆಯಲ್ಲಿ ರಾಣಿಯ ಬಗ್ಗೆ ಗೊತ್ತಿಲ್ಲದವರು ಬಹಳ ಕಡಿಮೆಯೇ ಎನ್ನಬಹುದು. ರಾಣಿಯ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದ ಎಲ್ಲಾ ಅಂಗಡಿಯವರಿಗೆ ರಾಣಿಯ ಮೇಲೆ ವಿಶೇಷ ವಾತ್ಸಲ್ಯ, ಎಲ್ಲಾ ಮಕ್ಕಳಿಗೆ ರಾಣಿಯ ಮೇಲೆ ವಿಶೇಷ ಪ್ರೀತಿ. ಹದಿನೈದಿಪ್ಪತ್ತು ವರ್ಷದ ಜೀವಿತಾವಧಿಯಲ್ಲಿ ಇದಕ್ಕಿಂತ ಹೆಚ್ಚಿನದಿನ್ನೇನನ್ನು ಸಾಧಿಸಲು ಸಾಧ್ಯ?. ವೈಯಕ್ತಿಕವಾಗಿಯಂತೂ ನಾನು ರಾಣಿಯನ್ನು ಮರೆಯುವಂತೆಯೇ ಇಲ್ಲ. ಚಿಕ್ಕಂದಿನಿಂದಲೂ ನನಗಿದ್ದ ಸೈನೋಫೋಬಿಯಾ ದೂರವಾಗಿದ್ದು ರಾಣಿಯನ್ನು ಕಂಡ ಮೇಲೆಯೇ. ತನ್ನ ಸಮಕಾಲೀನರಿಗೆ ಹೋಲಿಸಿದರೆ ಅತ್ಯಂತ ಅಗಾಧ ಬುದ್ಧಿವಂತಿಕೆ, ಮಾನವೀಯತೆ, ವಿಶಿಷ್ಟತೆ ಹೊಂದಿದ್ದ ರಾಣಿ ರಾಜಗಾಂಭೀರ್ಯದಿಂದ ನಡೆಯಲು ಹೊರಟರೆ ಆ ಠೀವಿಗೆ ಎಂತಹವರೂ ಬೆರಗಾಗಬೇಕಿತ್ತು. ಒಟ್ಟಿನಲ್ಲಿ ನಾಯಿಗಳ ಬಗ್ಗೆ ನನಗಿದ್ದ ದೃಷ್ಟಿಕೋನವನ್ನು ಸಂಪೂರ್ಣ ಬದಲಾಯಿಸಿದ ಕೀರ್ತಿ ರಾಣಿಗೆ ಸಲ್ಲಬೇಕು. ಯಾವುದಾದರೂ ಶ್ರೀಮಂತರ ಮನೆಯ ಐದಡಿ ಗೇಟಿಗೆ ನೇತುಹಾಕಿದ್ದ 'ನಾಯಿ ಇದೆ ಎಚ್ಚರಿಕೆ' ಬೋರ್ಡಿನ ಹಿಂದೆ ಕುತ್ತಿಗೆಗೆ ಬೆಲ್ಟು ಬಿಗಿಸಿಕೊಂಡು ಕುಂಯ್ಗುಡುತ್ತಾ, ಮನೆಯ ಯಜಮಾನರು ಆಫೀಸು ಮುಗಿಸಿ ಬಂದು ಯಾವಾಗ ವಾಕಿಂಗಿಗೆ ಕರೆದುಕೊಂಡು ಹೋಗುತ್ತಾರೋ ಎಂದು ಜೀವಾವಧಿ ಶಿಕ್ಷೆಗೆ ಗುರಿಯಾದ ಖೈದಿಯಂತೆ ಉಯಿಲಿಡುತ್ತಾ ಬಿದ್ದಿರಬೇಕಾಗಿದ್ದ ಚಿನ್ನದ ಬಣ್ಣದ ರೋಮದ ಸ್ಕಾಟ್ಲ್ಯಾಂಡ್ ಮೂಲದ 'ಗೋಲ್ಡನ್ ರಿಟ್ರೀವರ್' ತಳಿಯ ಕ್ರಾಸ್  ಬ್ರೀಡ್ ಆದ ರಾಣಿಗೆ ಬೀದಿನಾಯಿಯಾಗುವ ಅದೃಷ್ಟ ಅದು ಹೇಗೆ ಒದಗಿ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ನಮ್ಮೂರಿನ ಗಂಡುಬೀದಿನಾಯಿಗಳಿಗೆ ಫಾರಿನ್ನು ಮೂಲದ ಹುಡುಗಿಗೆ ಲೈನು ಹೊಡೆಯುವ ಅವಕಾಶವಂತೂ ಸಿಕ್ಕಿತು. 
