ನಿನ್ನ ಕೈಗಳಿಂದ ಮುಚ್ಚಿಸಿಕೊಂಡು,
ನಾಚುವ ಆ ನಿನ್ನ ಕಂಗಳು...

ಸಂಜೆಯ ಸೂರ್ಯ ಪರದೆಯ ಹಿಂದೆ
ಸರಿಯುವಂತೆ,ನಿಧಾನವಾಗಿ
ನನ್ನೊಳಗೆ ಒಂದಾಗುವ ನಿನ್ನೀ ತನುವು...

ಏನೇನೊ ಹೇಳಲು ಹೋಗಿ
ಕೊನೆಗೆ ನಿನ್ನತ್ತ ಸುಮ್ಮನೆ
ದಿಟ್ಟಿಸುವಂತೆ ಮಾಡುವ,
ತನ್ನತ್ತ ಸೆಳೆಯುವ
ಆ ನಿನ್ನ
ಎಡಗಣ್ಣಿನ ಮೇಲಿನ ಮಚ್ಚೆ...

ನಿನ್ನನ್ನು ವಿಸ್ಮಿತನಾಗಿ
ನಾ ನೋಡುತ್ತಿರುವಾಗ,
ನನ್ನ ಛೇಡಿಸಿ ನೀ ನಕ್ಕಾಗ
ಕೆಂಪಾಗುವ ಈ ನಿನ್ನ ಕೆನ್ನೆ..

ಮಾತಿನ ಮಧ್ಯೆ,ಸಹಜವೆಂಬಂತೆ
ನಿನ್ನ ಮುಖವ ಮುತ್ತುವ ಮುಂಗುರುಳನ್ನು
ನೀ ಹಿಂದೆ ಸರಿಸಿದಾಗ
ಮಿಂಚುವ ಆ ನಿನ್ನ ಕಿವಿಯ ಜುಮುಕಿ....


ಎಲ್ಲೊ ಏನೋ ಹೇಳಿದಂತಿದೆ ಇವೆಲ್ಲಾ ನನಗೆ..
ಸ್ವರ್ಗ ಕಲ್ಪನೆಯಲ್ಲಿ ಚಂದವಿರಬಹುದು..
ಆದರೆ ಈ ನಿನ್ನ ಸನಿಹದಲ್ಲಿ ನಾ ಹೊಂದುವ
ಖುಷಿ,ಕಲ್ಪನೆಯನ್ನೂ ಮೀರಿಸೀತು...

ಇದೆಲ್ಲಾ ಪ್ರೀತಿಯಾ
ಅಥವಾ ನನ್ನ ಗೊಂದಲಕ್ಕೆ ನಾ ಕೊಟ್ಟ ಹೆಸರಾ?

ಸರಸರನೆ ಸುರಿವ ಮಳೆಯಲಿ
ನೀ ನನ್ನತ್ತ ಕೈ ಚಾಚಿದಂತಾಗಿ
ಮಳೆಯಲಿ ಒಂದಾಗಿ ಕುಣಿದು
ಮರುಕ್ಷಣ ನೀ ಭ್ರಮೆ
ಯೆಂದರಿತು
ಮನದೊಳಗೇ ಮುಗುಳ್ನಗುವುದು ಪ್ರೀತಿಯಾ 
ಗೊಂದಲವಾ?

ಮಾತಿನ ನಡುವೆ ನಿನ್ನ
ಕೈ ಸೋಕಿದಾಗ
ನುಗ್ಗಿ ಬರುವ ಖುಷಿಯನ್ನು
ಒತ್ತಾಯದಿಂದ
ಮುಚ್ಚಿಡುವ ನಾನು ಪ್ರೀತಿಯಾ
ಅಥವಾ ಗೊತ್ತಿದ್ದೂ
ನನ್ನ ಬೇಕಂತಲೇ
ಸ್ಪರ್ಶಿಸಿ ದೂರ ನಿಂತು ನಗುವ
ನೀನು ಪ್ರೀತಿಯಾ?

ಮೆಸ್ಸೇಜಿನ ತುದಿಯಲ್ಲಿ ಆಗಾಗ
ಮಿಂಚುವ ಡಿಯರ್ ಗಳಿಗೆ
ಜಾತಕಪಕ್ಷಿಯಾಗುವ
ನನ್ನ ಬೇಕಂತಲೇ
ಸತಾಯಿಸುವ
ನಿನ್ನ ತುಂಟತನ
ಪ್ರೀತಿಯಲ್ಲವಾ?



ಒಲವಿನ ಗೆಳತಿಗೆ,
 ಹದವಾಗಿ ಆರಿದ ಕೆಂಡದ ಮೇಲಿಟ್ಟು                      
ಅರೆಬರೆ ಸುಟ್ಟ ಹಪ್ಪಳ,
 ಜೊತೆಗೆ ತನ್ನ ಪ್ರೀತಿಯ ಸಕ್ಕರೆ ಬೆರೆಸಿದ ಕಾಫಿ ತಂದಿಟ್ಟು
 ತನ್ನ ಎಂದಿನ ಮುಗ್ಧ ನಗು ಬೀರಿದ ಅಮ್ಮನಿಗೊಮ್ಮೆ
 ಕಣ್ಣಂಚಲ್ಲೇ ಮುದ್ದಿಸಿ,ಅವಳ ಪ್ರೀತಿಯ ಘಮದಲ್ಲಿ
 ನಿನಗೊಂದಿಷ್ಟು ಸಾಲು.....