          ನಾನು ರಾಣಿಯನ್ನು ಮೊದಲ ಬಾರಿಗೆ ನೋಡಿದ್ದು ಎರಡನೇ ತರಗತಿಯಲ್ಲಿದ್ದಾಗ. ನನ್ನ ಚಡ್ಡಿದೋಸ್ತುಗಳಾದ ನಾಗೇಂದ್ರ ಮತ್ತು ಮಧುಚೇತನ ಒಂದು ನಾಯಿಯನ್ನು ಕಟ್ಟಿಹಾಕಿ ಬಲವಂತವಾಗಿ ಸೋಪು ನೀರಿನ ಸ್ನಾನ ಮಾಡಿಸುತ್ತಿದ್ದುದನ್ನು ನೋಡಿ "ಎಲ್ ಸಿಕ್ತ್ರೋ ಈ ಬಗ್ಗಿನಾಯಿ?" ಅಂತ ಹಾಸ್ಯ ಮಾಡಲು ಹೋಗಿ "ನನ್ ಮಗನೇ ಜಾತಿನಾಯಿ ಇದು, ಯಾರೋ ಮನೆ ಹತ್ರ ತಂದು ಬಿಟ್ಟಿದ್ರು, ನಾವೇ ಡಾಕ್ಟರ ಹತ್ರ ಇಂಜೆಕ್ಷನ್ ಹಾಕಿಸಿಕೊಂಡು ಬಂದ್ವಿ. ಅವರೇ ಹೇಳಿದ್ರು ಇದು ಗೋಲ್ಡನ್ ರೆಡ್ ರಿವರ್ರಂತೆ, ಬಗ್ಗಿ ನಾಯಿ ಅಂತೆಲ್ಲಾ ಹೇಳ್ಬೇಡ ನೀನು, ಇದರ ಹೆಸರು ರಾಣಿ" ಅಂತ ಬೈಸಿಕೊಂಡಿದ್ದೆ. ಆಮೇಲೆ ರಾಣಿ ನಮ್ಮ ಜೊತೆಗೇ ಬೆಳೆಯುತ್ತಾ ನಮ್ಮ ಬಾಲ್ಯದ ಪುಟಗಳಲ್ಲಿ ಸ್ಥಾನ ಪಡೆಯಿತು. ಮೊದಲೇ ಹೇಳಿದಂತೆ ನನಗೆ ನಾಯಿಗಳೆಂದರೆ ಭಯಂಕರ ಹೆದರಿಕೆಯಿತ್ತು. ನಡೆದುಕೊಂಡು ಹೋಗುತ್ತಿರುವಾಗ ದೂರದಲ್ಲಿ ಬದಿಯಲ್ಲೆಲ್ಲಾದರೂ ನಾಯಿ ಮಲಗಿದ್ದು ಕಂಡರೆ ನನ್ನ ಮನಸ್ಸಿನಲ್ಲಿ ತಳಮಳದ ಪ್ರವಾಹವೆದ್ದು ಸೇಫ್ಟಿಗೆ ಅಂತ ಕೈಯಲ್ಲಿ ಕಲ್ಲು ತೆಗೆದುಕೊಂಡು , ಆದರೂ ಹತ್ತಿರ ಹೋಗುತ್ತಿದ್ದಂತೆ ಭಯ ಜಾಸ್ತಿಯಾಗಿ ರಸ್ತೆಯ ಆ ಬದಿಗೆ ಹೋಗಲೋ ಈ ಬದಿಯಲ್ಲೇ ಹೋಗಲೋ ಗೊತ್ತಾಗದೇ ನಿಂತಲ್ಲೇ ಭರತನಾಟ್ಯ ಮಾಡಿ ಕೊನೆಗೆ ನಾಯಿಯೇ ಗೊಂದಲಕ್ಕೀಡಾಗಿ ಪೇರಿ ಕೀಳುವಂತೆ ಸೀನ್ ಕ್ರಿಯೇಟು ಮಾಡ್ತಿದ್ದೆ. ನಾಯಿಗಳೆಂದರೆ ರಸ್ತೆಯಲ್ಲಿ ಓಡಾಡುವವರನ್ನು ಕಚ್ಚಲಿಕ್ಕೆಂದೇ ದೇವರು ಸೃಷ್ಟಿಸಿರುವ ರಾಕ್ಷಸರು ಎಂಬುದು ನನ್ನ ಭಾವನೆಯಾಗಿತ್ತು. ಆದರೆ ತಲೆ-ಕುತ್ತಿಗೆ ನೇವರಿಸಿದರೆ ಕಣ್ಣು ಮುಚ್ಚಿಕೊಂಡು ಆನಂದಿಸುವ, ಒಂದೂ ಬಿಸ್ಕತ್ತು ಹಾಕದಿದ್ದರೂ ಬಾಲ ಅಲ್ಲಾಡಿಸಿಕೊಂಡು ಹಿಂದೆ ಬರುವ ರಾಣಿಯನ್ನು ನೋಡಿದಮೇಲೆ ನಾಯಿಗಳೆಂದರೆ ಎಂತಹ ಸುಂದರ ಸೃಷ್ಟಿ ಎಂಬುದು ಅರ್ಥವಾಗುತ್ತಾ ಬಂತು. ಮಧುಚೇತನ ಯಾವಾಗಲೂ ನೆನಪಿಸಿಕೊಳ್ಳುವ ಒಂದು ಘಟನೆ ನೋಡಿದರೆ ರಾಣಿಯ ವ್ಯಕ್ತಿತ್ವ ಅರಿವಾಗುತ್ತದೆ. ದೀಪಾವಳಿ ಲಕ್ಷ್ಮೀಪೂಜೆಗೆಂದು ದಾರಿಯಲ್ಲಿ ಹೋಗುತ್ತಿದ್ದ ಬೀಡಾಡಿ ಹಸುವನ್ನು ಬಾ ಎಂದು ಕರೆದದ್ದನ್ನು ತನಗೇ ಕರೆದದ್ದೆಂದು ತಪ್ಪು ತಿಳಿದುಕೊಂಡು ಬಾಲ ಅಲ್ಲಾಡಿಸಿಕೊಂಡು ಬಂದ ರಾಣಿಗೆ "ನಿಂಗಲ್ಲ ಕರ್ದಿದ್ದು ಹೋಗೇ" ಎಂದು ಗದರಿಸಿದ್ದು ಆತ್ಮಗೌರವಕ್ಕೆ ಎಷ್ಟು ಪೆಟ್ಟಾಗಿತ್ತೆಂದರೆ ಅದಾದ ಮೇಲೆ ಎಷ್ಟು ಕೂಗಿದರೂ ರಾಣಿ ಮನೆಯ ಹತ್ತಿರ ಬರದೇ, ಊಟ ಹಾಕಿದರೂ ತಿನ್ನದೇ, ಕೊನೆಗೆ ರಾಣಿ ಇದ್ದಲ್ಲಿಗೇ ಊಟ ತೆಗೆದುಕೊಂಡು ಹೋಗಿ ತರಾವರಿ ಮುದ್ದು ಮಾಡಿದ ಮೇಲೇ ರಾಣಿ ಸಮಾಧಾನಗೊಂಡಿದ್ದು. ಹಾಗಾಗಿಯೇ ಯಾವಾಗಲೂ ಅನ್ನಿಸುವುದು ಅನ್ನದ ಋಣಕ್ಕಿಂತ ಮಿಗಿಲಾಗಿ ವಿಶ್ವಾಸ-ಪ್ರೀತಿ ರಾಣಿಗೆ ಮುಖ್ಯವಾಗಿತ್ತು ಎಂದು. ನನಗೆ ಯಾವಾಗಲೂ ರಾಣಿಯ ಸಂಭಾವಿತ- ಅಚ್ಚುಕಟ್ಟು- ನಿರ್ಲಿಪ್ತ ನಡೆನುಡಿಗಳನ್ನು ನೋಡಿದಾಗ ಇದೇನಾದರೂ ಹಿಂದಿನ ಜನ್ಮದಲ್ಲಿ ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿ ದೈವಿಕತೆಯನ್ನು ಪಡೆದ ಋಷಿಯಾಗಿತ್ತೇನೋ ಅನಿಸುತ್ತಿತ್ತು. ಅದರ ಮುಖದಲ್ಲಿ ಸಾಧುತನ ಮತ್ತು ಗತ್ತು ಹದವಾಗಿ ಮಿಳಿತವಾಗಿತ್ತು. ಇಷ್ಟೆಲ್ಲಾ ಶಾಂತಸ್ವಭಾವದ್ದಾಗಿದ್ದರೂ ಅದೇಕೋ ಚಿಂದಿಬಟ್ಟೆಯ ಭಿಕ್ಷುಕರನ್ನು