                
 ಮುಂಜಾನೆ ಬೆಚ್ಚನೆ ಇಬ್ಬನಿ ತಬ್ಬಿ ಮಲಗಿದ ಭೂಮಿಯನ್ನು ತುಂತುರು ಹನಿಗಳೊಡನೆ ಎಬ್ಬಿಸಿ
 ತೀರಾ ಸಂಜೆಯವರೆಗೂ ಧೋ ಎಂದು ಬಿಗಿದಪ್ಪುವ ಮಳೆಯ ಪ್ರಣಯದಾಟಕ್ಕೆ
 ಕೊಸರಾಡುವ ಭೂಮಿ
ಯಾಕೋ ನಿನ್ನ ನೆನಪಿಸಿದೆ....



       ತೀರಾ ನಡುರಾತ್ರಿಯಲಿ
                 ಹೆಂಚಿನ ಮಾಡಿಗೆ ಹತ್ತಿರಾದ
                 ಅಟ್ಟದ ಮೇಲೆ,
                 ಕುಪ್ಪಸವಿಲ್ಲದ ಸೀರೆಯುಟ್ಟು
                 ಕತ್ತಲಿಗೆ ಬೆನ್ನು ಹಾಕಿ,ನನ್ನ
                 ತೋಳ ಸೇರಿ, ಮಧ್ಯರಾತ್ರಿ ಹೆಂಚಿನ ಮಧ್ಯದಿಂದ ಒಳಗಿಣುಕುವ
                 ಮಳೆಯ ಹನಿಯು,ಬೆತ್ತಲು ಬೆನ್ನಿನಲಿ ಸೃಷ್ಟಿಸಿದ
                 ತಣ್ಣನೆ ಚಳಿಗೆ,
                 ಮತ್ತಷ್ಟು ಬಿಗಿದಪ್ಪುವ ನಿನ್ನ ನೆನಪಲ್ಲಿ ನಾನೀಗ,
                 ಅದೇ ಅಟ್ಟದಲ್ಲಿ,
                 ಹೆಂಚಿನ ಮೇಲೆ ಸದ್ದಾಗುತ್ತಾ ಓಡುವ
                 ಹನಿಗಳ ಸಪ್ಪಳದಲ್ಲಿ ನೀ ತೃಪ್ತಿಯಿಂದ
                 ಬೀರುತ್ತಿದ್ದ ಉಸಿರ ಘಮವನ್ನು
                 ಹುಡುಕುವ  ಏಕಾಂಗಿ...



                


ಯಾಕೋ ಅತ್ತುಬಿಡುವಷ್ಟು
ಒಲವಾಗಿದೆ ಗೆಳತಿ...

ಅತ್ತಿಂದಿತ್ತ ತಿರುಗಾಡುವಾಗ
ಸುಮ್ಮನೆ ನಿನ್ನ ಹೆಸರು ಗುನುಗುನಿಸಿಯೋ....

ಅದ್ಯಾವುದೋ ಪಾಪಿ-ಹಾಡು ಕೇಳುತ್ತಾ
ಬೇಕಂತಲೇ ನಿನ್ನ ಮುಖವ ಕಲ್ಪಿಸಿಕೊಂಡೊ...

ಸಣ್ಣನೆ ಸುರಿವ ಮಳೆಹನಿ,
ಎಳೆ ಎಳೆಯಾಗಿ,ನಿನ್ನ ಮುಖದ ಮೇಲೆ
ಹರಿವ ಚಿತ್ರವ,ಎದೆಯಲ್ಲಿ ಚಿತ್ರಿಸಿಕೊಂಡು
ಚಳಿಯ ಸಂಜೆಯಲಿ,ಬೆಚ್ಚಗಾದಗಲೋ...

ಅದ್ಯಾವುದೋ ಗುಂಪಿನಲಿ ಬೇಕಂತಲೇ
ನಿನ್ನ ಹಿಂದೆ,ಉಸಿರು ತಾಕುವಷ್ಟು
ಹತ್ತಿರ ನಿಂತು,
ನೀ ಬೆಚ್ಚಿ,ಹಿಂದೆ ತಿರುಗಿದಾಗ
ಮುಗ್ಧನಂತೆ ನಟಿಸಿ, ದೂರ ನಿಂತಾಗಲೋ....

ಯಾವುದೋ ಮಾತಿನ ನೆಪದಲ್ಲಿ
ನಿನ್ನ ಕಣ್ಣಲ್ಲಿ ನನ್ನ ಬಿಂಬ ಕಾಣುವಷ್ಟು
ನಾನಿನ್ನ ಸನಿಹ ಬಂದು,
ಇನ್ನೇನು ನೀ ನಾಚಿ
ಕಣ್ಮುಚ್ಚುವಷ್ಟರಲ್ಲಿ,ದೂರ ನಿಂತು
ನಕ್ಕಾಗಲೋ......