ಕಂಡರೆ ಮಾತ್ರ ರಾಣಿಯ ಕೋರೆಹಲ್ಲುಗಳು ಅಸ್ತಿತ್ವ ಪಡೆದುಕೊಂಡು ಧ್ವನಿಪೆಟ್ಟಿಗೆಯು ಜಾಗೃತವಾಗುತ್ತಿತ್ತು. ಕೆಲವೊಮ್ಮೆ ಪರಿಚಿತರೇ ಹಳೇ ಕೊಳಕು ಪಂಚೆ ಉಟ್ಟು ಬಂದಾಗಲೂ ರಾಣಿ ಗುರ್ರೆಂದು ಅವರ ಹತ್ರ ಬೈಸಿಕೊಂಡಿದ್ದು ನೆನಪಾದಾಗ ರಾಣಿಗೂ ಬಡವ- ಶ್ರೀಮಂತರೆಂಬ ಬೇಧಭಾವವಿತ್ತೇ ಎಂದು ಆಶ್ಚರ್ಯವಾಗುತ್ತದೆ. ಎಷ್ಟಾದರೂ ಒಂದಂಶ ಹೊರದೇಶದ್ದಲ್ಲವೇ!?

        ಹೀಗೆ ಎಲ್ಲರಿಗೂ ಪ್ರೀತಿಪಾತ್ರವಾಗಿ ಸುವರ್ಣಾಕ್ಷರಗಳಿಂದಲೇ ತುಂಬಿದ್ದ ರಾಣಿ ಕಥೆಯಲ್ಲಿ ಕರಿಮಸಿಯ ಪುಟಗಳು ಶುರುವಾದವು. ರಾಣಿಯ ಸ್ವಭಾವವೇನೂ ಬದಲಾಗಲಿಲ್ಲ ಆದರೆ 'ಶಾಂತಲಕ್ಷ್ಮಿಗೊಂದು ಶನಿಮುಂಡೆ ಹುಟ್ಟಿತು' ಎಂಬಂತೆ ರಾಣಿಗೊಂದು ಗಂಡುಮರಿ ಹುಟ್ಟಿತು. 'ಎಂಥಾ ತಾಯಿಗೆ ಎಂಥಾ ಮಗ?!' ಎಂದು ದಾರಿಯಲ್ಲಿ ಓಡಾಡುವವರೆಲ್ಲಾ ಹಿಡಿಶಾಪ ಹಾಕುವಂತೆ ಪರಮಪರಪೀಡಕನಾಗಿ ಅದು ಬೆಳೆಯಿತು. ಅದಕ್ಕೆ 'ಟೈಗರ್' ಎಂದು ಯಾರು ಹೆಸರಿಟ್ಟರೆನ್ನುವುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ!. ಸ್ವಭಾವಕ್ಕೆ ತಕ್ಕ ಹೆಸರೋ ಅಥವಾ ಹೆಸರಿಟ್ಟದ್ದಕ್ಕೆ ಜಂಭ ಬಂದು ಕಾಡುಪ್ರಾಣಿಯಂತೆ ಆಡಲು ಶುರುಮಾಡಿತೋ ಗೊತ್ತಿಲ್ಲ, ಒಟ್ಟಿನಲ್ಲಿ ನಾಯಿಗಳ ಬಗ್ಗೆ ಮರೆಯಾಗಿದ್ದ ನನ್ನ ಹೆದರಿಕೆ ವಾಪಸ್ ಬಂದು ಬೃಹದಾಕಾರವಾಗಿ ಬೆಳೆಯಿತು. ಇದಕ್ಕೆ ಪುಷ್ಟಿ ಕೊಡುವಂತೆ ಒಂದು ಘನಘೋರ ಘಟನೆ ಬೇರೆ ನಡೆಯಿತು. ನಾಗೇಂದ್ರನನ್ನು ಕ್ರಿಕೆಟ್ ಆಡಲು ಕರೆಯಲೆಂದು ಅವನ ಮನೆಯ ಬಳಿಗೆ ಹೋದಾಗ ಬದಿಯಲ್ಲೆಲ್ಲೋ ರಾ ಏಜೆಂಟ್ ತರ ಅವಿತುಕೊಂಡಿದ್ದ ಟೈಗರ್ ಛಂಗನೇ ನೆಗೆದು ಮೈಮೇಲೆ ಬಂತು. ಮೊದಲೇ ಹೆದರಿ ಹೇತುಕೊಂಡವನಿಗೆ ಹಣೆ ಮೇಲೆ ಹಾವಿನ ಮರಿ ಬಿಟ್ಟಂತಾಗಿ ನಾನು ಭರತನಾಟ್ಯ ಶುರುಮಾಡಿದೆ. "ಅದು ಆಟ ಆಡಕ್ಕೆ ಬರ್ತಿದೆ ಕಣೋ ಹೆದರಬೇಡ್ವೋ" ಅಂತ ನಾಗೇಂದ್ರನೇನೋ ಕೂಗಿದ, ಆದರೆ ನನಗೆ ಅದರ ಮುಖದಲ್ಲಿ ಆಟ ಆಡಲು ಬರುವ ಪುಟ್ಟ ಮಗುವಿನ ಬದಲು ಎದುರು ನಿಂತವರ ಎದೆಬಗೆದು ರಕ್ತ ಕುಡಿಯಲು ಸಿದ್ಧನಾದ ನರಸಿಂಹ ಕಾಣಿಸಿದ. ಇದಾಗಿದ್ದೇ ಅಲ್ಲ ಅಂತ ಕೈಯಲ್ಲಿದ್ದ ಹಳೇ ಉದ್ದ ಛತ್ರಿಯ ಸಮೇತ ಓಡಲು ಶುರುಮಾಡಿದೆ. ಕಾಳಿದಾಸ ರಸ್ತೆಯುದ್ದಕ್ಕೂ ಛತ್ರಿಯ ಬಿಡಿಭಾಗಗಳನ್ನು ಒಂದೊಂದಾಗಿ ಬೀಳಿಸಿಕೊಳ್ಳುತ್ತಾ ಅಂಡಿನ ಮೇಲೆ ಪೋಲೀಸರ ಲಾಠಿ ಏಟು ಬಿದ್ದವನಂತೆ ಕಿರುಚಿಕೊಳ್ಳುತ್ತಾ ಓಡಿದ ನನ್ನನ್ನು ಅಂದು ನೋಡಿದವರಾರೂ ಮರೆತಿರಲಿಕ್ಕಿಲ್ಲ. ಇನ್ನೇನು ಟೈಗರ್ ಗೆ ನಾನು ಮೊದಲ ನರಬಲಿಯಾಗಿಬಿಟ್ಟೆ ಎನ್ನುವಷ್ಟರಲ್ಲಿ ಸಿನಿಮಾಗಳಲ್ಲಿ ನಾಯಕಿಯನ್ನು ವಿಲನ್ನುಗಳು ಅಟ್ಟಿಸಿಕೊಂಡು ಹೋಗುವಾಗ ನೆಲದಡಿಯಿಂದೆಲ್ಲಾ ಪ್ರತ್ಯಕ್ಷವಾಗಿ ನಾಯಕಿಯ ಮಾನ ಕಾಪಾಡುವ ನಾಯಕನಂತೆ ಅದೆಲ್ಲಿಂದಲೋ ರಾಣಿ ಧುತ್ತೆಂದು ಎದುರು ಬಂದು ಟೈಗರ್ ಜೊತೆ ಜಗಳವಾಡಿ ಎಳೆದುಕೊಂಡು ಹೋಯಿತು. ಸತ್ತೆನೋ ಕೆಟ್ಟೆನೋ ಎಂದು ನಾನು ಛತ್ರಿಯ ಭಾಗಗಳನ್ನೆಲ್ಲಾ ಸಂಗ್ರಹಿಸಿಕೊಂಡು ಮಿಂಚಿನಂತೆ ನಾಗೇಂದ್ರನ ಮನೆ ಸೇರಿಕೊಂಡೆ. ಆದರೆ ಇವತ್ತಿಗೂ ಕಾಳಿದಾಸ ರಸ್ತೆಗೆ ಹೋದಾಗ ಪರಿಚಯದವರೆಲ್ಲಾ ನಮ್ಮ ಬಾಲ್ಯದ ತುಂಟಾಟಗಳನ್ನು ನೆನಪಿಸಿಕೊಳ್ಳುವಾಗ ಯಾಕೋ ನನ್ನ ಕಡೆ ನೋಡಿ "ಅಯ್ಯೋ ನಿನ್ ಜನ್ಮಕ್ಕಿಷ್ಟು" ಎನ್ನುವಂತೆ ಮುಗುಳುನಗುತ್ತಾರೆ ಎಂದು ನನಗೆ ಅನುಮಾನ.

         ಏನೇ ಆದರೂ ಹುಸೇನ್ ಸಾಬರ ಘಟನೆಯ ಮುಂದೆ ನನ್ನದು ನೂರು ಪಾಲು ಉತ್ತಮ. ರಾಣಿಗೆ ಭಿಕ್ಷುಕರನ್ನು ಕಂಡರೆ ದ್ವೇಷವಿದ್ದಂತೆ ಟೈಗರ್ ಗೆ 'ಹಾರ್ನ್' ಎಂದರೆ ಅಲರ್ಜಿ. ಪಾಪ ಹುಸೇನ್ ಸಾಬರು ಭಾನುವಾರ ಬಂಗುಡೆಯನ್ನು ಭರ್ಜರಿ ಬಟವಾಡೆ ಮಾಡೋಣ ಅಂತ ಹುಮ್ಮಸ್ಸಿನಿಂದ ತಮ್ಮ ಎಂ80 ಯಲ್ಲಿ 'ಎರಡು ಕನಸು' ರಾಜಣ್ಣನ ತರ ಬರುತ್ತಿದ್ದರು. ಮೀನು ತಗೊಳ್ಳುವವರಿಗೆ ಸೂಚನೆ ಕೊಡೋಣ ಎಂದು ತ್ಯಾಗರಾಜ ರಸ್ತೆ ಹಳೇ ಎಲ್ಲೈಸಿ ಆಫೀಸು ಹತ್ತಿರ ವಿಶ್ವಪ್ರಸಿದ್ಧ ಮೀನುಗಾಡಿಯ ಹಸಿರು ಹಾರನ್ನನ್ನು 'ಪೋಂಯ್ಕ್' ಅನ್ನಿಸಿದ್ದೇ ತಡ ವಾರವಿಡೀ ಉರಿಮುಖ ಮಾಡಿ ಸುಸ್ತಾಗಿ ಮಲಗಿದ್ದ ಟೈಗರ್ ನ ಕರ್ಣಮಂಡಲದಲ್ಲಿ ಆಸ್ಫೋಟವಾದಂತಾಗಿ ಸ್ಟೆನ್ ಗನ್ನಿನಿಂದ ಸಿಡಿದ ಗುಂಡಿನಂತೆ ಅದು ಹುಸೇನ್ ಸಾಬರ ಎಂ80 ಬೆನ್ನು ಹತ್ತಿತು. ಟೈಗರ್ ನ ವೇಗದ ಕಾಲುಗಳಿಗೆ ಸೋಲುಣಿಸಬೇಕಾದ ಅನಿವಾರ್ಯತೆಯಲ್ಲಿ ಹುಸೇನ್ ಸಾಬರು ಬದುಕಿಡೀ ಕೊಡದಷ್ಟು ಎಕ್ಸಲರೇಟರ್ ಜಡಿದ ಹೊಡೆತಕ್ಕೆ ಅವರ ನೀಲಿ ಬಣ್ಣದ ಪಟ್ಟೆ ಪಟ್ಟೆ ಲುಂಗಿ ಪ್ಯಾರಾಚೂಟ್ ತರ ಗಾಳಿಯಲ್ಲಿ ಹರಡಿಕೊಂಡು ದೂರದಿಂದ ನೋಡಿದವರಲ್ಲಿ ಕೆಲವರಿಗೆ ಗರಿಬಿಚ್ಚಿದ ನವಿಲಿನ ತರಹವೂ, ಕೆಲವರಿಗೆ ನೀಲಿ ಕಾಗೆಯ ತರಹವೂ ಕಾಣಿಸುತ್ತಿದ್ದರಂತೆ. ಅವರ ಪರಿಸ್ಥಿತಿಯನ್ನು ಸಮಾನದುಃಖಿಯಾದ ನಾನು ಅರ್ಥಮಾಡಿಕೊಳ್ಳಬಲ್ಲೆ. ಕೊನೆಗೂ ಹುಸೇನ್ ಸಾಬರ ಪ್ರಾಣ ರಕ್ಷಿಸಲೂ ರಾಣಿಯೇ ಬರಬೇಕಾಯಿತು. ಹುಸೇನ್ ಸಾಬರ ಲುಂಗಿ ಮಾತ್ರ ತನ್ನಿಂದ ಕರ್ತವ್ಯಲೋಪವಾಗಿದ್ದಕ್ಕೆ ಕಣ್ಣೀರಿಡುತ್ತಿತ್ತು. ಅದಾದ ಮೇಲೆ ವಾಟರ್ ಟ್ಯಾಂಕಿನ ಸುತ್ತಮುತ್ತ ಎಲ್ಲೂ ಹುಸೇನ್ ಸಾಬರು 'ಪೋಂಯ್ಕ್' ಎನ್ನಿಸಿದ್ದು ಕೇಳಲಿಲ್ಲ. 

       ಹೀಗೇ ಮಗ ಮಾಡಿದ ತಪ್ಪನ್ನೆಲ್ಲಾ ಕೈಲಾದಷ್ಟು ಸರಿಮಾಡುತ್ತಾ ಸಹನಾಮೂರ್ತಿಯಾಗಿ ಬಾಳಿದ ರಾಣಿ ಕೊನೆಗೆ ಆಯಸ್ಸು ತೀರಿ ಸರಳ ಸಹಜ ಮರಣವನ್ನಪ್ಪಿತು. ಆದರೆ ನನ್ನ ಶಾಪವೋ, ಹುಸೇನ್ ಸಾಬರ ಲುಂಗಿಯ ಶಾಪವೋ, ಅಥವಾ ನಮ್ಮಂತೆಯೇ ಎಲ್ಲರೆದುರು ಶೋಷಣೆಗೊಳಗಾದ ಯಾರದಾದರೂ ಶಾಪವೋ ಏನೋ ಒಟ್ಟಿನಲ್ಲಿ ಮುನಿಸಿಪಾಲಿಟಿಯವರು ಬೀದಿನಾಯಿಗಳ ನಿಯಂತ್ರಣ ಮಾಡಲಿಕ್ಕೆಂದು ಬಂದಾಗ ಕುತ್ತಿಗೆಯಲ್ಲಿದ್ದ ಬೆಲ್ಟು ಬಿದ್ದುಹೋಗಿದ್ದರಿಂದ ಟೈಗರ್ ಅವರುಗಳ ಉರುಳಿಗೆ ಸಿಕ್ಕಿ 'ಕಂಯ್ಕ್'ಎಂದಿತು. ಆದರೆ 'ಸತ್ತ ಮೇಲೆ ಹತ್ತಿರಾದರು' ಎನ್ನುವಂತೆ ಈಗ ಯೋಚಿಸಿದರೆ ಕೇವಲ ಹೆದರಿಸಿದ್ದು ಬಿಟ್ಟರೆ ಯಾರಿಗೂ ಕಚ್ಚದ ಟೈಗರ್ ಮುಂಗೋಪಿಯಾಗಿದ್ದರೂ ಒಂದು ಪಾಪದ ಪ್ರಾಣಿಯಾಗಿತ್ತು ಎನಿಸುತ್ತದೆ.

                         - ಸಂಪತ್ ಸಿರಿಮನೆ